ಸತ್ಯ-ಮಿಥ್ಯೆಗಳನ್ನು ತಿರುವು-ಮುರುವು ಮಾಡಲು ಹೊರಟವರ ಅಂತ್ಯ ಎಂದು: ಕವಿತಾ ಕೃಷ್ಣನ್‌

ಮೋದಿಯಂತಹ ದ್ವೇಷ ಬಿತ್ತುವವರು ಇಂದು ಪರಸ್ಪರರ ಬಗ್ಗೆ ಪ್ರೀತಿ, ವಿಶ್ವಾಸ, ಒಬ್ಬೊಬ್ಬರ ಭಾಷೆ, ಸಂಸ್ಕೃತಿಯ ಕುರಿತ ಒಳ್ಳೆಯದನ್ನು ಯೋಚಿಸುವುದು-ಇದೆಲ್ಲವನ್ನೂ ಮುಗಿಸಲು ನೋಡುತ್ತಿದ್ದಾರೆ. ಹಿಂದೆಯೂ ಸತ್ಯ ಮತ್ತು ಮಿಥ್ಯೆಗಳಿದ್ದವು, ಆದರೂ ಮೊದಲು ಎಲ್ಲರಿಗೂ ಒಂದಷ್ಟಾದರೂ ಸತ್ಯದ ಅರಿವಾಗುತ್ತಿತ್ತು. ಈಗ ಎಲ್ಲರೂ ಅವರ ಇಚ್ಛೆಯನ್ನೇ ಸತ್ಯವೆಂದು ನಂಬಬೇಕಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಯಾರು ಮುಲಾಮು ಹಚ್ಚಬಹುದೆಂದು ನಾನು ಯೋಚಿಸುತ್ತಿರುವೆ ಎಂದು ಕವಿತಾ ಕೃಷ್ಣನ್‌ ಹೇಳಿದರು.

2022-23ನೇ ಸಾಲಿನ 8ನೇ ಮೇ ಸಾಹಿತ್ಯ ಮೇಳವು ದಾವಣಗೆರೆಯ ತಾಜ್ ಪ್ಯಾಲೇಸ್‌ ನಲ್ಲಿ ನಡೆಯಿತು. ಸಾಹಿತ್ಯ ಮೇಳಕ್ಕೆ ಆಗಮಿಸಿದ ಕವಿತಾ ಕೃಷ್ಣನ್‌ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯ ಆತಂಕ-ಅಭದ್ರತೆಯಲ್ಲಿದೆ, ಮಕ್ಕಳಿಗೆ ತಂದೆ ತಾಯಿ ಹೇಳುತ್ತಾರೆ, ಯಾರಿಗೂ ಮಾತು ಕೊಡಬೇಡ ಎಂದು. ಉಕ್ರೇನ್ ಅನ್ನು ಈಗ ದೇಶವೇ ಅಲ್ಲ ಅನ್ನುತ್ತಿದ್ದಾರೆ. ನಮ್ಮ ದೇಶದ ಸಂಘಪರಿವಾರಕ್ಕೆ ಸಂತೋಷವಾಗಿದೆ, ವ್ಹಾ, ನಾವು ನಿಮ್ಮಂತೆ ಅಖಂಡಾ ಭಾರತದ ರಚನೆ ಮಾಡುತ್ತೇವೆ ಅನ್ನುತ್ತಿದ್ದಾರೆ.

ನಿಮಗೆ ಏನಾದರೂ ನೋವಾಗುತ್ತಿದ್ದರೆ, ಅದನ್ನು ನಾನು ಅನುಭವಿಸಲು ಸಾಧ್ಯವಾಗುವುದು, ಇದೆಲ್ಲ ಇಂದು ಕಾಣೆಯಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿದೆ. ಆದರೆ ಸರ್ಕಾರವು ಅದನ್ನು 4 ಲಕ್ಷ ಎಂದು ಹೇಳಲು ಬಯಸುತ್ತದೆ. ಸರ್ಕಾರದ ಒಳಗಿರುವ ಜನರಿಗೂ ಆಮ್ಲಜನಕ ಸಿಗಲಿಲ್ಲ, ಅವರೂ ಗಂಗಾನದಿಯಲ್ಲಿ ಹರಿದು ಹೋದರು, ಆದರೂ ಅವರು ಹೇಳುತ್ತಾರೆ, ಎಲ್ಲ ಚೆನ್ನಾಗಿದೆ, ಎಲ್ಲರಿಗೂ ಆಮ್ಲಜನಕ ಸಿಗುತ್ತಿದೆ. ಯಾಕೆ ಹೀಗಾಗುತ್ತಿದೆ?

ನೀವು ಕಣ್ಣೆದುರಿಗೆ ಇರುವುದನ್ನು ಬಿಟ್ಟು, ಸರ್ವಾಧಿಕಾರಿ ಏನು ಹೇಳುತ್ತಾನೋ ಅದನ್ನು ನಂಬುತ್ತೀರಿ. ಅದನ್ನು ನೇರವಾಗಿ ಹೇಳಬಹುದು, ವಾಟ್ಸಾಪ್ ಹಂಚಿಕೊಳ್ಳುವುದರ ಮೂಲಕ ಹೇಳಬಹುದು ಅಥವಾ ತನ್ನದೇ ಆಗಿರುವ ಮಾಧ್ಯಮಗಳ ಮೂಲಕ ಹೇಳಬಹದು. ಆದರೆ ಇಂದು ಎಲ್ಲ ಸತ್ಯಗಳೂ ಅವರೇ ಹೇಳುತ್ತಿರುವುದಾಗಿದೆ, ಉಳಿದವೆಲ್ಲ ಸುಳ್ಳಾಗಿವೆ.

ಇದನ್ನು ಓದಿ: ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರಿಂದ ಜೈಲುಪಾಲಾಗುತ್ತಿದ್ದೆವೆ: ಪಿ.ಸಾಯಿನಾಥ್‌

ಇಂದು ಉಕ್ರೇನ್ ಅನ್ನು ಸರ್ವಾಧಿಕಾರಿ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಹಿಟ್ಲರ್ ವಿರೋಧಿ ಹೋರಾಟದಲ್ಲಿ ಅತಿಹೆಚ್ಚು ತ್ಯಾಗ ಮಾಡಿದವರು ಉಕ್ರೇನ್ ಜನರು. ಜರ್ಮನಿ ಹೇಗೆ ಆಸ್ಟ್ರೀಯಾವನ್ನು ವಶಪಡಿಸಿಕೊಂಡಿತೋ ಹಾಗೆ. ಆದರೆ ಅದನ್ನು ಉಲ್ಟಾ ಮಾಡಿ ಅವರನ್ನೇ ಸರ್ವಾಧಿಕಾರಿ ಎನ್ನಲಾಗುತ್ತಿದೆ.

ಮಹಿಳೆಯರ ವಿಚಾರದಲ್ಲೂ ಇದೇ ಆಗುತ್ತಿದೆ. ಮೋದಿ ಸರ್ಕಾರ ಪ್ರತಿ ಬಾರಿ ಅತ್ಯಾಚಾರಿಗಳ ಪರವಾಗಿ ನಿಂತಿದೆ. ಅತ್ಯಾಚಾರಿಗಳನ್ನು ಬಜಾರಿನಲ್ಲಿ ಮೆರವಣಿಗೆ ಮಾಡಿದ ಬೇರೆ ಯಾವುದೇ ಪಕ್ಷವಿಲ್ಲ. ಆದರೂ ಅವರು ನಾವು ಮಹಿಳೆಯರ ಪರ ಅನ್ನುತ್ತಾರೆ. ಏಕೆ, ಏಕೆಂದರೆ ನಾವು ತಲಾಖ್ ವಿರುದ್ಧ ಕಾನೂನು ಮಾಡಿದ್ದೇವೆ ಎಂದು. ಇದರ ಬಗ್ಗೆ ಮುಸ್ಲಿಂ ಮಹಿಳೆಯರು ಕೋರ್ಟಿಗೆ ಹೋದಾಗ, ಕೋರ್ಟು ಕೂಡಾ ಹೌದು ಮೂರು ಬಾರಿ ತಲಾಖ್ ಹೇಳಿಬಿಟ್ಟರೆ ವಿಚ್ಛೇದನ ಆಗುವುದಿಲ್ಲ, ಇದರಲ್ಲಿ ಸ್ಪಷ್ಟತೆ ಇರಬೇಕು ಎಂದರು.

ಕೋರ್ಟು ಕಾನೂನು ಮಾಡಿ ಎನ್ನಲಿಲ್ಲ, ಇವರೇ ಕಾನೂನು ಮಾಡಿದರು. ಮಹಿಳೆಯರು ಹೇಳಿದರು, ಈಗಾಗಲೇ ಮುಸ್ಲಿಂ ವಯುಕ್ತಿಕ ಕಾಯ್ದೆಯಲ್ಲಿ ಸರಿಯಾದ ವಿಧಾನ ಇದೆ ಎಂದು, ಆದರೂ ಕಾನೂನು. ಅದರ ಪ್ರಕಾರ ಯಾರೇ ಮೂರನೇ ವ್ಯಕ್ತಿ ಆಪಾದನೆ ಮಾಡಿದರೂ ತಲಾಖ್ ನೀಡಿದ್ದಕ್ಕೆ ಮುಸ್ಲಿಂ ಗಂಡಸು ಜೈಲಿಗೆ ಹೋಗುತ್ತಾರೆ.

ಅನೇಕ ಪುರುಷರು ಮಹಿಳೆಯರನ್ನು ಹಾಗೇ ತಿರಸ್ಕರಿಸಿ ಹೋಗಿ ಬಿಡುವುದುಂಟು, ಆದರೆ ಯಾರೂ ಜೈಲಿಗೆ ಹೋಗುತ್ತಿಲ್ಲ. ಸ್ವತಃ ಪ್ರಧಾನ ಮಂತ್ರಿಗಳೇ ಪತ್ನಿಯನ್ನು ಬಿಟ್ಟಿದ್ದಾರೆ, ಅವರಿಗೆ ಇಲ್ಲದ ಶಿಕ್ಷೆ ಒಂದು ಸಮುದಾಯದ ಗಂಡಸರಿಗೆ ಮಾತ್ರ ಏಕೆ?

ಇದನ್ನು ಓದಿ: ದೇಶದ ನಾಲ್ಕನೇ ಅಂಗ ಮಾಧ್ಯಮ ನಿಜ ಸಮಸ್ಯೆ ಹೊರತರುತ್ತಿದೆಯೇ: ಜಸ್ಟೀಸ್‌ ಕೆ.ಚಂದ್ರು ಪ್ರಶ್ನೆ

ಹೀಗೆಯೇ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಏರಿಸಿ ಹುಡುಗರಿಗೆ ಸಮಾನ ಮಾಡಿ 21ಕ್ಕೆ ಏರಿಸಿದ್ದು. ನಮ್ಮ ಅನೇಕ ಸ್ನೇಹಿತರೂ ಇದರಲ್ಲಿ ಗೊಂದಲಕ್ಕೊಳಗಾದವರು. ಹೆಣ್ಣುಮಕ್ಕಳು ಬೇಗ ಮದುವೆಯಾಗಲಿ ಎಂದು ನಾವೂ ಬಯಸುವುದಿಲ್ಲ. 18 ವರ್ಷಕ್ಕೆ ಮತ ಹಾಕುವ ಹಕ್ಕು ಸಿಗುತ್ತದೆ, ಅವರು ವಯಸ್ಕರೆನಿಸುತ್ತಾರೆ. ಅವರು ಎಂಪಿ ಎಂಎಲ್‌ಎ ಆರಿಸಬಹದು, ತಮ್ಮ ಬಾಳಸಂಗಾತಿಯ ಆಯ್ಕೆ ಮಾತ್ರ ಏಕೆ ಮಾಡಬಾರದು? ಈಗ ಸರ್ಕಾರದ ಪ್ರಮೇಯವೇ ಇಲ್ಲದೆ ಸರಾಸರಿ ಮದುವೆಯ ವಯಸ್ಸು 19ಕ್ಕೆ ಇಳಿದಿದೆ. ನಿಮಗೆ ಮಕ್ಕಳು ಬೇಗ ಮದುವೆಯಾಗಬಾರದಾದರೆ, ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಒದಗಿಸಿ. ಅದನ್ನು ಬಿಟ್ಟು ಕಾಯ್ದೆ ಏಕೆ?

ಈಗ ಅಂತರ್ಜಾತೀಯ ಅಂತಧರ್ಮೀಯ ಮದುವೆಗಳನ್ನು ತಡೆಯಬೇಕಿದೆ ಇವರಿಗೆ. ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದಾಗ ನಡೆದ ಒಂದು ಘಟನೆ-ಉತ್ತರಾಖಂಡದ ಮುಸ್ಲಿಂ ಯುವಕನೊಂದಿಗೆ 19 ವರ್ಷದ ಯುಪಿಯ ಯುವತಿ ಮದುವೆ ಮಾಡಿಕೊಂಡಳು, ಅವಳು ತಾನು ವಯಸ್ಕಳು ಎಂದು ಹೇಳಿದರೂ ಬಿಡದೆ ಆಕೆಯ ಗಂಡ ಮತ್ತು ಕುಟುಂಬವನ್ನು ಜೈಲಿಗೆ ಹಾಕಿ ಈಕೆಗೆ ಒತ್ತಾಯದಿಂದ ಗರ್ಭಪಾತ ಮಾಡಿಸಿದರು. ಆಕೆಗೆ ಚಿಕಿತ್ಸೆ ನಾವು ಕೊಡಿಸಬೇಕಾಯಿತು. ಅಂತಧರ್ಮೀಯ ಮದುವೆ ಮಾಡಿಕೊಂಡರೆ ಅವರನ್ನು ಜೈಲಿಗೆ ಹಾಕಿ ಗರ್ಭಪಾತ ಮಾಡಿಸುತ್ತಾರೆ. ಅದಕ್ಕಾಗಿ ಕಾನೂನು.

ನೀವು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಹಾಸ್ಟೆಲ್ ಉದ್ಯೋಗ ಇತ್ಯಾದಿ ಕೊಡಿ, ಮಕ್ಕಳು ನಿಧಾನವಾಗಿ ಮದುವೆಯಾಗುತ್ತಾರೆ. ಅದೇನನ್ನೂ ಕೊಡದೆ ಈಗ ಅವರ ಒಂದು ಅವಕಾಶವನ್ನೂ ತೆಗೆಯಲಾಗುತ್ತಿದೆ. ಮಾಡುತ್ತಿರುವುದೆಲ್ಲ ಮಹಿಳಾ ವಿರೋಧಿ ಕೆಲಸ. ಆದರೆ, ಜನರ ನಡುವೆ ಸಂದೇಶ ಹೋಗುತ್ತಿರುವುದು ಮಹಿಳಾ ಪರ ಸರ್ಕಾರ ಎಂದು. ಹಿಜಾಬ್ ವಿಚಾರದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಮುಕ್ತಿ ಕೊಡಿಸಿದೆ ಎಂದು ಸಾಮಾನ್ಯ ಜನರೂ ಕೂಡಾ ಭಾವಿಸಿದ್ದಾರೆ.

ನಾನು ಅವರನ್ನು ಕೇಳಿದೆ-ಪ್ರತಿಭಾ ಪಾಟೀಲ್ ಇಂದಿರಾಗಾಂಧಿ ಅವರುಗಳು ತಲೆ ಮುಚ್ಚಿಕೊಳ್ಳದೆ ಭಾಷಣ ಮಾಡುತ್ತಿರುವ ಒಂದೇಒಂದು ಫೋಟೋ ತೊರಿಸಿ ಎಂದು. ಅವರು ಯಾಕೆ ಸೆರಗು ತಲೆಮೇಲೆ ಧರಿಸುತ್ತಿದ್ದರು ಎಂದು ನಾವು ಅವರನ್ನು ಕೇಳುವುದಿಲ್ಲ, ಅವರಿಗೆ ಕಾರಣಗಳಿರಬಹುದು.  ದಯವಿಟ್ಟು ಮಹಿಳೆಯರನ್ನು ಯಾಕೆ ಅವರು ಇದೇ ಬಟ್ಟೆ ಧರಿಸಿದ್ದಾರೆ ಎಂದು ದಯಮಾಡಿ ಕೇಳಲೇಬೇಡಿ. ಅವರು ಶಿಕ್ಷಣ ಪಡೆಯಲು ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಯಾಕೆ ಕಾರಣವಾಗಬೇಕು?

ಇದನ್ನು ಓದಿ: ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರಿಂದ ಜೈಲುಪಾಲಾಗುತ್ತಿದ್ದೆವೆ: ಪಿ.ಸಾಯಿನಾಥ್‌

ಆಫ್ಘಾನಿಸ್ಥಾನದಲ್ಲಿ ಮಹಿಳಾ ಟಿವಿ ವಾಚಕರು ಪೂರ್ತಿ ಮುಖ ಮುಚ್ಚಿ ಕಾಣಿಸಿಕೊಳ್ಳಬೇಕೆಂದು ತಾಲಿಬಾನ್ ಸರ್ಕಾರ ಆದೇಶಿಸಿದಾಗ ಇಡೀ ಪುರುಷ ಟಿವಿ ವಾಚಕರ ಬಳಗ ತಾವೂ ಮುಖ ಮುಚ್ಚಿ ಮಹಿಳೆಯರ ಪರವಾಗಿ ನಿಂತರು. ಕಾನೂನು ಬದಲಾಗಲೇ ಬೇಕಾಯಿತು. ಹಾಗೆ ಮಹಿಳೆಯರ ಆಯ್ಕೆಯನ್ನು ಗೌರವಿಸಿ, ಅವರನ್ನು ಬೆಂಬಲಿಸಿ.

ನಾವೆಲ್ಲ ಇಲ್ಲಿ, ಸ್ವಲ್ಪ ಸಮಯ ಮೊದಲು ಇಂಕ್ವಲಾಬ್ ಜಿಂದಾಬಾದ್ ಎಂಬ ಘೋಷಣೆ ಹಾಕಿದೆವು. ನಮ್ಮ ಸ್ನೇಹಿತರಾದ ಉಮರ್ ಖಾಲಿದ್ ಇಂದು ಜೈಲಿನಲ್ಲಿದ್ದಾರೆ, ಕೋರ್ಟಿನಲ್ಲಿ ನ್ಯಾಯಾಧೀಶರು ಕೇಳಿದರು, ಯಾಕೆ ಈ ಇಂಕ್ವಿಲಾಬ್ ಘೋಷಣೆ ಹಾಕಿದೆ ಎಂದು. ಅದು ಸ್ವಾತಂತ್ರ್ಯ ಸಂಗ್ರಾಮದ ಸಮಯದ ಘೋಷಣೆ ಎಂದರು. ಮೋದಿಯವರ ಭಾಷಣವನ್ನು ಜುಮ್ಲಾ ಎಂದದ್ದು ಅಮಿತ್ ಶಾ. ಅದನ್ನು ನೆನಪಿಸಿದ ಉಮರ್‌ ಅವರದ್ದು ತಪ್ಪಾಯಿತು.

ನ್ಯಾಯಾಧೀಶರು ಗಾಂಧಿಯವರಂತೆ ಶಾಂತಿಯುತರಾಗಿ ಬನ್ನಿ ಅನ್ನುತ್ತಾರೆ. ಆದರೆ ನಾವು ಹೇಗೇ ಬಂದರೂ ಅವರಿಗೆ ಅದು ಬಂದೂಕು ಹಿಡಿದು ಬಂದಂತೇ ಕಾಣುತ್ತದೆ. ಸಂಘಪರಿವಾರದ ಹತ್ಯೆಗೆ ಕರೆ ಕೊಡುವ ಘೋಷಣೆಗಳು ಮುಗುಳ್ನಗುವಿನ ಮಾತಿನಂತೆ ಕಾಣಬಹದು. ಹೀಗೆ, ಪದಗಳ ಅರ್ಥಗಳು ಬದಲಾಗುತ್ತಿವೆ. ಈ ಅರ್ಥಗಳು ಬದಲಾಗುತ್ತಿರುವ ಕಾಲದಲ್ಲಿ, ನೀವು ಜನರನ್ನು, ಅವರ ಬುದ್ಧಿಯಿಂದಲ್ಲ ಬದಲಿಗೆ ಹೃದಯದ ಮೂಲಕ ತಲುಪಬಲ್ಲಿರಿ ಎಂದು ನನಗೆ ವಿಶ್ವಾಸವಿದೆ. ನೀವು ಪ್ರಾಣವೇ ಪಣಕ್ಕಿದ್ದರೂ ಕೂಡಾ ಈ ಪ್ರತಿರೋಧದಲ್ಲಿ ಸಂಘರ್ಷ ಮುಂದುವರೆಸಿ ಗೆಲ್ಲಬಲ್ಲಿರಿ ಎಂದು ನಂಬಿದ್ದೇನೆ. ಹೋರಾಟಕ್ಕೆ ಜಯವಾಗಲಿ ಎಂದರು.

Donate Janashakthi Media

Leave a Reply

Your email address will not be published. Required fields are marked *