ಸಾಮ್ರಾಜ್ಯಶಾಹಿಯ ಬೆನ್ನೇರಿ ಬೆಳೆದ ಸ್ಕ್ಯಾಂಡಿನೇವಿಯ ಬಂಡವಾಳಶಾಹಿ

ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್

ಸಾಮ್ರಾಜ್ಯಶಾಹಿಯ ಆಶ್ರಯವಿಲ್ಲದೆ ಬಂಡವಾಳಶಾಹಿಯು ಬೆಳೆಯುವುದಿಲ್ಲ ಎಂಬ ವಾದವನ್ನು ಸ್ಕ್ಯಾಂಡಿನೇವಿಯನ್ ಬಂಡವಾಳಶಾಹಿಯು ಸ್ಪಷ್ಟವಾಗಿ ಅಲ್ಲಗಳೆಯುತ್ತದೆ ಎಂಬುದೊಂದು ಬಹು ಸಾಮಾನ್ಯ ತರ್ಕ. ಇದರಲ್ಲಿ ಹುರುಳಿಲ್ಲ. ಪ್ರಧಾನ ಬಂಡವಾಳಶಾಹಿ ದೇಶವು ಇಡೀ ಬಂಡವಾಳಶಾಹಿ ಜಗತ್ತನ್ನು ತನ್ನ ಹೆಗಲ ಮೇಲೆ ಇರುವ ಕೂಸುಮರಿಯಂತೆ ಭಾವಿಸುತ್ತದೆ. ಆದ್ದರಿಂದ ಸಾಮ್ರಾಜ್ಯಗಳನ್ನು ಹೊಂದಿರದ ಸ್ಕ್ಯಾಂಡಿನೇವಿಯನ್ ದೇಶಗಳು ಸಾಮ್ರಾಜ್ಯಶಾಹಿಯ ಆಶ್ರಯವಿಲ್ಲದೇ ತಮ್ಮ ಬಂಡವಾಳಶಾಹಿಯನ್ನು ತಾವೇ ನಿರ್ಮಿಸಿಕೊಂಡವು ಎನ್ನುವಂತಿಲ್ಲ: ಅವು ಪ್ರಮುಖ ಬಂಡವಾಳಶಾಹಿ ದೇಶದ ಸಾಮ್ರಾಜ್ಯಶಾಹೀ ಪ್ರಯೋಜನಗಳನ್ನು ಪಡೆದುಕೊಂಡಿವೆ. ಸೋವಿಯತ್ ಬೆದರಿಕೆಯ ಗುಮ್ಮ ಜೋರಾಗಿದ್ದಾಗಲೂ ನ್ಯಾಟೋ ಕೂಟದಿಂದ ದೂರವೇ ಉಳಿದಿದ್ದ ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳು ಇತ್ತೀಚೆಗೆ ನ್ಯಾಟೋ ಸದಸ್ಯತ್ವ ಕೇಳುವ ನಿರ್ಧಾರ ತೆಗೆದುಕೊಂಡಿವೆ ಎಂಬುದನ್ನು ಗಮನಿಸಬೇಕು.

ಸ್ಕ್ಯಾಂಡಿನೇವಿಯ ಪ್ರದೇಶದ ಬಂಡವಾಳಶಾಹಿಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. (ಉತ್ತರ ಯೂರೋಪಿನ ಡೆನ್ಮಾರ್ಕ್, ನಾರ್ವೆ, ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳನ್ನೊಳಗೊಂಡ ಪ್ರದೇಶವನ್ನು ಸ್ಕ್ಯಾಂಡಿನೇವಿಯನ್/ನಾರ್ಡಿಕ್ ದೇಶಗಳೆಂದು ಕರೆಯುತ್ತಾರೆ-ಅನು.). ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಹಾಲೆಂಡ್ ಮತ್ತು ಪೋರ್ಚುಗಲ್ ಮುಂತಾದ ಸಾಮ್ರಾಜ್ಯಶಾಹಿ ದೇಶಗಳು ವಸಾಹತುಗಳನ್ನು ಹೊಂದಿದ್ದ ರೀತಿಯಲ್ಲಿ ಸ್ಕ್ಯಾಂಡಿನೇವಿಯನ್ ದೇಶಗಳು ಎಂದೂ ವಸಾಹತುಗಳನ್ನು ಹೊಂದದಿದ್ದರೂ ಸಹ, ಶಕ್ತಿಶಾಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ. ಸಾಮ್ರಾಜ್ಯಶಾಹಿಯ ಆಶ್ರಯವಿಲ್ಲದೆ ಬಂಡವಾಳಶಾಹಿಯು ಬೆಳೆಯುವುದಿಲ್ಲ ಎಂಬ ಒಂದು ವಾದವನ್ನು ಸ್ಕ್ಯಾಂಡಿನೇವಿಯನ್ ಬಂಡವಾಳಶಾಹಿಯು ಸ್ಪಷ್ಟವಾಗಿ ಅಲ್ಲಗಳೆಯುತ್ತದೆ ಎಂಬುದು ಬಹಳವೇ ಸಾಮಾನ್ಯವಾಗಿ ಕೇಳಬರುವ ತರ್ಕ. ಈ ರೀತಿಯ ವಾದವನ್ನು ನಾನು ದಶಕಗಳಿಂದಲೂ ಕೇಳುತ್ತಲೇ ಇದ್ದೇನೆ. ಆದರೆ, ಇದೊಂದು ಹುರುಳಿಲ್ಲದ ವಾದ. ಈ ವಾದವು, ಸ್ಕ್ಯಾಂಡಿನೇವಿಯಾ ಬಂಡವಾಳಶಾಹಿಯ ಬಗ್ಗೆ ಮಾತ್ರವಲ್ಲ, ಎಲ್ಲಕ್ಕಿಂತ ಹೆಚ್ಚಾಗಿ, ಸಾಮ್ರಾಜ್ಯಶಾಹಿಯ ಬಗ್ಗೆಯೇ ಒಂದು ತಪ್ಪು ಕಲ್ಪನೆಯನ್ನು ಆಧರಿಸಿದೆ.

ಸಮಾಜವಾದದ ಕೆಲವು ಅಂಶಗಳನ್ನು ಅಳವಡಿಸಿಕೊಂಡಿರುವ ಸ್ಕ್ಯಾಂಡಿನೇವಿಯನ್ ಸಾಮಾಜಿಕ ಪ್ರಜಾಪ್ರಭುತ್ವವು (social democracy) ಬಂಡವಾಳಶಾಹಿಯಿಂದ ಹಿಂಡಿ ಪಡೆದ ಕೆಲವು ಕಲ್ಯಾಣ ಕ್ರಮಗಳ ರಿಯಾಯ್ತಿಗಳ ಬಗ್ಗೆ ಸಕಾರಾತ್ಮಕವಾಗಿ ಹೇಳಬಹುದಾದರೂ, (ಇವುಗಳಲ್ಲಿ ಕೆಲವು ಇಂದಿನ ನವ-ಉದಾರವಾದಿ ಆಳ್ವಿಕೆಯಲ್ಲಿ ಅಪಾಯಕ್ಕೊಳಗಾಗಿದ್ದರೂ ಸಹ), ಸ್ಕ್ಯಾಂಡಿನೇವಿಯ ಸಾಮ್ರಾಜ್ಯಶಾಹಿಯಿಂದ ಅಂತರ ಕಾಯ್ದುಕೊಂಡ ಬಂಡವಾಳಶಾಹಿಗೆ ಒಂದು ಉದಾಹರಣೆಯಾಗಿದೆ ಎಂದು ಹೇಳುವುದು, ಬಂಡವಾಳಶಾಹಿಯ ಬಗ್ಗೆ ಪೂರ್ಣವಾಗಿ ತಪ್ಪು ಕಲ್ಪನೆಗಳಿಂದ ಕೂಡಿದ ನಿರೂಪಣೆಯಾಗುತ್ತದೆ. ಎರಡನೇ ಮಹಾಯುದ್ಧದ ಮೊದಲಾಗಲಿ ಅಥವಾ ನಂತರದಲ್ಲಾಗಲಿ, ಸ್ಕ್ಯಾಂಡಿನೇವಿಯನ್ ದೇಶಗಳು ಸ್ವತಃ ವಸಾಹತುಗಳನ್ನು ಹೊಂದಿರಲಿಲ್ಲ ಎಂಬುದು ನಿಜವೇ. ಆದರೆ, ಅವರು ಉಳಿದ ಸಾಮ್ರಾಜ್ಯಶಾಹಿಗಳ ಮೇಲೆ ಕೂಸುಮರಿ ಸವಾರಿ ಮಾಡಿದರು. ಈ ಸಾಮ್ರಾಜ್ಯಶಾಹಿ ಏರ್ಪಾಡನ್ನು ನಾವು ಸ್ವಲ್ಪ ವಿವರವಾಗಿ ನೋಡೋಣ.

ಸಾಮ್ರಾಜ್ಯಶಾಹಿಯೊಳಗೇ ಬಂಡವಾಳಶಾಹೀ ಬೆಳವಣಿಗೆ

ಪ್ರತಿ ಯಶಸ್ವಿ ಬಂಡವಾಳಶಾಹಿ ದೇಶವೂ ತನ್ನದೇ ಆದ ಸಾಮ್ರಾಜ್ಯವನ್ನು ಹೊಂದಿರಬೇಕು ಎಂದೇನಿಲ್ಲ. ಆದರೆ, ಒಟ್ಟಾಗಿ ಸಾಮ್ರಾಜ್ಯಶಾಹಿ ವ್ಯವಸ್ಥೆಯೊಳಗೇ ಬಂಡವಾಳಶಾಹಿಯ ಬೆಳವಣಿಗೆ ಸಂಭವಿಸುತ್ತದೆ. ವಿವಿಧ ಮುಂದುವರಿದ ಬಂಡವಾಳಶಾಹಿ ದೇಶಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ಹೊಂದಿಲ್ಲದಿದ್ದರೂ ಸಹ, ಅವು ಈ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಫಲಾನುಭವಿಗಳೇ. ಉದಾಹರಣೆಗೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಉಚ್ಛ್ರಾಯ ಕಾಲದಲ್ಲಿ, ಬ್ರಿಟಿಷ್ ಮಾರುಕಟ್ಟೆಯು ಯುರೋಪ್ ಭೂಖಂಡದ ಎಲ್ಲ ದೇಶಗಳಿಗೂ ಮುಕ್ತವಾಗಿತ್ತು. ಯುರೋಪಿನ ದೇಶಗಳು ತಮ್ಮದೇ ಆದ ಪ್ರತ್ಯೇಕ ಮಾರುಕಟ್ಟೆಗಳನ್ನು ಹೊಂದುವ ಅಗತ್ಯವಿರಲಿಲ್ಲ, ಏಕೆಂದರೆ, ಈ ದೇಶಗಳು ತಮ್ಮ ಸರಕುಗಳನ್ನು ಮಾರಾಟ ಮಾಡಲು ಬ್ರಿಟಿಷ್ ಮಾರುಕಟ್ಟೆಯನ್ನು ಮುಕ್ತವಾಗಿ ಪ್ರವೇಶಿಸಬಹುದಿತ್ತು. ಈ ದೇಶಗಳು ತಮಗೆ ದೊರೆತ ಈ ಅವಕಾಶವನ್ನು ಯಶಸ್ವಿಯಾಗಿ ಬಳಕೆಮಾಡಿಕೊಂಡಿದ್ದವು. ಬ್ರಿಟನ್ ಕೈಗಾರಿಕೀಕರಣವನ್ನು “ಮುಂಚಿತವಾಗಿ ಆರಂಭ” ಮಾಡಿದ್ದರಿಂದ ಅದರ ಶ್ರಮ ಉತ್ಪಾದಕತೆಯು (labour productivity) ನಂತರ ಕೈಗಾರಿಕೀಕರಣಗೊಂಡ ದೇಶಗಳಿಗಿಂತ ಕೆಳ ಮಟ್ಟದಲ್ಲಿತ್ತು. ಹಾಗಾಗಿ, (ಹೆಚ್ಚು ಕಡಿಮೆ ಒಂದೇ ಪ್ರಮಾಣದ ಕೂಲಿ ವೇತನಗಳಿದ್ದರೂ ಸಹ) ಬ್ರಿಟನ್ನಿನ ಉತ್ಪಾದನಾ ವೆಚ್ಚವು ಹೆಚ್ಚಾಗಿತ್ತು. ಅದೇ ರೀತಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ವಸಾಹತುಗಳಿಂದ ಮತ್ತು ಅರೆ-ವಸಾಹತುಗಳಿಂದ ಹೊತ್ತೊಯ್ದ ಪ್ರಾಥಮಿಕ ಸರಕುಗಳು ಯುರೋಪಿನ ದೇಶಗಳಿಗೆ ಮತ್ತು ಆ ಕಾಲದಲ್ಲಿ ಹೊಸದಾಗಿ ಅಭಿವೃದ್ಧಿ ಹೊಂದುತ್ತಿದ್ದ ಇತರ ಬಂಡವಾಳಶಾಹಿ ದೇಶಗಳಿಗೂ ಲಭ್ಯವಿದ್ದವು. ಆದ್ದರಿಂದ ಈ ದೇಶಗಳು ತಮಗೆ ಬೇಕಾದ ಪ್ರಾಥಮಿಕ ಸರಕುಗಳ ಪೂರೈಕೆಗಾಗಿ ತಮ್ಮದೇ ಆದ ಪ್ರತ್ಯೇಕ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿರಲಿಲ್ಲ.

ಇದು ಎಲ್ಲ ಪ್ರಮುಖ ಸಾಮ್ರಾಜ್ಯಶಾಹಿ ದೇಶಗಳೂ ಯಾವುದೇ ಸಮಯದಲ್ಲೂ ನಿರ್ವಹಿಸಿದ ಪಾತ್ರವೇ: ಸಾಮ್ರಾಜ್ಯಶಾಹಿಯು ನಾಯಕತ್ವದ ಪಾತ್ರ ವಹಿಸಿದಾಗ ಈ ನಿರ್ವಹಣೆ ಸಹಜವೇ. ಈ ಕಾರ್ಯವು ಪ್ರತಿಸ್ಪರ್ಧಿ ದೇಶಗಳಲ್ಲಿ ಬಂಡವಾಳಶಾಹಿ ಹರಡುವುದನ್ನು ಸಮ್ಮತಿಸುತ್ತದೆ ಮತ್ತು ಹೀಗೆ ಉದಯವಾದ ಹೊಸ ಬಂಡವಾಳಿಗರ ಕಡೆಯಿಂದ ಸಾಮ್ರಾಜ್ಯಶಾಹಿಯ ನಾಯಕತ್ವಕ್ಕೆ ಯಾವ ರೀತಿಯಲ್ಲೂ ಧಕ್ಕೆ ಉಂಟಾಗುವುದಿಲ್ಲ. ಹಾಗೆ ನೋಡಿದರೆ, ತಮ್ಮ ದೇಶದಲ್ಲಿ ಕೈಗಾರಿಕಾ ಬಂಡವಾಳಶಾಹಿಯನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಈ ಪ್ರತಿಸ್ಪರ್ಧಿ ದೇಶಗಳಿಂದಲೇ ಈ “ನಾಯಕ” ದೇಶಗಳು ತಮಗೆ ಬೇಕಾದ ಸರಕುಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಈ ಒಂದು ಏರ್ಪಾಟಿನಿಂದಾಗಿ ತಾವು ಚಾಲ್ತಿ ಖಾತೆ ಕೊರತೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ಚಾಲ್ತಿ ಖಾತೆಯಲ್ಲಿ ಅಪಾರ ಕೊರತೆಯನ್ನು ಹೊಂದಿದ್ದ ಬ್ರಿಟನ್, ತನ್ನ ವಸಾಹತುಗಳ ಪ್ರಾಕೃತಿಕ ಸಂಪನ್ಮೂಲಗಳನ್ನು ಬರಿದು ಮಾಡುವ ಮೂಲಕ ನೀಗಿಸಿಕೊಂಡಿತು. ಈ ವಸಾಹತುಗಳ ಪ್ರಾಕೃತಿಕ ಸಂಪನ್ಮೂಲಗಳನ್ನು ಎಷ್ಟು ದೊಡ್ಡ ಪ್ರಮಾಣದಲ್ಲಿ ಬ್ರಿಟನ್ ಬರಿದು ಮಾಡಿತು ಎಂದರೆ, ತನ್ನ ಅಪಾರ ಕೊರತೆಯನ್ನು ಸರಿದೂಗಿಸಿಕೊಂಡಿದ್ದು ಮಾತ್ರವಲ್ಲದೆ, ಚಾಲ್ತಿ ಖಾತೆ ಕೊರತೆ ಹೊಂದಿದ್ದ ಇತರ ದೇಶಗಳಿಗೆ, ಅಂದರೆ ಯುರೋಪಿಯನ್ ವಲಸಿಗರು ಬಂದು ನೆಲಸಿದ್ದ ಸಮಶೀತೋಷ್ಣ ದೇಶಗಳಿಗೆ ಗಣನೀಯ ಪ್ರಮಾಣದ ಬಂಡವಾಳವನ್ನು ರಫ್ತುಮಾಡಿತ್ತು.

ಸಾಮ್ರಾಜ್ಯಶಾಹೀ ಪ್ರಯೋಜನಗಳು

ಬ್ರಿಟನ್ನಿನ ನಂತರ ಬಂಡವಾಳಶಾಹಿ ಜಗತ್ತಿನ ನಾಯಕನಾಗಿ ಹೊರ ಹೊಮ್ಮಿದ ಅಮೆರಿಕಾಗೆ ಬ್ರಿಟನ್‌ಗೆ ಇದ್ದಂತಹ ವಸಾಹತುಶಾಹಿ ಸಿರಿ ಸಂಪತ್ತಿನ ಅನುಕೂಲವಿರಲಿಲ್ಲ. ಆದರೆ, ಡಾಲರ್‌ಗಳನ್ನು ಮುದ್ರಿಸುವ ಮೂಲಕ ಅಮೆರಿಕಾ ತನ್ನ ಚಾಲ್ತಿ ಖಾತೆ ಕೊರತೆಯನ್ನು ನಿರ್ವಹಿಸಿಕೊಳ್ಳುತ್ತದೆ. ಬ್ರೆಟನ್ ವುಡ್ಸ್ ವ್ಯವಸ್ಥೆಯಡಿಯಲ್ಲಿ ಡಾಲರ್‌ಅನ್ನು “ಚಿನ್ನಕ್ಕೆ ಸಮ” ಎಂದು ಘೋಷಿಸಲಾಯಿತು (ಪ್ರತಿ ಔನ್ಸ್ ಚಿನ್ನಕ್ಕೆ $35 ರಂತೆ ಡಾಲರ್‌ಗಳನ್ನು ಚಿನ್ನವಾಗಿ ಪರಿವರ್ತಿಸಬಹುದಿತ್ತು). ತದನಂತರದಲ್ಲಿ, ಬ್ರೆಟನ್ ವುಡ್ಸ್ ವ್ಯವಸ್ಥೆ ಮತ್ತು ಚಿನ್ನದ ಪರಿವರ್ತನೀಯತೆಗಳು ಕುಸಿತದ ನಂತರವೂ, ಡಾಲರ್‌ಗಳನ್ನು ವಿಶ್ವದ ಸಂಪತ್ತು ಹೊಂದಿರುವವರು ಚಿನ್ನಕ್ಕೆ ಸಮವೆಂದು ವಸ್ತುಶಃ ಒಪ್ಪಿಕೊಂಡಿದ್ದಾರೆ ಮತ್ತು ತಮ್ಮ ಸಂಪತ್ತನ್ನು ಡಾಲರ್ ಕರೆನ್ಸಿಯ ರೂಪದಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಧಾನ ಬಂಡವಾಳಶಾಹಿ ದೇಶವು ಇಡೀ ಬಂಡವಾಳಶಾಹಿ ಜಗತ್ತನ್ನು ತನ್ನ ಹೆಗಲ ಮೇಲೆ ಇರುವ ಕೂಸುಮರಿಯಂತೆ ಭಾವಿಸುತ್ತದೆ. ಕೆಲವು ಮುಂದುವರಿದ ದೇಶಗಳಿಗೆ ಇದು ಕಿರಿಕಿರಿಯಾಗಬಹುದು, ನಿಜ. ಈ ದೇಶಗಳು ತಮ್ಮದೇ ಸಾಮ್ರಾಜ್ಯಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬಹುದು. ಆದರೆ, ಸಾಮ್ರಾಜ್ಯಗಳನ್ನು ಹೊಂದಿರದ ಸ್ಕ್ಯಾಂಡಿನೇವಿಯನ್ ದೇಶಗಳು ಸಾಮ್ರಾಜ್ಯಶಾಹಿಯ ಆಶ್ರಯವಿಲ್ಲದೇ ತಮ್ಮ ಬಂಡವಾಳಶಾಹಿಯನ್ನು ತಾವೇ ನಿರ್ಮಿಸಿಕೊಂಡವು ಎನ್ನುವಂತಿಲ್ಲ: ಅವು ಪ್ರಮುಖ ಬಂಡವಾಳಶಾಹಿ ದೇಶದ ಸಾಮ್ರಾಜ್ಯಶಾಹೀ ಪ್ರಯೋಜನಗಳನ್ನು ಪಡೆದುಕೊಂಡಿವೆ.

ಈ ಸಂದರ್ಭದಲ್ಲಿ ಎರಡು ಅಧಿಕ ಅಂಶಗಳನ್ನು ಗಮನಿಸಬೇಕಾಗುತ್ತದೆ. ಉದಯೋನ್ಮುಖ ಬಂಡವಾಳಶಾಹಿ ದೇಶಗಳು ಪ್ರಧಾನ ಬಂಡವಾಳಶಾಹಿ ದೇಶದ ಮಾರುಕಟ್ಟೆಗೆ ಮುಕ್ತ ಪ್ರವೇಶಾವಕಾಶವನ್ನು ಹೊಂದಿದ್ದವು. ಅದೇ ಸಮಯದಲ್ಲಿ ಈ ದೇಶಗಳು ತಮ್ಮ ಮಾರುಕಟ್ಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು ವಿಧಿಸುತ್ತಿದ್ದವು. ಪ್ರಧಾನ ಬಂಡವಾಳಶಾಹಿ ದೇಶದ ಆಮದುಗಳ ಮೇಲೂ ಸುಂಕ ವಿಧಿಸುತ್ತಿದ್ದವು. ಈ ರೀತಿಯಲ್ಲಿ, ಜರ್ಮನಿ ಮತ್ತು ಅಮೆರಿಕಾ ದೇಶಗಳು ಮೊದಲ ಮಹಾಯುದ್ಧ-ಪೂರ್ವ ಅವಧಿಯಲ್ಲಿ ಬ್ರಿಟಿಷ್ ಮಾರುಕಟ್ಟೆಯನ್ನು ಅತಿಕ್ರಮಿಸಿದರೂ ಸಹ ತಮ್ಮ ತಮ್ಮ ದೇಶಗಳ ಬಂಡವಾಳಗಾರರ ಹಿತ ಕಾಪಾಡುವ ಸಲುವಾಗಿ ಆಮದು ಸುಂಕಗಳನ್ನು ವಿಧಿಸಿದವು. ಈ ಅಸಮ್ಮಿತಿಯಿಂದಾಗಿಯೇ, ಬ್ರಿಟನ್ ಹೊಂದಿದ್ದ ಪ್ರಾರಂಭಾನುಕೂಲದ ಹೊರತಾಗಿಯೂ, ಈ ಉದಯೋನ್ಮುಖ ದೇಶಗಳಿಗೆ ಕೈಗಾರಿಕೀಕರಣಗೊಳ್ಳುವ ಅವಕಾಶ ದೊರೆಯಿತು. ಯೂರೋಪಿನ ಇತರ ದೇಶಗಳೂ ಸಹ ಇದನ್ನೇ ಅನುಸರಿಸಿದವು. ಎರಡನೆಯದಾಗಿ, ಈ ಪ್ರತಿಸ್ಪರ್ಧಿ ದೇಶಗಳು ಬ್ರಿಟಿಷ್ ಮಾರುಕಟ್ಟೆಗೆ ಮಾತ್ರವಲ್ಲದೆ ಬ್ರಿಟಿಷ್ ವಸಾಹತುಗಳ ಮಾರುಕಟ್ಟೆಗಳಿಗೂ ಸಹ 1920 ಮತ್ತು 1930ರ ದಶಕದವರೆಗಾದರೂ ಪ್ರವೇಶಾವಕಾಶ ಹೊಂದಿದ್ದವು.

ಎರಡು ಮಹಾಯದ್ಧಗಳ ಮಧ್ಯದ ಅವಧಿಯಲ್ಲಿ “ಸಾಮ್ರಾಜೀಯ ಒಲವು” ಆರಂಭವಾಯಿತು. ಅಂದರೆ ಸಾಮ್ರಾಜ್ಯದ ವಸಾಹತುಗಳ ನಡುವೆ ಆಮದು ಸುಂಕಗಳನ್ನು ರಿಯಾಯ್ತಿ ದರದಲ್ಲಿ ವಿಧಿಸಲಾಗುತ್ತಿತ್ತು. ಅಂದರೆ, ಬ್ರಿಟಿಷ್ ಸಾಮ್ರಾಜ್ಯದ ಹೊರಗೆ ತಯಾರಾದ ಸರಕುಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯದ ಒಳಗೆ ತಯಾರಿಸಿದ ಸರಕುಗಳಿಗೆ ಹೋಲಿಸಿದರೆ, ಹೆಚ್ಚಿನ ಸುಂಕಗಳನ್ನು ವಿಧಿಸಲಾಗುತ್ತಿತ್ತು. ಈ ಕ್ರಮವು ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಾದ ಒಂದು ಬದಲಾವಣೆಯನ್ನು ಸೂಚಿಸಿತು. ಅಧಿಕ ಸುಂಕ ವಿಧಿಸುವ ಕ್ರಮವನ್ನು ಪ್ರಧಾನವಾಗಿ ಬ್ರಿಟನ್ನಿನ ಏಷ್ಯಾದ ವಸಾಹತುಗಳ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳುವ ಜಪಾನೀಯರ ಬೃಹತ್ ಪ್ರಯತ್ನದ ವಿರುದ್ಧವಾಗಿ ರೂಪಿಸಲಾಗಿತ್ತು. ಸುಂಕ ವಿಧಿಸುವಲ್ಲಿ ಈ ರೀತಿಯ “ಸಾಮ್ರಾಜೀಯ ಒಲವು” ಮತ್ತು ನಂತರದ “ಸಾಮ್ರಾಜ್ಯದ ವಸ್ತುಗಳನ್ನೇ ಖರೀದಿಸಿ” ಅಭಿಯಾನದ ಮುಖ್ಯ ಗುರಿ ಜಪಾನ್ ಆಗಿದ್ದರೂ ಸಹ, ಈ ಭೇದಾತ್ಮಕ ಸುಂಕಗಳು ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಉಂಟಾದ ಒಂದು ಸಾಮಾನ್ಯ ಬದಲಾವಣೆಯನ್ನು ಅರ್ಥೈಸುತ್ತವೆ ಮತ್ತು ಅವು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯ ಕಾರಣ ಮತ್ತು ಲಕ್ಷಣ ಎರಡೂ ಆಗಿದ್ದವು ಮತ್ತು ಮಹಾ ಆರ್ಥಿಕ ಕುಸಿತದಿಂದಾಗಿ ಭೇದಾತ್ಮಕ ಸುಂಕಗಳು ಹೆಚ್ಚಿದವು. ಈ ಬದಲಾವಣೆಗಳಾಗುವ ಹಿಂದಿನ ಅವಧಿಯಲ್ಲಿ, ಅಂದರೆ, ಮೊದಲನೆಯ ಮಹಾಯುದ್ಧ-ಪೂರ್ವ ಏರ್ಪಾಟನ್ನು ಬುಡಮೇಲುಗೊಳಿಸಿದ ಜಪಾನಿನ ಆರ್ಥಿಕ ವಿಸ್ತರಣಾವಾದದ ಮೊದಲು, ಬ್ರಿಟನ್ನಿನ ಈ ರಕ್ಷಣಾತ್ಮಕ ಕ್ರಮಗಳು ಜಪಾನಿಗೆ ಅಡ್ಡಿಯಾದಾಗ, ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳುವ ಅದರ ಪ್ರಯತ್ನವು ಜಪಾನೀ ಮಿಲಿಟರಿ ವಿಸ್ತರಣಾವಾದವಾಗಿ ರೂಪುಗೊಂಡಾಗ, ಬ್ರಿಟಿಷ್ ವಸಾಹತುಶಾಹಿ ಮಾರುಕಟ್ಟೆಗಳು ಬ್ರಿಟನ್ನಿನ ಸರಕುಗಳಿಗೆ ಮಾತ್ರವಲ್ಲದೆ ಪ್ರತಿಸ್ಪರ್ಧಿ ಬಂಡವಾಳಶಾಹಿ ದೇಶಗಳ ಸರಕುಗಳಿಗೂ ಮುಕ್ತವಾದವು.

ನ್ಯಾಟೋ ಸದಸ್ಯತ್ವಕ್ಕಾಗಿ ಈಗ ಅರ್ಜಿ ಏಕೆ?

ಈ ಪ್ರಕಾರವಾಗಿ ಸ್ಕಾಂಡಿನೇವಿಯನ್ ದೇಶಗಳು ತಮ್ಮದೇ ಆದ ವಸಾಹತುಗಳನ್ನು ಹೊಂದಿರದಿದ್ದರೂ, ಸ್ಕ್ಯಾಂಡಿನೇವಿಯನ್ ಬಂಡವಾಳಶಾಹಿಯ ಬೆಳವಣಿಗೆಯು, ಬಂಡವಾಳಶಾಹಿಯ ಬೆಳವಣಿಗೆಗೆ ಸಾಮ್ರಾಜ್ಯಶಾಹಿಯ ಅಗತ್ಯವನ್ನು ಅಲ್ಲಗಳೆಯುವುದಿಲ್ಲ. ಈ ವಿದ್ಯಮಾನವು ಸಾಮ್ರಾಜ್ಯಶಾಹಿ ವ್ಯವಸ್ಥೆಯ ಸಂಕೀರ್ಣತೆಯನ್ನು ಮಾತ್ರ ಒತ್ತಿಹೇಳುತ್ತದೆ. ಇದರಿಂದ ತಿಳಿದುಬರುವುದೇನೆಂದರೆ, ಸ್ಕ್ಯಾಂಡಿನೇವಿಯನ್ ದೇಶಗಳೂ ಸಹ ಇತರ ಯಾವುದೇ ಪ್ರಮುಖ ಬಂಡವಾಳಶಾಹಿ ದೇಶದ ರೀತಿಯಲ್ಲೇ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿವೆ ಎಂಬುದನ್ನು. ಈ ಸಂರಕ್ಷಣೆಯ ಅಗತ್ಯ ಕೇವಲ ರಾಜಕೀಯ ಕಾರಣಗಳಿಗಾಗಿ ಅಂದರೆ, ರಾಜಕೀಯವಾಗಿ ಸುತ್ತುಗಟ್ಟುವಿಕೆಯ ಮೂಲಕ ಸಾಮ್ರಾಜ್ಯದ “ಭದ್ರತಾ” ವ್ಯವಸ್ಥೆ ಕುಸಿಯುವಂತೆ ಮಾಡುತ್ತದೆ ಎಂಬ ಕಾರಣಕ್ಕೆ ಮಾತ್ರವಲ್ಲ, ಯಾವುದೇ ನಿರ್ದಿಷ್ಟ ಮುಂದುವರಿದ ದೇಶದ ಬಂಡವಾಳಶಾಹಿಯ ಉಳಿವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂಬುದರಿಂದಾಗಿಯೂ. ಸಾಮ್ರಾಜ್ಯಶಾಹಿ ವ್ಯವಸ್ಥೆಯು ದುರ್ಬಲಗೊಂಡಾಗ ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಉತ್ಪಾದನೆ ಮಾಡಲಾಗದ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ಸರಕುಗಳ ಸಂಪೂರ್ಣ ಶ್ರೇಣಿಯ ಪೂರೈಕೆಗಳು ಅಸ್ತವ್ಯಸ್ತಗೊಳ್ಳುತ್ತವೆ. ಅವುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದೊಂದು ಆರ್ಥಿಕ ಅಗತ್ಯವೂ ಆಗುತ್ತದೆ.

ನ್ಯಾಟೋ ಸದಸ್ಯತ್ವ ಬಯಸಿ ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳು ಇತ್ತೀಚೆಗೆ ನಿರ್ಧಾರ ತೆಗೆದುಕೊಂಡಿವೆ. ಈ ದೇಶಗಳನ್ನು ನ್ಯಾಟೋಗೆ ಸೇರಿಸಿಕೊಳ್ಳುವ ಬಗ್ಗೆ ಟರ್ಕಿ ದೇಶವು ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧವಾಗಿ ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳು ಟರ್ಕಿಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಪ್ರಕಾರ, ಕುರ್ದಿಶ್ ನಿರಾಶ್ರಿತರಿಗೆ ನೀಡಿದ ರಾಜಕೀಯ ಆಶ್ರಯವನ್ನು ಈ ದೇಶಗಳು ಕೊನೆಗೊಳಿಸಿ ಕುರ್ದಿಶ್ ನಿರಾಶ್ರಿತರನ್ನು ಶಿಕ್ಷೆಗೆ ಒಳಪಡಿಸಬಯಸುವ ಟರ್ಕಿಗೆ ಒಪ್ಪಿಸುವ ಬಗ್ಗೆ ಅನೇಕರು ಆಶ್ಚರ್ಯಪಟ್ಟಿದ್ದಾರೆ. ಉಕ್ರೇನ್‌ನೊಂದಿಗಿನ ರಷ್ಯಾದ ಯುದ್ಧವು, ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳು ನ್ಯಾಟೋ ಕೂಟ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ ತಕ್ಷಣದ ಹಿನ್ನೆಲೆಯನ್ನು ಒದಗಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ದೇಶಗಳು ಈ ವರೆಗೆ ಹೊಂದಿದ್ದ ನಿಲುವನ್ನು ಈಗ ಬದಲಾವಣೆ ಮಾಡಿಕೊಂಡಿರುವ ವಿದ್ಯಮಾನವು ಬಂಡವಾಳಶಾಹಿ ಜಗತ್ತಿನಲ್ಲಿ ನಡೆಯುತ್ತಿರುವ ಒಂದು ಮೂಲಭೂತ ಬದಲಾವಣೆಯನ್ನು ಸೂಚಿಸುತ್ತದೆ.

ಈ ಬದಲಾವಣೆಯನ್ನು ವಿವರಿಸಲು ಸಾಮ್ರಾಜ್ಯಶಾಹಿಯು “ವಿಸ್ತರಣಾವಾದಿ ರಷ್ಯ”ದಿಂದ ಎದುರಾದ ಬೆದರಿಕೆಯನ್ನು ಉತ್ಪ್ರೇಕ್ಷಿಸುತ್ತದೆ. ಆದರೆ, ಈ ವಾದವನ್ನು ಪರಿಶೀಲನೆಗೆ ಒಳಪಡಿಸಿದಾಗ ಅದು ಬಿದ್ದುಹೋಗುತ್ತದೆ. ರಷ್ಯಾವನ್ನು ಒಂದು ಅಚಲ “ವಿಸ್ತರಣಾವಾದಿ” ಎಂದು ಒಂದು ವೇಳೆ ಊಹಿಸಿಕೊಂಡರೂ ಸಹ, ಈ ವರೆಗೆ ಅದರ ವಿಸ್ತರಣಾ ಕಾರ್ಯಾಚರಣೆಯು ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಒಂದು ಭಾಗವಾಗಿದ್ದ ಪ್ರದೇಶಗಳ ವ್ಯಾಪ್ತಿಯಲ್ಲಿದೆ. ಆದರೆ, ಸ್ವೀಡನ್ ಆಗಲಿ ಅಥವಾ ಫಿನ್ಲ್ಯಾಂಡ್ ಆಗಲಿ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಬಂಡವಾಳವಾದೀ ದೇಶಗಳು ಮತ್ತು ಸಮಾಜವಾದದ ನಡುವೆ ನಡೆಯುತ್ತಿದ್ದ ಶೀತಲ ಸಮರವು ಉತ್ತುಂಗದಲ್ಲಿದ್ದಾಗ, ಸೋವಿಯತ್ ಗುಮ್ಮದ ಬೆದರಿಕೆಯ ಬಗ್ಗೆ ಯುರೋಪಿಯನ್ ದೇಶಗಳು ಬೊಬ್ಬೆ ಹೊಡೆಯುತ್ತಿದ್ದಾಗ ಮತ್ತು ದಿನ ನಿತ್ಯವೂ ಯುರೋಪಿನ ಜನರಿಗೆ ಸೋವಿಯತ್-ವಿರೋಧಿ ವಿಚಾರಗಳನ್ನು ಉಣಬಡಿಸುತ್ತಿದ್ದಾಗ, ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೇಶಗಳು ನ್ಯಾಟೋದಿಂದ ದೂರ ಉಳಿದಿದ್ದವು. ಮೇಲಾಗಿ, ಸೋವಿಯತ್ ಒಕ್ಕೂಟ ಮತ್ತು ಅದರ ಸಮಾಜವಾದವು ಪತನವಾಗಿ ಹಲವು ವರ್ಷಗಳೇ ಉರುಳಿರುವಾಗ ಮತ್ತು ಸಾಮ್ರಾಜ್ಯಶಾಹಿ ಪ್ರಾಬಲ್ಯದ ವಿರುದ್ಧವಾಗಿ ಸೋವಿಯತ್ ಒಕ್ಕೂಟವು ಒಡ್ಡಿದ ಸೈದ್ಧಾಂತಿಕ ಸವಾಲು ಹಿಮ್ಮೆಟ್ಟಿರುವಾಗ, ಈಗ ಇದ್ದಕ್ಕಿದ್ದಂತೆಯೇ ಈ ದೇಶಗಳು ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದಾದರೂ ಏಕೆ?

ಈ ಪ್ರಶ್ನೆಗೆ ಉತ್ತರ ಇಲ್ಲಿದೆ, ನವ-ಉದಾರವಾದವು ಒಂದು ಸುದೀರ್ಘ ಬಿಕ್ಕಟ್ಟಿಗೆ ಒಳಗಾದ ಪರಿಣಾಮವಾಗಿ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಒಳಗೊಳಗೇ ಸ್ಫೋಟಗೊಳ್ಳುತ್ತಿರುವ ಅಂಶದಲ್ಲಿ ಇದು ಅಡಗಿದೆ. ಸುದೀರ್ಘ ಬಿಕ್ಕಟ್ಟಿನಿಂದ ನರಳುತ್ತಿರುವ ಸಾಮ್ರಾಜ್ಯಶಾಹಿಗಳಿಗೆ ತಮ್ಮ ಹುಕುಂಗಳನ್ನು ಚಲಾಯಿಸುವುದು ಕಷ್ಟವಾಗುತ್ತಿದೆ. ವಿಶ್ವವು ಬದಲಾವಣೆಗಾಗಿ ಹಾತೊರೆಯುತ್ತಿದೆ. ಈಗ ಅದರ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದು ತೋರುತ್ತದೆ. ಹಾಗಾಗಿ, ಒಂದು ಅತಿ-ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುವ ಮೂಲಕ ಪಾಶ್ಚ್ಯಾತ್ಯ ಶಕ್ತಿಗಳು ಈ ಬದಲಾವಣೆಯನ್ನು ತಪ್ಪಿಸುವ ಹತಾಶ ಪ್ರಯತ್ನದಲ್ಲಿ ತೊಡಗಿವೆ. ಪಾಶ್ಚಾತ್ಯ ಶಕ್ತಿಗಳ ಪ್ರಾಬಲ್ಯವು ಅವನತಿ ಹೊಂದುತ್ತಿರುವ ಸಮಯದಲ್ಲೇ ಚೀನಾ ಮತ್ತು ರಷ್ಯಾ ದೇಶಗಳು ಅಧಿಕಾರದ ಪರ್ಯಾಯ ಕೇಂದ್ರಗಳಾಗಿ ಹೊರಹೊಮ್ಮುತ್ತಿರುವ ಸಂಗತಿ ಮತ್ತು ಜಾಗತಿಕ ಬದಲಾವಣೆಗಳ ಸಂಭವನೀಯತೆಯ ಭೀತಿಯು ಸ್ಕ್ಯಾಂಡಿನೇವಿಯನ್ ದೇಶಗಳನ್ನೂ ಒಳಗೊಂಡಂತೆ, ಪಾಶ್ಚಾತ್ಯ ದೇಶಗಳನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಒಟ್ಟಿಗೆ ತಂದಿದೆ. ಆದ್ದರಿಂದ, ಸ್ಕಾಂಡಿನೇವಿಯನ್ ದೇಶಗಳ ನಿಲುವಿನ ಬದಲಾವಣೆಯು, ರಷ್ಯಾದ ಅತಿ-ಆಕ್ರಮಣಶೀಲತೆಯನ್ನು ವ್ಯಕ್ತಪಡಿಸುವುದರ ಬದಲಾಗಿ, ಸುದೀರ್ಘ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವಾಗ ತಮ್ಮ ಅಧಿನಾಯಕತ್ವಕ್ಕೆ ಬೆದರಿಕೆ ಎದುರಾದ ಪರಿಸ್ಥಿತಿಯಲ್ಲಿ, ಪಾಶ್ಚ್ಯಾತ್ಯ ಶಕ್ತಿಗಳ ಅತಿರೇಕದ ಆಕ್ರಮಣಶೀಲತೆಯ ಸಂಕೇತವಾಗಿದೆ.

Donate Janashakthi Media

Leave a Reply

Your email address will not be published. Required fields are marked *