ಸರ್ಕಾರದಿಂದ ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣ ದುರುಪಯೋಗ – ರಾಜಶೇಖರ ಮೂರ್ತಿ ಆರೋಪ

ಆನೇಕಲ್ : ಕಳೆದ ಹತ್ತು ವರ್ಷಗಳಲ್ಲಿ ಪರಿಶಿಷ್ಟಜಾತಿ/ಪಂಗಡ ಉಪಯೋಜನೆಯ ಹಣ ದುರುಪಯೋಗ ಪಡಿಸಿಕೊಂಡ ಸರ್ಕಾರಗಳನ್ನು ಪ್ರಶ್ನಿಸಲು ದಲಿತರು ಮುಂದಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ ರಾಜಶೇಖರಮೂರ್ತಿ ಕರೆ ನೀಡಿದರು.

ಅವರು ಭಾನುವಾರ ಆನೇಕಲ್ ಪಟ್ಟಣದಲ್ಲಿ ನಡೆದ
ಬೆಂಗಳೂರು ದಕ್ಷಿಣ ಜಿಲ್ಲಾ ಸಂಘಟನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಅಭಿವೃದ್ದಿಗೆ 2013ರಲ್ಲಿ ಉಪಯೋಜನೆಯನ್ನು ಸರ್ಕಾರ ರೂಪಿಸಿತ್ತು. ಅದರಂತೆ ಕಳೆದ ಹನ್ನೊಂದು ವರ್ಷದಿಂದ 2.50,000 ಲಕ್ಷ 34,000 ಕೋಟಿ ಹಣವನ್ನು ದಲಿತೇತರ ಯೋಜನೆಗಳಿಗೆ ಸರ್ಕಾರ ಬಳಿಸಿದೆ. ಇಂತಹ ದಲಿತ ವಿರೋಧಿ ಸರ್ಕಾರಗಳನ್ನು ಪ್ರಶ್ನಿಸಲು ದಲಿತ ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಳ್ಳುವ ಅತ್ಯಗತ್ಯವಿದೆ ಎಂದರು.

ರಾಜ್ಯದಲ್ಲಿ 2011ರಲ್ಲಿ ಜನಗಣತಿ ನಡೆದು ಈವರೆಗೆ ಅನೇಕ ನೆಪವೊಡ್ಡಿ ಜನಗಣತಿ ನಡೆದಿಲ್ಲ. ಹಾಗಿದ್ದರೂ 13 ವರ್ಷ ಕಳೆದರೂ ಅದರಂತೆ ರಾಜ್ಯದಲ್ಲಿ ದಲಿತರ ಸಂಖ್ಯಾಬಲ ಜನಗಣತಿಯ 24% ಗಿಂತಲೂ ಹೆಚ್ಚಿದೆ ಹೀಗಾಗಿ ಬಜೆಟ್ ಘೋಷಣೆಯಲ್ಲಿ ದಲಿತರ ಮೂಗಿಗೆ ಅನುದಾನದ ತುಪ್ಪವನ್ನು ಸವರುತ್ತಲೇ ದಲಿತರ ಪರವೆಂದು ಪ್ರಚಾರ ಪಡೆಯುವ ಸರ್ಕಾರಗಳು ನಿಜ ಅರ್ಥದಲ್ಲಿ ದಲಿತರ ಪಾಲನ್ನು ದಲಿತೇತರರಿಗೆ ಹಂಚಿವೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಅಂಕಿ ಅಂಶಗಳ ದಾಖಲೆ ನೋಡಿ ಯುವ ದಲಿತ ಸಮಾಜ ಎಚ್ಚೆತ್ತ ಕಣ್ಣಿನಿಂದ ನೋಡುವ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಎಚ್ಚರಿಸಿದರು.

ದಲಿತ ಸಂಘಟನೆಗಳು, ದಲಿತ ಜನಪ್ರತಿನಿಧಿಗಳು ಎಂದೂ ಈ ವಿಚಾರದಲ್ಲಿ ಚಕಾರವೆತ್ತದಿರುವುದು ದುರಂತ. ರಾಜ್ಯದಲ್ಲಿ ದಲಿತ ಪರ ಎನ್ನುವ ಪಕ್ಷಗಳೂ ಅವರ ಆಡಳಿತದ ಸಂದರ್ಭದಲ್ಲಿ ದಲಿತರಿಗೆ ಸಿಗಬೇಕಾದ ಸೌವಲತ್ತುಗಳನ್ನು ನೀಡದೆ ವಂಚಿಸುತ್ತಿರುವುದನ್ನು ಅಂಕಿ ಅಂಶಗಳ ಸಮೇತ ತಿಳಿಸಿದರು.

ಇನ್ನು ಈವರೆಗೆ ದಲಿತರು ಯಾವ ರಂಗದಲ್ಲೂ ಮುಂದುವರೆಯಬಾರದೆಂಬ ಹಟಕ್ಕೆ ಬಿದ್ದ ಹಾಗೆ ನಿಯಮಗಳ ರೂಪಿಸಿದ್ದರ ಪರಿಣಾಮ ರಾಜ್ಯದಲ್ಲಿ ಕೃಷಿಯಾಧಾರಿತ ದಲಿತ ಕೂಲಿಕಾರರು 41.08% ರಷ್ಟಿದ್ದಾರೆ. ಕೃಷಿಯೇತರ ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಂತಹ ಕೂಲಿಕಾರರು 39.08% ಇದ್ದು ಒಟ್ಟು 81.06% ರಷ್ಟಿದ್ದಾರೆ. ಇನ್ನು ಸರ್ಕಾರಿ ನೌಕರಿಯಲ್ಲಿ ಹೋಲಿಸಿದರೆ 0.17% ಖಾಸಗೀ ಕ್ಷೇತ್ರಗಳಲ್ಲಿ ಕೇವಲ 0.45% ರಷ್ಟು ಮಾತ್ರ ಸೇವೆಯಲ್ಲಿದ್ದಾರೆ. ಹಾಗಾದರೆ ಕಳೆದ 78 ವರ್ಷಗಳಲ್ಲಿ ದಲಿತರು ಉದ್ದಾರವಾದದ್ದೆಲ್ಲಿ. ಒಂದೆಡೆ ದಲಿತ ವಿರೋಧಿಗಳು ಮೀಸಲಾತಿ ಪಡೆದು ದಲಿತರು ಉನ್ನತ ಸ್ಥಾನ ಅಲಂಕಸಿದ್ದಾರೆಂದು ದೂರಿದರೆ. ವಾಸ್ತವವಾಗಿ ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ನೋಟ ಬೇರೊಂದು ಕತೆಯನ್ನು ಮುಂದಿಡುತ್ತಿದೆ. ಯುವ ಜನರಲ್ಲಿ ಇಂತಹ ಜ್ವಲಂತ ಸಮಸ್ಯೆಗಳನ್ನ ಮರೆಮಾಚಿ ಪ್ರಭಾವೀ ಮಾಧ್ಯಮಗಳ ಮುಖಾಂತರ ಕೇವಲ ಸಿನೆಮಾ, ರಂಜನೆ, ಇನ್ನಿತರೆ ಭ್ರಮೆಗಳಲ್ಲಿ‌ ಮುಳುಗಿಸುವ ಪರಿಪಾಟ ಅಂದಿನಿಂದಲೂ ನಡೆದಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಗೋಪಾಲೃಷ್ಣ ಹರಳಹಳ್ಳಿ ಮಾತನಾಡಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಒಳಮೀಸಲಾತಿ ಚರ್ಚೆಗಳು ಬರೀ ಗೊಂದಲಗಳನ್ನು ಸೃಷ್ಟಿಸುತ್ತಿವೆ. ಮೊದಲು ಸದಾಶಿವ ಆಯೋಗದ ವರದಿ ಬಿಡುಗಡೆಗೊಳ್ಳಬೇಕು ಮತ್ತು ಅದರಲ್ಲಿ ತಿಳಿಸಿರುವ ಅಂಶಗಳ ಕುರಿತು ಮಾತನಾಡಬೇಕಿದೆ. ಅದು ಬಿಟ್ಟು ಇಂದು ಎರೆಡೂ ಬಣಗಳು ಎಮ್ಮೆಯನ್ನು ನೀರಲ್ಲಿ ಮುಳುಗಿಸಿ ಕೊಂಬುಗಳಿಗೆ ವ್ಯಾಪಾರ ಮಾಡಿದಂತೆ ಹೋರಾಟಗಳ ಅಬ್ಬರಗಳನ್ನು ನಡೆಸುತ್ತಿವೆ. ಇಬ್ಬರಲ್ಲೂ ವರದಿಯ ಸ್ಪಷ್ಟತೆಯಿಲ್ಲ. ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ ಬಿಡುಗಡೆಗೊಂಡ ನಂತರ ವಸ್ತುನಿಷ್ಟವಾಗಿ ಚರ್ಚೆ ಅಗತ್ಯವಿದೆ. ಜಾತಿವಾರು ಜನಸಂಖ್ಯೆಗನುಗುಣವಾಗಿ ವೈಜ್ಞಾನಿಕವಾಗಿ ಸೌಲತ್ತುಗಳು ಸಿಗುವಂತಾಗಬೇಕೆಂದು ಎಂದು ಆಗ್ರಹಿಸಿದರು.

ತಾಲೂಕು ಅದ್ಯಕ್ಷ ಡಿ ಮಹದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ನಾಗರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂ ದಕ್ಷಿಣ ಜಿಲ್ಲಾ ಉಪಾದ್ಯಕ್ಷ ರವಿಚಂದ್ರನ್, ಆನೇಕಲ್ ಮುಖಂಡ ಎಸ್ ಚಂದ್ರಶೇಖರ್ ಕಟ್ಟಡ ಕಾರ್ಮಿಕರ ಅದ್ಯಕ್ಷ ಹನುಮಯ್ಯ ಮುಖಂಡರಾದ ರಮೇಶ್, ಬ್ಯಾಂಕ್ ಬೆಟ್ಟಪ್ಪ, ಸಂತೋಷ್, ಲತಾ, ಮುತ್ತುಲಕ್ಷ್ಮಿ, ಗೋವಿಂದ್, ಗಂಗರಾಜು, ಭರತ್ ಮುಂತಾದವರಿದ್ದರು.

Donate Janashakthi Media

Leave a Reply

Your email address will not be published. Required fields are marked *