ಸಾವಿತ್ರಿಬಾಯಿ ಫುಲೆ ಸ್ಮರಣೆ

ವೈಚಾರಿಕ ಕ್ರಾಂತಿಕಾರಿಗಳು, ಸಮಾಜ ಸುಧಾರಕರು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡದ್ದು ಬಂಗಾಳದ ನಂತರ ಮಹಾರಾಷ್ಟ್ರದ ನೆಲದಲ್ಲಿ. ಪ್ರಗತಿಪರ ಧೋರಣೆಯನ್ನು ಮೈಗೂಡಿಸಿಕೊಂಡ ಇವರು ಸಾಮಾಜಿಕ ಆಂದೋಲನಗಳನ್ನು ಹುಟ್ಟುಹಾಕಿದರು ಅಥವ ಪ್ರಚಲಿತ ಪ್ರವಾಹಗಳನ್ನು ಗುರಿಮುಟ್ಟಿಸಿದರು. ಅಂಥವರಲ್ಲಿ ಜ್ಯೋತಿಬಾ ಫುಲೆ ಮತ್ತು ಅವರ ಮಡದಿ ಸಾವಿತ್ರಿಬಾಯಿ ಫುಲೆ ದಂಪತಿಗಳು ಪ್ರಮುಖರು.

ಸಾವಿತ್ರಿಬಾಯಿ ಫುಲೆಯವರು ನಮ್ಮ ದೇಶ ಕಂಡ ಒಬ್ಬ ಧೀಮಂತ ಮಹಿಳೆ. ಅವರು ಈ ದೇಶದ ಪ್ರಥಮ ಶಿಕ್ಷಕಿ, ಪ್ರಥಮ ಸಮಾಜ ಸುಧಾರಕಿ, ಪ್ರಥಮ ವೈಚಾರಿಕ ಕವಯಿತ್ರಿ. ಸಾವಿತ್ರಿಬಾಯಿಯವರು ಬಡ ರೈತ ಕುಟುಂಬದಲ್ಲಿ ಸಾತಾರ ಜಿಲ್ಲೆಯ ಖಂಡಾಳಾ ತಾಲೂಕಿನ ನಾಯಗಾವ ಎಂಬ ಕುಗ್ರಾಮದಲ್ಲಿ ಜನಿಸಿದರು. ನೂರು, ನೂರೈವತ್ತು ಮನೆಗಳಿದ್ದ ಆ ಚಿಕ್ಕ ಹಳ್ಳಿಯಲ್ಲಿ ಶಿಕ್ಚಣದ ಪರಂಪರೆಯಿಲ್ಲದ ಮನೆಯಲ್ಲಿ ಸಾವಿತ್ರಿಬಾಯಿ ಬೆಳೆದರು. 1840 ರಲ್ಲಿ ಅವರು ಜ್ಯೋತಿಬಾರೊಂದಿಗೆ ವಿವಾಹವಾದರು. ಅದೊಂದು ಬಾಲ್ಯ ವಿವಾಹವಾಗಿತ್ತು. ಮದುವೆಯ ನಂತರ ಜ್ಯೋತಿಬಾರವರ ನೆರವಿನೊಂದಿಗೆ ಅಕ್ಷರ ಕಲಿಯಲು ಆರಂಭಿಸಿದರು. ಜ್ಯೋತಿಬಾರವರ ಹೆಗಲಿಗೆ ಹೆಗಲುಕೊಟ್ಟು ಸಮಾಜ ಕ್ರಾಂತಿಯ ರಥವನ್ನು ತಮ್ಮ ಆಯುಷ್ಯದ ಕೊನೆಯವರೆಗೂ ನಡೆಸಿಕೊಂಡು ಬಂದರು. ಸಮಾಜ ಕ್ರಾಂತಿಯ ಒಂದು ಚಕ್ರ ಜ್ಯೋತಿ ಬಾ ರವರು ಆದರೆ ಇನ್ನೊಂದು ಚಕ್ರ ಸಾವಿತ್ರಿಬಾಯಿ ಆಗಿದ್ದರು. ಜಾತಿ ಬೇದ, ಪಂಕ್ತಿ ಬೇದ ವಿರುದ್ಧ ಧ್ವನಿ ಎತ್ತಿದರು. ಗಾಂಧೀಜಿ, ಡಾ. ಅಂಬೇಡ್ಕರ್ ಮುಂತಾದವರು ಸಹ ಫುಲೆ ದಂಪತಿಗಳ ವಿಚಾರಗಳಿಂದ ಪ್ರಭಾವಿತರಾಗಿದ್ದರು.

ಜ್ಯೋತಿಬಾ ವಂಶದವರು `ಗೋಹೆ’ ಎಂಬ ಶೂದ್ರ ಜಾತಿಗೆ ಸೇರಿದವರಾಗಿದ್ದರು. ಮುಂದೆ ಅವರು ಹೂವಿನ ವ್ಯಾಪಾರ ಮಾಡತೊಡಗಿದ್ದರಿಂದ ಫುಲೆ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಜ್ಯೋತಿ ಬಾ ಫುಲೆರವರ ಕಾಲದಲ್ಲಿ ಸಮಾಜದಲ್ಲಿ ಕ್ರೂರವಾದ ಶ್ರೇಣೀಕೃತ ಸಮಾಜ ವ್ಯವಸ್ಥೆ ಮೆರೆಯುತಿತ್ತು. ಬ್ರಾಹ್ಮಣರು ಮತ್ತು ಕೆಲವು ಮೇಲ್ವರ್ಗದವರನ್ನು ಬಿಟ್ಟರೆ ಬಹುಸಂಖ್ಯಾತರು ನಿಮ್ನ ಜಾತಿಗಳಿಗೆ ಸೇರಿದವರಾಗಿರುತ್ತಿದ್ದರು. ಮಹಾರ್, ಚಮ್ಮಾರ್ ಮುಂತಾದ ಜಾತಿಗಳಿಗೆ ಸೇರಿದವರು ಅಸ್ಪೃಶ್ಯರಾಗಿದ್ದರು. ಅವರ ಉಗುಳು ರಸ್ತೆಯ ಮೇಲೆ ಬಿದ್ದು ಬ್ರಾಹ್ಮಣರ ಕಾಲಿಗೆ ತಾಗಿ ಅವರು ಅಪವಿತ್ರರಾಗುವುದನ್ನು ತಡೆಯಲು ನಿಮ್ನ ಜಾತಿಗಳಿಗೆ ಸೇರಿದವರು ಕುತ್ತಿಗೆಗೆ ಚಿಕ್ಕ ಗಡಿಗೆಯನ್ನು ಕಟ್ಟಿಕೊಳ್ಳಬೇಕಾಗಿತ್ತು. ರಸ್ತೆಯ ಮೇಲೆ ಮೂಡುವ ಕಾಲಿನ ಗುರುತುಗಳನ್ನು ಅಳಿಸಿಹಾಕಲು ಅಸ್ಪೃಶ್ಯರು ಸೊಂಟಕ್ಕೆ ಮುಳ್ಳಿನ ಗಿಡಗಂಟೆಗಳನ್ನು ಸಿಕ್ಕಿಸಿಕೊಳ್ಳಬೇಕಾಗಿತ್ತು. ಅಸ್ಪೃಶ್ಯನಾದವನು ದೇವಸ್ಥಾನ ಪ್ರವೇಶ ಮಾಡುವಂತಿರಲಿಲ್ಲ. ವೇದಮಂತ್ರ ಕೇಳುವಂತಿರಲಿಲ್ಲ-ಅಸ್ಪೃಶ್ಯರ ಮಕ್ಕಳಿಗೆ ಶಿಕ್ಷಣದ ಸೌಲಭ್ಯವಿರಲಿಲ್ಲ. ಸವರ್ಣೀಯ ಧಣಿಗಳ ಚಾಕರಿ ಮಾಡಿ, ಜೀತದಾಳಾಗಿ ಬದುಕಬೇಕಾಗಿತ್ತು.

ಮಹಿಳೆಯರ ಯಾತನೆಯನ್ನು ಕೇಳುವವರಿರಲಿಲ್ಲ. ಅವರು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದರು. ಹಾಗಾಗಿ ಮೌಢ್ಯ, ಕಂದಾಚಾರಗಳ ಗುಲಾಮರಾಗಿದ್ದರು. ಶತಮಾನಗಳಿಂದ ಬೆಳೆದು ಬಂದ ಕೀಳರಿಮೆಯಿಂದಾಗಿ ಅವಮಾನದ ಬದುಕನ್ನು ಒಪ್ಪಿಕೊಂಡು ಜೀವಿಸುತ್ತಿದ್ದರು. ಫುಲೆ ದಂಪತಿಗಳು ಮಹಿಳೆಯರ, ವಿಶೇಷವಾಗಿ ನಿಮ್ನ ವರ್ಗದ ಮಹಿಳೆಯರ ಗೋಳನ್ನು ನೋಡಿ ತುಂಬ ನೊಂದಿದ್ದರು. ದಲಿತ ಮಹಿಳೆಯರನ್ನು ದೇವದಾಸಿಯರನ್ನಾಗಿ ಪರಿವರ್ತಿಸುವ ಸಮಾಜ ವ್ಯವಸ್ಥೆಯನ್ನು ಬದಲಾಯಿಸುವುದು ಸಾಧ್ಯವಾಗಬೇಕಾದರೆ ಮಹಿಳೆಯರಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದು ಅತ್ಯಗತ್ಯ ಎಂದು ಮನಗಂಡರು.

ಸಾವಿತ್ರಿಬಾಯಿಯವರು ಹೆಣ್ಣು ಮಕ್ಕಳಿಗಾಗಿ ಮತ್ತು ದಲಿತರಿಗಾಗಿ ಜ್ಯೋತಿಬಾರವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಗಳನ್ನು ಮಾಡಿದರು. ಅಸ್ಪೃಶ್ಯರಿಗಾಗಿ, ಮತ್ತು ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು. ಬರಗಾಲದ ಸಮಯದಲ್ಲಿ ಬಡವರಿಗಾಗಿ ಅನ್ನಛತ್ರಗಳನ್ನು ಪ್ರಾರಂಭಿಸಿದರು. ಬ್ರಾಹ್ಮಣ ವಿಧವೆಯರು ತಲೆಬೋಳಿಸುವುದನ್ನು ವಿರೋಧಿಸುವ ಮತ್ತು ಅವರ ಪುನರ್ವಿವಾಹವನ್ನು ಪ್ರೋತ್ಸಾಹಿಸುವ ಜಾಗೃತಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು. ದೇವದಾಸಿ ಪದ್ಧತಿಯ ವಿರುದ್ಧ ಮಹಿಳಾ ಜಾಗೃತಿ ಉಂಟುಮಾಡಲು ಶ್ರಮಿಸಿದರು.

ಆ ಕಾಲದ ಬ್ರಾಹ್ಮಣ ವಿಧವೆಯರು ಅತಿ ಹೆಚ್ಚು ಕೌಟುಂಬಿಕ ಹಿಂಸೆಗೆ ಬಲಿಯಾಗುತ್ತಿದ್ದರು. ಮನೆಯಲ್ಲಿ ಮಾವ, ಮೈದುನ ಮೊದಲಾದವರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದರು. ಅವರಿಗೆ ಮಕ್ಕಳಾದರೆ `ಬಾಲ ಹತ್ಯೆ’ ಮಾಡುತ್ತಿದ್ದರು. ಅಥವ ಗರ್ಭವತಿಯರಾದರೆ ವಿಧವೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ದೌರ್ಜನ್ಯವನ್ನು ತಡೆಯಲು ಜ್ಯೋತಿಬಾರವರು `ಬಾಲಹತ್ಯಾ ಪ್ರತಿಬಂಧಕ ಗೃಹ’ ವನ್ನು ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಇದು ಬಹುದೊಡ್ಡ ಆಧಾರವಾಯಿತು. ಸ್ವಂತ ಮನೆಯಲ್ಲಿ ಸ್ಥಾಪಿಸಲಾದ ಆಶ್ರಮದಲ್ಲಿ ಸಾವಿತ್ರಿಬಾಯಿಯವರು 35 ಮಂದಿ ಬ್ರಾಹ್ಮಣ ವಿಧವೆಯರ ಬಾಣಂತನವನ್ನು ಮಾಡಿದರು.

ಸಾವಿತ್ರಿಬಾಯಿ ಫುಲೆಯವರು ಕೇವಲ ಶಿಕ್ಷಕಿಯಾಗಿರಲಿಲ್ಲ. ಅವರು ಜ್ಯೋತಿಬಾರವರ ಇಡೀ ಸಮಾಜ ಸುಧಾರಣಾ ಆಂದೋಲನಕ್ಕೆ ಬೆಂಬಲವಾಗಿ ನಿಂತ ಕ್ರಿಯಾಶೀಲ ಕಾರ್ಯಕರ್ತೆಯಾಗಿದ್ದರು. ಸಾವಿತ್ರಿಬಾಯಿಯವರು ಭಾರತದ ಇತಿಹಾಸದಲ್ಲಿ ಹೆಣ್ಣು ಮಕ್ಕಳ ಹಾಗೂ ಶೂದ್ರ, ಅತಿಶೂದ್ರರ ಶೈಕ್ಷಣಿಕ ಮುನ್ನೆಡೆಯ ಪ್ರಥಮ ಕ್ರಾಂತಿಕಾರಿ. ಜ್ಯೋತಿಬಾರವರು 1890 ನವೆಂಬರ್ 28 ರಂದು ದೀರ್ಘ ಅನಾರೋಗ್ಯದಿಂದ 73 ನೇ ವಯಸ್ಸಿನಲ್ಲಿ ನಿಧನರಾದರು. ಪತಿಯ ನಿಧನದ ನಂತರ ಸಾವಿತ್ರಿಬಾಯಿಯವರು ತನ್ನ ಪತಿ ಬಿಟ್ಟುಹೋದ ಸಮಾಜ ಸುಧಾರಣೆಯ ಕೆಲಸವನ್ನು ಮುಂದುವರೆಸಿದರು. ಕೊನೆಗೆ 1897 ಮಾರ್ಚ್ 10 ರಂದು ಪ್ಲೇಗ್ ರೋ ಪೀಡಿತರಾಗಿ ಮಹಾಪರಿನಿರ್ವಾಣ ಹೊಂದಿದರು. ಜನವರಿ 3, ಅವರ ಜನ್ಮದಿನ. ಅವರನ್ನು ಗೌರವದಿಂದ ಸ್ಮರಿಸುವ ದಿನ.

Donate Janashakthi Media

Leave a Reply

Your email address will not be published. Required fields are marked *