ಸಿಎಂ ಬದಲು ಡಿಸಿಎಂ ಪತ್ರಿಕಾಗೋಷ್ಠಿ
ಬೆಂಗಳೂರು ಜ 05 : ಶಾಸಕರ ಜೊತೆಗಿನ ಸಿಎಂ ಸಭೆ ಮುಕ್ತಾಯವಾಗಿದೆ. ನಿನ್ನೆಯಿಂದ ವಲಯವಾರು ಸಭೆ ನಡೆಸಿದ ಸಿಎಂ ಬಿಎಸ್ವೈ ಪ್ರತಿಕ್ರೀಯೆ ನೀಡಲು ನಿರಾಕರಿಸಿದ್ದಾರೆ. ಯಡಿಯೂರಪ್ಪ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಸಿಎಂ ಮೇಲೆ ಕೆಲ ಶಾಸಕರು ಒತ್ತಡ ಹೇರಿದ್ದಾರೆ, ಸಚಿವಸ್ಥಾನದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶಾಸಕರ ಸಭೆ ಬಗ್ಗೆ ಸಿಎಂ ಬದಲು ಡಿಸಿಎಂ ಗೋವಿಂದ ಕಾರಜೋಳ ಸುದ್ದಿಗೋಷ್ಟಿಯನ್ನು ನಡೆಸಿದರು.
ನಿನ್ನೆ ಮತ್ತು ಇವತ್ತು ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರು, ಸಚಿವರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಡಿಯೂರಪ್ಪ ನಾಯಕತ್ವದ ಪಕ್ಷ ಅಧಿಕಾರಕ್ಕೆ ಬಂದ ನಂತರ ಆಗಿರೋ ಕ್ರಮದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕಾರಜೋಳ ತಿಳಿಸಿದ್ದಾರೆ.
2019-20 ರಲ್ಲಿ ರಾಜ್ಯದಲ್ಲಿ ಆಗಿರುವ ಅನಾಹುತ ಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದೇವೆ. 2020 ರಲ್ಲಿನ ಪ್ರವಾಹದ ಬಗ್ಗೆ ಸಂಪೂರ್ಣ ಚರ್ಚೆ ಮಾಡಿದ್ದೇವೆ. ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮ, ಲೋಪದೋಷಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂಬರುವ ವರ್ಷಗಳ ಬಗ್ಗೆ ಅಭಿವೃದ್ಧಿ ಕಾರ್ಯ ಹೇಗೆ ನಿರ್ವಹಿಸಬೇಕು? ಅನುದಾನ ಬಿಡೆಗಡೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.
ನಿನ್ನೆಯ ಸಭೆಯಲ್ಲಿ ಒಂದಿಬ್ಬರು ಶಾಸಕರು ಗದ್ದಲ ಮಾಡಿ ಗೊಂದಲ ಸೃಷ್ಠಿಸಿದರು ಎಂದು ಹೆಸರು ಪ್ರಸ್ತಾಪಿಸದೆ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಕಿಡಿ ಕಾರಿದರು. ಚರ್ಚೆ ಮಡುವಾಗ ಗೊಂದಲ ಆಗುವುದು ಸಹಜ, ಆದರೆ ಅದಕ್ಕೂ ಮಿತಿ ಇರುತ್ತದೆ. ಶಾಸಕರಲ್ಲಿನ ಆಂತರಿಕ ವಿಚಾರವನ್ನು ರಾಜ್ಯಾಧ್ಯಕ್ಷರಿಗೆ ತಿಳಿಸುತ್ತೇವೆ. ಕ್ರಮ ಕೈಗೊಳ್ಳುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಯತ್ನಾಳ ರವರ ಮೇಲೆ ಶಿಸ್ತು ಕ್ರಮಕ್ಕೆ ಒತ್ತಾಯಿಸುವ ಸೂಚನೆಯನ್ನು ನೀಡಿದ್ದಾರೆ.
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಸಭೆ ಕರೆದಿದ್ದ ಸಿಎಂ ಬಿಎಸ್ ವೈ ಗೆ ಈಗ ನಿರಾಸೆಯಾಗಿದ್ದಂತು ನಿಜ. ಸಿಎಂ ಹುದ್ದೆ ಸುತ್ತ ಎದ್ದಿದ್ದ ಪ್ರಶ್ನೆಗಳಿಗೆ ಬ್ರೆಕ್ ಹಾಕಲು ಪ್ರಯತ್ನಿಸಿದ್ದ ಸಭೆ ಬಹುತೇಕ ವಿಫಲವಾಗಿದೆ. ಗೋವಿಂದ ಕಾರಜೋಳ ಸಭೆಗೆ ಬಣ್ಣವನ್ನು ಬಳಿದಿದ್ದಾರೆ ಎಂಬ ಚರ್ಚೆಗಳು ಬಿಜೆಪಿಯೊಳಗೆ ಹರಿದಾಡುತ್ತಿವೆ.