ದಕ್ಷಿಣ ಕನ್ನಡ: ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಸಮಸ್ಯೆಗಳ ಆಗರವಾಗಿದೆ. ಇವುಗಳನ್ನು ಬಗೆಹರಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಪತ್ರ ಬರೆದಿದ್ದಾರೆ. ಹೆದ್ದಾರಿ
ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಸಮಸ್ಯೆಗಳ ಆಗರವಾಗಿದೆ. ಸುರತ್ಕಲ್ – ನಂತೂರು, ಬಿ ಸಿ ರೋಡ್ – ಗುಂಡ್ಯ, ಪೂಂಜಾಲಕಟ್ಟೆ – ಚಾರ್ಮಾಡಿ, ನಂತೂರು – ಮೂಡಬಿದ್ರೆ – ಕಾರ್ಕಳ ಹೀಗೆ ಎಲ್ಲಾ ಹೆದ್ದಾರಿಗಳಲ್ಲಿ ವಾಹನ ಸಂಚಾರ ಎಂಬುದು ಅತ್ಯಂತ ಅಪಾಯಕಾರಿಯಾಗಿದೆ. ಈ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳು ಆಮೆಗತಿಯಲ್ಲಿ, ಅವೈಜ್ಞಾನಿಕವಾಗಿ ನಡೆಸುತ್ತಿರುವುದು, ಕೆಟ್ಟ ವಿನ್ಯಾಸಗಳು, ಕಾಮಗಾರಿ ನಡೆಯುವ ಸ್ಥಳದಲ್ಲಿ ಪರ್ಯಾಯ ರಸ್ತೆಗಳನ್ನು ಡಾಮರೀಕರಣ ಗೊಳಿಸದಿರುವುದು, ರಸ್ತೆ ದುರಸ್ತಿಯನ್ನು ನಿರ್ಲಕ್ಷಿಸುವುದು, ಟೋಲ್ ಗೇಟ್ ಗಳನ್ನು ಅಳವಡಿಸಲು ನಿಯಮ ಉಲ್ಲಂಘಿಸಿ ಕಡಿಮೆ ಅಂತರದಲ್ಲಿ ಸ್ಥಳ ಗುರುತಿಸಿರುವುದು, ಕಳಪೆ ನಿರ್ವಹಣೆ, ಹೀಗೆ ಗಂಭೀರವಾದ ಸಮಸ್ಯೆಗಳು ನಿರಂತರವಾಗಿ ಮುಂದುವರಿದಿದೆ. ಈ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಹೆದ್ದಾರಿ
ಹಲವು ಸಲ ಈ ಕುರಿತು ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟವರ ಗಮನ ಸೆಳೆದಿದ್ದೇವೆ. ಆದರೂ ಸಮಸ್ಯೆ ಬಗೆಹರಿಸಲು ಯಾವುದೇ ಪ್ರಯತ್ನ ನಡೆಸದಿರುವುದರಿಂದ, ಸಮಸ್ಯೆಗಳ ಪರಿಹಾರಕ್ಕಾಗಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ 5.2.2025 ರಂದು ನಂತೂರು ಜಂಕ್ಷನ್ ಬಳಿ ಸಾಮೂಹಿಕ ಧರಣಿಯನ್ನು ನಡೆಸಿದ್ದೇವೆ. ಜನಪರ ಕಾಳಜಿಯುಳ್ಳ ತಾವು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಹಾಗೂ ತಮ್ಮ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಹೆದ್ದಾರಿ
1) ಬಿಸಿ ರೋಡ್ – ಗುಂಡ್ಯ, ಪೂಂಜಾಲಕಟ್ಟೆ – ಚಾರ್ಮಾಡಿ, ನಂತೂರು – ಮೂಡಬಿದ್ರೆ – ಕಾರ್ಕಳ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಒದಗಿಸಿರುವ ಪರ್ಯಾಯ ರಸ್ತೆಗಳನ್ನು ಡಾಮರೀಕರಣಗೊಳಿಸಬೇಕು, ಗುಂಡಿಗಳನ್ನು ಮುಚ್ಚಬೇಕು. ಮೇಲ್ಸೇತುವೆ, ಅಂಡರ್ ಪಾಸ್ ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.
2) ಬಿಸಿರೋಡ್, ಕಲ್ಲಡ್ಕ, ಮಾಣಿವರೆಗಿನ ಅಂಡರ್ ಪಾಸ್, ಫ್ಲೈ ಓವರ್ ಕಾಮಗರಿಗಳನ್ನು ಈ ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸಿ ಸಂಚಾರಕ್ಕೆ ಒದಗಿಸಬೇಕು.
3) ಸುರತ್ಕಲ್ – ನಂತೂರು ರಸ್ತೆಯಲ್ಲಿ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಬದಲಿಗೆ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಗುಣಮಟ್ಟದ ಡಾಂಬರೀಕರಣದ ಮೂಲಕ ಪೂರ್ಣಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು, ಮಳೆಗಾಲಕ್ಕೆ ಮುನ್ನ ಈ ಕೆಲಸ ಪೂರ್ಣಗೊಳಿಸಬೇಕು.
4) ಸಂಚಾರಕ್ಕೆ ಅಯೋಗ್ಯವೆಂದು ತಮ್ಮ ಇಲಾಖೆಯೆ ವರದಿ ನೀಡಿರುವ ಕೂಳೂರು ಕಮಾನು ಸೇತುವೆಗೆ ಬದಲಿಯಾಗಿ ಹೊಸ ಸೇತುವೆ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ದಾಟಿದೆ. ಈಗ ಮತ್ತೊಮ್ಮೆ ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿಯನ್ನು ತಕ್ಷಣದಿಂದಲೆ ಪುನರಾರಂಭಿಸಿ, ಯುದ್ದೋಪಾದಿಯಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಳಿಸಬೇಕು, ಸಂಭವನೀಯ ದುರಂತಗಳನ್ನು ತಪ್ಪಿಸಬೇಕು.
5) ದಶಕದ ಬೇಡಿಕೆಯಾದ ನಂತೂರು ಮೇಲ್ಸೇತುವೆ ಕಾಮಗಾರಿ ಇದೀಗ ಆರಂಭಗೊಂಡರೂ ಸಂಬಂಧಪಟ್ಟವರ ಬೇಜವಾಬ್ದಾರಿ ನಡೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ನಂತೂರಿನಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಕಾಲಮಿತಿಯನ್ನು ನಿಗದಿ ಪಡಿಸಬೇಕು, ಆ ಕಾಲಮಿತಿಯ ಒಳಗಡೆ ಮೇಲ್ಸೇತುವೆ ಪೂರ್ಣಗೊಳಿಸಿ ಸಂಚಾರಕ್ಕೆ ಬಿಟ್ಟುಕೊಡಬೇಕು. ಮೇಲ್ಸೇತುವೆಯನ್ನು ಕೆಪಿಟಿ ಜಂಕ್ಷನ್ ವರಗೆ ವಿಸ್ತರಿಸಬೇಕು. ನಂತೂರು ಹಾಗೂ ಕೆಪಿಟಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ಗಳು ಪ್ರಾಯೋಗಿಕವಲ್ಲ, ಮೇಲ್ಸೇತುವೆಗೆ ಬದಲಿಯಾಗಿ ಅಂತಹ ಪ್ರಯತ್ನಗಳನ್ನು ಮಾಡಬಾರದು. ಅದು ಹೆದ್ದಾರಿ ಸಮಸ್ಯೆಗಳನ್ನು ಮತ್ತಷ್ಟು ಕಗ್ಗಂಟಾಗಿಸುತ್ತದೆ. ಕಾನೂನಿನ ತೊಡಕುಗಳಿದ್ದಲ್ಲಿ ಆದ್ಯತೆಯಿಂದ ಬಗೆಹರಿಸಬೇಕು, ಮೇಲ್ಸೇತುವೆ ನಿರ್ಮಾಣದ ವಿನ್ಯಾಸ ಹಾಗೂ ಪೂರ್ತಿ ವಿವರಗಳನ್ನು ಬಹಿರಂಗಗೊಳಿಸಬೇಕು.
6) ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೆ ತೆರವುಗೊಳಿಸಬೇಕು.
7) ಮೇಲ್ದರ್ಜೆಗೆ ಏರುತ್ತಿರುವ ಹೆದ್ದಾರಿಗಳಲ್ಲಿ ಟೋಲ್ ಗೇಟ್ ಗಳನ್ನು ಅಳವಡಿಸಲು ಸ್ಥಳಗಳನ್ನು ಗರುತಿಸುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈಗ ಗುರುತಿಸಲಾಗಿರುವ ಸ್ಥಳಗಳನ್ನು ಕೈ ಬಿಡಬೇಕು, ಅಂತರದ ನಿಯಮಗಳನ್ನು ಸರಿಯಾಗಿ ಪಾಲಿಸಿ ಟೋಲ್ ಗೇಟ್ ಗಳನ್ನು ಅಳವಡಿಸಬೇಕು. ಟೋಲ್ ಗೇಟ್ ಗಳ ಸಂಖ್ಯೆಯನ್ನು ಕನಿಷ್ಟಗೊಳಿಸಬೇಕು, ದರಗಳು ದುಬಾರಿ ಆಗದಂತೆ ಎಚ್ಚರವಹಿಸಬೇಕು, ಸ್ಥಳೀಯರಿಗೆ ರಿಯಾಯಿತಿಗಳನ್ನು ಕಡ್ಡಾಯಗೊಳಿಸಬೇಕು.
8) ಸರ್ವೀಸ್ ರಸ್ತೆಗಳು ಇಲ್ಲದ ಕಡೆಗಳಲ್ಲಿ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ರಸ್ತೆಯ ನಡುವಿನ ದಾರಿ ದೀಪಗಳು ಪ್ರತಿದಿನ ಉರಿಯುವುದನ್ನು ಖಾತರಿ ಪಡಿಸಬೇಕು, ಹೆಚ್ಚು ಬೆಳಕು ಸೂಚಿಸುವ ದೀಪಗಳನ್ನು ಅಳವಡಿಸಬೇಕು. ಹುಲ್ಲುಗಳನ್ನು ಕಾಲ ಕಾಲಕ್ಕೆ ಕತ್ತರಿಸುವುದು, ಚರಂಡಿಗಳ ಹೂಳೆತ್ತುವುದು ಮುಂತಾದ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಬೇಕು
9) ಈ ಎಲ್ಲಾ ಸಮಸ್ಯೆಗಳು, ನಾಗರಿಕರ ಬೇಡಿಕೆಗಳನ್ನು ಪರಿಗಣಿಸಿ, ಹೆದ್ದಾರಿ ಪ್ರಾಧಿಕಾರದ ಸಭೆಯನ್ನು ಲೋಕೋಪಯೋಗಿ ಸಚಿವರಾದ ತಮ್ಮ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ನಡೆಸಬೇಕು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ಒದಗಿಸಬೇಕು ಎಂದು ತಮ್ಮಲ್ಲಿ ವಿನಂತಿಸುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.