ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಸುಪ್ರೀಂಕೋರ್ಟ್!

ನವದೆಹಲಿ: ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಜನವರಿ 24 ಕ್ಕೆ ಮುಂದೂಡಿದೆ.

ಖಾಲಿದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಾಂವಿಧಾನಿಕ ಪೀಠದ ವಿಷಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿ ಮುಂದೂಡುವಂತೆ ಕೋರಿದ್ದರಿಂದ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ವಿಚಾರಣೆಯನ್ನು ಮುಂದೂಡಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಕೂಡ ಲಭ್ಯವಾಗಿಲ್ಲ ಎಂದು ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ | ರೈಲ್ವೇ ಭೂಮಿ ಹಗರಣ ಮೊದಲ ಚಾರ್ಜ್ ಶೀಟ್‌ನಲ್ಲಿ ರಾಬ್ರಿ ದೇವಿ ಮತ್ತು ಮಗಳ ಹೆಸರು!

ಈ ಬಗ್ಗೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಂದೂಡಲು ಮನಸ್ಸಿಲ್ಲ ಎಂದು ಹೇಳಿದೆ. ಈ ವೇಳೆ ಕಪಿಲ್ ಸಿಬಲ್ ಅವರು: “ಅವರು (ಖಾಲಿದ್) ಜೈಲಿನಲ್ಲಿದ್ದಾರೆ. ಅದು ಹೇಗೆ ಮುಖ್ಯ? ನಾವು ಎಂದಿಗೂ ಸಮಯ ಕೇಳಿಲ್ಲ. ರಾಜು ಅವರು ಲಭ್ಯವಿಲ್ಲ ಎಂದು ಹೇಳಿದರು. ನಾನು ಸಂವಿಧಾನದ ಪೀಠದಲ್ಲಿದ್ದೇನೆ. ದಯವಿಟ್ಟು ಒಂದು ವಾರ ನೀಡಿ. ಇದು ಸಮಂಜಸ ವಿನಂತಿಯಾಗಿದೆ” ಎಂದು ಹೇಳೀದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ನೀವು ಈ ಹಿಂದೆ ಪ್ರಕರಣವನ್ನು ಆಲಿಸುತ್ತಿಲ್ಲ ಎಂದು ಹೇಳಿದ್ದೀರಿ. ಇದು ಅನಗತ್ಯವಾಗಿದ್ದು, ನಾವು ನಿಮಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದೆ, ಅದಾಗ್ಯೂ ಸಿಬಲ್ ಅವರು ಒತ್ತಾಯಿಸುವುದನ್ನು ಮುಂದುವರಿಸಿದಾಗ, ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಂದೂಡಿದೆ.

ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, “ಅರ್ಜಿದಾರರ ಪರವಾಗಿ ಮನವಿ ಮಾಡಲಾಗಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಾಂವಿಧಾನಿಕ ಪೀಠದಲ್ಲಿರುವುದರಿಂದ ಮನವಿ ಮಾಡಿದ್ದಾರೆ. ಅಲ್ಲದೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಇಂದು ಕಾರ್ಯನಿರತರಾಗಿದ್ದಾರೆ ಅವರ ಪರವಾಗಿ ಕೂಡಾ ವಿನಂತಿಸಲಾಗಿದೆ. ಜನವರಿ 24 ರಂದು ಪ್ರಕರಣವನ್ನು ಪಟ್ಟಿ ಮಾಡಲಾಗಿದ್ದು, ಆ ದಿನ ಯಾವುದೇ ಮುಂದೂಡಿಕೆಯನ್ನು ನೀಡಲಾಗುವುದಿಲ್ಲ” ಎಂದು ಹೇಳಿದೆ.

ಇದನ್ನೂ ಓದಿ: ಕೆಆರ್‌ಎಸ್ ಅಣೆಕಟ್ಟಿನ ಸುತ್ತ ಗಣಿಗಾರಿಕೆ ನಿಷೇಧ ಹೇರಿದ ಹೈಕೋರ್ಟ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆಗಸ್ಟ್ 9 ರಂದು ಖಾಲಿದ್ ಅವರ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ 2022 ರ ಅಕ್ಟೋಬರ್ 18 ರ ಆದೇಶವನ್ನು ಪ್ರಶ್ನಿಸಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಮಿಶ್ರಾ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ, ಉಮರ್ ಖಾಲಿದ್ ಅವರು ಇತರ ಸಹ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಅವರ ವಿರುದ್ಧದ ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ತಿಳಿದು ಬಂದಿದೆ ಎಂದು ಹೇಳಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿ ಆರೋಪಿಯ ಪ್ರಾಥಮಿಕ ಕ್ರಮಗಳು “ಭಯೋತ್ಪಾದಕ ಕೃತ್ಯ” ಎನ್ನಲು ಅರ್ಹತೆ ಪಡೆದಿವೆ ಎಂದು ಹೈಕೋರ್ಟ್ ಹೇಳಿದೆ.

ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರ ಹಲವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು UAPA ಮತ್ತು ಭಾರತೀಯ ದಂಡ ಸಂಹಿತೆಯ ಹಲವಾರು ನಿಬಂಧನೆಗಳ ಅಡಿಯಲ್ಲಿ ಫೆಬ್ರವರಿ 2020 ರ ಗಲಭೆಯ “ಮಾಸ್ಟರ್‌ಮೈಂಡ್‌ಗಳು” ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ – ಸಿದ್ದರಾಮಯ್ಯ ಕಿಡಿ

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈ ಹಿಂಸಾಚಾರ ಭುಗಿಲೆದ್ದಿತ್ತು. 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಉಮರ್‌ ಖಾಲಿದ್ ಅವರು ಹಿಂಸಾಚಾರದಲ್ಲಿ ಯಾವುದೇ ಕ್ರಿಮಿನಲ್ ಪಾತ್ರವನ್ನು ಹೊಂದಿಲ್ಲ ಅಥವಾ ಪ್ರಕರಣದ ಯಾವುದೇ ಆರೋಪಿಗಳೊಂದಿಗೆ ಯಾವುದೇ “ಪಿತೂರಿಯ ಸಂಪರ್ಕ” ಹೊಂದಿಲ್ಲ ಎಂಬ ಆಧಾರದ ಮೇಲೆ ಜಾಮೀನು ಕೋರಿದ್ದರು.

ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಯನ್ನು ವಿರೋಧಿಸಿ, ಅವರು ಮಾಡಿದ ಭಾಷಣವು “ಬಹಳ ಲೆಕ್ಕಾಚಾರ”ದ್ದಾಗಿದ್ದು, ಅವರು ಬಾಬರಿ ಮಸೀದಿ, ತ್ರಿವಳಿ ತಲಾಖ್, ಕಾಶ್ಮೀರ, ಮುಸ್ಲಿಮರ ನಿಗ್ರಹ ಮತ್ತು ಸಿಎಎ ಮತ್ತು ಎನ್‌ಆರ್‌ಸಿಯಂತಹ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media

Donate Janashakthi Media

Leave a Reply

Your email address will not be published. Required fields are marked *