ಶಾಲಾ ಮಕ್ಕಳಿಂದ 2 ಲಕ್ಷ ಗಿಡ ನೆಡುವ ಹಸಿರು ರಕ್ಷಕ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು:ಕಳೆದ ವರ್ಷ 52 ಸಾವಿರ ಗಿಡಗಳನ್ನು ಶಾಲಾ ಮಕ್ಕಳೇ ನೆಟ್ಟು ಬೆಳೆಸಿದ್ದಾರೆ. ಈ ವರ್ಷ ಅನೇಕ ಶಾಲೆಗಳ ಜೊತೆ ಒಪ್ಪಂದ ಮಾಡಿಕೊಂಡು 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ಹಸಿರು ರಕ್ಷಕ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಬ್ಬನ್ ಪಾರ್ಕ್ ನ ಬಾಲ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬ್ರಾಂಡ್ ಬೆಂಗಳೂರು ಹಸಿರುಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಗಿಡ ನೆಟ್ಟರೆ ಮರ, ಮರದಿಂದ ಮಳೆ, ಮಳೆ ಬಂದರೆ ನೀರು, ನೀರು ಇದ್ದರೆ ನಾವು, ನೀವು.” ಪ್ರಪಂಚದಲ್ಲಿ ನೀರು ಮತ್ತು ಪವರ್ ಗೆ ಯುದ್ದಗಳು ಆಗುತ್ತವೆ ಎಂದು ಅನೇಕ ಜ್ಞಾನಿಗಳು ಹೇಳಿದ್ದಾರೆ ಎಂದು ನೆರೆದ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.

ಬ್ರಾಂಡ್ ಬೆಂಗಳೂರು, ಗ್ರೀನ್ ಬೆಂಗಳೂರು

“ಬೆಂಗಳೂರು ಇಷ್ಟರ ಮಟ್ಟಿಗೆ ಬೆಳೆಯುತ್ತದೆ ಎಂದು ನಾಡಪ್ರಭು ಕೆಂಪೇಗೌಡರಿಗೆ ತಿಳಿದಿರಲಿಲ್ಲ. ಇಂದು ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ದಿಮೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರು ಬೆಳೆಯುತ್ತಿದೆ. ನಮ್ಮ ಹಿರಿಯರು ಬೆಂಗಳೂರನ್ನು ಹಸಿರಿನಿಂದ ಕಂಗೊಳಿಸಿದ್ದರು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣಕ್ಕೆ ಹಸಿರು ರಕ್ಷಕ ಎನ್ನುವ ಅಭಿಯಾನ ಪ್ರಾರಂಭ ಮಾಡಲಾಗಿದೆ” ಎಂದು ತಿಳಿಸಿದರು.

“ಬೆಂಗಳೂರಿನ ಉಷ್ಣಾಂಶ 28 ಡಿಗ್ರಿಗಿಂತ ಹೆಚ್ಚು ಹೋಗುತ್ತಿರಲಿಲ್ಲ. ಈಗ 36 ದಾಟಿದೆ. ಬೆಂಗಳೂರಿನ ಹಸಿರನ್ನು ಉಳಿಸಲು ಅನೇಕ ಸ್ವಯಂ ಸೇವಾ ಸಂಘಗಳು ಕೆಲಸ ಮಾಡುತ್ತಿವೆ. ಇವಕ್ಕೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ಬೆಂಗಳೂರಿನ ಹಸಿರು ಸಂರಕ್ಷಣೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ 310 ಕೋಟಿ ಹಾಗೂ 15 ನೇ ಹಣಕಾಸು ಆಯೋಗದ ಅಡಿ 100 ಕೋಟಿ – ಹೀಗೆ ಒಟ್ಟು 410 ಕೋಟಿ ಹಣ ಮೀಸಲಿಡಲಾಗಿದೆ” ಎಂದರು.

“ತಂದೆ, ತಾಯಿಗಳು ಮಕ್ಕಳನ್ನು ಸಾಕಿದಂತೆ ಶಾಲಾ ಮಕ್ಕಳು ತಾವು ನೆಟ್ಟ ಗಿಡಗಳನ್ನು ಆರೈಕೆ ಮಾಡಬೇಕು. ಹಸಿರು ಬದುಕಿನ ಭಾಗ. ಪ್ರಕೃತಿಯಿಂದಾಗಿ ನಾವು ಬದುಕುತ್ತಾ ಇದ್ದೇವೆ. ಜೀವನದಲ್ಲಿ ಒಂದು ಮರ ಬೆಳೆಸಿದರೆ ದೊಡ್ಡ ಸಾಧನೆ ಮಾಡಿದಂತೆ ಎಂದು ಹಿರಿಯರು ನಮಗೆ ಹೇಳಿಕೊಟ್ಟಿರುವ ಪಾಠ. ಇದರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಹೆಚ್ಚು ತಿಳುವಳಿಕೆ ಕೊಡಬೇಕು. ಮಕ್ಕಳ ಆಲೋಚನೆ ನಿಷ್ಕಲ್ಮಶವಾಗಿರುತ್ತದೆ. ಗುರುಗಳು ಹೇಳಿಕೊಟ್ಟ ಹಾದಿಯಲ್ಲಿ ಮಕ್ಕಳು ನಡೆಯುತ್ತಾರೆ. ಆದ ಕಾರಣ ಮಕ್ಕಳಿಂದ ಗಿಡ ಬೆಳೆಸುವ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.

“ಮಧ್ಯಮ ವರ್ಗದ ಜನರು ಮನೆಯಲ್ಲಿ ಹಸಿರು ಇರಬೇಕು ಎಂದು ಪ್ಲಾಸ್ಟಿಕ್ ಗಿಡಗಳನ್ನು ಇಟ್ಟುಕೊಂಡಿರುತ್ತೇವೆ. ಮನಿ ಪ್ಲಾಂಟ್ ಅನ್ನು ಬಾಟಲ್ ಗಳಲ್ಲಿ ಇಟ್ಟುಕೊಂಡಿರುತ್ತೇವೆ. ಅಂದರೆ ಹಸಿರಿನ ಮಧ್ಯೆ ಬದುಕ ಬೇಕು ಎಂಬುದು ನಮ್ಮೆಲ್ಲರ ಅಭಿಲಾಷೆ” ಎಂದರು.

“ಕಳೆದ ವರ್ಷ ಮಳೆ ಬರದೆ 200 ಕ್ಕೂ ಹೆಚ್ಚು ತಾಲ್ಲೂಕುಗಳು ಬರ ಎದುರಿಸಬೇಕಾಯಿತು. ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಯಿತು ಆದರೂ ಪರಿಸ್ಥಿತಿ ನಿಭಾಯಿಸಲಾಯಿತು. ಇಂತಹ ಪರಿಸ್ಥಿತಿಗಳು ಮತ್ತೆ ಬರದಂತೆ ನಾವು ಜಾಗೃತವಾಗಿ ಇರಬೇಕು” ಎಂದು ಹೇಳಿದರು.

“ಇಂದು ಪ್ರಪಂಚ ಸಾಕಷ್ಟು ಮುಂದುವರೆದಿದೆ. ನಮ್ಮ ಕಾಲದ ಶಿಕ್ಷಣಕ್ಕೂ ಈಗಿನ ಕಾಲದ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಡಿ.ಕೆ.ಶಿವಕುಮಾರ್, ರಿಜ್ವಾನ್ ಅರ್ಷದ್ ಅಥವಾ ಅಧಿಕಾರಿಗಳ ಮಕ್ಕಳೇ ಓದಬೇಕೆನ್ನುವ ಕಟ್ಟಳೆಯಿಲ್ಲ. ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ವಿದ್ಯೆಗೆ ಅಂತಸ್ತಿಲ್ಲ ಎಂಬುದು ಇದರ ಅರ್ಥ. ಗ್ರಾಮೀಣ ಭಾಗದ ಮಕ್ಕಳು ಓದಿನಲ್ಲಿ ಮುಂದಿದ್ದಾರೆ. ಬೆಂಗಳೂರಿನ ಮಕ್ಕಳಿಗೆ ಕವಲುದಾರಿಗಳು ಹೆಚ್ಚು. ಈ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ 2 ಸಾವಿರದಷ್ಟು ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ” ಎಂದು ಹೇಳಿದರು.

“ತಂದೆ, ತಾಯಂದಿರು ಮಕ್ಕಳಿಗಾಗಿ ಯಾವ ತ್ಯಾಗಕ್ಕೆ ಬೇಕಾದರೂ ಸಿದ್ದರಾಗಿರುತ್ತಾರೆ. ವಿಶ್ವ ಯುವ ಸಮ್ಮೇಳಕ್ಕೆ ಭಾಗವಹಿಸಲು ವಿಯೆಟ್ನಾಂ ದೇಶಕ್ಕೆ ಹೋದಾಗ ಅಲ್ಲಿ ಗಮನಿಸಿದ್ದೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರ ತಂದೆ, ತಾಯಿಯ ಕೆಲಸ. ಇಡೀ ಮಗುವಿನ ಆಸಕ್ತಿ, ವಿದ್ಯಾಭ್ಯಾಸವೆಲ್ಲಾ ಸರ್ಕಾರದ ಕೆಲಸ. ಮಗುವಿನ ಆಸಕ್ತಿಯನ್ನು ಎಳೆಯರಾಗಿರುವಾಗಲೇ ಗುರುತಿಸಿ ಅದೇ ರೀತಿ ಶಿಕ್ಷಣ ನೀಡಲಾಗುತ್ತದೆ. ನಾವು ಸಹ ಮಕ್ಕಳ ಆಸಕ್ತಿಯನ್ನು ಗುರುತಿಸಿ ಶಿಕ್ಷಣ ನೀಡಬೇಕು” ಎಂದರು.

ಮಕ್ಕಳು ನಮಗಿಂತ ಚೆನ್ನಾಗಿ ಮಾತನಾಡುತ್ತಾರೆ

ಯಾವುದೇ ಕಾರ್ಯಕ್ರಮ ನಡೆದರೂ ಮಕ್ಕಳಿಂದಲೇ ನಿರ್ವಹಣೆ ಮಾಡಿಸಬೇಕು ಎಂದು ಸೂಚನೆ ನೀಡಿದ್ದೆ. ಆದರೆ ಅಧಿಕಾರಿಗಳು ಮರೆತಂತಿದೆ. ನಮ್ಮ ಜೊತೆ ವೇದಿಕೆಯಲ್ಲಿ ಮಕ್ಕಳು ಇದ್ದರೆ ಅವರಿಗೂ ನೆನಪು ಇರುತ್ತದೆ. ಅಲ್ಲದೇ ಅವರು ನಮಗಿಂತ ತುಂಬಾ ಚೆನ್ನಾಗಿ ಮಾತನಾಡುತ್ತಾರೆ” ಎಂದರು.

“ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಖೋಡೆ ಕುಟುಂಬದವರ ಮದುವೆ ಕಾರ್ಯಕ್ರಮವಿತ್ತು. ದೇಶದ ಗಣ್ಯಾತೀ ಗಣ್ಯರು ಭಾಗವಹಿಸಿದ್ದರು. ಊಟದ ನಂತರ ತಾಂಬೂಲ ನೀಡಿದರು. ಅದರಲ್ಲಿ ತೆಂಗಿನಕಾಯಿ ಮತ್ತು ಚಾಕೋಲೇಟ್ ಕೊಟ್ಟಿದ್ದರು. ಒಂದು ದಿನ ಹರಿ ಖೋಡೆ ಅವರನ್ನು ಭೇಟಿ ಮಾಡಿದಾಗ ಏಕೆ ಚಾಕೋಲೇಟ್ ನೀಡಿದ್ದೀರಿ ಎಂದು ಕೇಳಿದೆ. ಮದುವೆಗೆ ಬಂದವರು ಎಲ್ಲಾ ಚಾಲೋಲೇಟ್ ತಿನ್ನುವುದಿಲ್ಲ, ಅದನ್ನು ಮಕ್ಕಳಿಗೆ ಕೊಡುತ್ತಾರೆ. ಆಗ ಚಾಕೋಲೇಟ್ ಕೊಟ್ಟವರು ಯಾರು ಎಂದು ಮಕ್ಕಳಿಗೆ ಹೇಳುತ್ತಾರೆ. ಅದರಿಂದ ಮಕ್ಕಳ ಆಶೀರ್ವಾದ ನಮಗೆ ಸಿಗುತ್ತದೆ. ಮಕ್ಕಳು ದೇವರ ಸಮಾನ. ಅವರು ಹರಸಿದರೆ ದೇವರು ಹರಸಿದಂತೆ ಎಂದು ಹೇಳಿದರು. ಈ ದೇಶ ಉಳಿಯಬೇಕು, ಹಸಿರು ಉಳಿಯಬೇಕು ಎಂದರೆ ಮಕ್ಕಳನ್ನು ಇಂದಿನಿಂದಲೇ ತಯಾರು ಮಾಡಬೇಕು” ಎಂದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಮಾಜಿ ಶಾಸಕ ಹಸನಬ್ಬ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ಡಿಎ ಆಯುಕ್ತರು ರಾಜೇಂದ್ರ ಚೋಳನ್, ಪ್ರೀತಿ ಗೆಹಲೊಟ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *