ಬೆಂಗಳೂರು: ರಾಜ್ಯದಲ್ಲಿ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಆರಂಭವಾಗಲಿವೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮೇ 29ರಿಂದ ಅ.7ರವರೆಗೆ ಮೊದಲ ಅವಧಿಯ ತರಗತಿಗಳು ನಡೆಯಲಿವೆ ಎಂದು ಮಾಹಿತಿ ನೀಡಲಾಗಿದೆ
ಅ.8 ರಿಂದ 24ರವರೆಗೆ ದಸರಾ ರಜೆ ನೀಡಲಾಗುತ್ತದೆ. ಮತ್ತೆ ಅ.25ರಿಂದ ಏಪ್ರಿಲ್ 10, 2024ರವರೆಗೆ ಎರಡನೇ ಅವಧಿಯ ತರಗತಿಗಳು ನಡೆಯಲಿವೆ. ಮೇ 31, 2023 ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಬೇಕು. ಜೂನ್ 30ರ ಒಳಗೆ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ಗೋಡೆಗಳ ಒಡೆಯೋಣ… ಕಲಿಕೆಯ ಹಾದಿ ವಿಶಾಲ-ಅನಂತ ಕಾಣ….
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 244 ದಿನಗಳನ್ನು ಶಾಲಾ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ 180 ದಿನಗಳನ್ನು ಮೀಸಲಿಡಲಾಗಿದೆ. ಪರೀಕ್ಷಾ ಕಾರ್ಯಗಳಿಗೆ 26, ಪಠ್ಯೇತರ ಚಟುವಟಿಕೆಗಳಿಗಾಗಿ 24, ಮೌಲ್ಯಮಾಪನ ಪ್ರಕ್ರಿಯೆಗಾಗಿ 10 ದಿನಗಳನ್ನು ನಿಗದಿಪಡಿಸಲಾಗಿದೆ.