ರಂಗಾಯಣ ಉಳಿಸಿ: ರಂಗಾಸಕ್ತರ ಪ್ರತಿಭಟನೆ

ಮೈಸೂರು :  ರಂಗಾಯಣ ಉಳಿಸಿ ಎಂದು ಒತ್ತಾಯಿಸಿ ಸಮಾನ ಮನಸ್ಕ, ಚಿಂತಕ, ಸಾಹಿತಿ, ಕಲಾವಿದರ ಮತ್ತು ಹೋರಾಟಗಾರರ ಬಳಗ ನಡೆಸುತ್ತಿರುವ ಪ್ರತಿಭಟನೆ  ಮೂರನೇ ದಿನಕ್ಕೆ ಕಾಲಿಟ್ಟಿದೆ.

ರಂಗಾಯಣ ಉಳಿಸಿ ಹೋರಾಟ ಸಮಿತಿಯಿಂದ ರಂಗಾಯಣದ ಎದುರು ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಭಟನೆ ಉದ್ದೇಶಿಸಿ ಜನಪರ ಗಾಯಕ ಜನಾರ್ಧನ (ಜನ್ನಿ) ಮಾತನಾಡುತ್ತಾ,   ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ, ಕರ್ನಾಟಕದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. 1989ರಲ್ಲಿ ಸ್ಥಾಪನೆಯಾದ ಬಿ.ವಿ.ಕಾರಂತರು ನಿರ್ಮಿಸಿದ ಈ ರಂಗಸಂಸ್ಥೆಗೆ ತಮ್ಮ ತನು-ಮನ-ಧನ ಧಾರೆ ಎರೆದು ಬೆಳೆಸಿರುವ ನೂರಾರು ರಂಗಾಸಕ್ತರು, ಸಾಹಿತಿ ಕಲಾವಿದರು, ರಂಗಕರ್ಮಿಗಳು ಮತ್ತು ಚಿಂತಕರು ಇಲ್ಲಿ ಸಾವಿರಾರು ರಂಗಭೂಮಿ, ಸಂಗೀತ, ಜಾನಪದ ಮತ್ತು ಸಾಹಿತ್ಯ ವಲಯದ ಪ್ರತಿಭೆಗಳನ್ನು ಪೋಷಿಸಿ ಬೆಳೆಸಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಈ ಸಂಸ್ಥೆಯಲ್ಲಿ ರಂಗಭೂಮಿಗೆ ಸಂಬಂಧಿಸಿದ ಮತ್ತು ಇತರ ಸೃಜನಶೀಲ ಕಲಾಪ್ರಕಾರಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಘನತೆ, ಖ್ಯಾತಿ ಮತ್ತು ಗೌರವವನ್ನು ಸಂಪಾದಿಸಿದೆ ಎಂದರು.

ಪ್ರಾಂತರೈತ ಸಂಘದ ಮುಖಂಡ ಜಗದೀಶ್‌ ಸೂರ್ಯ ಮಾತನಾಡುತ್ತಿರುವುದು

ಪ್ರಾಂತ ರೈತ ಸಂಘದ ಜಗದೀಶ್‌ ಸೂರ್ಯ ಮಾತನಾಡಿ,  ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡದ ರಂಗಭೂಮಿ, ಕಲೆ ಮತ್ತು ಸಾಂಸ್ಕೃತಿಕ ಉನ್ನತಿಗೆ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ರಂಗಾಯಣದ ಇತಿಹಾಸದಲ್ಲಿ ಯಾವುದೇ ರೀತಿಯ ಪಂಥೀಯ ಭಾವನೆಗಳು ಈವರೆಗೂ ಬೇರೂರಿಲ್ಲ, ಎಡಪಂಥೀಯ, ನಡು ಪಂಥೀಯ ಎಂಬ ಭೇದವಿಲ್ಲದೆ ಎಲ್ಲ ಸಿದ್ಧಾಂತ, ವಿಚಾರ ಧಾರೆಗಳಿಗೂ ರಂಗಾಯಣ ತನ್ನ ಭೂಮಿಕೆಯನ್ನು ಒದಗಿಸಿದೆ. ಎಲ್ಲ ವಿಚಾರಧಾರೆಗಳ ಸಾಹಿತಿಗಳು, ನಾಟಕಕಾರರು, ಕಲಾವಿದರು, ರಂಗಕರ್ಮಿಗಳು, ರಂಗಾಯಣದ ಕರ್ನಾಟಕದ ರಂಗಸಕ್ತರಾಗಲಿ, ರಂಗಾಯಣವನ್ನು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿದ್ದು ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ `ಬಹುರೂಪಿ’ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ, ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಇದು ಒಬ್ಬರ ಸಾಧನೆಯಲ್ಲ, ಸಾಮೂಹಿಕ ಪ್ರಯತ್ನದ ಫಲ, ಆದರೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂದರ್ಭದಲ್ಲಿ ಹಾಲಿ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ರಂಗಭೂಮಿಯೊಡನೆ ಯಾವುದೇ ರೀತಿಯ ಸಂಬಂಧ ಇಲ್ಲದ ಚಿತ್ರನಟಿ ಮತ್ತು ಬಿಜೆಪಿ ನಾಯಕಿ ಮಾಳವಿಕ ಅವಿನಾಶ್ ಅವರನ್ನು ಸಮಾರೋಪ ಭಾಷಣ ಮಾಡಲು ಸಂಘಪರಿವಾರದ ಪರಿಚಾರಕ ಮತ್ತು ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡಿರುವುದು ರಂಗಾಸಕ್ತರ ಅಸಮಾಧಾನಕ್ಕೆ, ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಇದನ್ನೂ ಓದಿ : ಅಡ್ಡಂಡ ಕಾರ್ಯಪ್ಪ ವರ್ತನೆಗೆ ವ್ಯಾಪಕ ವಿರೋಧ

ರಂಗಾಯಣದ ಮಾಜಿ ಕಲಾವಿದ  ಮೈಮ್‌ ರಮೇಶ್‌ ಮಾತನಾಡಿ, ಮಾಳವಿಕ ಮತ್ತು ಚಕ್ರವರ್ತಿ ಸೂಲಿಬೆಲೆ ಆಯ್ಕೆ ರಂಗಾಯಣದ ಮೂಲ ಆಶಯಗಳಿಗೆ ಮತ್ತು ಕನ್ನಡ ಸಾಂಸ್ಕೃತಿಕ ಲೋಕದ ಆದರ್ಶಗಳಿಗೆ ವ್ಯತಿರಿಕ್ತವಾಗಿದೆ. ಈ ಇಬ್ಬರಿಂದ ರಂಗಭೂಮಿ ಕ್ಷೇತ್ರಕ್ಕೆ ಯಾವುದೇ ವಿಧವಾದ ಕೊಡುಗೆಯಿಲ್ಲ. ತಮ್ಮ ಕೋಮುವಾದಿ ಚಿಂತನೆಗಳ ಮೂಲಕ ಸಮಾಜದಲ್ಲಿ ದ್ವೇಷದ ವಿಷಬೀಜಗಳನ್ನು ಬಿತ್ತುವುದರಲ್ಲಿ ಸಂಘಪರಿವಾರದ ಪರಿಚಾರಕರಾಗಿ ಅವಿರತವಾಗಿ ಶ್ರಮಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ಬಹುರೂಪಿ ನಾಟಕೋತ್ಸವದಂತಹ ಸೃಜನಶೀಲ ವೇದಿಕೆಯಲ್ಲಿ ಸಮಾರೋಪ ಅತಿಥಿಯಾಗಿ ಆಹ್ವಾನಿಸಿರುವುದು ಖಂಡಿತ ಒಪ್ಪುವ ಮಾತಲ್ಲ. ಈ ನಿರ್ಧಾರವನ್ನು ಪರ್ವ ನಾಟಕದ ಕಿರಿಯ ಕಲಾವಿದರು ವಿರೋಧಿಸಿದ್ದು, ಲಿಖಿತವಾಗಿಯೇ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ ಎಂದರು. ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನೆಗಾಗಿ ಇರುವ ಸಾಧನಗಳಲ್ಲ, ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪ.ಮಲ್ಲೇಶ್, ನಾ ದಿವಾಕರ,  ಲ. ಜಗನ್ನಾಥ, ಕೆ.ಶಿವರಾಮು,  ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *