ಸತ್ಯಜಿತ್ ರಾಯ್ ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆ ನದಿಯ ಒಳಹರಿವಿನಂತೆ: ಕಾಸರವಳ್ಳಿ

ವಸಂತರಾಜ ಎನ್.ಕೆ.

ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ‘ಸಮುದಾಯ ಕರ್ನಾಟಕ, ‘ಸಹಯಾನ, ‘ಋತುಮಾನ’ ಮತ್ತು ‘ಮನುಜಮತ ಸಿನಿಯಾನ’ ಜಂಟಿಯಾಗಿ ಅಗಸ್ಟ್ 22ರಂದು(ಭಾನುವಾರ ಬೆಳಿಗ್ಗೆ 11 ಗಂಟೆಗೆ) ಆನ್-ಲೈನಿನಲ್ಲಿ ಸಂಘಟಿಸಿದ್ದ, ‘ಸತ್ಯಜಿತ್ ರಾಯ್ 100: ಅವರ ಫಿಲಂಗಳ ಹೊರಳು ನೋಟ’ ಸಂವಾದ ಸರಣಿಯ ಉದ್ಘಾಟನಾ ಉಪನ್ಯಾಸದ ವರದಿ…..

ಗಿರೀಶ್ ಕಾಸರವಳ್ಳಿ

ಸತ್ಯಜಿತ್ ರಾಯ್ ಅವರ ಫಿಲಂಗಳ ವಿಶಿಷ್ಟತೆಯೆಂದರೆ ವಾಸ್ತವಿಕತೆ, ಕಥಾ ನಿರೂಪಣೆ, ಕಲಾತ್ಮಕ ಅಭಿವ್ಯಕ್ತಿ ಮತ್ತು ಮಾನವೀಯತೆ. ಅವರ ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದು ರಾಯ್ ಫಿಲಂಗಳ ಸರಿಯಾದ ವ್ಯಾಖ್ಯಾನ ಅಲ್ಲ. ಅವರ ರಾಜಕೀಯ ಪ್ರಜ್ಞೆ ನದಿಯ ಒಳಹರಿವಿನಂತೆ ಸುಪ್ತವಾದ್ದು, ಸೂಕ್ಷ್ಮವಾದ್ದು. ಮೇಲು ನೋಟಕ್ಕೆ ಎದ್ದು ಕಾಣುವಂಥದ್ದಲ್ಲ ಎಂದು ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಹೇಳಿದರು. ಅವರು ‘ಸತ್ಯಜಿತ್ ರಾಯ್ 100: ಅವರ ಫಿಲಂಗಳ ಹೊರಳು ನೋಟ’ ಸಂವಾದ ಸರಣಿಯ ಉದ್ಘಾಟನಾ ಉಪನ್ಯಾಸ ಮಾಡುತ್ತಾ ಈ ಮಾತುಗಳನ್ನು ಹೇಳಿದರು. ಈ ಸಂವಾದ ಸರಣಿಯನ್ನು ನಾಡಿನ ಸಾಂಸ್ಕೃತಿಕ ಸಂಘಟನೆಗಳಾದ ‘ಸಮುದಾಯ ಕರ್ನಾಟಕ’, ‘ಸಹಯಾನ’, ಸಾಂಸ್ಕೃತಿಕ ವೆಬ್ ಪತ್ರಿಕೆ ‘ಋತುಮಾನ’ ಮತ್ತು ಸಿನಿಮಾಸಕ್ತರ ಕೂಟ ‘ಮನುಜಮತ ಸಿನಿಯಾನ’ ಜಂಟಿಯಾಗಿ ಅಗಸ್ಟ್ 22ರಂದು (ಭಾನುವಾರ ಬೆಳಿಗ್ಗೆ 11 ಗಂಟೆಗೆ) ಆನ್-ಲೈನಿನಲ್ಲಿ ಸಂಘಟಿಸಿದ್ದವು.

ಸತ್ಯಜಿತ್ ರಾಯ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ಹೆಚ್ಚಾಗಿ ಅವು ಬರಿಯ ಹೊಗಳಿಕೆಗಳ ಮಹಾಪೂರವಾಗಿದೆ. ವಾಸ್ತವಿಕತೆ, ಕಥಾ ನಿರೂಪಣೆ, ಕಲಾತ್ಮಕ ಅಭಿವ್ಯಕ್ತಿ ಮತ್ತು ಮಾನವೀಯತೆಯ ಸೆಲೆ – ಇವುಗಳೇ ಅವರ ಫಿಲಂಗಳ ವಿಶಿಷ್ಟತೆಗಳೋ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ ಇವನ್ನು ಅಷ್ಟೇ ಪರಿಣಾಮಕಾರಿಯಾಗಿ ಮಾಡಿರುವ ಆ ನಂತರದ ಹಲವು ನಿರ್ದೇಶಕರ ಸಿನಿಮಾಗಳು ರಾಯ್ ಫಿಲಂಗಳು ಗಳಿಸಿದ ಈಗಲೂ ಗಳಿಸುತ್ತಿರುವ ಅಪಾರ ಮನ್ನಣೆ ಯಾಕೆ ಗಳಿಸಿಲ್ಲ? ರಾಯ್ ಫಿಲಂಗಳು ಆದಂತೆ ಅವು ಎಲ್ಲ ದೇಶ-ಕಾಲಕ್ಕೂ ಮಹತ್ವವೆನಿಸುವ ಸಾರ್ವಕಾಲಿಕ, ಸಾರ್ವತ್ರಿಕ ಫಿಲಂಗಳು ಅಂತ ಯಾಕೆ ಅನಿಸುವುದಿಲ್ಲ? ಭಾರತದ ಸಿನಿಮಾ ಮತ್ತು ಕಲಾ ಜಗತ್ತಿಗೆ ರಾಯ್ ಅವರ ಕಾಣಿಕೆ ಏನು? ಅವರ ಫಿಲಂಗಳ ಐತಿಹಾಸಿಕ ಮಹತ್ವವೇನು? ಇಂದಿನ ದಿನಮಾನಗಳಲ್ಲಿ ಫಿಲಂ ಮಾಡುವವರು ಅವರಿಂದ ಏನನ್ನು ಕಲಿಯಬಹುದು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸುವುದು, ಸತ್ಯಜಿತ್ ರಾಯ್ ಅವರ ಫಿಲಂಗಳ ಮರು ಅವಲೋಕನ ಮಾಡುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ‘ಸತ್ಯಜಿತ್ ರಾಯ್ 100: ಅವರ ಫಿಲಂಗಳ ಹೊರಳು ನೋಟ’ ಸಂವಾದ ಸರಣಿಯನ್ನು ಯೋಜಿಸಿರುವುದು ಅತ್ಯಂತ ಸೂಕ್ತವಾಗಿದೆ. ಇದರ ಉದ್ಘಾಟನೆ ಮಾಡಿ ಮಾತನಾಡಲಿಕ್ಕೆ ನನಗೆ ಬಹಳ ಸಂತೋಷವಾಗುತ್ತದೆ. ಅದರಲ್ಲೂ ಸರಣಿಯ ಸಂವಾದಗಳಲ್ಲಿ ಬಹುತೇಕ ಸಿನಿಮಾದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ಯುವ ಸಿನಿಮಾ ಕರ್ಮಿಗಳು ಮತ್ತು ಆಸಕ್ತರು ಭಾಗವಹಿಸುತ್ತಾರೆ ಎಂಬುದು ಇನ್ನಷ್ಟು ಸಂತೋಷದ ವಿಷಯ ಎಂದು ಕಾಸರವಳ್ಳಿ ಅವರು ಹೇಳಿದರು.

ಇದಕ್ಕಿಂತ ಮೊದಲು ಪ್ರಾಸ್ತಾವಿಕವಾಗಿ ಪ್ರೊ,ಕೆ.ಫಣಿರಾಜ್ ಕಾರ್ಯಕ್ರಮ ಸಂಘಟಿಸಿದ ಸಂಘಟನೆಗಳ ಪರವಾಗಿ ಮಾತನಾಡಿದರು. ನಮ್ಮ ನಡುವೆ ಈಗ ಇಲ್ಲದ ಡಾ.ವಿಠ್ಠಲ ಭಂಡಾರಿ ಕೋವಿಡ್‌ ಕಾಲದ ಸ್ವಲ್ಪ ಮೊದಲು ಸಹಯಾನೋತ್ಸವದ ಭಾಗವಾಗಿ ಸಂಘಟಿಸಿದ ‘ಸಿನೆಮಾ: ಹೊಸ ತಲೆಮಾರು” ಎಂಬ ಒಂದು ದಿನದ ಚರ್ಚೆಯಲ್ಲಿ ಈ ಸರಣಿ ಸಂವಾದದ ಬೇರು ಇದೆ ಎಂದರು. ಅಲ್ಲಿ ಸಿನೆಮಾವನ್ನು ಹೊಸ ತಲೆಮಾರಿನತ್ತ ಒಯ್ಯಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು. ಆದರೆ ಕೋವಿಡ್‌ ಅದಕ್ಕೆ ಅಡ್ಡಿಯಾಯಿತು. ಆದರೂ ಧೃತಿಗೆಡದ ವಿಠ್ಠಲ ಭಂಡಾರಿ ತಂಡ ಜನಶಕ್ತಿ ಮೀಡಿಯಾದ ಮೂಲಕ ‘ಪಿಚ್ಚರ್ ಪಯಣ’ ಎಂಬ ವಾರದಲ್ಲಿ ಒಂದು ಫಿಲಂ ನ ವಿಮರ್ಶೆ ಮಾಡುವ ಅರ್ಥೈಸುವ ಕಾರ್ಯಕ್ರಮ ಆರಂಭಿಸಿತು. ವಿಠ್ಠಲ ಭಂಡಾರಿ ಅವರ ಅಕಾಲಿಕ ನಿಧನದಿಂದ ದೃತಿಗೆಡದೆ ಅದನ್ನು ಮುಂದುವರೆಸಲಾಯಿತು. ಮಾತ್ರವಲ್ಲ, ‘ಸತ್ಯಜಿತ್ ರಾಯ್ 100: ಅವರ ಫಿಲಂಗಳ ಹೊರಳು ನೋಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಂದಿನ ತಿಂಗಳಿಂದ ಪ್ರತಿ ತಿಂಗಳು ಒಂದು ಆಯ್ದ ಭಾನುವಾರ ಬೆಳಿಗ್ಗೆ 11ಕ್ಕೆ ಸುಮಾರು ಒಂದುವರೆ ಗಂಟೆ ಕಾಲ ಸತ್ಯಜಿತ್ ರಾಯ್ 100: ಅವರ ಫಿಲಂಗಳ ಅಥವಾ ಅದಕ್ಕೆ ಸಂಬಂಧಿತ ಒಂದು ಆಯಾಮದ ಕುರಿತು ಬಹುತೇಕ ಸಿನಿಮಾ ಕರ್ಮಿಗಳು, ವಿಮರ್ಶಕರು ಮಾತನಾಡಲಿದ್ದಾರೆ ಅಥವಾ ಸಂವಾದ ಮಾಡಲಿದ್ದಾರೆ. ಈ ಸರಣಿಯಲ್ಲಿ 10 ಇಂತಹ ಸಂವಾದಗಳಿರುತ್ತವೆ. ಮುಂದಿನ ಕೆಲವು ಸಂವಾದಗಳನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಫಣಿರಾಜ್ ಹೇಳಿದರು.

ಸತ್ಯಜಿತ್ ರಾಯ್ ಅವರ ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆಯ ಕುರಿತು ತಮ್ಮ ಸುಮಾರು ಒಂದುವರೆ ಗಂಟೆಯ ಉಪನ್ಯಾಸದಲ್ಲಿ ಕಾಸರವಳ್ಳಿ ಅವರು ವಿಸ್ತಾರವಾಗಿ ಮಾತನಾಡಿದರು. ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ನಿರ್ವಚಿಸುತ್ತಾ ಅದು ಮೂರು ರೂಪಗಳಲ್ಲಿ ಇರಬಹುದು ಎಂದು ಅವರು ಗುರುತಿಸಿದರು. ಮೊದಲನೆಯದಾಗಿ ಶಕ್ತಿ ರಾಜಕಾರಣದ ಅನಾವರಣದ ರೂಪದಲ್ಲಿ ಇರಬಹುದು. ಇದು ಪ್ರಭುತ್ವ ಮಾತ್ರವಲ್ಲದೆ ಯಜಮಾನಿಕೆ ಇರುವ ವರ್ಗ, ಸಮುದಾಯ, ಮತಧರ್ಮ, ಕುಲ/ಜನಾಂಗ (ರೇಸ್) – ಇವುಗಳ ಶಕ್ತಿ ರಾಜಕಾರಣ ಸಹ ಆಗಿರಬಹುದು. ಎರಡನೆಯದಾಗಿ ಅದು ಸೈದ್ಧಾಂತಿಕ ರಾಜಕಾರಣದ ರೂಪ ತಳೆಯಬಹುದು. ಫಿಲಂಗಳಲ್ಲಿ ಕಥನ ನಿರ್ವಹಣೆಗೆ ಅಥವಾ ಒಂದು ಪರಿಸ್ಥಿತಿಯ ವ್ಯಾಖ್ಯಾನ ಮಾಡಲು ಸಿದ್ಧಾಂತವನ್ನು ಬಳಸಬಹುದು. ಇಲ್ಲಿ ಸಿದ್ಧಾಂತ ಎಂದರೆ ಎಡ, ಬಲ, ನಡು ಅಲ್ಲದೆ, ಮಹಿಳಾವಾದ, ಪರಿಸರವಾದ, ಜಾತಿ-ವಿನಾಶ, ಜನಾಂಗವಾದ-ವಿರೋಧಿ ಇತ್ಯಾದಿಗಳಲ್ಲಿ ಯಾವುದೂ ಇರಬಹುದು. ಮೂರನೆಯದು ವಿವಿಧ ವ್ಯಕ್ತಿಗಳು ತಮ್ಮ ಅನುದಿನದ ವ್ಯವಹಾರ, ಕ್ರಿಯೆಗಳ ಭಾಗವಾಗಿ ಆಡುವ ಮಾತುಗಳಲ್ಲಿ ತೆಗೆದುಕೊಳ್ಳುವ ನಿಲುವುಗಳಲ್ಲಿ ಅವರಿಗೆ ಅರಿವಿಲ್ಲದೆಯೇ ರಾಜಕಾರಣದ ಧ್ವನಿ ಮೂಡುತ್ತವೆ. ಇದು ವ್ಯಕ್ತ ನೆಲೆಯಲ್ಲಿ ಇರುವುದಿಲ್ಲ. ಆದರೆ ಅದರ ಸೂಚ್ಯ ಮೆಲುದನಿ ಇರುತ್ತದೆ. ಈ ಮೂರನೆಯ ರೀತಿಯಲ್ಲಿ ರಾಜಕೀಯ ಪ್ರಜ್ಞೆ ಸತ್ಯಜಿತ್ ರಾಯ್ ಅವರ ಫಿಲಂ ಗಳಲ್ಲಿ ಹೆಚ್ಚಾಗಿ ವ್ಯಕ್ತವಾಗುತ್ತದೆ ಎಂದರು.

ಇದನ್ನು ಅವರು ಪ್ರಮುಖವಾಗಿ ರಾಯ್ ಅವರೇ ಚಿತ್ರಕತೆ ಬರೆದು ನಿರ್ದೇಶಿಸಿದ ‘ಕಾಂಚನ್ ಜಂಗ’ ಫಿಲಂ ನ ಉದಾಹರಣೆಯೊಂದಿಗೆ ವಿವರಿಸಿದರು. ‘ಕಾಂಚನ್ ಜಂಗ’ ಅವರ ಜನಪ್ರಿಯ ಬಹುಚರ್ಚಿತ ಫಿಲಂ ಅಲ್ಲ. ಆದರೆ ಹಲವು ರೀತಿಗಳಲ್ಲಿ ವಿಶಿಷ್ಟವಾದ ಫಿಲಂ. ರಾಯ್ ಅವರು ತಮ್ಮ ರಾಜಕೀಯ ಪ್ರಜ್ಞೆ ಅಥವಾ ನಿಲುವಿನ ಬಗ್ಗೆ ಎಲ್ಲೂ ಹೇಳುವುದಿಲ್ಲ. ಆದರೆ ಈ ಫಿಲಂ ನಲ್ಲಿ (ಅದರ ಚಿತ್ರಕತೆ ಬರೆದಿರುವುದರಿಂದ) ಅದನ್ನು ಸ್ಪಷ್ಟವಾಗಿ ಕಾಣಬಹುದು. ಬೇರೆ ಕಥನಗಳನ್ನು ತೆಗೆದುಕೊಂಡು ಫಿಲಂ ಮಾಡಿದಾಗ ಕೂಡಾ ಅದನ್ನು ಕಾಣಬಹುದು. ಹೆಚ್ಚಿನ ಕತೆ ಅಥವಾ ಘಟನಾವಳಿಯ ಹಂದರ ಇಲ್ಲದ ಫಿಲಂ ಇದು.  ರಾವ್ ಬಹದ್ದೂರ್ ಎಂಬವರ ಬಂಗಾಳಿ ‘ಭದ್ರಲೋಕ್’ ಕುಟುಂಬವೊಂದು ಕಾಂಚನಜಂಗ ಪರ್ವತಶಿಖರ ನೋಡಲು ಡಾರ್ಜಿಲಿಂಗ್ ಪ್ರವಾಸಕ್ಕೆ ಬಂದಿದೆ. ಅವರ ಕುಟುಂಬದಲ್ಲಿ ಅವರು ಮಡದಿ, ಹಿರಿಮಗಳು, ಅವಳ ಗಂಡ, ಕಿರಿ ಮಗಳು, ಅವಳಿಗೆ ಮದುವೆ ನಿಶ್ಚಯವಾಗಿರುವ ಯುವಕ ಸೇರಿದ್ದಾರೆ. ಅವರಲ್ಲದೆ ಅವರ ಒಬ್ಬ ಪರಿಚಿತ (ಸಾಮಾಜಿಕ ಅಂತಸ್ತಿನಲ್ಲಿ ಅವರಿಗಿಂತ ಕೆಳಗಿನವರು) ಮತ್ತು ಆತನ ಅಣ್ಣನ ಮಗ ಇದ್ದಾರೆ. ಮೋಡ ಮುಸುಕಿರುವುದರಿಂದ 7 ದಿನಗಳಿಂದ ಕಾಂಚನಜಂಗ ಇನ್ನೂ ಕಂಡಿಲ್ಲ. ಕೊನೆಯ ದಿನದ ಸಂಜೆ 4ರಿಂದ 5.30 ವರೆಗೆ ನೈಜ ಒಂದುವರೆ ಗಂಟೆ ಅವಧಿ ಫಿಲಂ ನ ಅವಧಿ ಸಹ.

ಆ ಅವಧಿಯಲ್ಲಿ ರಾವ್ ಬಹದ್ದೂರ್ ಅವರ ಕುಟುಂಬದ ಮತ್ತು ತಂಡದ 8 ಸದಸ್ಯರ ನಡುವೆ ನಡೆಯುವ ಸಾಮಾನ್ಯವಾಗಿ ನಾವು ಉಪೇಕ್ಷಿಸುವ ಉಪೇಕ್ಷಿಸಬಹುದಾದ ಸಣ್ಣ ಸಣ್ಣ ಮಾತುಕತೆ, ತಿಕ್ಕಾಟಗಳ, ನಡವಳಿಕೆಗಳ ಮೂಲಕ ಅನಾವರಣಗೊಳ್ಳುವ ಅವರ ಸಂಬಂಧಗಳಲ್ಲಿ ಸಮಾಜದ ಎಲ್ಲ ದೊಡ್ಡ ರಾಜಕೀಯ ತಿಕ್ಕಾಟಗಳ ದರ್ಶನವನ್ನು ರಾಯ್ ಮಾಡಿಸುತ್ತಾರೆ. ರಾವ್ ಬಹದ್ದೂರ್ ಅವರ (ಮೇಲು ಜಾತಿ ಮೇಲು ವರ್ಗದ, ಆರ್ಥಿಕವಾಗಿ ಸಬಲವಾದ, ಸಾಮಾಜಿಕ ಮನ್ನಣೆ ಇರುವ, ರಾಜಕೀಯವಾಗಿ ಸಹ ಪ್ರಭಾವಶಾಲಿಯಾದ, ಬ್ರಹ್ಮೋ ಸಮಾಜಕ್ಕೆ ಸೇರಿದ ಬ್ರಿಟಿಷರ ವಿರುದ್ಧವೂ ಪರವೂ ರಾಜಕೀಯ ನಿಲುವು ತಳೆಯುವ) ‘ಭದ್ರಲೋಕ’ ಸ್ಥಿತಿಯಿಂದಾಗಿ ಅವರ ಎಲ್ಲ ನಡೆ ನುಡಿಗಳಲ್ಲಿ ಕಾಣುವ ಅಹಮಿಕೆಯಲ್ಲಿ ವರ್ಗ, ಯಜಮಾನಿಕೆಯ ಸಮುದಾಯದ ಶಕ್ತಿರಾಜಕಾರಣದ ಹೊಳಹು ಸಿಗುತ್ತದೆ. ಯಾವುದೇ ಸ್ವಂತಿಕೆ ಇಲ್ಲದ, ಯಾವುದರಲ್ಲೂ ಆಸಕ್ತಿ ವಹಿಸದ, ಗಂಡನ ಆಜ್ಞೆಯಂತೆ ನಡೆಯುವ ಅವರ ಮಡದಿಯ ಜತೆ ಅವರ ಸಂಬಂಧದಲ್ಲಿ ಲಿಂಗ ಶಕ್ತಿ ರಾಜಕಾರಣದ (ಈಗ ಫೆಮಿನಿಸ್ಟ್ ಎಂದು ಕರೆಯಲಾಗುವ) ನಿರೂಪಣೆ ಕಾಣಬಹುದು. ಹಿರಿಯ ಮಗಳು ಮತ್ತು ಅವಳ ಗಂಡನ ನಡುವೆ ಸಂಬಂಧ ಚೆನ್ನಾಗಿಲ್ಲ. ಅವಳಿಗೆ ಇನ್ನೊಬ್ಬ ಗೆಳೆಯನ ಮೇಲೆ ಆಸಕ್ತಿಯಿದೆ. ಕಿರಿಯ ಮಗಳ ಜತೆ ಅವಳಿಗೆ ತಂದೆ ನಿಶ್ವಯಿಸಿರುವ ಆದರೆ ಅವಳಿಗೆ ಇಷ್ಟವಿರದ ಯುವಕ ಇದ್ದಾನೆ. ಮದುವೆ ಎಂಬ ಸಾಮಾಜಿಕ ಸಂಸ್ಥೆಯ ಸಮಸ್ಯೆಗಳ ಮತ್ತು ಮುಕ್ತ ಸಂಬಂಧಗಳ ಸಾಧ್ಯತೆಗಳ ಚರ್ಚೆಯೂ ಇದೆ. ರಾವ್ ಬಹದ್ದೂರ್ ಪರಿಚಿತನಿಗೆ, ತನ್ನ ಅಣ್ಣನ ಮಗನಿಗೆ (ಇವನಲ್ಲಿ ಕಿರಿಯ ಮಗಳಿಗೆ ಆಸಕ್ತಿ) ಅವರ ಪ್ರಭಾವದಿಂದ ಉದ್ಯೋಗ ಕೊಡಿಸುವ ಉದ್ದೇಶವಿದೆ. ಅವನ ಮೂಲಕ ನಿರುದ್ಯೋಗ, ಸಾಮಾಜಿಕ ಅಶಾಂತಿ ಉಂಟು ಮಾಡುವ ರಾಜಕಾರಣದ ಅನಾವರಣವೂ ಇದೆ.

ಕೊನೆಗೂ ಕಾಂಚನ್‌ಜಂಗ ಶಿಖರ ಕಂಡರೂ ರಾವ್ ಬಹದ್ದೂರ್ ಕುಟುಂಬದವರಿಗೆ ಅದನ್ನು ಆಸ್ವಾದಿಸುವ ಮೂಡ್ ಆಗಲಿ ವ್ಯವಧಾನವಾಗಲಿ ಇರುವುದಿಲ್ಲ. ಎಲ್ಲರೂ ಅವರದೇ ಆದ ತಲ್ಲಣಗಳಲ್ಲಿ ಇರುತ್ತಾರೆ. ಒಂದುವರೆ ಗಂಟೆಯ ಕಾಲ ರಾವ್ ಬಹದ್ದೂರ್ ಅವರ ಕುಟುಂಬದ ಮತ್ತು ತಂಡದ ಸದಸ್ಯರ ಸಣ್ಣ ಸಣ್ಣ ಮಾತುಕತೆ, ತಿಕ್ಕಾಟಗಳ, ನಡವಳಿಕೆಗಳ ಮೂಲಕ ಆ ಕಾಲದ ಬಂಗಾಳದ ಸಮಾಜದ ಕುರಿತ ರಾಜಕೀಯ ಪ್ರಜ್ಞೆ ಮತ್ತು ಆ ಮೂಲಕ ಅಂದಿನ ಇರವಿನ ರಾಜಕೀಯ ಅರಿವನ್ನು ರಾಯ್ ಮೂಡಿಸುತ್ತಾರೆ. ಈ ಹಿಂದೆ ಹೇಳಿದ ರಾಜಕೀಯ ಪ್ರಜ್ಞೆಯ ಒಳಹರಿವಿನಿಂದಾಗಿ ಸರಳ ಸ್ಥಳೀಯ ಕಥಾನಕ ಅದರ ಸ್ಥಳೀಯತೆಯನ್ನು ಮೀರಿ ಆ ಕಾಲದ ಬಂಗಾಳದ, ಈಗಿನ ಭಾರತದ ಜಗತ್ತಿನಲ್ಲೂ ವಿಶಿಷ್ಟ ಅರಿವು ಮೂಡಿಸುವ ಸಾರ್ವಕಾಲಿಕ ಸಾರ್ವತ್ರಿಕ ಕಲಾಕೃತಿಯಾಗುತ್ತದೆ. ಸತ್ಯಜಿತ್ ರಾಯ್ ಮೇಲ್ ಮಟ್ಟದ ‘ಸಾಮಾನ್ಯ ಪ್ರೇಕ್ಷಕ’ನಿಗೂ ಮುದ ಕೊಡುವ ಸರಳ ನೇರ ಕಥಾನಕವನ್ನು ಈ ರೀತಿಯಲ್ಲಿ ಸಾರ್ವಕಾಲಿಕ ಸಾರ್ವತ್ರಿಕ ಕಲಾಕೃತಿಯಾಗಿಸುವ ಹದ ಅಥವಾ ಪಾಕವನ್ನು ಕಂಡುಕೊಂಡಿದ್ದಾರೆ. ಪ್ರತಿಯೊಂದು ಮರು ವೀಕ್ಷಣೆಯಲ್ಲಿ ಈ ಒಳಹರಿವನ್ನು ಹೊಕ್ಕು ನೋಡಿದಾಗ ಹಲವು ಆಯಾಮಗಳು ಕಂಡು ಅದು ಹೊಸದಾಗಿ ಕಾಣುತ್ತದೆ. ಅದು ಅವರ ಫಿಲಂಗಳ ವಿಶಿಷ್ಟತೆ ಎಂದು ಕಾಸರವಳ್ಳಿ ಅವರು ವಿವರಿಸಿದರು.

ಇದನ್ನು ಅವರು ಅಪ್ಪು ತ್ರಿವಳಿಯ ಫಿಲಂಗಳು ಅಪ್ಪುವಿನ ಬಾಲ್ಯ, ಯೌವನ, ಪ್ರಬುದ್ಧ ಅವಧಿಗಳ ಕಥಾನಕ ಮಾತ್ರವಲ್ಲ ಆಗಿನ ಬಂಗಾಳದ ಕಥಾನಕವೂ ಕೈಗಾರಿಕೀಕರಣ/ನಗರೀಕರಣಗಳ ಮತ್ತು ಮನುಷ್ಯ ಸಂಬಂಧಗಳ  ನಡುವಿನ ತಿಕ್ಕಾಟದ ಆಳವಾದ ರಾಜಕೀಯ ಪ್ರಜ್ಞೆ ಇರುವ ನಿರೂಪಣೆಯೆಂದೂ, ಮತ್ತೆ ಸಣ್ಣ ಸಣ್ಣ ಮಾತುಕತೆ, ನಡವಳಿಕೆ, ಘಟನೆಗಳಿಂದ ರಾಯ್ ಹೇಗೆ ಕಟ್ಟಿ ಕೊಡುತ್ತಾರೆ ಎಂದೂ ಅವರು ವಿವರಿಸಿದರು. ಈ ತ್ರಿವಳಿಯಲ್ಲಿ ಅಪ್ಪು ಮತ್ತು ರೈಲಿನ ಸಂಬಂಧದ ಕುರಿತು ಅದ್ಭುತ ಒಳನೋಟವನ್ನು ಕೊಟ್ಟರು. ಅದೇ ರೀತಿಯಲ್ಲಿ ‘ಚಾರುಲತʼ, ‘ಮಹಾನಗರ’ ಗಳಲ್ಲಿರುವ ರಾಜಕೀಯ ಪ್ರಜ್ಞೆಯನ್ನೂ ವಿವರಿಸಿದರು. ‘ಜಲಸಾಗರ್’, ‘ಆಶನಿ ಸಂಕೇತ್’ ಮತ್ತು ಕಲ್ಕತ್ತಾ ತ್ರಿವಳಿಗಳಲ್ಲಿ 60-70ರ ದಶಕದ ಪ್ರಭುತ್ವ ರಾಜಕಾರಣದ ನಿರೂಪಣೆಯನ್ನು ರಾಯ್ ಹೇಗೆ ನಿರ್ವಹಿಸಿದ್ದಾರೆ ಎಂದು ಕಾಸರವಳ್ಳಿ ವಿವರಿಸಿದರು.

ಸಾಮಾನ್ಯವಾಗಿ ರಾಯ್ ನಿರೂಪಕನಾಗಿ ಫಿಲಂ ನಲ್ಲಿ ಯಾವುದೇ ರಾಜಕೀಯ ನಿಲುವು ತೆಗೆದುಕೊಳ್ಳುವುದಿಲ್ಲ. ಆದರೆ ‘ದೇವಿ’ಯಲ್ಲಿ ಮತಧರ್ಮ ಶಕ್ತಿಗಳೂ ಮೌಢ್ಯವನ್ನೂ, ‘ಗಣಶತ್ರು’ನಲ್ಲಿ ಪ್ರಭುತ್ವ ರಾಜಕಾರಣವನ್ನು ರೂಕ್ಷವಾಗಿ ನೇರ ಕಟು ಟೀಕೆಗೆ ಒಳಪಡಿಸುತ್ತಾರೆ ಎಂದು ಅವರು ವಿವರಿಸಿದರು. ಅದೇ ರೀತಿಯಲ್ಲಿ 1990ರ ದಶಕದ ಜನ ಪ್ರಚೋದಕ ರಾಜಕಾರಣಕ್ಕೆ ಪ್ರತಿಕ್ರಿಯೆಯಾಗಿ ಅವರು ‘ಘರೇ ಬೈರೇ’ಯಲ್ಲಿ ತೋರಿಸಿದ ರಾಜಕೀಯ ಪ್ರಜ್ಞೆಯನ್ನೂ ಗುರುತಿಸಿದರು.

Donate Janashakthi Media

Leave a Reply

Your email address will not be published. Required fields are marked *