ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ಸಂವಿಧಾನ ಪೀಠವು ರೂಪಿಸಿರುವ ಮಾನದಂಡವನ್ನು ಕಡಿತಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್, ಸಂಜೀವ್ ಖನ್ನಾ ಹಾಗೂ ಬಿ.ಆರ್.ಗವಾಯಿ ಅವರಿರುವ ತ್ರಿಸದಸ್ಯ ನ್ಯಾಯಪೀಠವು, ಎಸ್‌ಸಿ ಮತ್ತು ಎಸ್‌ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಡೇಟಾವನ್ನು ಸಂಗ್ರಹಿಸಲು ಆಯಾ ರಾಜ್ಯಗಳಿಗೆ ಅವಕಾಶವಿದೆ.
ಸ್ಥಾನಗಳಿಗೆ ಪ್ರಾತಿನಿಧ್ಯದ ಅಭಾವದ ಕುರಿತು ನಿರ್ಧರಿಸಲು ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ. ಕಾಲಕಾಲಕ್ಕೆ ಪರಿಶೀಲನೆಗೆ ಒಳಪಡಿಸುವುದಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಅವಧಿಯನ್ನು ಕೇಂದ್ರ ಸರ್ಕಾರವು ಗೊತ್ತುಪಡಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಎಂ.ನಾಗರಾಜ್ (2006) ಮತ್ತು ಜರ್ನೈಲ್ ಸಿಂಗ್ (2018) ಪ್ರಕರಣಗಳಲ್ಲಿ ಈ ಹಿಂದೆ ರೂಪಿಸಿರುವ ಮಾನದಂಡಗಳಲ್ಲಿ ಕಡಿತಗೊಳಿಸುವುದು ಸಾಧ್ಯವಿಲ್ಲ. ಹಾಗೇ ಹೊಸ ಮಾನದಂಡಗಳನ್ನು ರೂಪಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಂತರ ತಡೆಯಾಜ್ಞೆ: ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕುರಿತ ನೂತನ ಕಾಯ್ದೆಗೆ ಆರಂಭದಲ್ಲೇ ಕಾನೂನು ತೊಡಕು ಎದುರಾಗಿತ್ತು. ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ಈ ತಡೆಯಾಜ್ಞೆ ನೀಡಿತ್ತು.
ಬಡ್ತಿ ಮೀಸಲಾತಿ ಕಾಯ್ದೆ ಪ್ರಶ್ನಿಸಿ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಿಮ ಹಂತದಲ್ಲಿದೆ. ಆದರೆ, ಆ ಕುರಿತ ತೀರ್ಪು ಹೊರಬರುವ ಮುನ್ನವೇ ರಾಜ್ಯ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಮೀಸಲಾತಿ ಅಡಿಯಲ್ಲಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ ‘ಸರ್ಕಾರಿ ನೌಕರರ ಮೀಸಲಾತಿ ಆಧಾರಿತ ಬಡ್ತಿ ನೌಕರರ ಜೇಷ್ಠತೆ ನಿರ್ಣಯ ಕಾಯ್ದೆ’ ರೂಪಿಸಿತ್ತು. ಈ ಕಾಯ್ದೆಯನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2006ರಲ್ಲಿ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಗಳಿಗೆ ಮರಳಿಸಿ, ಮರು ವಿಚಾರಣೆ ನಡೆಸುವಂತೆ ಸೂಚಿಸಿತ್ತು.
ಅದರಂತೆ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಜೇಷ್ಠತಾ ನಿರ್ಣಯವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಎಂಬುವರು 2006ರಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್ 2017ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ 2002ರಲ್ಲಿ ರೂಪಿಸಿದ್ದ ಜೇಷ್ಠತೆ ನಿರ್ಣಯ ಕಾಯ್ದೆಯನ್ನು ರದ್ದುಗೊಳಿಸಿತ್ತು. ಜೊತೆಗೆ, ಮೂರು ತಿಂಗಳಲ್ಲಿ ಹೊಸ ಕಾಯ್ದೆ ರೂಪಿಸುವಂತೆ ಸೂಚಿಸಿತ್ತು. ಹೊಸ ನಿಯಮ ಜಾರಿಗೊಳಿಸುವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದರನ್ವಯ ರಾಜ್ಯ ಸರ್ಕಾರ ಕೂಡ ಮುಚ್ಚಳಿಕೆ ಬರೆದುಕೊಟ್ಟಿತ್ತು.
ಬಡ್ತಿ ಮೀಸಲಾತಿ ನಿಯಮ ಜಾರಿಗೊಳಿಸುವುದರಿಂದ ಸಾಮಾನ್ಯ ವರ್ಗದವರ ಜೇಷ್ಠತೆಗೆ ಅಡ್ಡಿಯುಂಟಾಗುತ್ತದೆ. ಸಾಮಾನ್ಯ ವರ್ಗದವರು ತಮ್ಮ 56 ನೇ ವಯಸ್ಸಿಗೆ 3ನೇ ಹಂತದ ಜೇಷ್ಠತೆ ಪಡೆದರೆ, ಬಡ್ತಿ ಮೀಸಲಾತಿ ಹೊಂದಿದವರು 45ನೇ ವಯಸ್ಸಿಗೇ ಮೂರು ಇಲ್ಲವೇ ನಾಲ್ಕನೇ ಹಂತದ ಪದೋನ್ನತಿ ಪಡೆಯುತ್ತಾರೆ. ಇದು ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿತ್ತು.