ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಜಿ.ಎನ್.‌ ಸಾಯಿಬಾಬಾ ಬಿಡುಗಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

ನವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಡಿ ಜೈಲುವಾಸ ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ, ಬಿಡುಗಡೆಗೆ ಆದೇಶಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಇಂದು(ಅಕ್ಟೋಬರ್ 15) ತಡೆಯಾಜ್ಞೆ ನೀಡಿದೆ.

ಮಾಜಿ ಪ್ರಾಧ್ಯಾಪಕ ಜಿ.ಎನ್‌. ಸಾಯಿಬಾಬಾ ಅವರನ್ನು  ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ನೆನ್ನೆ(ಅಕ್ಟೋಬರ್‌ 14) ಆದೇಶವನ್ನು ನೀಡಿತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಬೇಲಾ ಎಂ ತ್ರಿವೇದಿ ನೇತೃತ್ವದ ರಜಾ ಕಾಲದ ದ್ವಿಸದಸ್ಯ ಪೀಠವು ಸಾಯಿಬಾಬಾ ಅವರ ದೈಹಿಕ ಅಸಾಮರ್ಥ್ಯ ಮತ್ತು ಆರೋಗ್ಯದ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಗೃಹಬಂಧನದಲ್ಲಿ ಇರಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದೆ.

ಅಲ್ಲದೆ ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ನಿರ್ದೇಶನದಂತೆ ಸಾಯಿಬಾಬಾ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದನ್ನು ಸುಪ್ರೀಂ ಕೋರ್ಟ್‌ ತಡೆ ಹಿಡಿದಿದೆ. ಹೈಕೋರ್ಟ್ ಆದೇಶದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಮನವಿಗೆ ಸಾಯಿಬಾಬಾ ಮತ್ತು ಇತರ ಆರೋಪಿಗಳಿಂದ ಪ್ರತಿಕ್ರಿಯೆ ಕೇಳಿದೆ.

ನಕ್ಸಲರ ಜತೆಗೆ ನಂಟು ಹೊಂದಿದ್ದಾರೆ ಎಂಬ ಕಾರಣಕ್ಕೆ ಸಾಯಿಬಾಬಾ ಅವರನ್ನು ಎಂಟು ವರ್ಷಗಳ ಹಿಂದೆ ಅವರನ್ನು ಬಂಧಿಸಲಾಗಿತ್ತು. ಆದರೆ, ಅವರ ವಿರುದ್ಧದ ಪ್ರಕರಣಗಳನ್ನು ಅಕ್ಟೋಬರ್‌ 14ರಂದು ರದ್ದುಪಡಿಸಿದ್ದ ಹೈಕೋರ್ಟ್‌ನ ಪೀಠವು, ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಜಿ.ಎನ್.ಸಾಯಿಬಾಬಾ ಪರ ಹಿರಿಯ ವಕೀಲ ಬಸಂತ್ ಸುಪ್ರೀಂ‌ ಕೋರ್ಟ್‌ನಲ್ಲಿ ವಾದ ಮಂಡಿಸಿ, ನನ್ನ ಕಕ್ಷಿದಾರರು ಶೇ 90ರಷ್ಟು ವಿಕಲಚೇತನರಾಗಿದ್ದು, ಅನಾರೋಗ್ಯ ಸಮಸ್ಯೆಯೂ ಕಾಡುತ್ತಿದೆ. ಅವರು ತಿರುಗಾಡಲು ಗಾಲಿ ಕುರ್ಚಿ ಉಪಯೋಗಿಸುತ್ತಿದ್ದಾರೆ. ಈ ನೆಲೆಯಲ್ಲಿ ಗೃಹ ಬಂಧನದಲ್ಲಿರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿದ್ದು, ಮಾಜಿ ಪ್ರಾಧ್ಯಾಪಕ ಗಂಭೀರ ಅಪರಾಧದಲ್ಲಿ ಅಪರಾಧಿಯಾಗಿದ್ದಾರೆ ಎಂದಿದೆ.

ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರಾದ ಜಿ ಎನ್ ಸಾಯಿಬಾಬಾ(55 ವರ್ಷ ದೆಹಲಿ ವಿಶ್ವವಿದ್ಯಾಲಯದ ರಾಮ್‌ ಲಾಲ್‌ ಆನಂದ್‌ ಕಾಲೇಜ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಅವರು ಈಗ ನಾಗಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರನ್ನು 2014ರ ಮೇ 9ರಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಹೇಶ್‌ ಟಿರ್ಕಿ, ಪಾಂಡು ನರೋಟೆ, ಹೇಮ್‌ ಮಿಶ್ರಾ, ಪ್ರಶಾಂತ್‌ ರಾಹಿ ಮತ್ತು ವಿಜಯ ಟಿರ್ಕಿ ಅವರಿಗೆ 2017ರ ಮಾರ್ಚ್‌ 7ರಂದು ಗಡ್‌ಚಿರೋಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ನರೋಟೆ ಅವರು ಕೆಲ ಸಮಯದ ಹಿಂದೆ ಸೆರೆಮನೆಯಲ್ಲಿಯೇ ಮೃತಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *