ನವ ದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ, ಕೋವಿಡ್ ಲಸಿಕೆ ನೀಡುವಿಕೆ ಹಾಗೂ ಇನ್ನಿತರ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.
ದೇಶದ್ಯಂತ ಆರು ಹೈಕೋರ್ಟ್‌ಗಳು ಆಸ್ಪತ್ರೆಗಳಲ್ಲಿನ ಆಮ್ಲಜನಕ, ಹಾಸಿಗೆಗಳು ಮತ್ತು ಆಂಟಿ-ವೈರಲ್ ಔಷಧ ರೆಮ್ಡೆಸಿವಿರ್‌ನ ಸಂಬಂಧಿಸಿದ ವಿಚಾರಗಳ ಬಗ್ಗೆ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಸಂದರ್ಭದಲ್ಲೇ ಸ್ವಯಂ ಪ್ರೇರಿತವಾಗಿ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ಇದನ್ನು ಓದಿ: ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ
ಹೈಕೋರ್ಟ್‌ಗಳ ಮುಂದಿರುವ ಪ್ರಕರಣಗಳನ್ನು ತನ್ನತ್ತ ವರ್ಗಾಯಿಸಿಕೊಳ್ಳಬೇಕೆ ಎನ್ನುವುದರ ಕುರಿತು ಸುಪ್ರೀಂ ಕೋರ್ಟ್ ಮುಂದಿನ ಹಂತದಲ್ಲಿ ನಿರ್ಧರಿಸಲಿದೆ ಎಂದು ಸಿಜೆಐ ಬೊಬ್ಡೆ ಹೇಳಿದರು.
ಕೋವಿಡ್ ಪ್ರಕರಣಗಳ ದಾಖಲೆಯಲ್ಲಿ ವಿಶ್ವದಲ್ಲೇ ಅತ್ಯಂತ ಮೇಲಿನ ಸ್ಥಾನದಲ್ಲಿ ಭಾರತ ಇದೆ. ಇದೊಂದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಈ ವಿಚಾರದಲ್ಲಿ ಸರಕಾರ ರೂಪಿಸಿರುವ ರಾಷ್ಟ್ರೀಯ ಯೋಜನೆ ಏನಾಗಿದೆ ಎಂಬುದರ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಕೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಹಿರಿಯ ವಕೀಲ ಹರೀಶ್ ಸಾಳ್ವೆ ಅವರನ್ನು ನ್ಯಾಯಾಲಯದ ಮಿತ್ರನಾಗಿ (ಅಮಿಕಸ್ ಕ್ಯೂರಿ) ಕೆಲಸ ಮಾಡಲು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ನೇಮಕ ಮಾಡಿದೆ.
ಇದನ್ನು ಓದಿ: ಜನ ಸಾಯುತ್ತಿದ್ದರೂ ನಿಮಗೆ ಅನುಕಂಪವಿಲ್ಲವೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಆರು ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳು ಗೊಂದಲ ಸೃಷ್ಟಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಸದರಿ ವಿಚಾರಗಳನ್ನು ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವುದರಿಂದ ಈ ವಿಚಾರಗಳ ಕುರಿತು ಹೈಕೋರ್ಟ್‌ಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸಿದರು.
“ರಾಷ್ಟ್ರೀಯ ಯೋಜನೆಯನ್ನು ನೀವು ಮಂಡಿಸಬಹುದು. ಸದ್ಯಕ್ಕೆ ಯಾವುದೇ ಆದೇಶವನ್ನು ನಾವು ಸೂಪರ್‌ಸೀಡ್ ಮಾಡುತ್ತಿಲ್ಲ. ಯೋಜನೆಯ ಕುರಿತು ನೀವು ಹೈಕೋರ್ಟ್‌ಗಳಿಗೆ ವಿವರಿಸಬಹುದು,” ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಹೇಳಿದರು.
ಇದನ್ನು ಓದಿ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದ 22 ಮಂದಿ ಸಾವು
“ಜನರ ಆರೋಗ್ಯದ ದೃಷ್ಟಿಯಿಂದಾಗಿ ಆಕ್ಸಿಜನ್ ಪೂರೈಕೆ, ಅಗತ್ಯ ಔಷಧಗಳ ಪೂರೈಕೆ, ಲಸಿಕೆ ನೀಡುವಿಕೆಯ ವಿಧಾನ ಮತ್ತು ರೀತಿಗಳ ಕುರಿತಂತೆ ಪ್ರಮುಖ ನಾಲ್ಕು ವಿಷಯಗಳನ್ನು ನಾವು ತುರ್ತಾಗಿ ತಿಳಿಯಬಯಸುತ್ತೇವೆ.” ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ.
“ಲಾಕ್‌ಡೌನ್ ಘೋಷಿಸುವ ಅಧಿಕಾರ ರಾಜ್ಯಗಳಿಗೆ ಇರಬೇಕು ಅದು ನ್ಯಾಯಾಂಗದ ನಿರ್ಣಯವಾಗಬಾರದು ಎಂಬುದು ನಮ್ಮ ನಿಲುವು. ಈ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡುತ್ತೇವೆ” ಎಂದು ಪೀಠ ಹೇಳಿದೆ.
ಮುಖ್ಯ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರ ನೇತೃತ್ವದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.