ಹಾಸನ ವಿವಿ ಉಳಿಸೋಣ – ಸಂಸದ ಶ್ರೇಯಸ್. ಎಂ. ಪಟೇಲ್

ಹಾಸನ: ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ರೀತಿಯ ಅನುಮಾನ ಬೇಡ. ಎಲ್ಲಾ ಶಾಸಕರು ಒಟ್ಟುಗೂಡಿ, ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ತಂಡದ ನಿಯೋಗವನ್ನು ಈ ವಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್. ಎಂ. ಪಟೇಲ್ ಭರವಸೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವ ವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧರಿತ ಚರ್ಚೆಗಳು ನಡೆದಿದ್ದು, ಜಿಲ್ಲೆಯ ಅಭಿವೃದ್ಧಿ ಪ್ರಶ್ನೆ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಜನರ ಪರ ನಿಂತುಕೊಳ್ಳುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿರುವುದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಇಲ್ಲಿವರೆಗೂ ತೆಗೆದುಕೊಂಡಿರುವುದಿಲ್ಲ. ಯಾರು ಗಾಬರಿ ಪಡಬಾರದೆಂದು ಮನವಿ ಮಾಡಿದರು. ಹಾಸನ ವಿಶ್ವವಿದ್ಯಾಲಯ ಉಳಿಸುವ ಹೋರಾಟದಲ್ಲಿ ನಾನು ಇರುತ್ತೇನೆ. ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡೋಣ ಎಂದರು.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎ. ಮಂಜು ಮಾತನಾಡಿ, ವಿಶ್ವವಿದ್ಯಾಲಯ ಇಲ್ಲೆ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಕಾಲೇಜುಗಳನ್ನು ಯಾವ ಸರಕಾರ ಬಂದರೂ ಮುಚ್ಚುವುದಕ್ಕೆ ಆಗುವುದಿಲ್ಲ. ಆದರೇ ವಿಲೀನಗೊಳಿಸಲಾಗುತ್ತದೆ. ಕಾಲೇಜು ಇಲ್ಲೆ ಇದಿಯಲ್ಲ ಎಂದು ಉತ್ತರ ಹೇಳುವುದಕ್ಕೆ ತಯಾರು ಮಾಡಿಕೊಳ್ಳುತ್ತಾರೆ. ನಾನು ಶಾಸಕನಾಗಿದ್ದಾಗ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಇಲ್ಲಿ ಪ್ರಾರಂಭವಾಯಿತು. ಯೂನಿವರ್ ಸಿಟಿ ಸ್ಥಾಪನೆ ಮಾಡುವುದು ಆ ಜಿಲ್ಲೆಗಳಿಗೆ ಹೆಚ್ಚು ಗೌರವ ತರುವ ಕೆಲಸ. ಹಳ್ಳಿ ಸೇರಿದಂತೆ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಾದರ ವಿವಿಗಳು ಆಯಾ ಜಿಲ್ಲೆ ಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಆಗಬೇಕು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳ ಮೊದಲ ಆಯ್ಕೆ ಸರಕಾರಿ ಶಿಕ್ಷಣ ಸಂಸ್ಥೆಗಳು. ಇಂಜಿನಿಯರ್, ವೈದ್ಯಕೀಯ ಯಾವುದೇ ಉನ್ನತ ಶಿಕ್ಷಣ ಆಗಿರಲಿ ಸರಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗೀ ಕಡೆ ಹೋಗುತ್ತಾರೆ. ಸರ್ಕಾರಗಳು ಇರುವ ಸರ್ಕಾರಿ ಉನ್ನದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಮುಂದಾದರೆ ಮುಂದಿನ ದಿನಗಳಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾಗುತ್ತಾರೆ ಆಗ ಖಾಸಗೀಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ ಎಂದು ಎಚ್ಚರಿಸಿದರು. ಇದರಿಂದ ಯಾವ ಯಾವ ಸಂಸ್ಥೆ ಯಾವ ಯಾವ ಮೌಲ್ಯವನ್ನು ಭಿತ್ತಬಹುದು. ಸರಕಾರದವರು ಹೀಗೆ ಮುಂದುವರೆದರೇ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದು ಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಸರಕಾರಿ ಸಂಸ್ಥೆಯನ್ನು ಅನಿವಾರ್ಯವಾಗಿ ಉಳಿಸಬೇಕು. ವಿಶ್ವವಿದ್ಯಾನಿಲಯದ ಸಂಖ್ಯೆ ಹೆಚ್ಚು ಇರಬೇಕು ಎಂದು ಕಿವಿಮಾತು ಹೇಳಿದರು. ಸ್ಥಾಪನೆ ಮಾಡಿರುವ ವಿಶ್ವವಿದ್ಯಾಲಯವನ್ನು ಗಟ್ಟಿಗೊಳಿಸಬೇಕೆ ಹೊರತು ಮುಚ್ಚುವಂತದ್ದು ಈ ವಲಯಕ್ಕೆ ಮಾಡುವ ಅನ್ಯಾಯ. ಗ್ರಾಮಾಂತರ ಪ್ರದೇಶಕ್ಕೆ ಮಾಡುವ ದ್ರೋಹ.

ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಹೆಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಬಿ.ಕೆ.ಮಂಜುನಾಥ್, ಹೆಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪ ಹಾಸನ್, ಜ.ನಾ ತೇಜಶ್ರೀ, ತಾರಾಚಂದನ್, ರಮೇಶ್, ಎಂ.ಬಿ. ಪುಷ್ಪ, ಸಮೀರ್, ಅಹಮದ್ ಹಗರೆ, ಸುಭಾಷ್ ಇತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *