ಕೋಲಾರ : ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನೋರ್ವನನ್ನು ಮರಕ್ಕೆ ಕಟ್ಟಿ ಥಳಿಸಿದ್ದರಿಂದ ಆತ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಬೇವಹಳ್ಳಿಯ ಉದಯ್ ಕಿರಣ್ ಮೃತ ಯುವಕನಾಗಿದ್ದು, ಪೆತ್ತಾಂಡ್ಲಹಳ್ಳಿಯ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಹಾಗೂ ಮುನಿವೆಂಕಟಪ್ಪ ವಿರುದ್ಧ ಮೃತನ ಮಾವ ಬಿ.ಎಚ್. ನಾಗರಾಜ್ ಗುರುವಾರ ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳೆಲ್ಲರೂ ಸಂಬಂಧಿಗಳಾಗಿದ್ದು, ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ : ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ರವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗಾರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ, ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ, ಮತ್ತು ಮುನಿವೆಂಕಟಪ್ಪ ಬಳಿ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುವುದಾಗಿ ತಿಳಿದು ಬಂದಿದೆ.
ನಂತರ ತನ್ನ ವಾಹನ ಮತ್ತು ಮೊಬೈಲ್ ಕೇಳಲು ಹೋದ ಉದಯ್ ಕಿರಣ್ ನನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಮರಕ್ಕೆ ಕಟ್ಟಿ ಹಾಕಿ, ಹೊಡೆದು, ಜಾತಿ ನಿಂದನೆ ಮಾಡಿ ಅತಿಹೀನವಾಗಿ ಅವಮಾನಿಸಿದ್ದಾರೆ. ಈ ಕಾರಣಕ್ಕೆ ಉದಯ್ ಕಿರಣ್ ಅವಮಾನ ತಾಳಲಾರದೇ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಷಯ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ನೇರ ಕಾರಣವಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಮುಖಂಡ ವಿಜಯ್ ಕುಮಾರ್ ಆರೋಪಿಸಿದ್ದಾರೆ. ಜಾತಿ ದೌರ್ಜನ್ಯಗಳು ನಡೆದಾಗ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ರಿದ್ದಾರೆ. ಜಾತಿ ದೌರ್ಜನ್ಯದ ಕುರಿತು ಪೊಲೀಸರು ಕೇಸು ದಾಖಲು ಮಾಡಿದರೂ ಹಲ್ಲೆ ನಡೆಸಿದ ಆರೋಪಿಗಳು ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುವರು, ಒಂದೆರಡು ವರ್ಷಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಬಿಡುಗಡೆಯಾಗುವವರು. ಇದರಿಂದ ಕಾನೂನಿನ ಭಯ ಇಲ್ಲದೇ ಇರುವುದರಿಂದ ಜಾತಿ ದೌರ್ಜನ್ಯದ ಘಟನೆಗಳು ಮರು ಕಳಿಸುತ್ತಿದೆ. ಜಿಲ್ಲಾಡಳಿತವು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕಾಗಿದೆ.