ವಿಜ್ಞಾನ ವೈಚಾರಿಕತೆ ಮತ್ತು ಆಳ್ವಿಕೆಯ ಆದ್ಯತೆಗಳು

ನಾ ದಿವಾಕರ

ಶೋಷಣೆ ತಾರತಮ್ಯ ದೌರ್ಜನ್ಯಗಳಿಗೆ ವೈಚಾರಿಕತೆಯ ಕೊರತೆಯೂ ಒಂದು ಕಾರಣ

ಇತ್ತೀಚೆಗೆ ಕಾಗಿನೆಲೆ ಮಠ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ “ ಮಕ್ಕಳು ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ನಾಗರಿಕರಾಗಲು, ಮಾನವೀಯಗೊಳ್ಳಲು ಸಾಧ್ಯ. ಸಮಾಜದ ಹಲವು ಸಮಸ್ಯೆಗಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಲ್ಲಿ ಪರಿಹಾರ ಇದೆ ” ಎಂದು ಹೇಳಿರುವುದು ‌ಒಂದು ರೀತಿಯಲ್ಲಿ ಭರವಸೆಯ ನುಡಿಗಳಂತೆ ಕೇಳಿಬರುತ್ತದೆ. ಸಾಂಪ್ರದಾಯಿಕತೆ ಮತ್ತು ಪರಂಪರೆಯ ಹೆಸರಿನಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಮೂಲೆಗುಂಪು ಮಾಡಿ, ಮೂಢನಂಬಿಕೆಗಳನ್ನು ಪೋಷಿಸುವ ಪ್ರಯತ್ನಗಳು ಹೆಚ್ಚಾಗುತ್ತಿರುವ ವರ್ತಮಾನದ ಸನ್ನಿವೇಶದಲ್ಲಿ ಈ ಆಶಯ ನುಡಿಗಳು ಭಿನ್ನವಾಗಿ ಕಾಣುತ್ತವೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಮಂಡಿಸಿದ್ದ ಮೂಢನಂಬಿಕೆ ಪ್ರತಿಬಂಧಕ ಮಸೂದೆಯನ್ನು ಜಾರಿಗೊಳಿಸಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಿದ್ದವು. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನ ವಿವಾದದ ಹಿನ್ನೆಲೆಯಲ್ಲಿ ರೂಪುಗೊಂಡಿದ್ದ ಈ ಕಾಯ್ದೆಗೆ ಬೊಮ್ಮಾಯಿ ಸರ್ಕಾರ 2020ರಲ್ಲಿ ಚಾಲನೆ ನೀಡಿದ್ದು, ಮೌಢ್ಯ ನಿಷೇಧ ಕಾಯ್ದೆಯನ್ನು ಅಧಿಕೃತಗೊಳಿಸಿದೆ.

ಆದರೆ ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಮೌಢ್ಯಗಳನ್ನು ಕಾನೂನಾತ್ಮಕವಾಗಿ ತೊಡೆದುಹಾಕಲು ಅಪೇಕ್ಷಿಸುವುದು ಹಗಲುಗನಸು ಕಂಡಂತೆಯೇ ಆಗುತ್ತದೆ. ಯಾವುದನ್ನು ಮೌಢ್ಯ ಎಂದು ವರ್ಗೀಕರಿಸಬೇಕು ಎನ್ನುವುದೇ ಒಂದು ಜಟಿಲ ಸಮಸ್ಯೆಯಾಗಿ ಕಾಡುತ್ತದೆ. ಏಕೆಂದರೆ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಿರುವ ಶ್ರದ್ಧೆ, ನಂಬಿಕೆ ಮತ್ತು ಅತೀತ ಶಕ್ತಿಗಳಲ್ಲಿನ ಅತಿಯಾದ ಭಕ್ತಿ-ವಿಶ್ವಾಸಗಳ ನೆಲೆಯಲ್ಲೇ ಅನೇಕ ರೀತಿಯ ಮೂಢ ನಂಬಿಕೆಗಳು, ಮೌಢ್ಯಾಚರಣೆಗಳು ಜಾರಿಗೆ ಬಂದಿರುತ್ತವೆ. ಈ ಶ್ರದ್ಧಾಭಕ್ತಿಯ ಮೂಲ ನೆಲೆಯನ್ನು ಪ್ರಶ್ನಿಸುವುದು ಹಾವಿನ ಹುತ್ತಕ್ಕೆ ಕೈಹಾಕಿದಂತಾಗುತ್ತದೆ. ಆದರೆ ಆಧುನಿಕತೆಯತ್ತ ಸಾಗುತ್ತಿರುವ ಒಂದು ಸಮಾಜದಲ್ಲಿ ಪ್ರಾಚೀನ ಕಾಲದ ಶ್ರದ್ಧಾಭಕ್ತಿಗಳು ತಮ್ಮದೇ ಆದ ಸಾಂಸ್ಕೃತಿಕ-ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡಿದ್ದರೂ, ಇದರಿಂದ ಉದ್ಭವಿಸುವಂತಹ ಆಚರಣೆಗಳು ವರ್ತಮಾನದ ಸಮಾಜದ ಬೆಳವಣಿಗೆಗೆ ಅಡ್ಡಿಯಾದಾಗ ಅಂತಹ ಆಚರಣೆಗಳನ್ನು ವಸ್ತುನಿಷ್ಠವಾಗಿ ವಿಮರ್ಶೆಗೊಳಪಡಿಸಬೇಕಾಗುತ್ತದೆ.

ಶ್ರದ್ಧೆ ನಂಬಿಕೆಗಳ ನಡುವೆ

ಭಾರತದ ಇತಿಹಾಸದಲ್ಲಿ ಅನೇಕಾನೇಕ ಸಮಾಜ ಸುಧಾರಕರು ಈ ಪ್ರಯತ್ನಗಳನ್ನು ಮಾಡಿದ್ದಾರೆ. ದೈವತ್ವದಲ್ಲಿನ ನಂಬಿಕೆಯನ್ನೂ ಸಹ ಪ್ರಶ್ನಿಸುವ ನಾಸ್ತಿಕ ತತ್ವಗಳಿಂದ ಹಿಡಿದು, ಶ್ರದ್ಧಾಭಕ್ತಿಯ ಹೆಸರಿನಲ್ಲಿ ನಡೆಯುವ ಅನೇಕ ಆಚಾರಗಳನ್ನು ಡಾಂಭಿಕತೆ ಎಂದೋ, ಆಡಂಬರ ಎಂದೋ ಅಥವಾ ಅತಾರ್ಕಿಕ ಎಂದೋ ವ್ಯಾಖ್ಯಾನಿಸಿರುವುದನ್ನು ದಾಸಪರಂಪರೆಯಲ್ಲೇ ಕಾಣಬಹುದು. ಮೂಲತಃ ದೈವತ್ವದ ನಂಬಿಕೆ ಮತ್ತು ತತ್ಸಂಬಂಧಿತ ಆಚರಣೆಗಳು ವ್ಯಕ್ತಿಗತ ನೆಲೆಯಲ್ಲೇ ಸಾರ್ವತ್ರಿಕತೆಯನ್ನು ಪಡೆದುಕೊಂಡರೆ ಅದು ವಿಶಾಲ ಸಮಾಜಕ್ಕೆ ಅಪಾಯಕಾರಿ ಎನಿಸುವುದಿಲ್ಲ. ಆದರೆ ಈ ಶ್ರದ್ಧಾನಂಬಿಕೆಗಳು ಸಾಂಸ್ಥಿಕ ಸ್ವರೂಪ ಪಡೆದುಕೊಂಡು, ಆಚರಣೆಗಳನ್ನು ಸಾರ್ವತ್ರೀಕರಿಸುವ ಪ್ರಕ್ರಿಯೆ ಚಾಲನೆ ಪಡೆದುಕೊಂಡಾಗ, ಸಾಂಸ್ಥಿಕ ಅಸ್ತಿತ್ವ ಮತ್ತು ಅಸ್ಮಿತೆಗಳ ಉಳಿವಿಗೆ ಆಚರಣೆಗಳು ರೂಪಾಂತರಗೊಳ್ಳುತ್ತವೆ. ಈ ರೂಪಾಂತರದ ಪ್ರಕ್ರಿಯೆಯಲ್ಲೇ ಜನಸಾಮಾನ್ಯರ ಭಕ್ತಿಯ ಮೂಲ ಸೆಲೆ ಭ್ರಷ್ಟವಾಗುತ್ತಾ ಮೂಢ ನಂಬಿಕೆಗಳು ಮತ್ತು ಮೌಢ್ಯಾಚರಣೆಗಳು ಮಾನ್ಯತೆ ಪಡೆದುಬಿಡುತ್ತವೆ. ಮಾನವನ ಜೀವನ ಅತೀತ ಶಕ್ತಿಗಳ ಅಣತಿಯಂತೆಯೇ ನಡೆಯುತ್ತದೆ ಎಂಬ ಅತಿರೇಕದ ಶ್ರದ್ಧಾನಂಬಿಕೆಗಳ ಫಲವಾಗಿಯೇ, ಈ ಅತೀತತೆಯನ್ನು ಸಾರ್ವತ್ರೀಕರಿಸುವ ಧರ್ಮಗಳು ಅಮಾನುಷ ಪದ್ಧತಿಗಳನ್ನೂ ಸಹ ಸ್ವೀಕೃತಗೊಳಿಸಿಬಿಡುತ್ತವೆ. ಈ ಪ್ರವೃತ್ತಿಯನ್ನು ಎಲ್ಲ ಧರ್ಮಗಳ ಇತಿಹಾಸದ ಪುಟಗಳಲ್ಲೂ ಕಾಣಬಹುದು.

ಆಧುನಿಕತೆಯ ಉಚ್ಛ್ರಾಯ ಹಂತದಲ್ಲಿರುವ ಒಂದು ಸಮಾಜ ಈ ಪ್ರಾಚೀನ ಚಿಂತನಾ ಮಾದರಿಗಳಿಂದ ವಿಮೋಚನೆ ಪಡೆದು ವರ್ತಮಾನದ ಹಾಗೂ ಭವಿಷ್ಯದ ಮನುಷ್ಯ ಸಮಾಜದ ಮುನ್ನಡೆಗೆ ಸಜ್ಜಾಗಬೇಕಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಮಾನವನ ಭೌತಿಕ ಹಾಗೂ ಬೌದ್ಧಿಕ ಚಟುವಟಿಕೆಗಳನ್ನು ನಿರ್ದೇಶಿಸುವ, ನಿಯಂತ್ರಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಚಂದ್ರಯಾನ ತನ್ನ ಆಂತಿಮ ಗುರಿ ತಲುಪಲಿದೆ. ಈ ವೈಜ್ಞಾನಿಕ ಮಹತ್ಸಾಧನೆಯ ನಡುವೆಯೇ ಚಂದ್ರಯಾನದ ರೂವಾರಿ ಸಂಸ್ಥೆಯ ಮುಖ್ಯಸ್ಥರು ಯಶಸ್ಸಿಗಾಗಿ ದೈವತ್ವದ ಮೊರೆ ಹೋಗುವ ವಿಡಂಬನೆಯನ್ನೂ ಕಂಡಿದ್ದೇವೆ. ದೈವತ್ವದಲ್ಲಿನ ನಂಬಿಕೆ ಅಥವಾ ಶ್ರದ್ಧೆ ಮನುಷ್ಯನ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಒಂದು ಸಾಧನವಾಗಬಹುದೇ ಹೊರತು, ಮಾನವ ಜಗತ್ತಿನ ಚಟುವಟಿಕೆಗಳ ಸಾಫಲ್ಯ ವೈಫಲ್ಯಗಳನ್ನು ನಿರ್ಧರಿಸುವ ಮಾಪಕವಾಗುವುದಿಲ್ಲ ಎನ್ನುವ ಕನಿಷ್ಠ ವ್ಯವಧಾನವನ್ನು ನಮ್ಮ ಸಮಾಜ ಮೂಡಿಸಿಕೊಳ್ಳಬೇಕಿದೆ.

ವೈಚಾರಿಕತೆ ಮತ್ತು ಸಾಮಾಜಿಕ ಪರಿಸರ

ವಿದ್ಯಾರ್ಥಿ ಸಮುದಾಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸುವ ಮುಖ್ಯಮಂತ್ರಿಗಳ ಆಶಯ ಈ ನಿಟ್ಟಿನಲ್ಲಿ ಸಾಗಬೇಕಿದೆ. ನಾಸ್ತಿಕತೆ-ಆಸ್ತಿಕತೆ-ಅಧ್ಯಾತ್ಮಗಳ ಹೊರತಾಗಿಯೂ ಸಮಾಜದ ಬೆಳವಣಿಗೆಯಲ್ಲಿ ಯುವ ಸಮೂಹ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಪಠ್ಯಗಳು ಸಾಗಬೇಕಿದೆ. ರಾಷ್ಟ್ರಕವಿ ಕುವೆಂಪು, ಯುಗದ ಕವಿ ರವೀಂದ್ರನಾಥ ಠಾಗೋರ್‌, ಸ್ವಾಮಿ ವಿವೇಕಾನಂದ, ನಾರಾಯಣಗುರು ಮುಂತಾದ ದಾರ್ಶನಿಕರು ದೈವತ್ವವನ್ನು ಸಂಪೂರ್ಣವಾಗಿ ನಿರಾಕರಿಸದೆಯೇ, ನಾಸ್ತಿಕತೆಯನ್ನು ಅಪ್ಪಿಕೊಳ್ಳದೆಯೇ ವೈಚಾರಿಕ ಪ್ರಜ್ಞೆಯನ್ನು, ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸಿದ್ದನ್ನು ಕಂಡಿದ್ದೇವೆ. ನಮ್ಮ ನಿತ್ಯಬದುಕಿನ ನಡೆನುಡಿಗಳಲ್ಲಿ ಒಂದು ಮಾನವೀಯ ಸಮಾಜವನ್ನು ರೂಪಿಸುವ ಪ್ರಯತ್ನಗಳಿಗೆ ದೈವತ್ವದ ಕಲ್ಪನೆಯಾಗಲೀ, ಧರ್ಮದ ಚೌಕಟ್ಟುಗಳಾಗಲೀ ಅಡ್ಡಿಯಾಗದಂತೆ ಎಚ್ಚರವಹಿಸುವ ಪ್ರಜ್ಞಾವಂತಿಕೆ ನಮ್ಮಲ್ಲಿರಬೇಕಾಗುತ್ತದೆ.

ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಸಾಮಾಜಿಕ ನೆಲೆಯಲ್ಲಿ ನಿರ್ವಚಿಸುವಾಗ ನಮಗೆ ಈವರೆಗೂ ನಡೆದುಬಂದ ಹಾದಿಯನ್ನು ಪುನರ್‌ ವಿಮರ್ಶಿಸುವ ವ್ಯವಧಾನ ಮುಖ್ಯವಾಗುತ್ತದೆ. ಅಗೋಚರ ಅಥವಾ ಅತೀತ ಶಕ್ತಿಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳದ ಒಂದು ಮನಸ್ಥಿತಿ ವೈಜ್ಞಾನಿಕ ಪ್ರಜ್ಞೆಗೆ ಪೂರಕವಾದರೆ, ಈ ಮನಸ್ಥಿತಿಗೆ ಪೂರಕವಾಗಿ ನಿತ್ಯ ನಡುವಳಿಕೆಗಳಲ್ಲಿ ಕಂಡುಬರುವ ಪ್ರಾಚೀನ ಪದ್ಧತಿಗಳು, ನಂಬಿಕೆಗಳು ಮತ್ತು ಅಚರಣೆಗಳನ್ನು ವಸ್ತುನಿಷ್ಠವಾಗಿ ಒರೆಹಚ್ಚಿ ನೋಡುವ, ತೌಲನಿಕವಾಗಿ ಪರಾಮರ್ಶಿಸುವ ಧೋರಣೆ ವೈಚಾರಿಕತೆಯನ್ನು ಬೆಳೆಸುತ್ತದೆ. ಇಲ್ಲಿಯೇ ನಮಗೆ ಜೋತಿಷ್ಯ, ವಾಸ್ತು, ಹಸ್ತಸಾಮುದ್ರಿಕೆ ಹಾಗೂ ಕೆಲವು ಅವೈಜ್ಞಾನಿಕ ನಂಬಿಕೆಗಳೂ, ಮೌಢ್ಯಾಚರಣೆಗಳೂ ಸಹ ಮುಖ್ಯವಾಗುತ್ತವೆ. ಚಂದ್ರನ ಮೇಲೆ ಕಾಲಿಸಿರುತ್ತಿರುವ ಒಂದು ಆಧುನಿಕ ಮಾನವ ಸಮಾಜ, ಸೂರ್ಯ-ಚಂದ್ರರನ್ನು ಇಂದಿಗೂ ಒಂದು ಗ್ರಹ ಎಂದೇ ಪರಿಗಣಿಸುವ, ಬ್ರಹ್ಮಾಂಡದ ಕೇಂದ್ರ ಭೂಮಿ ಎಂದು ನಂಬುವ ಜೋತಿಷ್ಯ ಶಾಸ್ತ್ರವನ್ನು ಮಾನ್ಯ ಮಾಡುವುದು ವೈಚಾರಿಕತೆ ಮತ್ತು ವೈಜ್ಞಾನಿಕ ಮುನ್ನಡೆಗೆ ತೊಡಕಾಗಿ ಕಾಣುವುದು ಅಚ್ಚರಿಯೇನಲ್ಲ ಅಲ್ಲವೇ ?

ವಿದ್ಯಾರ್ಥಿ ಯುವ ಸಮೂಹದಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಹೆಚ್ಚಿಸಬೇಕೆಂದರೆ ನಾವು ಪ್ರಾಥಮಿಕ ಹಂತದಿಂದಲೇ ಭೌತಶಾಸ್ತ್ರ, ಮಾನವ ವಿಕಾಸ ಶಾಸ್ತ್ರ ಹಾಗೂ ಗಣಿತ ಶಾಸ್ತ್ರದ ಅರಿವು ಮೂಡಿಸುವುದು ಅತ್ಯವಶ್ಯವಾಗುತ್ತದೆ. ತಾವು ಅನುಸರಿಸುವ ಧರ್ಮಗಳ ಚೌಕಟ್ಟಿನಲ್ಲಿ ಯಾವುದೇ ದೈವಶಕ್ತಿಯಲ್ಲಿರಿಸುವ ಶ್ರದ್ಧೆ ಮತ್ತು ಭಕ್ತಿ, ತಾವು ಕೈಗೊಳ್ಳುವ ಚಟುವಟಿಕೆಗಳ ಸಾಫಲ್ಯ ವೈಫಲ್ಯಗಳನ್ನು ನಿರ್ಧರಿಸುವುದಿಲ್ಲ ಎಂದು ಎಳೆ ಮನಸುಗಳಿಗೆ ಆರಂಭದಿಂದಲೇ ಹೇಳಬೇಕಾಗುತ್ತದೆ. ಶ್ರದ್ಧಾಭಕ್ತಿಗಳು ಸಾಂತ್ವನದ ಅಥವಾ ಆತ್ಮಸ್ಥೈರ್ಯದ ಸಾಧಕಗಳಾಗಬಹುದೇ ಹೊರತು, ಮಾನವನ ಕ್ರಿಯಾಶೀಲ ಚಟುವಟಿಕೆಗಳ ಫಲಾನುಫಲಗಳನ್ನು ನಿರ್ಧರಿಸುವುದರಲ್ಲಿ ಸ್ವಪ್ರಯತ್ನವೊಂದೇ ಪ್ರಭಾವಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಬೇಕಾಗುತ್ತದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ತಾವು ಬೆಳೆಯುವ ಪರಿಸರದಿಂದಲೇ ತಮ್ಮ ಶ್ರದ್ಧಾನಂಬಿಕೆಗಳನ್ನು ರೂಢಿಸಿಕೊಂಡು ಬರುವ ಮಕ್ಕಳಲ್ಲಿ ಆಧುನಿಕ ವಿಜ್ಞಾನದ ಅರಿವು ಮೂಡಿಸಬೇಕಾದರೆ, ಆ ನಂಬಿಕೆಗಳ ಹಿಂದಿನ ಅವೈಜ್ಞಾನಿಕ ಅಂಶಗಳನ್ನು, ವೈಚಾರಿಕತೆಯ ನೆಲೆಯಲ್ಲಿ ಮನದಟ್ಟು ಮಾಡಬೇಕಾಗುತ್ತದೆ.

ಸಾಮಾಜಿಕ ಪ್ರಜ್ಞೆ ಮತ್ತು ವೈಚಾರಿಕತೆ

ಇಲ್ಲಿ ನಮಗೆ ವೈಚಾರಿಕತೆ ಮತ್ತು ಅದರ ವಿಶಾಲ ಅರಿವು ಮುಖ್ಯವಾಗುತ್ತದೆ.  ಸಮಾಜವನ್ನು ಅರ್ಥಮಾಡಿಕೊಳ್ಳುವ ಬಗೆ, ಮಾನವ ಸಂಬಂಧಗಳನ್ನು ನಿಷ್ಕರ್ಷೆ ಮಾಡುವ ವಿಧಾನ, ನಮ್ಮ ನಿತ್ಯ ಬದುಕಿನ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡುವ ಮಾದರಿ, ಮನೆಗಳಲ್ಲಿ-ಸಾರ್ವಜನಿಕವಾಗಿ ಕಾಣುವ ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳ ಮೂಲಾಧಾರ ಮತ್ತು ಸಮಕಾಲೀನ ಪ್ರಸ್ತುತತೆ ಇವೆಲ್ಲವನ್ನೂ ನಿರ್ಧರಿಸುವ ಒಂದು ಸುಪ್ರಜ್ಞೆಯನ್ನು ಯುವ ಸಮೂಹದಲ್ಲಿ ಮೂಡಿಸಲು ವೈಚಾರಿಕ ಪ್ರಜ್ಞೆ ನೆರವಾಗುತ್ತದೆ. Old is Gold ಅಥವಾ ಪ್ರಾಚೀನವಾದುದೆಲ್ಲವೂ ಸ್ವೀಕೃತವಾದುದು ಎಂಬ ನಾಣ್ಣುಡಿಯನ್ನು ಧಾರ್ಮಿಕ-ಸಾಂಸ್ಕೃತಿಕ ನಡಾವಳಿಗಳಿಗೆ ಅನ್ವಯಿಸುವುದರ ಮೂಲಕ ಸಾಂಪ್ರದಾಯಿಕ ಸಮಾಜಗಳು ತಿರಸ್ಕೃತವಾಗಬಹುದಾದ ಅಮಾನುಷ ಪದ್ಧತಿಗಳನ್ನೂ, ಅವೈಜ್ಞಾನಿಕ ಆಚರಣೆಗಳನ್ನೂ ಚಾಲ್ತಿಯಲ್ಲಿಡಲು ಸದಾ ಯತ್ನಿಸುತ್ತಿರುತ್ತವೆ. ಈ ಪ್ರಯತ್ನಗಳನ್ನು ಪ್ರಶ್ನಿಸುವುದಕ್ಕೆ ಆಧುನಿಕ ಯುವ ಸಮೂಹವನ್ನು ವಿದ್ಯಾರ್ಥಿ ದೆಸೆಯಿಂದಲೇ ಸಜ್ಜುಗೊಳಿಸಬೇಕಾಗುತ್ತದೆ.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪಿತೃಪ್ರಧಾನತೆ ಹಾಗೂ ಲಿಂಗಭೇದಗಳ ತಾತ್ವಿಕ ನೆಲೆಗಳು ಇಂದಿಗೂ ಗಟ್ಟಿಯಾಗಿರಲು ಕಾರಣವೇ ಈ ʼ ಹಳತೆಲ್ಲವೂ ಚಿನ್ನ ʼ ಎನ್ನುವ ಒಂದು ಮನಸ್ಥಿತಿ. ಆಧುನಿಕ ಯುಗದಲ್ಲಿ ಅಮಾನುಷ ಎನಿಸುವಂತಹ ಆಚರಣೆಗಳಿಗೂ ವೈಜ್ಞಾನಿಕ ವ್ಯಾಖ್ಯಾನ ನೀಡುವ ಮೂಲಕ ಸಮರ್ಥಿಸಿಕೊಳ್ಳುವ ಸಾಂಪ್ರದಾಯಿಕ ಸಮಾಜ ಈ ತಾತ್ವಿಕ ನೆಲೆಗಳನ್ನು ವಿಸ್ತರಿಸುವ ಮೂಲಕ ತನ್ನ ಸಾಂಸ್ಥಿಕ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸಿಕೊಳ್ಳುತ್ತದೆ. ಇತ್ತೀಚೆಗೆ ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿಯನ್ನು ಊರಹೊರಗಿಟ್ಟು ಎಳೆಹಸುಳೆ ಬಲಿಯಾದ ಪ್ರಕರಣ ಈ ಸಂದರ್ಭದಲ್ಲಿ ಉಲ್ಲೇಖನಾರ್ಹ. ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಲ್ಲೇ ಪ್ರತ್ಯೇಕಿಸುವ ಪದ್ಧತಿ ಮೆಟ್ರೋಪಾಲಿಟನ್‌ ಕುಟುಂಬಗಳನ್ನೂ ಆವರಿಸಿರುವ ಹೊತ್ತಿನಲ್ಲಿ ಗೊಲ್ಲರಹಟ್ಟಿಯಂತಹ ಪ್ರಕರಣಗಳ ವಿರುದ್ಧ ಧ್ವನಿಎತ್ತುವ ವೈಚಾರಿಕತೆಯನ್ನು ನಮ್ಮ ಸಮಾಜ ರೂಢಿಸಿಕೊಳ್ಳಬೇಕಲ್ಲವೇ ? ಸತಿ ಪದ್ಧತಿ, ಬಾಲ್ಯ ವಿವಾಹದಂತಹ ಪದ್ಧತಿಗಳು ಇನ್ನೂ ಜೀವಂತವಾಗಿರುವ ಸಮಾಜದಲ್ಲಿ ಇದು ಅತ್ಯವಶ್ಯವಲ್ಲವೇ ?

ಇದನ್ನೂ ಓದಿ:ಚಂದ್ರಯಾನಕ್ಕೆ ಬೇಕೆ ದೇವರ ಕೃಪಾಶೀರ್ವಾದ?

ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದಕ್ಕೆ ನಿರಾಕರಣೆ ಮತ್ತು ತಿರಸ್ಕಾರಗಳು ಮೂಲ ಭೂಮಿಕೆಯಾಗಕೂಡದು. ಬದಲಾಗಿ ಪ್ರಶ್ನಿಸುವ ವಾತಾವರಣ ಸೃಷ್ಟಿಯಾಗಬೇಕು. ತನ್ನ ಸುತ್ತಲೂ ನಡೆಯುವ ವಿದ್ಯಮಾನಗಳಲ್ಲಿ ಕಾಣಬಹುದಾದ, ಆಧುನಿಕ ಮಾನವ ಜಗತ್ತಿಗೆ ವ್ಯತಿರಿಕ್ತವಾದ, ಆಚರಣೆಗಳನ್ನು ಪ್ರಶ್ನಿಸುವ ಮನೋಭಾವವನ್ನು ಎಳೆಯ ಮನಸುಗಳಲ್ಲಿ ಬೆಳೆಸದೆ ಹೋದರೆ ಸಮಾಜದ ಎಲ್ಲ ವಿದ್ಯಮಾನಗಳನ್ನೂ ಮಕ್ಕಳು ಪ್ರಶ್ನಾತೀತವಾಗಿಯೇ ನೋಡಲಾರಂಭಿಸುತ್ತಾರೆ. ಹಾಗಾಗಿಯೇ ದೈವತ್ವ ಅಥವಾ ಧಾರ್ಮಿಕ ಶ್ರದ್ಧಾಭಕ್ತಿಗಳು ರಾಜಕೀಯ-ಸಾಮಾಜಿಕ ವಲಯಗಳಿಗೂ ವಿಸ್ತರಿಸುತ್ತವೆ. ನಾಯಕ, ನಾಯಕತ್ವ, ವ್ಯಕ್ತಿತ್ವ ಹಾಗೂ ಇವುಗಳನ್ನು ರೂಪಿಸುವ ತತ್ವ ಸಿದ್ಧಾಂತಗಳೂ ಸಹ ಪ್ರಶ್ನಾತೀತವಾಗಿಬಿಡುತ್ತವೆ. ಹಾಗಾಗಿಯೇ ಮತಧಾರ್ಮಿಕ ರಾಜಕಾರಣದಲ್ಲಿ ನಾಯಕತ್ವಗಳು ಜನಸಾಮಾನ್ಯರ ದೃಷ್ಟಿಯಲ್ಲಿ ಅತೀತ ಎನಿಸಿಬಿಡುತ್ತವೆ, ತತ್ಪರಿಣಾಮವಾಗಿ ವ್ಯಕ್ತಿ ಆರಾಧನೆಯೂ ಸಹ ದೈವತ್ವದ ಆರಾಧನೆಯಷ್ಟೇ ಮಾನ್ಯತೆ ಪಡೆದುಕೊಳ್ಳುತ್ತದೆ. ಭಾರತದಲ್ಲಿ ಇದನ್ನು ಹಲವು ಆಯಾಮಗಳಲ್ಲಿ ಗುರುತಿಸಬಹುದು.

ಸಮಾಜವನ್ನು ನಾವು ನೋಡುವ/ನೋಡಬೇಕಾದ ವಿಧಾನ ಯಾವುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಾಗ ವೈಚಾರಿಕ ಪ್ರಜ್ಞೆ ಜಾಗೃತವಾಗಬೇಕಾಗುತ್ತದೆ. ಭಾರತೀಯ ಸಮಾಜದಲ್ಲಿ ಈ ವೈಚಾರಿಕತೆ ಇಲ್ಲದಿರುವುದರಿಂದಲೇ ಇಂದಿಗೂ ಜಾತಿ ಶ್ರೇಷ್ಠತೆ ಮತ್ತು ಪಾರಮ್ಯ ಸ್ವೀಕಾರಾರ್ಹವಾಗಿ ಕಾಣುತ್ತದೆ. ಶ್ರೇಷ್ಠತೆಯ ಮನೋಭಾವ ಹೆಚ್ಚಾದಷ್ಟೂ ಅನ್ಯರನ್ನು ಕನಿಷ್ಠವಾಗಿ ನೋಡುವ ಮನಸ್ಥಿತಿಯೂ ಜೀವಂತವಾಗಿರುತ್ತದೆ. ಉಪೇಂದ್ರ ಅವರ ಇತ್ತೀಚಿನ ವಿವಾದದಲ್ಲಿ ಇದನ್ನು ಗಮನಿಸಬಹುದು. ಹಾಗಾಗಿಯೇ ಜಾತಿ ದೌರ್ಜನ್ಯಗಳು ಸಮಾಜವನ್ನು ವಿಚಲಿತಗೊಳಿಸುವುದಿಲ್ಲ. ತಾರತಮ್ಯ-ದೌರ್ಜನ್ಯಕ್ಕೊಳಗಾಗುವ ಮಹಿಳಾ ಧ್ವನಿಗಳೂ ಅನಾಥವಾಗಿಯೇ ಉಳಿದುಬಿಡುತ್ತವೆ. ಪ್ರಾಚೀನ ಸಮಾಜದ ನಡವಳಿಕೆ ಮತ್ತು ಆಚರಣೆಗಳಿಗೆ ಧರ್ಮ, ಸಂಪ್ರದಾಯ ಮತ್ತು ಪರಂಪರೆಯ ಮುಸುಕನ್ನು ಹೊದ್ದಿಸಿದಾಗ ಆಧುನಿಕ ಸಮಾಜದಲ್ಲೂ ಸಹ ಸ್ವೀಕಾರಾರ್ಹವಾಗಿಬಿಡುತ್ತವೆ. ನಮ್ಮ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಸ್ಪೃಶ್ಯತೆಯ ಆಚರಣೆಗಳು, ಸಾಮಾಜಿಕ ಬಹಿಷ್ಕಾರ, ಮರ್ಯಾದಾಗೇಡು ಹತ್ಯೆ, ಅತ್ಯಾಚಾರಗಳು ಮತ್ತು ಸ್ತ್ರೀವಿರೋಧಿ ಚಟುವಟಿಕೆಗಳನ್ನು ಜಾತಿ-ಧರ್ಮಗಳ ಅಸ್ಮಿತೆಗಳಿಂದಾಚೆಗೆ ನೋಡುವ ವ್ಯವಧಾನ ಮೂಡಿಸಲು ವೈಚಾರಿಕ ಪ್ರಜ್ಞೆ ಅತ್ಯವಶ್ಯವಾಗುತ್ತದೆ.

ವೈಚಾರಿಕ-ವೈಜ್ಞಾನಿಕ ಶಿಕ್ಷಣ

ಪ್ರಾಚೀನತೆ ಮತ್ತು ಆಧುನಿಕತೆಯ ಈ ಸಂಘರ್ಷದಲ್ಲಿ ವಿದ್ಯಾರ್ಥಿ ಸಂಕುಲವನ್ನು, ಯುವ ಸಮೂಹವನ್ನು ಸಮಕಾಲೀನ-ವರ್ತಮಾನದ ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ರೂಪಿಸಲು ವೈಜ್ಞಾನಿಕ ಶಿಕ್ಷಣ ಹಾಗೂ ವೈಚಾರಿಕ ಚಿಂತನೆ ಎರಡೂ ಸಹಕಾರಿಯಾಗುತ್ತದೆ. ವ್ಯಕ್ತಿಯ ಯಶಸ್ಸಿಗೆ ವೈಯುಕ್ತಿಕ ಬುದ್ಧಿಮತ್ತೆ ಮತ್ತು ಜ್ಞಾನಾರ್ಜನೆ-ಪರಿಶ್ರಮ ಮುಖ್ಯವಾಗುವುದೇ ಹೊರತು ಗ್ರಹಗತಿಗಳಲ್ಲ ಎನ್ನುವ ಸರಳ ಸತ್ಯವನ್ನು ಯುವ ಸಮೂಹಕ್ಕೆ ಮನದಟ್ಟುಮಾಡಬೇಕಾಗುತ್ತದೆ. ಹಾಗೆಯೇ ತಂತ್ರಜ್ಞಾನ ಯುಗದಲ್ಲಿ ರೂಪುಗೊಳ್ಳುವ ಆಧುನಿಕ ಬದುಕಿಗೆ ಸಾಂಪ್ರದಾಯಿಕ ಆಚರಣೆಗಳು ಅಪ್ರಸ್ತುತ ಎನ್ನುವ ವಾಸ್ತವವನ್ನೂ ತಿಳಿಸಬೇಕಾಗುತ್ತದೆ. ಉಪಗ್ರಹಗಳ ಮೂಲಕ ಕಾರ್ಯನಿರ್ವಹಿಸುವ ಆಂಡ್ರ್ಯಾಯ್ಡ್‌ ಮೊಬೈಲ್‌ ಅಥವಾ ಟ್ಯಾಬ್ಲೆಟ್‌ ಕೈಯ್ಯಲ್ಲಿ ಹಿಡಿದು ಗ್ರಹಗತಿಗಳನ್ನು ಶೋಧಿಸುವುದು ವಿಡಂಬನೆ ಅಲ್ಲವೇ ? ಈ ಸತ್ಯವನ್ನು ಯುವ ಸಂಕುಲಕ್ಕೆ ತಿಳಿಸಬೇಕಿದೆ.

ಸರ್ಕಾರ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಅವೈಜ್ಞಾನಿಕ ವಿಧಾನಗಳ ಮೂಲಕ ಜನರನ್ನು ವಂಚಿಸುವ ಸಾಂಸ್ಥಿಕ/ಸಾಂಘಿಕ ಶಕ್ತಿಗಳನ್ನು ನಿಯಂತ್ರಿಸಬಹುದು. ಆದರೆ ಮುಖ್ಯವಾಗಿ ಪರಿವರ್ತನೆ ಆಗಬೇಕಿರುವುದು ಶಾಲಾ ಶಿಕ್ಷಣದ ಹಂತದಲ್ಲಿ. ಮೂಲ ವಿಜ್ಞಾನ, ನೈಸರ್ಗಿಕ ವಿಜ್ಞಾನ ಹಾಗೂ ಪರಿಸರ ವಿಜ್ಞಾನದ ಬೋಧನೆಯ ಮಾರ್ಗಗಳನ್ನು ವಿದ್ಯಾರ್ಥಿಗಳ ನಡುವೆ ವಿಸ್ತರಿಸುವ ಮೂಲಕ ಎಳೆಯ ವಯಸ್ಸಿನಿಂದಲೇ ವೈಜ್ಞಾನಿಕ ಪ್ರಜ್ಞೆಯನ್ನೂ ಬೆಳೆಸಬಹುದು. ಇದು ಸಾಧ್ಯವಾಗದಿರುವುದರಿಂದಲೇ ನಮ್ಮ ನಡುವೆ ದೈವಶಕ್ತಿಯಲ್ಲಿ ನಂಬಿಕೆಯುಳ್ಳ ವಿಜ್ಞಾನಿಗಳೂ, ವೈದ್ಯರೂ ಅಪಾರ ಸಂಖ್ಯೆಯಲ್ಲಿದ್ದಾರೆ. ಭಾರತದ ವಿಶ್ವವಿದ್ಯಾಲಯಗಳು ಲಕ್ಷಾಂತರ ವಿಜ್ಞಾನ ವಿದ್ಯಾರ್ಥಿಗಳನ್ನು ಉತ್ಪಾದಿಸುತ್ತಿದೆ ಆದರೆ ವೈಜ್ಞಾನಿಕ ಪ್ರಜ್ಞೆ ಇರುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಈ ದ್ವಂದ್ವಕ್ಕೆ ಕಾರಣ ಶಿಕ್ಷಣಕ್ರಮದಲ್ಲಿ, ಪಠ್ಯಕ್ರಮದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಪರಿಕರಗಳನ್ನು ಅಳವಡಿಸದೆ ಇರುವುದು.

ಸಿದ್ಧರಾಮಯ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ತಂತ್ರಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ವಿಜ್ಞಾನ ಕ್ಷೇತ್ರದ ಒಂದು ಭಾಗ ಮಾತ್ರ. ತಂತ್ರಜ್ಞಾನದ ಅಭಿವೃದ್ಧಿಯ  ಜೊತೆಗೇ ವಿಜ್ಞಾನದ ವಿಸ್ತರಣೆಯೂ ಸಾಧ್ಯವಾಗಬೇಕಾದರೆ ಸಂಶೋಧಕ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗುತ್ತದೆ. ಇತಿಹಾಸವನ್ನಷ್ಟೇ ಅಲ್ಲದೆ ವರ್ತಮಾನದ ವಾಸ್ತವಗಳನ್ನೂ ಭೇದಿಸಿ ನೋಡುವ ವೈಚಾರಿಕ ಪ್ರವೃತ್ತಿ ನಮ್ಮಲ್ಲಿ ಬೆಳೆಯದೆ ಹೋದರೆ, ಅಧ್ಯಯನ ಮತ್ತು ಸಂಶೋಧನೆಯ ಹಾದಿಗಳು ಮಸುಕಾಗುತ್ತವೆ. ಈ ಕಾರಣದಿಂದಲೇ ಭಾರತ R & D , ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮುಂದುವರೆದ ಪಶ್ಚಿಮ ರಾಷ್ಟ್ರಗಳನ್ನು ಸರಿಗಟ್ಟಲಾಗುತ್ತಿಲ್ಲ. ಪ್ರಾಚೀನ ಭಾರತದಲ್ಲೇ ಎಲ್ಲವೂ ಇತ್ತು ಎನ್ನುವ ಒಂದು ಚಾರಿತ್ರಿಕ ಭ್ರಮೆ ಅತ್ಯುನ್ನತ ವಿಜ್ಞಾನ ಸಂಸ್ಥೆಗಳನ್ನೂ ಕಾಡುತ್ತಿರುವುದರ ಪರಿಣಾಮವಾಗಿ ಈ ಕ್ಷೇತ್ರದ ಮುನ್ನಡೆ ಕುಂಠಿತವಾಗುತ್ತಲೇ ಇದೆ.

ಅಂ

ತಿಮವಾಗಿ

ಶಾಲಾ ಪಠ್ಯಕ್ರಮ ಪರಿಷ್ಕರಣೆಯ ಸಂದರ್ಭದಲ್ಲಿ ಸರ್ಕಾರಗಳನ್ನು ಈ ಪ್ರಶ್ನೆಯೇ ಗಾಢವಾಗಿ ಕಾಡಬೇಕಿತ್ತು/ಕಾಡಬೇಕಿದೆ. ಇತಿಹಾಸ, ರಾಜ್ಯಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ ಹಾಗೂ ಭಾಷಾ ಬೋಧನೆಯ ಜೊತೆಯಲ್ಲೇ ಶುದ್ಧ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೋಧನೆಯೂ ಸಹ ಮಕ್ಕಳಲ್ಲಿ ಜ್ಞಾನಾರ್ಜನೆಯ ಹುಮ್ಮಸ್ಸು ಹುಟ್ಟಿಸುವಂತಿರಬೇಕಾಗುತ್ತದೆ. ವರ್ತಮಾನದ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದರೆ ಮಕ್ಕಳಲ್ಲಿ ಕೇವಲ ಇತಿಹಾಸ ಪ್ರಜ್ಞೆಯೊಂದಿದ್ದರೆ ಸಾಲದು, ಇದರೊಟ್ಟಿಗೆ ವೈಚಾರಿಕ ಪ್ರಜ್ಞೆಯೂ ಇರಬೇಕಾಗುತ್ತದೆ, ವೈಜ್ಞಾನಿಕ ಮನಸ್ಥಿತಿಯೂ ಅತ್ಯವಶ್ಯವಾಗುತ್ತದೆ. ಅಂಧಾನುಕರಣೆಯೇ ಮೌಢ್ಯಾಚರಣೆಗಳಿಗೆ, ಮೂಢ ನಂಬಿಕೆಗಳಿಗೆ ಮೂಲಾಧಾರವೂ ಆಗಿರುವುದರಿಂದ ಪ್ರಶ್ನಿಸಿ ಪರಾಮರ್ಶಿಸುವ ಮನೋಭಾವವನ್ನು ಬೆಳೆಸುವ ಮುಖಾಂತರವೇ ಮೌಢ್ಯಾಚರಣೆಗಳನ್ನು ಕೊನೆಗೊಳಿಸಲು ಸಾಧ್ಯ. ಬಾಹ್ಯ ಸಮಾಜದಲ್ಲಿ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಆದರೆ ಡಾ. ಬಿ.ಆರ್.‌ ಅಂಬೇಡ್ಕರ್‌ ಕನಸಿನ ಸಾಂವಿಧಾನಿಕ ಆಳ್ವಿಕೆಯನ್ನು ಸಾಕಾರಗೊಳಿಸಬೇಕಾದರೆ, ಭಾರತದ ಹತ್ತು ಹಲವಾರು ಸಮಾಜ ಸುಧಾರಕರ, ದಾರ್ಶನಿಕರ ಕನಸಿನ ಸಮ ಸಮಾಜವನ್ನು ಸಾಧ್ಯವಾಗಿಸಬೇಕಾದರೆ, ವೈಜ್ಞಾನಿಕತೆ ಮತ್ತು ವೈಚಾರಿಕತೆ ನಮ್ಮ ಶಿಕ್ಷಣದ ತಳಹದಿಯಾಗಬೇಕಿದೆ. ವಾಣಿಜ್ಯೀಕರಣ ಮತ್ತು ಔದ್ಯಮೀಕರಣಕ್ಕೊಳಗಾಗುತ್ತಿರುವ ಶಿಕ್ಷಣ ವಲಯವನ್ನು ಸಮಾಜಮುಖಿಯಾಗಿಸುವುದೇ ಅಲ್ಲದೆ ಈ ಸುಭದ್ರ ತಳಹದಿಯನ್ನು ನಿರ್ಮಿಸಲು ಸಿದ್ಧರಾಮಯ್ಯ ಸರ್ಕಾರ ಸಜ್ಜಾಗಿದೆಯೇ ?

-೦-೦-೦-೦-೦-

Donate Janashakthi Media

Leave a Reply

Your email address will not be published. Required fields are marked *