ಎನ್‌ಆರ್‌ಸಿ ಬಿಕ್ಕಟ್ಟು: 27 ಲಕ್ಷ ಜನರಿಗೆ ಆಧಾರ್ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ಗುವಾಹತಿ: ಅಸ್ಸಾಂ ರಾಜ್ಯದಲ್ಲಿನ 27.43 ಲಕ್ಷ ಜನರಿಗೆ ಆಧಾರ್ ಕಾರ್ಡ್‌ಗಳನ್ನು ವಿತರಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಗೆ ನೋಟಿಸ್ ಜಾರಿ ಮಾಡಿದೆ.

ಆಗಸ್ಟ್ 2019 ರಲ್ಲಿ ಪ್ರಕಟಿಸಲಾದ ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಪೂರಕ ಪಟ್ಟಿಗೆ ಈ 27 ಲಕ್ಷ ಮಂದಿಯನ್ನು ಸೇರಿಸಲಾಗಿದ್ದು, ಈ ಸಂಬಂಧ ಟಿಎಂಸಿ ಪಕ್ಷದ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ನೋಟಿಸ್ ಜಾರಿ ಮಾಡಿದೆ.

ಅಸ್ಸಾಂ ರಾಜ್ಯದಲ್ಲಿ ಎನ್‌ಆರ್‌ಸಿ ವಿಚಾರಕ್ಕೆ ಸಂಬಂಧಿಸಿದಂತೆ 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಗುರುತಿನ ಚೀಟಿ‌ ನೀಡಲಾಗಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅರ್ಜಿದಾರರ ಪರ  ಹಿರಿಯ ವಕೀಲ ಬಿಶ್ವಜಿತ್ ದೇಬ್ ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸಿ, ಡಿಸೆಂಬರ್ 2017 ರಲ್ಲಿ ಪ್ರಕಟಿಸಲಾದ ಎನ್‌ಆರ್‌ಸಿ ಮೊದಲ ಪಟ್ಟಿಯಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್‌ಗಳನ್ನು ಸ್ವೀಕರಿಸಿದರೆ, ಪೂರಕ ಪಟ್ಟಿಯಲ್ಲಿ ಸೇರಿಸಲ್ಪಟ್ಟವರಿಗೆ ಅದನ್ನು ನಿರಾಕರಿಸಲಾಗಿದೆ. ಪ್ರತಿಯೊಬ್ಬ ನಿವಾಸಿಯೂ ಆಧಾರ್ ಕಾರ್ಡ್‌ಗೆ ಅರ್ಹರು ಎಂದು ಆಧಾರ್ ಕಾಯ್ದೆ ಹೇಳುತ್ತದೆ. ವ್ಯಕ್ತಿಗಳಿಗೆ ಆಧಾರ್ ಕಾರ್ಡ್‌ಗಳನ್ನು ನೀಡಬೇಕು. ಅದನ್ನು ನಿರಾಕರಿಸುವುದು ಮೂಲಭೂತ ಅಗತ್ಯಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ವಾದಿಸಿದರು.

ಆಧಾರ್‌ನಿಂದ ಸಿಗಬೇಕಾದ ಹಲವು ಸೌಲಭ್ಯಗಳು ಇವರಿಗೆ ದೊರೆಯುತ್ತಿಲ್ಲ. ಶಿಕ್ಷಣ, ಉದ್ಯೋಗ, ಪ್ಯಾನ್‌ ಕಾರ್ಡ್‌, ಪಡಿತರ ಚೀಟಿ ಪಡೆಯಲು, ಬ್ಯಾಂಕ್‌ ಖಾತೆ ತೆರೆಯಲು ತೊಂದರೆಯಾಗುತ್ತಿದೆ. ಇದು ಸ್ಪಷ್ಟವಾಗಿ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘನೆಯಾಗಿದೆ. ಪೂರಕ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ ವ್ಯಕ್ತಿಗಳು, ಎನ್ಆರ್‌ಸಿ ಮೊದಲ ಪಟ್ಟಿಯಲ್ಲಿ ನೋಂದಾಯಿಸಿದ ವ್ಯಕ್ತಿಗಿಂತ ಭಿನ್ನ ಎಂದು ಪರಿಗಣಿಸುವ ಮೂಲಕ ಸರ್ಕಾರದ ಈ ಕ್ರಮ ವರ್ಗದೊಳಗೊಂದು ವರ್ಗವನ್ನು ಸೃಷ್ಟಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ನ್ಯಾಯಾಲಯವು ನೋಟಿಸ್ ನೀಡಲು ಒಪ್ಪಿಕೊಂಡಿದ್ದು, ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ದೇಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.  ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದೆ ಎನ್ನಲಾಗಿದೆ.

ಕ್ಲೈಮ್‌ಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ ತಮ್ಮ ಹೆಸರನ್ನು ಎನ್‌ಆರ್‌ಸಿಯಲ್ಲಿ ಸೇರಿಸಿದ್ದರೂ ಸಹ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಅಂಶಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಎನ್‌ಆರ್‌ಸಿ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿರುವ ವ್ಯಕ್ತಿಗಳು ಆಧಾರ್ ದಾಖಲಾತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.

ಆದರೆ ಅವುಗಳನ್ನು ಯುಐಡಿಎಐ ಪ್ರಾಧಿಕಾರ ತಿರಸ್ಕರಿಸಿದೆ. ಅಸ್ಸಾಂ ಸರ್ಕಾರವು ಜನರ ಬಯೋಮೆಟ್ರಿಕ್ ವಿವರಗಳನ್ನು ಪ್ರವೇಶಿಸಲು ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆದಿತ್ತು. ಅವರಲ್ಲಿ ಬಯೋಮೆಟ್ರಿಕ್ ವಿವರಗಳನ್ನು ನಿರ್ಬಂಧಿಸಿರುವ ಅನೇಕರು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. 1951 ರ ಎನ್‌ಆರ್‌ಸಿ ಅನ್ನು ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನವೀಕರಿಸಲಾಗಿದೆ. 3.30 ಕೋಟಿ ಅರ್ಜಿದಾರರ ಪೈಕಿ 19 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *