ಬೆಂಗಳೂರು ಮಾರುಕಟ್ಟೆಯಲ್ಲಿ ಅಮುಲ್‌ ವಿರುದ್ದ ನಂದಿನಿ ಉಳಿಸಲು #SaveNandini ಅಭಿಯಾನ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಇನ್ನೆನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಚುನಾವಣೆಯ  ಕಾವು  ಒಂದೆಡೆಯಾದರೆ, ಗುಜರಾತ್‌ನ ಅಮುಲ್‌ ಸಂಸ್ಥೆ ಬೆಂಗಳೂರಿನಲ್ಲಿ ಹಾಲಿನ ವ್ಯವಹಾರಕ್ಕೆ ಇಳಿದಿರುವುದರ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಕರ್ನಾಟಕದ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಅಮುಲ್‌ ಪರ ಕೆಲವರು ಬ್ಯಾಟಿಂಗ್‌ ಮಾಡಿದ್ದು ಅಮುಲ್‌ ವ್ಯವಹಾರದಂತೆ ನಂದಿನಿ ಯಾಕೆ ಆನ್‌ಲೈನ್‌ ಮೂಲಕ ಹಾಲನ್ನು ವಿತರಣೆ ಮಾಡಬಾರದು. ಆರೋಗ್ಯಕರ ಸ್ಪರ್ಧೆ ಇದ್ದರೆ ಸಮಸ್ಯೆ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಕಾಯುವಿಕೆ ಇನ್ನೇನು ಮುಗಿದೇ ಹೋಯಿತು. ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೊಸ ತಾಜಾತನವು ನಿಮಗಾಗಿ ಕಾಯುತ್ತಿದೆ! ಎಂದು ಅಮುಲ್‌ ಕನ್ನಡ ಟ್ವೀಟ್‌ ಮಾಡಿತ್ತು.

ಇದನ್ನೂ  ಓದಿಪ್ಲಾಸ್ಟಿಕ್‌ ಸ್ಟ್ರಾ ನಿಷೇಧ ಯೋಜನೆ ಮುಂದೂಡಲು ಮನವಿ:ಅಮುಲ್‌ ಸಂಸ್ಥೆ

ಏನಿದು ವಿವಾದ?
ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್‌ ಕನ್ನಡ ಏಪ್ರಿಲ್‌ 5 ರಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್‌ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ.

ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ನಮ್ಮ ಸರ್ಕಾರವು ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿತ್ತು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು? ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು ಎಂದಿದ್ದಾರೆ.

ಅಮುಲ್‌ ಪರ ವಾದವೇನು? ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್‌ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ.

ಯಾವುದೇ ಸಂಸ್ಥೆಯದರೂ ಸರಿಯಾದ ಸ್ಪರ್ಧೆ ಇಲ್ಲದೇ ಇದ್ದರೆ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಿಲ್ಲ. ಕೆಎಂಎಫ್‌ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಪಕ್ಷಗಳ ಮುಖಂಡರೇ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ. ಮುಖ್ಯವಾಗಿ ವಿಚಾರದ ಬಗ್ಗೆ ನಾವು ಚರ್ಚೆಯೇ ಮಾಡುವುದಿಲ್ಲ. ಮಂಡ್ಯದಲ್ಲಿ ನೀರು ಮಿಶ್ರಿತ ಹಾಲು ವಿತರಣೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿದೆ. ಹೀಗಾಗಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ಗುಣಮಟ್ಟದ ಹಾಲನ್ನು ಕೆಎಂಎಫ್‌ ನೀಡಬೇಕು. ಸ್ಪರ್ಧೆ ಇದ್ದಷ್ಟು ಗುಣಮಟ್ಟ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಲಾಭ ರೈತರಿಗೆ ಮತ್ತು ಗ್ರಾಹಕರಿಗೆ ಆಗುತ್ತದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

ಸದ್ಯ ಸರಕಾರ ಚುನಾವಣೆಯಲ್ಲಿ ಬ್ಯುಸಿಯಾಗಿರುವುದರಿಂದ ಅದು ಕೆಎಂಎಫ್‌ ಉಳಿಸಲು ಏನೂ ಮಾಡುವುದಿಲ್ಲ, ನಮ್ಮ ಕೆಎಂಎಫ್‌, ನಮ್ಮ ನಂದಿನಿಯನ್ನು ನಾವೇ ಉಳಿಸಿಕೊಳ್ಳೋಣ, ಜನರೇ ಮನಸ್ಸು ಮಾಡಿ ಅಮುಲ್‌ ಉತ್ಪನ್ನಗಳನ್ನು ತಿರಸ್ಕರಿಸೋಣ,” ಎಂದು ಜನರು ಚರ್ಚೆ ಆರಂಭಿಸಿದ್ದಾರೆ.

ಸಹಕಾರಿ ನಿಯಮವನ್ನು ಉಲ್ಲಂಘಿಸಿ ರಾಜ್ಯದಲ್ಲಿ ಹಾಲು ಹಾಗೂ ಮೊಸರು ಮಾರಾಟ ಮಾಡುವ ಅಮುಲ್‌ ಕ್ರಮಕ್ಕೆ ಸಹಕಾರಿ ವಲಯ ಮಾತ್ರವಲ್ಲದೆ, ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ರಾಜಕೀಯ ನಾಯಕರೂ ತೀವ್ರ ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದಾರೆ. “ಒಂದು ವೇಳೆ ಅಮುಲ್‌ಗೆ ಸ್ಥಳೀಯ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡಿದರೆ ಕನ್ನಡಿಗರ ಅಸ್ಮಿತೆಗೂ ಧಕ್ಕೆಯಾಗಲಿದೆ. ರಾಜ್ಯದ ಸಹಕಾರಿ ವಲಯ ಇಷ್ಟು ವರ್ಷಗಳಿಂದ ಗಳಿಸಿರುವ ಕೀರ್ತಿ ಮಣ್ಣು ಪಾಲಾಗಲಿದೆ,” ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *