ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು(ಮಾ.24) ನಿರಾಕರಿಸಿದೆ. ಮುಂದಿನ ವಿಚಾರಣೆಗೆ ಯಾವುದೇ ನಿರ್ದಿಷ್ಟ ದಿನಾಂಕ ಪ್ರಕಟಿಸಿಲ್ಲ.
ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ವಿದ್ಯಾರ್ಥಿನಿ ಐಶಾತ್ ಶಿಫಾ ಮನವಿ ಮಾಡಿದ್ದರು. ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ ನಿರಾಕರಿಸಿದ್ದಾರೆ.
ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಪರೀಕ್ಷೆಗಳು ಸಮೀಪಿಸುತ್ತಿವೆ ಎಂದು ಕಾಮತ್ ಅವರು ಮನವಿ ಮಾಡಿದಾಗ ” ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ವಿಷಯಗಳನ್ನು ಅತಿರಂಜಿತಗೊಳಿಸಬೇಡಿʼʼ ಎಂದು ಹೇಳಿದ್ದಾರೆ.
ಇದನ್ನು ಓದಿ: ಹಿಜಾಬ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಇಂದು ಹಿರಿಯ ನ್ಯಾಯವಾದಿ ದೇವದತ್ತ ಕಾಮತ್ ಮಾಡಿದ್ದ ಮನವಿಯನ್ನು ನಿರಾಕರಿಸಿತು. ವಾರ್ಷಿಕ ಪರೀಕ್ಷೆ ನಡೆಯುವ ಸಮಯವಾಗಿರುವುದರಿದ ಹಿಜಾಬ್ ಸಂಬಂಧಿಸಿದ ಪ್ರಕರಣದ ಕುರಿತ ಅರ್ಜಿ ವಿಚಾರಣೆಯನ್ನು ತುರ್ತು ನಡೆಸಬೇಕೆಂದು ಕೋರಿದ್ದರು.
ಅರ್ಜಿಯಲ್ಲಿ ಮಾರ್ಚ್ 28ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡುವುದಿಲ್ಲ. ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ತುರ್ತಾಗಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ವಕೀಲರು ಕೋರಿಕೊಂಡಿದ್ದರು.
ಈ ಹಿಂದೆ ಕೂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ತುರ್ತು ವಿಚಾರಣೆಗೆ ಮಾರ್ಚ್ 16ರಂದು ಮನವಿ ಮಾಡಿದ್ದಾಗ ಹೋಳಿ ಹಬ್ಬ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿ, ವಿಚಾರಣೆ ಮುಂದೂಡಿತ್ತು.
ಇದನ್ನು ಓದಿ: ಕರ್ನಾಟಕ ಹೈಕೋರ್ಟ್‍ನ ಒಂದು ದುರದೃಷ್ಟಕರ ತೀರ್ಪು: ಸಿಪಿಐ(ಎಂ)
ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಸಂಬಂಧ ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡುವ ಸರ್ಕಾರಿ ಆದೇಶವನ್ನು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠ ಹೀಗೆ ಹೇಳಿತ್ತು:
ಹಿಜಾಬ್ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ; ಶಾಲಾ ಸಮವಸ್ತ್ರದ ಸೂಚನೆಯು ಸಂವಿಧಾನದ 19 (1) (ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಸಾಂವಿಧಾನಿಕವಾಗಿ ಅನುಮತಿಸುವ ಸಮಂಜಸ ನಿರ್ಬಂಧವಾಗಿದೆ. ಆದೇಶ ರವಾನಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರದ ಸುತ್ತೋಲೆ ಅನೂರ್ಜಿತವಾಗಿದೆ ಎಂದು ಯಾರೂ ವಾದಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಹಿಜಾಬ್ ಪ್ರಕರಣ ತುರ್ತು ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಸಂವಿಧಾನ ವಿಧಿ 25ರಡಿಯಲ್ಲಿ ಇಸ್ಲಾಂ ಧರ್ಮದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ನ ಪೂರ್ಣ ಪೀಠ ತೀರ್ಪು ನೀಡಿದ ನಂತರ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಕೆಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಹಿಜಾಬ್ಗೆ ಅನುಮತಿ ನೀಡದ ಕಾರಣ ಕರ್ನಾಟಕದಲ್ಲಿ ಹಲವು ವಿದ್ಯಾರ್ಥಿನಿಯರು ಪರೀಕ್ಷೆಗಳಿಗೆ ಹಾಜರಾಗುತ್ತಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಕುರಿತು ಮಾಹಿತಿ ನೀಡಿ, ಕೋರ್ಟ್ ಆದೇಶದ ನಂತರ ಗೈರಾದ ವಿದ್ಯಾರ್ಥಿನಿಯರಿಗೆ ಮರುಪರೀಕ್ಷೆ ಇಲ್ಲ ಎಂದು ಹೇಳಿದ್ದಾರೆ. ಜತೆಗೆ ನ್ಯಾಯಾಲಯ ಏನೇ ಆದೇಶ ನೀಡಿದರೂ ಪಾಲಿಸುವುದಾಗಿ ಅವರು ಹೇಳಿದ್ದಾರೆ.