ಖಾಸಗಿ ಶಾಲೆಗಳು ಪಡೆಯುತ್ತಿರುವುದು ಶುಲ್ಕವೋ! ವಸೂಲಿಯೋ!!?

ಗುರುರಾಜ ದೇಸಾಯಿ

ಖಾಸಗಿ ಶಾಲೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಹಣ ವಸೂಲಾತಿ ದಂಧೆ, ಶಿಕ್ಷಣ ಕೊಡುವ ಬದಲು, ಹಣಗಳಿಕೆಗೆ ಇಳಿದಿವೆ ಖಾಸಗಿ ಶಾಲೆಗಳು, ಖಾಸಗಿ ಶಾಲೆಗಳ ಸುಲಿಗೆ ಗೊತ್ತಿದ್ದರೂ ಸುಮ್ಮನಿದೆ ಸರ್ಕಾರ, ಖಾಸಗಿ ಶಾಲೆಗಳ “ಹಣ ವಸೂಲಿ” ತಡೆಯುವವರು ಯಾರು? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಶಾಲೆಗಳು ಆರಂಭವಾಗಿವೆ, ಅಲಲ್ಲಿ ಅಡ್ಮೀಶನ್​ ಕುರಿತಾದ ಫ್ಲೆಕ್ಸ್‌ ಕೂಡಾ ಕಾಣ್ತಾ ಇವೆ. ಖಾಸಗಿ ಶಾಲಾ ಶಿಕ್ಷಕರು ಮನೆ ಮನೆಗೆ ಭೇಟಿ ಮಾಡಿ ಶಾಲೆಗೆ ಅಡ್ಮೀಶನ್‌ ಮಾಡಿಸುವಂತೆ ಕರಪತ್ರ ಕೂಡಾ ಹಂಚ್ತಾ ಇದ್ದಾರೆ. ಇನ್ನೂ ಪೋಷಕರು ನನ್ನ ಮಗು ಯಾವ ಶಾಲಾಗೆ ಹೋಗಬೇಕು? ಯಾವ ಶಾಲೆ ಸಿಬಿಎಸ್‌ಸಿ, ಯಾವ ಶಾಲೆ ಐಸಿಎಸ್‌ಸಿ, ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಇದೆಯಾ? ಆ ಶಾಲೆಯಲ್ಲಿ ಡೊನೇಶ್‌ನ್‌ ಜಾಸ್ತಿಯಂತೆ, ಡೊನೇಶನ್‌ ಜಾಸ್ತಿ ತೊಗೊಳ್ತಾರೆ ಅಂದ್ರೆ ಆ ಶಾಲೆ ಸೂಪರ್‌ ಆಗಿರುತ್ತೆ ಅಂತೆಲ್ಲ ರಾತ್ರಿಯೆಲ್ಲ ಯೋಚಿಸಿ, ವಿಚಾರಿಸಿ ಅಡ್ಮೀಶನ್‌ಗೆ ರೆಡಿಯಾಗ್ತಾರೆ.

ಈನ್ನೂ ಖಾಸಗಿ ಶಾಲೆಗಳಿಗೆ ಬೇಕಿರುದು ಕೂಡಾ ಇದೆ? ಪೋಷಕರನ್ನು ನೈಸ್‌ ಮಾಡ್ತಾ ಸುಲಿಗೆಗೆ ಇಳಿಯುತ್ತಿವೆ. ಅರೇ ಇದೇನಿದು? ಮಕ್ಕಳು ಕಿಲಿಯೋದಕ್ಕೆ ಕೊಡ್ತಿರೋ ಫೀಸ್‌ಗೆ ಸುಲಿಗೆ ಅಂತಾ ಹೇಳ್ತಿದ್ದೀರಾ ಅಂತಾ? ಹುಬ್ಬೇರಸ್ತಾ ಇದ್ದೀರಾ? ಹೌದು ಖಾಸಗಿ ಶಾಲೆಗಳು ಪೋಷಕರಿಂದ ಬೇಕಾ ಬಿಟ್ಟ ಹಣವನ್ನು ಸುಲಿಗೆ ಮಾಡುತ್ತಿವೆ.

ಕೆಲ ಖಾಸಗಿ ಶಾಲೆಗಳಲ್ಲಿ 1 ವರ್ಷದ ಮಗುವಿನಿಂದ ಅಡ್ಮಿಶನ್‌ ಆರಂಭ ಮಾಡ್ತಾರೆ. ಆ ಮಗುವಿಗೆ ಬರೋಬ್ಬರಿ 58 ಸಾವಿರ ರೂ ಹಣ ನಗದಿ ಮಾಡಿದ್ದಾರೆ. ಸರಿಯಾಗಿ ನಿಂತುಕೊಳ್ಳಲು, ಕುಳಿತುಕೊಳ್ಳಲು ಬಾರದ ಆ ಮಗುವಿನ ತಲೆಗೆ ಅಕ್ಷರಗಳಾದರೂ ಹೇಗೆ ಹೋಗ್ತಾವೆ ಅಂತಾ ಪೋಷಕರು ಒಂದು ಕ್ಷಣ ಯೋಚಿಸಬೇಕಿದೆ. ಎಲ್‌ಕೆಜಿ 75 ಸಾವಿರ ರೂ, 1 ನೇ ತರಗತಿಗೆ ಲಕ್ಷ ರೂ, ಪಿಯುಸಿಗೆ 2 ಲಕ್ಷ ರೂ ಹೀಗೆ ತರಕಾರಿ ಮಾರ್ಕೇಟ್‌ನಂತೆ ಹಣ ಫಿಕ್ಸ್‌ ಮಾಡಿ ಪೋಷಕರಿಂದ ಖಾಸಗಿ ಶಾಲೆಗಳು ವಸೂಲಿ ಮಾಡುತ್ತಿವೆ.

ಹಾಗಾದ್ರೆ ಖಾಸಗಿ ಶಾಲೆಗಳಗೆ ಎಷ್ಟು ಫೀಜ್‌ ಇದೆ ಅಂತಾ ನಿಮ್ಮ ತಲೆಯಲ್ಲಿ ಈಗ ಪ್ರಶ್ನೆ ಓಡ್ತಾ ಇರುತ್ತೆ. ಹೌದು, ಖಾಸಗಿ ಶಾಲೆಗಳು ಮನಸೋ ಇಚ್ಚೇ  ಫಿಜ್‌ ಪಡೆಯುವಂತಿಲ್ಲ. ಯಾವ ಶಾಲೆ ಎಷ್ಟು ಹಣ ಪಡಿಬೇಕು ಎಂಬ ಲೆಕ್ಕಾಚಾರವನ್ನು ಸರಕಾರವೇ ಹಾಕಿ ಕೊಡುತ್ತೆ. ಆ ಲೆಕ್ಕಾಚಾರ ಹೀಗೆದೆ…. ಒಂದು ಖಾಸಗಿ ಶಾಲೆ ಇಷ್ಟೆ ಶುಲ್ಕವನ್ನು ಪಡೆಯಬೇಕು ಎಂಬ ನಿಯಮ ಇದೆ. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಿರ್ಧರಿಸುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ, ಖರ್ಚುವೆಚ್ಚ ಸಿಬ್ಬಂದಿಗಳ ವೇತನ, ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ ಶುಲ್ಕ ನಿಗದಿ ಮಾಡ್ತಾರೆ.  ಇನ್ನಷ್ಟು ಸರಳವಾಗಿ ವಿವರಿಸುವುದಾದರೆ.

ಇದನ್ನೂ ಓದಿ : ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಆಗ್ರಹ

ಒಂದು ಶಾಲೆಯಲ್ಲಿ 500 ಜನ ವಿದ್ಯಾರ್ಥಿಗಳಿದ್ದಾರೆ,  20 ಜನ ಸಿಬ್ಬಂದಿಗಳಿದ್ದಾರೆ, ಸರಾಸರಿ ಒಬ್ಬರಿಗೆ 15 ಸಾವಿರ ರೂ ವೇತನದಂತೆ ಲೆಕ್ಕ ಹಾಕಿದರೆ 36 ಲಕ್ಷ ರೂ ಆಗುತ್ತದೆ. ಇನ್ನೂ ಶಾಲೆಯ ಖರ್ಚು 10 ಲಕ್ಷ ಎಂದಿಟ್ಟುಕೊಳ್ಳಿ ಒಟ್ಟು ಒಂದು ವರ್ಷಕ್ಕೆ ಆ ಶಾಲೆಯ ಖರ್ಚು 46 ಲಕ್ಷ ರೂ ಆಗುತ್ತದೆ, ಬೇಡ 50 ಲಕ್ಷ ಅಂತಲೇ ಇಟ್ಟುಕೊಳ್ಳಿ, ಇದನ್ನು ಐದುನೂರು ವಿದ್ಯಾರ್ಥಿಗಳಿಂದ ಭಾಗಿಸಿದಾಗ ಸಿಗುವ ಉತ್ತರವೇ ಆ ಶಾಲೆಯಲ್ಲಿ ಮಗುವಿಗೆ ಕಟ್ಟಬೇಕಾದ ಶುಲ್ಕ, ಅಂದರೆ 10 ಸಾವಿರ ರೂಪಾಯಿಯನ್ನು ಶಿಕ್ಷಣ ಇಲಾಖೆ ನಿಗದಿ ಪಡಿಸಿರುತ್ತದೆ. ಬೇಡ 15 ಸಾವಿರ ಅಂತಲೇ ಇಟ್ಟುಕೊಳ್ಳಿ.. ಈಗ ಯೋಚಿಸಿ ನೀವೆಷ್ಟು ಫೀಸ್‌ ಕೊಟ್ಟಿದ್ದೀರಿ, ನಿಮ್ಮಿಂದ ಆ ಖಾಸಗಿ ಶಾಲೆ ಎಷ್ಟು ವಸೂಲು ಮಾಡಿದೆ ಎಂದು.

ಅಯ್ಯೂ ಇಷ್ಟೊಂದು ಫೀಸ್‌ ಕಟ್ಟಿಬಿಟ್ವಲ್ಲ ಅಂತ ಕೈ ಕೈ ಹಿಸಿಕಿಕೊಳ್ತಾ ಇದ್ದೀರಾ, ಇದಕ್ಕೋಂದು ದಾರಿ ಇದೆ. ಆ ಖಾಸಗಿ ಶಾಲೆಯ ಮೇಲೆ ನೀವು ದೂರು ನೀಡಬಹುದು? ಅದು ಹೇಗೆ ಅಂತೀರಾ?? ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷ ಣ ರೆಗ್ಯುಲೇಟಿಂಗ್‌ ಪ್ರಾಧಿಕಾರ ಎಂದು ಇದೆ. ಇಂಗ್ಲೀಷ್‌ನಲ್ಲಿ ಅದನ್ನು DISTRICT EDUCATION REGULATINGAUTHORITY ಎಂದು ಕರೆಯುತ್ತಾರೆ. ಸಂಕ್ಷಿಪ್ತವಾಗಿ ಡೇರಾ ಎಂದು ಕರೆಯುತ್ತಾರೆ.

ಇನ್ನೂ ಈ ಡೇರಾದ ಕೆಲಸ ಏನು ಅಂದ್ರೂ, ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡುವುದು. ಈ ಕಾಯ್ದೆ ಇವತ್ತು, ನಿನ್ನೆ ಜಾರಿಯಾದದ್ದಲ್ಲ, ತುಂಬಾ ವರ್ಷದಿಂದ ಜಾರಿಯಲ್ಲಿದೆ. ಇಂತಹದ್ದೊಂದು ಸಮಿತಿ ಇದೆ ಎನ್ನುವಂತದ್ದು ಜಿಲ್ಲಾಧಿಕಾರಿಗಳಿಗೆ ಗೊತ್ತಿಲ್ಲ ಅನಿಸುವಷ್ಟರ ಮಟ್ಟಿಗೆ ಈ ಕಾಯ್ದೆ ಇದೆ. ಹಾಗಾಗಿ ಇದಕ್ಕೆ ದೂರು ಬರೋದು ದೂರದ ಮಾತು ಅಂತಾ ಹೇಳಿದ್ರು ತಪ್ಪಾಗ್ಲಿಕ್ಕಿಲ್ಲ.

ಈ ಕಾಯ್ದೆ ಹಲ್ಲುಕಿತ್ತ ಹಾವಿನಂತಾಗೋದಕ್ಕೆ ಕಾರಣವೂ ಇದೆ. ಖಾಸಗಿ ಶಾಲೆ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿದೆ ಎಂದು ಪೋಷಕರೆ ಶಾಲೆಯ ವಿರುದ್ಧ ದೂರು ನೀಡಬೇಕು. ಯಾವ ಪೋಷಕರು ದೂರು ಕೊಡೋದಕ್ಕೆ ದೈರ್ಯ ಮಾಡುವುದಿಲ್ಲ, ಅವರ ಮಕ್ಕಳ ಶಿಕ್ಷಣ ಭವಿಷ್ಯದಿಂದ, ಅಥವಾ ಟಾರ್ಗೇಟ್‌ ಮಾಡಿಬಿಟ್ರೆ ಹೇಗೆ ಎಂಬ ಭಯದಿಂದ ಅವರು ಮುಂದೆ ಬರುವುದಿಲ್ಲ.

ಹೀಗಿದ್ದಾಗ ಡೇರಾ ಸಮಿತಿ ಕ್ರೀಯಾ ಶೀಲವಾಗಿ ಕೆಲಸ ಮಾಡಬೇಕು ಮೂರು ತಿಂಗಳಿಗೊಮ್ಮ ಸಭೆ ಸೇರಬೇಕು. ಮುಖ್ಯವಾಗಿ ಪೋಷಕರು ದೂರು ನೀಡುವಂತೆ ಮಾಡಲು ಜಾಗೃತಿ ಮೂಢಿಸಬೇಕು, ಪ್ರೋತ್ಸಾಹಿಸಿ,  ಗೌಪ್ಯತೆಯನ್ನು ಕಾಪಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಖಾಸಗಿ ಶಾಲೆಗಳ ಅಕೌಂಟ್‌ ಪರಿಶೀಲನೆ ಮಾಡಿದ್ರೆ ಯಾವ ಶಾಲೆ ಎಷ್ಟು ಹಣ ಪಡೆದಿದೆ ಎಂಬ ಲೆಕ್ಕಾಚಾರ ಸಿಕ್ಕು ಬಿಡುತ್ತೆ.

ಈ ಡೇರಾ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು ಎಂದು ವಿದ್ಯಾರ್ಥಿ ಪೋಷಕರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಇವೆ, ಶಿಕ್ಷಣ ತಜ್ಞರು ಇದರ ಅಪಾಯಗಳನ್ನು ಎಚ್ಚರಿಸುತ್ತಲೇ ಬಂದಿದ್ದಾರೆ, ಆದರೆ ಸರಕಾರ ಎಚ್ಚೆತ್ತು ಹಣ ಪೀಕುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಲಬೇಕಿದೆ.

ಸಾರ್ವತ್ರಿಕ ಶಿಕ್ಷಣವನ್ನು ಬಲಪಡಿಸಿ, ಸಮಾನ ಗುಣಮಟ್ಟದ ಶಿಕ್ಷಣ ನೀಡಿದ್ದರೆ ಇಂತಹ ವಸೂಲಿಗಳು ನಡೆಯುತ್ತಿರಲಿಲ್ಲ, ಆದರೆ ಸರಕಾರವೇ ಸರಕಾರಿ ಮತ್ತು ಖಾಸಗಿ ಶಾಲೆ ಎಂಬ ಎರಡು ಆಯ್ಕೆಯನ್ನು ಪೋಷಕರನ್ನು ಗೊಂದಲ್ಲಕೆ ಸಿಲುಕಿಸಿದೆ.  224 ಶಾಸಕರಲ್ಲಿ ಬಹುತೇಕ ಶಾಸಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ, ಹಾಗಾಗಿ ಶಿಕ್ಷಣ ಕ್ಷೇತ್ರ ಮಾರಾಟದ ಸರಕಾಗಿ ಬಿಟ್ಟಿದೆ. ಇನ್ನಾದರೂ ಸರಕಾರ ಎಚ್ಚೆತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಂತಾಗಲಿ, ಅಲ್ಲಿಯವರೆಗೆ ಖಾಸಗೀ ಶಾಲೆಗಳನ್ನು ತನ್ನ ನಿಯತ್ರಣಕ್ಕೆ ತೆಗೆದುಕೊಳ್ಳಲಿ, ಆಗ ಡೊನೇಷನ್‌ ಎಂಬ ಮಾಫೀಯಾವನ್ನು ನಿಲ್ಲಿಸಲು ಸಾಧ್ಯ.

 

Donate Janashakthi Media

Leave a Reply

Your email address will not be published. Required fields are marked *