– ಅರುಣ್ ಜೋಳದಕೂಡ್ಲಿಗಿ
ಕಲಿಯಿರಿ ಕಲಿಯಿರಿ ವಿದ್ಯೆ ಕಲಿಯಿರಿ
ಆಂಗ್ಲರ ಕಾಲದಲ್ಲಿ ಎಲ್ಲರೂ ಕಲಿಯಲಿ ಮನುವನ್ನು ಕೇಳದಿರಿ ಯಾರೂ ಹಿಂದುಳಿಯದಿರಿ
ವಿದ್ಯೆ ಕಲಿಯೋಣ ಬನ್ನಿ ಜ್ಞಾನ ಪಡೆಯೋಣ ಬನ್ನಿ
ಎಲ್ಲರೂ ಒಂದಾಗಿ ಬನ್ನಿ ಕೂಡಿ ಬಾಳೋಣ ಬನ್ನಿ
ಕೂಡಿ ಕಲಿಯೋಣ ಬನ್ನಿ. ಸಾವಿತ್ರಿಬಾಯಿ
ಎಂದು ಸಾವಿತ್ರಿಬಾಯಿ ಅವರಿಂದ ಮರಾಠಿ ಭಾಷೆಯ ಪ್ರಥಮ ಬಂಡಾಯ ಕಾವ್ಯ ಪುಣೆಯ ಓಣಿ ಓಣಿಗಳಲ್ಲಿ ಮೊಳಗಿತು. ಹೀಗೆ ಪುಣೆಯ ಬುಧವಾರವಾಡದ ಬಾಲಿಕಾ ಶಾಲೆಯಲ್ಲಿ ಪಾಠ ಮಾಡುತ್ತಾ ಅಕ್ಷರ ದೀಪವನ್ನು ಬೆಳಗುತ್ತಾ ಭಾರತದ ಮೊದಲ ಶಿಕ್ಷಕಿಯಾಗಿ ಅಕ್ಷರ ಕ್ರಾಂತಿಗೆ ಕಾರಣವಾದ ಸಾವಿತ್ರಿಬಾಯಿ ಹುಟ್ಟಿದ್ದು ಜನವರಿ 3, 1831 ರಲ್ಲಿ ಸತಾರಾ ಜಿಲ್ಲೆಯ ನಯಗಾಂವ ಸಮೀಪದ ಶಿರ್ವಾಲ್ ನಲ್ಲಿ ಹೂ ಬೆಳೆಯುವ ‘ಮಾಲಿ’ ಸಮುದಾಯದ ಲಕ್ಷ್ಮಿ ಮತ್ತು ಪಾಟೀಲ್ ದಂಪತಿಗಳ ಮೊದಲ ಮಗಳಾಗಿ ಜನಿಸುತ್ತಾಳೆ. 9 ವರ್ಷದ ಹುಡುಗಿಯನ್ನು ಜ್ಯೋತಿಬಾಪುಲೆಯೊಂದಿಗೆ ಮದುವೆ ಮಾಡಿಸುತ್ತಾರೆ. ಮುಂದೆ ಈ ಇಬ್ಬರೂ ಭಾರತದ ಅಕ್ಷರಕ್ರಾಂತಿಯ ದೀಪಗಳಾಗಿ ಬೆಳಗುತ್ತಾರೆ.
1848 ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಚಾರಿತ್ರಿಕ ವರ್ಷವಾಗಿದೆ. ಜೋತಿಬಾ ಮತ್ತು ಸಾವಿತ್ರಿಬಾಯಿ ಜೊತೆಗೂಡಿ ಜನವರಿ 1, 1848 ರಲ್ಲಿ ಪುಣೆಯ ಬುಧವಾರವಾಡದಲ್ಲಿ ಆರಂಭಿಸಿದ ಭಾರತೀಯರೆ ಆರಂಭಿಸಿದ ಮೊದಲ ಹುಡುಗಿಯರ ಶಾಲೆ ಆರಂಭವಾಗುತ್ತದೆ. ಅಂತೆಯೇ ಮೇ 15 ರಂದು ಮಹರ್ ವಾಡದಲ್ಲಿ ಶೂದ್ರರಿಗಾಗಿ ಭಾರತೀಯರೇ ಆರಂಭಿಸಿದ ಮೊದಲ ಶಾಲೆ ಆರಂಭವಾಗುತ್ತದೆ. ಹೀಗೆ ಮಹಿಳೆಯರಿಗೆ ಮತ್ತು ದಲಿತರಿಗೆ ಅಕ್ಷರ ಕಲಿಸುವುದೇ ಅಪರಾಧ ಎಂದು ಪುರೋಹಿತಶಾಹಿಗಳು ದೊಡ್ಡದಾಗಿ ಪ್ರತಿರೋಧ ಒಡ್ಡುತ್ತಾರೆ. ಜ್ಯೋತಿಬಾ ತಂದೆ ಗೋವಿಂದ ರಾವ್ ಅವರಿಗೆ ಜಾತಿಯಿಂದ, ಧರ್ಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಸುತ್ತಾರೆ. ಈ ಬೆದರಿಕೆಗೆ ಹೆದರಿದ ಗೋವಿಂದರಾವ ಅಕ್ಷರ ಕಲಿಸುವ ಪಾಪ ಕಾರ್ಯವನ್ನು ಬಿಡುವುದಿಲ್ಲವಾದರೆ ಮನೆಯನ್ನು ತೊರೆಯಬೇಕಾಗುತ್ತದೆ ಎಂದು ಷರತ್ತು ಹಾಕುತ್ತಾರೆ. ಹೀಗೆ ಮನೆಯಲ್ಲಿ ವಾಗ್ವಾದ ನಡೆದು ಕೊನೆಗೆ ನಾವು ಅಕ್ಷರ ಕಲಿಸುವ ಪುಣ್ಯ ಕೆಲಸದಿಂದ ಹಿಂದೆ ಸರಿಯುವುದಿಲ್ಲ ಎಂದು ಮನೆಯಿಂದ ಹೊರಬೀಳುತ್ತಾರೆ. ಸಾಕುತಾಯಿ ಸುಗುಣಾಬಾಯಿ ಮುನ್ಷಿ ಗಫಾರ್ ಖಾನ್ ಅವರಿಗೆ ಈ ವಿಷಯ ತಿಳಿಸುತ್ತಾರೆ. ಹೀಗೆ ಬೀದಿಗೆ ಬಿದ್ದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿಗೆ ಉಸ್ಮಾನ್ ವಾಡದ ಉಸ್ಮಾನ್ ಶೇಕ್ ಮತ್ತು ಪಾತೀಮಾ ಶೇಕ್ ಅಣ್ಣ ತಂಗಿ ವಸತಿಕೊಟ್ಟು ನೆರವಾಗುತ್ತಾರೆ. ಮುಂದೆ ಪಾತೀಮಾಶೇಕ್ ಕೂಡ ಜ್ಯೋತಿಬಾ ಆರಂಭಿಸಿದ ಶಾಲೆಗಳಲ್ಲಿ ಸಾವಿತ್ರಿ ಬಾಯಿ ಜತೆ ಶಿಕ್ಷಕಿಯಾಗಿಯೂ ದುಡಿಯುತ್ತಾಳೆ ಆ ಮೂಲಕ ಪಾತೀಮಾಶೇಕ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗಿ ಚರಿತ್ರೆಯಲ್ಲಿ ದಾಖಲಾಗುತ್ತಾರೆ.
ಹುಡುಗಿಯರಿಗಾಗಿ, ಶೂದ್ರರಿಗಾಗಿ ತೆರೆದ ಶಾಲೆಗಳನ್ನು ನಿಲ್ಲಿಸುವುದಕ್ಕಾಗಿ ಸಂಪ್ರದಾಯಸ್ಥ ಸನಾತನಿ ಬ್ರಾಹ್ಮಣರು ಪ್ರಭಲ ತಡೆಯೊಡ್ಡುತ್ತಾರೆ. ಮೊದಲ ಹುಡುಗಿಯರ ಶಾಲೆಗೆ ಜಾಗ ಕೊಟ್ಟ ಚಿತ್ಪಾವಣ ಬ್ರಾಹ್ಮಣ ತಾತ್ಯಾಸಾಹೇಬ್ ಭಿಡೆ ಅವರಿಗೆ ಜೀವಬೆದರಿಕೆ ಒಡ್ಡಲಾಗುತ್ತದೆ, ಭಿಡೆಯವರು ಈ ಬೆದರಿಕೆಗೆ ಹೆದರದೆ ದೃಢವಾಗಿ ನಿಲ್ಲುತ್ತಾರೆ. ಸಾವಿತ್ರಿಬಾಯಿ ಶಾಲೆಗೆ ಪಾಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಸೆಗಣಿ ಎಸೆಯುವುದು, ಕಲ್ಲು ತೂರುವುದು ಮಾಡುತ್ತಾರೆ ಇದನ್ನು ಅರಿತ ಜ್ಯೋತಿಬಾ ಅವರ ಕ್ರಾಂತಿಗುರು ಲಾಹೂಜಿ ಸಾಳ್ವೆ ತಮ್ಮ ಗರಡಿಮನೆಯ ನಾಲ್ಕು ಪೈಲ್ವಾನರನ್ನು ಸಾವಿತ್ರಿಬಾಯಿಗೆ ಅಂಗರಕ್ಷಕರಾಗಿ ನೇಮಿಸುತ್ತಾರೆ.
ಇದನ್ನೂ ಓದಿ : ಸಮಸಮಾಜದ ಕನಸು ಕಂಡಾಕೆ
ಹೀಗೆ ಆರಂಭವಾದ ಶಾಲೆಗಳ ಚಳವಳಿಯ ಪರಿಣಾಮ 1848 ರಿಂದ 1852 ರ ಅವಧಿಯಲ್ಲಿ 18 ಶಾಲೆಗಳನ್ನು ಆರಂಭಿಸುತ್ತಾರೆ. ಕೇವಲ 14 ವರ್ಷದಲ್ಲಿ 18 ಶಾಲೆಗಳನ್ನು ತೆರೆದು ಒಂದು ಶಿಕ್ಷಣ ಕ್ರಾಂತಿಯನ್ನೆ ಮಾಡುತ್ತಾರೆ. ಹಾಗೆ ಸ್ಥಾಪನೆಯಾದ 18 ಶಾಲೆಗಳು ಹೀಗಿವೆ:
1. ಭಿಡೆವಾಡ-ಪುಣೆ (01.01.1848)
2. ಮಹರ್ ವಾಡ, ಪುಣೆ (15.05.1848)
3. ಹಪಡ್ ಸರ್,ಪುಣೆ (01.09.1848)
4.ಓತೂರು,ಪುಣೆ (05.12.1848)
5. ಸಾಸ್ ವಾಡ, ಪುಣೆ (20.12.1848)
6. ಅಲ್ಲಾಟಾಚೆಘರ್-ಕಸಬಾ (01.07.1849)
7. ನಾಯಗಾಂವ್-ಖಂಡಾಲ – ಸತಾರ (15.07.1849)
8. ಶಿರ್ವಲ್-ಖಂಡಾಲ,ಸತಾರ (18.07.1849)
9. ತಲೇಗಾಂವ, ಠಮ್ ಠೇರ್(01.09.1849)
10. ಶಿರೂರು,ಪುಣೆ (08.09.1849)
11. ಮುಂಡವೆ, ಪುಣೆ(01.02.1850)
12. ಅಂಜೀರ್‌ವಾಡೆ – ಮಜಗಾಂವ್ (03.03.1850)
13. ಕರಂಜೆ, ಸತಾರ (06.03.1850)
14. ಬಿಂಗಾರ್, ಪುಣೆ(19.09.1850)
15. ಅಣ್ಣಾ ಸಾಹೇಬ್ ಚಿಪ್ಪೂನ್‌ಕರ್‌ವಾಡ – ಪುಣೆ (03.07.1851)
16.ರಸ್ತಾಪೇಟ್, ಪುಣೆ (17.09.1851)
17. ನಾನಾಪೇಟ್, ಪುಣೆ(15.03.1852)
18.ವೇತಲ್ ಪೇಟ್,ಪುಣೆ (15.03.1852)
ಹೀಗೆ ಮಹಿಳೆಯರಿಗೆ ಮತ್ತು ಶೂದ್ರರಿಗೆ ಶಿಕ್ಷಣ ಕೊಡುವುದನ್ನು ಕೆಲ ಬ್ರಿಟೀಷ್ ಅಧಿಕಾರಿಗಳು ಬೆಂಬಲಿಸಿದರೆ ಮತ್ತೆ ಕೆಲವರು ಈ ಬೆಳವಣಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಕುತ್ತು ತರಬಹುದು ಎಂದು ಭಾವಿಸಿದ್ದರು. ಬ್ರಿಟೀಷ್ ಅಧಿಕಾರಿ ಲಾರ್ಡ್ ಲೆಬೆನ್ ಬರೋ’ ಹೀಗೆ ಕೆಳವರ್ಗಗಳಿಗೆ ಶಿಕ್ಷಣ ಕೊಟ್ಟರೆ ಅವರಲ್ಲಿ ಜಾಗೃತಿ ಮೂಡಿ ಮುಂದೆ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ಬ್ರಿಟನ್ ರಾಣಿಗೆ ಪತ್ರ ಬರೆದು ಆತಂಕ ವ್ಯಕ್ತಪಡಿಸುತ್ತಾನೆ.
18 ಶಾಲೆಗಳನ್ನು ತೆರೆದು ಶಿಕ್ಷಣ ಕೊಡುತ್ತಿರುವ ಸಂದರ್ಭದಲ್ಲಿ ದೇಶ-ವಿದೇಶಿ ಪತ್ರಿಕೆಗಳಲ್ಲಿ ಈ ಶಾಲೆಗಳ ಶಿಕ್ಷಣ ಕ್ರಾಂತಿಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತವೆ. ಇದನ್ನೆಲ್ಲಾ ಗಮನಿಸಿದ ಪುಣೆ ಭಾಗದ ಬ್ರಿಟೀಶ್ ಶಿಕ್ಷಣಾಧಿಕಾರಿ ಸರ್ ಅಕ್ಸಿಕನ್ ಪೆರಿ ಅವರು ಮುನ್ಸೂಚನೆ ಇಲ್ಲದೆ ಶಾಲೆಗೆ ಬೇಟಿ ನೀಡುತ್ತಾರೆ. ಸಾವಿತ್ರಿಬಾಯಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಕ್ಕಳನ್ನು ಒಂದಷ್ಟು ಪ್ರಶ್ನಿಸಿ ಸಾವಿತ್ರಿಬಾಯಿ ಜತೆ ಮಾತನಾಡುತ್ತಾರೆ. ಆಗ ಅವರು ಜ್ಯೋತಿಬಾಪುಲೆ ಅವರಿಗೆ ‘ನಿಮ್ಮ ಹೆಂಡತಿಯ ವಿದ್ವತ್ತಿಗೆ ತಲೆಬಾಗುತ್ತೇನೆ. ಅವರ ಮರಾಠಿ ಮತ್ತು ಇಂಗ್ಲೀಷಿನ ಭಾಷಾ ಪಾಂಡಿತ್ಯವು ನನ್ನನ್ನು ಬೆರಗುಗೊಳಿಸಿದೆ. ನೀವು ಭಾಗ್ಯಶಾಲಿಗಳು. ಸರಕಾರ ಮಾಡಬೇಕಾದ ಕೆಲಸವನ್ನು ನೀವುಗಳು ಮಾಡಿದ್ದೀರಿ’ ಎಂದು ಹೊಗಳುತ್ತಾರೆ.
ಮುಂದೆ 20 ನವೆಂಬರ್ 1852 ರಲ್ಲಿ ಪುಣೆಯ ವಿಶ್ರಾಮ್ ಬಾಗ್ ನ ಪುಣೆ ಕಾಲೇಜು ಪರಿಸರದಲ್ಲಿ ಮುಂಬೈ ಪ್ರಾಂತ್ಯದ ಗವರ್ನರ್ ಲಾರ್ಡ್ ಸ್ಟುವರ್ಟ್ ಎಲ್ ಫಿನ್ ಸ್ಟನ್ ಅವರ ಉಪಸ್ಥಿತಿಯಲ್ಲಿ ಅಲ್ಲಿನ ಶಿಕ್ಷಣಾಧಿಕಾರಿ ಮೇಜರ್ ಕ್ಯಾಂಡಿ ಅವರ ಅಧ್ಯಕ್ಷತೆಯಲ್ಲಿ ಜೋತಿಬಾ ಮತ್ತು ಸಾವಿತ್ರಿಭಾಯಿ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುತ್ತದೆ.
ಸನ್ಮಾನ ಸ್ವೀಕರಿಸಿ ಜ್ತೋತಿಬಾ ಅವರು ‘ನಾನು ಅಂತಹ ವಿಶೇಷ ಕೆಲಸವನ್ನೇನು ಮಾಡಿಲ್ಲ. ನನ್ನ ಕರ್ತವ್ಯವವನ್ನು ನಿಭಾಯಿಸಿದ್ದೇನೆ ಅಷ್ಟೆ. ಸರಕಾರ ತನ್ನ ಇಚ್ಚಾಶಕ್ತಿಯಿಂದ ಸ್ತ್ರೀ ಶಿಕ್ಷಣ ದ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುತ್ತಾರೆ. ಮುಂದುವರಿದು ನಾನೇನೋ ಶಾಲೆಗಳನ್ನು ಸ್ಥಾಪಿಸಿದೆ. ಆದರೆ ನೂರು ಸಂಕಷ್ಟಗಳ ನಡುವೆ ಶಾಲೆಗಳಲ್ಲಿ ಕಲಿಸುವ ವ್ಯವಸ್ಥಿತ ಕೆಲಸ ಮಾಡಿದವರು ಸಾವಿತ್ರಿಬಾಯಿ ಹಾಗಾಗಿ ನಾನು ಸಾವಿತ್ರಿಬಾಯಿಗೆ ಅಭಿನಂದನೆ’ ಸಲ್ಲಿಸುತ್ತೇನೆ ಎನ್ನುತ್ತಾರೆ.
ಸಾವಿತ್ರಿಬಾಯಿ ಶಿಕ್ಷಣದ ಜೊತೆ ಜೊತೆಗೆ ಸಂಘಟನೆಯನ್ನು ಕಟ್ಟುತ್ತಾರೆ. ಜನವರಿ 14 1852 ರಲ್ಲಿ ಪುಣೆಯಲ್ಲಿ ‘ಮಹಿಳಾ ಸೇವಾ ಸಂಘ’ ವನ್ನು ಸ್ಥಾಪಿಸುತ್ತಾರೆ. ಇದರಲ್ಲಿ ಎಲ್ಲಾ ಜಾತಿ ಧರ್ಮದ ಮಹಿಳೆಯರು ಜಾತಿ ಧರ್ಮದ ಗಡಿದಾಟಿ ಒಂದಾಗಿಸಿ ಮಹಿಳಾ ಶಕ್ತಿಯನ್ನು ಏಕೀಕರಣ ಮಾಡುವ ಕನಸೊತ್ತಿದ್ದರು. ಈ ಸಂದರ್ಭದಲ್ಲಿ ‘ಅರಿಶಿನ ಕುಂಕುಮ’ ಎನ್ನುವ ಆಚರಣೆಯನ್ನು ಮುನ್ನಲೆಗೆ ತಂದರು. ಸಂಕ್ರಾಂತಿಯ ದಿನ ‘ಎಳ್ಳುಬೆಲ್ಲ’ ಎನ್ನುವ ಮತ್ತೊಂದು ಹೊಸ ಆಚರಣೆಯ ಚಾಲ್ತಿಗೆ ತರಲಾಯಿತು. ಈ ಸಂಘಕ್ಕೆ ಪುಣೆಯ ಜಿಲ್ಲಾಧಿಕಾರಿಯ ಪತ್ನಿ ಈ.ಸಿ.ಜೋನ್ಸ್ ಅಧ್ಯಕ್ಷರಾಗಿದ್ದರು. ಸಾವಿತ್ರಿಬಾಯಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.
ಅಕ್ಷರ ಓದಲು ಬರೆಯಲು ಕಲಿತರಷ್ಟೇ ಸಾಲದು ಆ ಅಕ್ಷರ ಓದಿನ ಮೂಲಕ ಜ್ಞಾನದ ಹುಡುಕಾಟ ಮಾಡಬೇಕೆಂಬುದು ಜ್ಯೋತಿಭಾ ಕನಸಾಗಿತ್ತು. ಇದರ ಪ್ರತಿಫಲವಾಗಿ 1852 ರಲ್ಲಿ ‘ಪುಣೆ ಲೈಬ್ರರಿ’ ಯನ್ನು ಸ್ಥಾಪಿಸುತ್ತಾರೆ. ಇದರ ಫಲವಾಗಿ 1853 ರಲ್ಲಿ ಮುಕ್ತಾ ಸಾಳ್ವೆ ಎಂಬ ದಲಿತ ವಿದ್ಯಾರ್ಥಿನಿ ಗ್ರಂಥಾಲಯದ ಓದಿನ ಪರಿಣಾಮ ‘ಅಸ್ಪೃಶ್ಯರ ನೋವು’ ಎಂಬ ಲೇಖನ ಬರೆಯುತ್ತಾಳೆ. ಈ ಬರಹ ವಿಕ್ಟೋರಿಯಾ ರಾಣಿಯ ಗಮನಸೆಳೆಯುತ್ತದೆ.
ಜ್ಯೋತಿಬಾ ಅವರ ಸಾರ್ವತ್ರಿಕ ಶಿಕ್ಷಣ ಕನಸಿಗೆ ಬೆಂಗಾವಲಾಗಿ ನಿಂತವರನ್ನು ನೆನೆಯಬೇಕು. ಕ್ರಿಸ್ಚಿಯನ್ ಮತಧರ್ಮ ಪ್ರಚಾರಕ ರೆವರೆಂಡ್ ಲಿಂಜಿಟ್ ಸಾಹೇಬ್, ಮುಸ್ಲಿಂ ಮದರಸಾದ ಶಿಕ್ಷಕ ಗಫೂರ್ ಬೇಗ್ ಮುನ್ಷಿ, ಜೋತಿಬಾ ಸಹಪಾಟಿಗಳಾದ ಬ್ರಾಹ್ಮಣರಾದ ಸದಾಶಿವ ಬಲ್ಲಾಳ್ ಗೋವಂಡೆ, ಮೋರೆ ವಿಠ್ಠಲ್ ವಾಳ್ ವಲ್ ಕರ್, ಸಖಾರಾಮ ಯಶವಂತ್ ಪರಾಂಜಪೆ, ತಾತ್ಯಾ ಸಾಹೇಬ್ ಭಿಡೆ ಮೊದಲಾದವರು ಜೋತಿಬಾ ಮತ್ತು ಸಾವಿತ್ರಿಬಾಯಿಗೆ ಹೆಗಲೆಣೆಯಾಗಿ ನಿಂತಿದ್ದರು.
ಇದನ್ನೂ ನೋಡಿ : ಕುವೆಂಪು 120| ಕುವೆಂಪು ಲೋಕ ದೃಷ್ಟಿ ಸಾರ್ವಕಾಲಿಕ ಸಮಕಾಲೀನತೆ – ಎಲ್ ಎನ್ ಮುಕುಂದರಾಜ್ Janashakthi Media