ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು ಹಾಗೂ ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ಸರ್ವಪಕ್ಷಗಳ ಸಭೆಯನ್ನು ನಿಗದಿಪಡಿಸಿದೆ. ಆದರೆ, ಆಡಳಿತ ನಡೆಸುತ್ತಿರುವ ರಾಜ್ಯ ಬಿಜೆಪಿ ಸರಕಾರವು ಸರ್ವಪಕ್ಷಗಳ ಸಭೆಗೆ ಎಲ್ಲಾ ಪಕ್ಷದ ಮುಖ್ಯಸ್ಥರನ್ನು ಆಹ್ವಾನಿಸಬೇಕಿತ್ತು.
ಆದರೆ, ಈ ಕ್ರಮವನ್ನು ಕೈಗೊಳ್ಳದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚುನಾಯಿತ ಪ್ರತಿನಿಧಿಗಳ ಪಕ್ಷಗಳನ್ನು ಮಾತ್ರ ಆಹ್ವಾನಿಸಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರಕಾರಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಅವರು ಬರೆದಿರುವ ಪತ್ರದ ಸಂಪೂರ್ಣ ವಿವರ ಈ ಕೆಳಗಿನಂತಿದೆ:
ತಡವಾಗಿಯಾದರೂ ತಾವು ಸರ್ವ ಪಕ್ಷಗಳ ಸಮಾಲೋಚನಾ ಸಭೆ ಕರೆದಿರುವುದು ಸ್ವಾಗತಾರ್ಹ ವಿಚಾರ. ಆದರೆ ಸರಕಾರದ ದೋಷ ಪೂರಿತ ತಿಳುವಳಿಕೆಯಂತೆ, ವಿಧಾನಸಭೆ ಹಾಗೂ ಪರಿಷತ್, ಪಾರ್ಲಿಮೆಂಟ್ ನಲ್ಲಿ ಚುನಾಯಿತ ಸದಸ್ಯರನ್ನು ಹೊಂದಿದ ಪಕ್ಷಗಳು ಮಾತ್ರವೇ ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದಾಗಿರುವುದರಿಂದ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಈ ಪತ್ರ ಬರೆಯಬೇಕಾಗಿ ಬಂದಿದೆ.
ಇದನ್ನು ಓದಿ: ಎರಡನೇ ಕೋವಿಡ್ ಅಲೆ: ಜನಗಳ ಆರೋಗ್ಯ ಮತ್ತು ಜೀವನೋಪಾಯ ರಕ್ಷಿಸಬೇಕು
ಕರ್ನಾಟಕ ರಾಜ್ಯ ಮತ್ತೊಮ್ಮೆ ಕೋವಿಡ್ – 19 ರ ಎರಡನೇ ಅಲೆಯ ಬಾಧೆಗೊಳಗಾಗುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ. ರಾಜ್ಯದಲ್ಲಿಂದು ಹೊಸದಾಗಿ 11,265 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 10,94,912ಕ್ಕೆ (10.94 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 38 ಜನರ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 13,046ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 9,96,367 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 85,480 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದೆರಡು ವಾರಗಳಿಂದ ಸೋಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಸಾವುಗಳ ಸಂಖ್ಯೆಯು ಬೆಳೆಯುತ್ತಲೇ ಇದೆ.
ಆದರೇ, ಕೋವಿಡ್ – 19 ಎರಡನೇ ಅಲೆಯ ಸೋಂಕಿನ ಬೆಳವಣಿಗೆಯನ್ನು ತಮ್ಮ ಸರಕಾರವು ಕೇವಲ ತೋರಿಕೆಯ ಆತಂಕದಿಂದ ಗಮನಿಸುತ್ತಿರುವುದನ್ನು ಬಿಟ್ಟರೇ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳು ಏನೇನು ಇಲ್ಲವಾಗಿದೆ. ಜಗತ್ತಿನ ಅನುಭವದಂತೆ ಮಾರ್ಪಾಟುಗೊಂಡ ಅಥವಾ ಎರಡನೇ ಅಲೆಯ ವೈರಾಣು ಧಾಳಿ ನಿಯಂತ್ರಿಸಲು, ಅದನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ತಮ್ಮ ಸರಕಾರ ಮಾಡಿಕೊಳ್ಳಲಿಲ್ಲ. ಕಳೆದ ವರ್ಷದ ಧಾಳಿಯ ಅನುಭವವನ್ನು ಕ್ರೋಢೀಕರಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನು ಬಲ ಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿಲ್ಲ. ಈಗ ಬೆಳೆಯುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್ಗಳು ದೊರೆಯುತ್ತಿಲ್ಲವೆಂಬುದು ಸೋಂಕಿತರ ಹಾಗೂ ಅವರ ಕುಟುಂಬದ ಸದಸ್ಯರ ಅಳಲಾಗಿದೆ. ಇದರಿಂದಾಗಿ ಹಲವು ಸೋಂಕಿತರು ಮರಣ ಹೊಂದಿದ್ದಾರೆ. ಖಾಸಗಿ ಆಸ್ಪತ್ರೆಗಳು, ಜನಗಳ ಈ ದುಸ್ಥಿತಿಯನ್ನು ಬಳಸಿಕೊಂಡು ಸುಲಿಗೆಗೆ ನಿಂತಿವೆಯೆಂದರೆ ತಪ್ಪಾಗಲಾರದು.
ಇದನ್ನು ಓದಿ: ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?
ಇದರಿಂದಾಗಿ, ರಾಜ್ಯದ ನಾಗರೀಕರಲ್ಲಿ ಮತ್ತಷ್ಠು ಭೀತಿಯುಂಟಾಗಿದೆ. ಮೊದಲೇ ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡು-ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಈ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್ ಡೌನ್ ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ರಾಜ್ಯವನ್ನು ನಲುಗುವಂತೆ ಮಾಡಿದೆ. ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳುವಂತೆ ಸಿಪಿಐಎಂ ಹಾಗೂ ನಾಗರೀಕರು ನಿರಂತರ ಒತ್ತಾಯ ಮಾಡುತ್ತಾ ಬಂದರೂ ತಮ್ಮ ಸರಕಾರ ಆ ಕುರಿತು ಗಮನವನ್ನೇ ಹರಿಸಲಿಲ್ಲ.
ಇದರಿಂದಾಗಿ, ಜನತೆಯ ಸಂಕಷ್ಟಗಳನ್ನು, ಅವರುಗಳೇ ಪರಿಹರಿಸಿಕೊಳ್ಳುವಂತೆ ಅವರ ಮೇಲೆಯೇ ನಿರ್ಧಯಿಯಾಗಿ ತಮ್ಮ ಸರಕಾರ ಬಿಟ್ಟು ಬಿಟ್ಟುದರಿಂದ ಸಾಮಾನ್ಯರು, ಬಡವರು, ತಮ್ಮ ಬಳಿ ಇದ್ದ ಸಣ್ಣ ಪುಟ್ಟ ಆಸ್ತಿಗಳನ್ನು ಉಳ್ಳವರಿಗೆ ದುಬಾರಿ ಬಡ್ಡಿಯ ಸಾಲಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಸಾಲಬಾಧಿತರಾಗಿದ್ದಾರೆ. ಇದರಿಂದ ಶ್ರೀಮಂತರು ಭಾರೀ ಶ್ರೀಮಂತರಾದರೇ, ಬಡವರು ಮತ್ತಷ್ಟು ಕಡುಬಡವರಾಗುತ್ತಿದ್ದಾರೆ.
ಈಗ ರಾಜ್ಯವು ಮರಳಿ ಮತ್ತಷ್ಟು ದುಸ್ಥಿತಿಯ ಕಡೆ ಚಲಿಸುವಂತಾಗಿದೆ. ಒಂದೆರಡು ತಿಂಗಳಿನಿಂದ ಉದ್ಯೋಗ ಹರಸಿ ಹೊರಟಿದ್ದ ವಲಸೆ ಕಾರ್ಮಿಕರು, ಬೆಳೆಯುತ್ತಿರುವ ಸೋಂಕಿನ ಕಾರಣದಿಂದ ಆತಂಕಗೊಂಡು ಮರಳಿ ಸ್ವಂತ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ನಿರುದ್ಯೋಗ ಮತ್ತೊಮ್ಮೆ ಬೃಹದಾಕಾರವಾಗಿ ಬೆಳೆಯುವ ಲಕ್ಷಣ ಕಂಡು ಬರುತ್ತಿದೆ.
ಮತ್ತೊಂದು ಕಡೆ, ತಮ್ಮ ಹಾಗೂ ಕೇಂದ್ರ ಸರಕಾರಗಳು ಜಾರಿ ಮಾಡುತ್ತಿರುವ ಲೂಟಿ ಕೋರ ಕಾರ್ಪೋರೇಟ್ ಪರವಾದ ನೀತಿಗಳು, ಜನತೆಯನ್ನು ಇನ್ನಷ್ಠು ಆತಂಕಿತರನ್ನಾಗಿಸಿ ಇಂತಹ ವೈರಾಣು ಧಾಳಿಯ ನಡುವೆಯೂ ಅವರು ಬೀದಿಗಿಳಿಯುವಂತೆ ಬಲವಂತ ಮಾಡಿದೆ.
ಇದನ್ನು ಓದಿ: ಕೇಂದ್ರ ಸರಕಾರಕ್ಕೆ ಮತ್ತೊಮ್ಮೆ ರೈತರ ಎಚ್ಚರಿಕೆ
ಆದ್ದರಿಂದ, ರಾಜ್ಯವನ್ನು ಇಂತಹ ದುಸ್ಥಿತಿಯಿಂದ ಮತ್ತು ತೀವ್ರತರವಾದ ಆತಂಕಗಳಿಂದ ಮೇಲೆತ್ತಲು ಮತ್ತು ಈ ಸಂಕಷ್ಟಗಳನ್ನು ಜನತೆ ಐಕ್ಯತೆಯಿಂದ ಎದುರಿಸುವಂತಾಗಲು, ಈ ಕೂಡಲೇ, ರೈತರು ಹಾಗೂ ಕಾರ್ಮಿಕರ ಮತ್ತು ನಾಗರೀಕರ ವಿರೋಧಿಯಾದ ಕಾರ್ಮಿಕ ಸಂಹಿತೆಗಳು ಮತ್ತು ಕೃಷಿ ಕಾಯ್ದೆಗಳು, ಭೂಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ- 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕು.
ಅಲ್ಲದೇ, ರಾಜ್ಯದಲ್ಲಿ ಕೋವಿಡ್ ತುರ್ತು ಸ್ಥಿತಿಯನ್ನು ಘೋಷಿಸಿ ಕೆಳಕಂಡ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವಂತೆ ಈ ಮೂಲಕ ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ.
- ಕೋವಿಡ್ ಸೋಂಕಿತರಿಗೆ ಉಚಿತ ಶೂಶೃಷೆ ಒದಗಿಸಲು ಮತ್ತು ಖಾಸಗೀ ಆಸ್ಪತ್ರೆಗಳ ಸುಲಿಗೆಗಳಿಂದ ರಕ್ಷಿಸಲು ಎಲ್ಲಾ ಖಾಸಗೀ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಸರಕಾರದ ವಶಕ್ಕೆ ಪಡೆಯ ಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಅರ್ಧದಷ್ಠು ಹಾಸಿಗೆಗಳನ್ನು ಕೋವಿಡ್ ಬಾಧಿತರಿಗೆ ಮೀಸಲಿಡಬೇಕು. ಈ ಎಲ್ಲದರ ನಿರ್ವಹಣೆಗೆ ಅಗತ್ಯ ಸಿಬ್ಬಂದಿ, ಔಷಧಿ ಹಾಗೂ ಅದಕ್ಕಾಗಿ ಹಣಕಾಸು ನೆರವನ್ನು ಘೋಷಿಸಬೇಕು.ಅದಾಗಲೇ ಕೋವಿಡ್ ವ್ಯಾಕ್ಷಿನ್ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಮಯಕ್ಕೆ ದೊರೆಯುವಂತೆ ಮತ್ತು ವ್ಯಾಕ್ಷಿನ್ ಪಡೆಯುವವರಿಗೆ ವ್ಯಾಕ್ಷಿನ್ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000 ರೂ. ಗಳ ಒದಗಿಸಬೇಕು. ಈ ಎಲ್ಲರಿಗೆ ತಲಾ 10 ಕೇಜಿ ಸಮಗ್ರ ಆಹಾರಧಾನ್ಯಗಳನ್ನು ಮತ್ತು ಕೋವಿಡ್ ಸುರಕ್ಷಿತ ಕ್ರಮಗಳನ್ನು ಕನಿಷ್ಟ ಮುಂದಿನ ಆರು ತಿಂಗಳವರೆಗೆ ಒದಗಿಸಬೇಕು. ಎಲ್ಲಾ ಸಾಮಾಜಿಕ ಪಿಂಚಣಿದಾರರ ಬಾಕಿ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
- ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ಪಾದಕ ಘಟಕಗಳನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ, ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಅಗತ್ಯ ಸೇವೆಯಲ್ಲೂ ಶೇ 50 ರಷ್ಟು ಸಿಬ್ಬಂದಿಯನ್ನು ಸುರಕ್ಷತಾ ಕ್ರಮಗಳೊಂದಿಗೆ ಬಳಸಬೇಕು.
- ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನೀಡಿ ಸರಕಾರವೇ ನೇರವಾಗಿ ಖರೀದಿಸಬೇಕು.
- ಉದ್ಯೋಗ ಖಾತ್ರಿ ಕೆಲಸವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಕೋವಿಡ್ ಸುರಕ್ಷತೆಯೊಂದಿಗೆ ಜಾರಿಗೊಳಿಸಲು ಕ್ರಮ ವಹಿಸಬೇಕು.
- ವೃದ್ಧರು ಅಂಗವಿಕಲರು, ಒಂಟಿ ಜೀವನ ನಡೆಸುವ ಅಸಹಾಯಕರುಗಳನ್ನು ಗುರುತಿಸಿ ಅವರಿಗೆ ನೇರ ಊಟದ ಪಾಕೇಟ್ ಗಳನ್ನು ವಹಿಸಲು ಕ್ರಮ ಕೈಗೊಳ್ಳಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳ ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು.
ಒಟ್ಟು 7 ಅಂಶಗಳ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಸಿಎಂ ಯಡಿಯೂರಪ್ಪ ನವರಿಗೆ ಪತ್ರ ಬರೆದಿದ್ದಾರೆ.