ಬೆಂಗಳೂರು: ಹದಿನಾಲ್ಕು ದಶಕಗಳ ಹಿಂದೆ ಆರಂಭವಾದ ಮೈಸೂರು ಸಂಸ್ಥಾನದ ಮೊಟ್ಟ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ಯಾವುದೇ ಕಾರಣಕ್ಕೆ ಧ್ವಂಸ ಮಾಡದಂತೆ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಪ್ರತಿಭಟನೆ ಮೂಲಕ ಆಗ್ರಹಿಸಿದರು.
ಗುರುವಾರ ನಗರದ ಮೌರ್ಯ ಸರ್ಕಲ್ ಬಳಿ ಮೈಸೂರಿನ ಮಹಾರಾಣಿ ಮಾದರಿ ಸರಕಾರಿ ಶಾಲೆ ಉಳಿಸುವಂತೆ ಬೃಹತ್ ಪ್ರತಿಭಟನೆ ನಡೆಸಿದ ಹೋರಾಟಗಾರರು, ಈ ಐತಿಹಾಸಿಕ ಶಾಲೆಯನ್ನು ಕೆಡವಿ ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತಾನಡಿದ ಹಿರಿಯ ಸಾಹಿತಿ ಪ್ರೋ. ಬರಗೂರು ರಾಮಚಂದ್ರಪಪ್ಪ, ಮೈಸೂರಿನಲ್ಲಿ 140 ವರ್ಷಗಳ ಹಿಂದೆ ಆರಂಭವಾದ ಮೈಸೂರು ಸಂಸ್ಥಾನದ ಮೊಟ್ಟ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನ ಧ್ವಂಸ ಮಾಡಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುವ ಅಗತ್ಯವಿಲ್ಲ ಎಂದರು.
ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶಾಲೆಯನ್ನ ಕೆಡವಿ ನಿರ್ಮಾಣ ಮಾಡ್ತಿರೋದು ಸರಿಯಲ್ಲ. ಶಾಲಾ ಆವರಣದಲ್ಲಿ ನಿವೇಶನ ಖಾಲಿ ಇದ್ದು, ಆ ಜಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲಿ. ಅದು ಬಿಟ್ಟು ಐತಿಹಾಸಿಕ ಹಿನ್ನೆಲೆ ಇರುವ ಶಾಲೆ ಕೆಡವಲು ಬಿಡುವುದಿಲ್ಲ. ಈಗಾಗಲೇ ಏಕಸದಸ್ಯಪೀಠ ಒಂದು ತೀರ್ಪು ಕೊಟ್ಟಿದ್ದು, ಮರುಪರಿಶೀಲನೆಗೆ ನ್ಯಾಯಾಲಯದ ಹಂತದಲ್ಲಿದೆ. ಆದರೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರವೇ ಸರ್ಕಾರಿ ಶಾಲೆಯನ್ನ ಉಳಿಸುವ ಕೆಲಸ ಮಾಡಬೇಕು ಅಂತ ಪ್ರೊ. ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.ನಾವು ವಿವೇಕಾನಂದರ ಅನುಯಾಯಿಗಳು ಹೌದು. ಸಾಮರಸ್ಯ ಪರವಾಗಿ ಇರುವವರು. ಐತಿಹಾಸಿಕ ಕಟ್ಟಡ ನಿರ್ಮಾಣವೂ ಒಂದು ಸ್ಮಾರಕವೇ ಆಗಿದ್ದು, ಶಾಲೆಯನ್ನೂ ಉಳಿಸಿ ಜೊತೆಗೆ ವಿವೇಕಾನಂದರ ಸ್ಮಾರಕವೂ ನಿರ್ಮಾಣ ಮಾಡಿ ಅಂತ ತಿಳಿಸಿದರು.
ಪ್ರೋ. ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ಸುಮಾರು 1881ರಲ್ಲಿ ಸ್ಥಾಪನೆಯಾದ ಮಾದರಿ ಸರ್ಕಾರಿ ಶಾಲೆಯು, 140 ವರ್ಷಗಳ ಇತಿಹಾಸವಿದೆ. ಸುಮಾರು 140 ವರ್ಷಗಳಿಂದಲೂ ಪಾಠ-ಪ್ರವಚನ ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಾಯಿ ಮಹಾರಾಣಿ ನಂಜಮ್ಮಣ್ಣಿ, ಅನಕ್ಷರಸ್ಥೆಯಾಗಿದ್ದರೂ, ವಿವೇಕಾನಂದರ ಮಾತುಗಳಿಂದ ಪ್ರಚೋದಿತರಾಗಿ ನಿರ್ಮಿಸಿದ ಶಾಲೆ ಇದು. ಶಾಲೆ ತೆರೆದಿದ್ದು ಮಾತ್ರವಲ್ಲದೇ ಕಡೆಗೆ ಅದೇ ಶಾಲೆಯಲ್ಲಿ ಅಕ್ಷರವನ್ನು ಕಲಿತುಕೊಂಡರು. ಅಕ್ಷರದ ಕಾಣಿಕೆ ಕೊಟ್ಟ ಐತಿಹಾಸಿಕ ಹಿನ್ನೆಲೆ ಇದೆ. ಶಾಲೆಯ ಒಟ್ಟು ವಿಸ್ತೀರ್ಣ 36 ಸಾವಿರ ಚದರ್ ಅಡಿ ಇದ್ದು, ಐತಿಹಾಸಿಕ ಶಾಲೆ ಉಳಿಸಿಕೊಳ್ಳಲು ಸರ್ಕಾರ ಮುಂದಾಗುವಂತೆ ಆಗ್ರಹಿಸಿದರು.
ವಿವಾದ ಏನು? : 2010ರ ಸ್ವಾಮಿ ವಿವೇಕಾನಂದರ 150ನೇ ಜಯಂತಿಯಂದು ಸಂಭ್ರಮಚಾರಣೆಗೆಂದು ಕೇಂದ್ರ ಸರ್ಕಾರ ವಿವೇಕಾನಂದರು ಭೇಟಿ ನೀಡಿದ ಸ್ಥಳಗಳಲ್ಲಿ ನೆನಪಿಗಾಗಿ ರೇಖಾ ಸ್ಮಾರಕಗಳನ್ನು ಆಯಾ ರಾಜ್ಯದವರು ಇಷ್ಟಪಟ್ಟರೆ ನಿರ್ಮಿಸಬಹುದು ಎಂದು ಅದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಯಿತು. 2013 ರಲ್ಲಿ ಕರ್ನಾಟಕ ಸರ್ಕಾರವೂ ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿತು. 1892ರಲ್ಲಿ ಮೂರು ವಾರಗಳ ಕಾಲ ವಿವೇಕಾನಂದರು ಮೈಸೂರಿನಲ್ಲಿ ಹತ್ತನೇ ಜಯಚಾಮರಾಜೇಂದ್ರ ಒಡಯರ್ ಅವರ ಸಮಯದಲ್ಲಿ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ರ ಮನೆಯಲ್ಲಿದ್ದರು. ಆದರೆ ಇದನ್ನ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಮತ್ತು ಹಲವು ರಾಜಕಾರಣಿಗಳು ಈ ವಾಸ್ತವವನ್ನ ಬೇರೆ ಕಥೆಯಾಗಿ ಸೃಷ್ಟಿಸಿದ್ದಾರೆ. ವಿವೇಕಾನಂದರು ನೆಲೆಸಿದ್ದು ನಿರಂಜನ ಮಠದಲ್ಲಿ, ಈ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಅಂತ ದಾರಿ ತಪ್ಪಿಸಿದರು ಅಂತ ಹೋರಾಟಗಾರರು ಹೇಳುತ್ತಿದ್ದಾರೆ.
ಈ ರೀತಿಯಲ್ಲಿ ಸರ್ಕಾರದ ದಾರಿ ತಪ್ಪಿಸಿ, ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡುತ್ತಿರುವುದಕ್ಕೆ ಮೈಸೂರಿನಲ್ಲಿರುವ ಎಲ್ಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ನಡೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯ್ತು.
ಪ್ರತಿಭಟನೆಯಲ್ಲಿ ಕೆ. ಮರುಳಸಿದ್ದಪ್ಪ, ವಸುಂಧರಾ ಭೂಪತಿ, ಸಿ. ಬಸವಲಿಂಗಯ್ಯ, ಜನಾರ್ಧನ್ (ಜೆನ್ನಿ) ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಹಲವರು ಭಾಗಿಯಾಗಿದರು.