ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಈಗ 5ಕ್ಕೆ ಏರಿದೆ. ಈಗಾಗಲೆ ನಾಲ್ಕು ಜನರು ಸಾವನ್ನಪ್ಪಿದ್ದು, ಈಗ ಮೊತ್ತೊಬ್ಬರು ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ 48 ವರ್ಷದ ವಾರ್ಡ್ ನಂಬರ್ 13 ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ ಇಂದು (ಜೂನ್ 10) ಸಾವನ್ನಪ್ಪಿದ್ದಾರೆ.
ವಾಂತಿ, ಭೇದಿಯಿಂದ ಬಳಲುತ್ತಿದ್ದ ಜನಕರಾಜ್ ಒಂದು ವಾರದ ಹಿಂದೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾರೆ. ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜನರು ನಗರಸಭೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನು ಓದಿ: ಕಲುಷಿತ ನೀರು ಕುಡಿದು ಸಾವು: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ
ಮೇ 31ರಂದು ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕುಡಿಯುವ ನೀರಿಗೆ ಕೆಲವಡೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಾಯಚೂರು ನಗರದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.
ಈ ಪ್ರಕರಣದಲ್ಲಿ 20ಕ್ಕೂ ಹೆಚ್ಚಿನ ಜನರ ಸ್ಥಿತಿ ಗಂಭೀರವಾಗಿದೆ. ಅವರಲ್ಲಿ ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವ ಹಲವರಿಗೆ ಡಯಾಲಿಸಿಸ್ ಮಾಡಬೇಕಿದೆ. ಕಲುಷಿತ ನೀರು ಕುಡಿದು ಚಿಕ್ಕಮಕ್ಕಳು ಹೆಚ್ಚಾಗಿ ಬಾಧಿತರಾಗಿದ್ದಾರೆ. ಕುಡಿಯಲು ಹೊಲಸು ನೀರು ಬಿಡುತ್ತಾರೆ. ಎರಡು ದಿನ ಆದರೆ ಹುಳುಗಳು ಆಗುತ್ತವೆ. ಹೆಚ್ಚಾಗಿ ವಯಸ್ಸಾದವರು, ಮಕ್ಕಳಿಗೆ ತೀವ್ರ ಅನಾರೋಗ್ಯ ಎದುರಾಗಿದೆ. ವಾಂತಿಬೇಧಿ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಅಧಿಕವಾಗುತ್ತಿವೆ.