ಬಿ. ಶ್ರೀಪಾದ ಭಟ್
1964-66ರ ಕೊಠಾರಿ ಆಯೋಗ ಸೇರಿದಂತೆ ಹಲವು ಶಿಕ್ಷಣ ತಜ್ಞರ ಆಯೋಗಗಳು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿ.ಡಿ.ಪಿ.) ಶೇ. 6 ರಷ್ಟನ್ನು ಶಿಕ್ಷಣಕ್ಕೆ ನೀಡಬೇಕು ಎಂದು ಶಿಫಾರಸ್ಸು ಮಾಡಿವೆ ಮತ್ತು ರಾಜ್ಯಗಳ ವಾರ್ಷಿಕ ಬಜೆಟ್ ವೆಚ್ಚದ ಶೇ. 26-30 ಪ್ರಮಾಣದಲ್ಲಿ ಶಿಕ್ಷಣಕ್ಕೆ ಮೀಸಲಿಡಬೇಕೆಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಕಸ್ತೂರಿ ರಂಗನ್ ಅದ್ಯಕ್ಷತೆಯ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2019ರ ಸಮಿತಿ ಮಂಡಿಸಿದ 484 ಪುಟಗಳ ಕರಡು ದಾಖಲೆಯಲ್ಲಿ ‘’ಶಿಕ್ಷಣದ ಮೇಲಿನ ಸಾರ್ವಜನಿಕ ಹೂಡಿಕೆಯು ಗಮನಾರ್ಹ ಏರಿಕೆಯನ್ನು ಮಾಡುವ ದೃಷ್ಟಿಕೋನ ಹೊಂದಿದ್ದು, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈಗಿರುವ ಶೇ. 10 ರಿಂದ ಶೇ. 20ಕ್ಕೆ ಏರಲಿದೆ’’ (ಪುಟ 403 A1.2.2. )…, ‘ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟುಗೂಡಿಸಿದರೆ ಶೇ. 20ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣ ಮೀಸಲಿಡಬೇಕು, ಪ್ರತಿ ವರ್ಷ ಶೇ. 1ರಷ್ಟು ಏರಿಕೆ ಮಾಡುತ್ತಾ ಬಂದರೂ ಸಹ ಮುಂದಿನ 10 ವರ್ಷಗಳಲ್ಲಿ ಶೇ. 20ರ ಪ್ರಮಾಣಕ್ಕೆ ತಲಪುತ್ತದೆ” (ಪುಟ 406 A1.3.1.) ಎಂದು ಹೇಳಿದೆ. ಖಾಸಗಿ ವಲಯಗಳ ಫಿಲಾಂಥ್ರಫಿಯ ಮೂಲಕವೂ ಹಣಕಾಸಿನ ನೆರವು ಪಡೆಯಬಹುದು. ಸಾರ್ವಜನಿಕ ವೆಚ್ಚವೆಂದರೆ ಕೇವಲ ಶಿಕ್ಷಣ ಇಲಾಖೆಯಲ್ಲ, ಜೊತೆಗೆ ಸಾರ್ವಜನಿಕ ಉದ್ದಿಮೆಗಳ ಸಿಎಸ್‌ಆರ್ ಫಂಡ್‌ನಿಂದ ಶೇ.1 ಪ್ರಮಾಣದ ಮೊತ್ತವನ್ನು ಶಿಕ್ಷಣಕ್ಕೆ ಬಳಸಿಕೊಳ್ಳಬಹುದು(ಪುಟ 407, A 1.3.1.2) ಎಂದಿದೆ.
ಆದರೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯಾವುದೇ ಸರಕಾರಗಳೂ ಸಾರ್ವಜನಿಕ ವೆಚ್ಚದ ಕುರಿತು ಕಾಳಜಿ ತೋರಿಸಿಲ್ಲ. ರಾಜಕೀಯ ಇಚ್ಚಾಶಕ್ತಿ ಪ್ರದರ್ಶನ ಮಾಡಲಿಲ್ಲ. 1968 ಮತ್ತು 1986 ಶಿಕ್ಷಣ ನೀತಿಗಳು ಪ್ರತಿಪಾದಿಸಿದಂತೆ ಮತ್ತು 1992ರ ಕ್ರಿಯಾ ಯೋಜನೆ ಪುನರುಚ್ಚರಿಸಿದಂತೆ ಶಿಕ್ಷಣಕ್ಕೆ ಜಿ.ಡಿ.ಪಿ. ಶೇ.6 ರಷ್ಟು ಎಂದಿಗೂ ಸಿಗಲಿಲ್ಲ ಎನ್ನುವುದು ವಾಸ್ತವ ಸಂಗತಿ. ಶಿಕ್ಷಣ ಆಯೋಗಗಳ ಶಿಫಾರಸ್ಸುಗಳು ಕೇವಲ ಬಾಯಿ ಮಾತಿನ ಔಪಚಾರಿಕ ಪದಗಳಾಗಿವೆ. ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಹುಮ್ಮಸ್ಸಿನಲ್ಲಿರುವ ಸರಕಾರಗಳು ಅದಕ್ಕಾಗಿ ಸಾರ್ವಜನಿಕ ವೆಚ್ಚದ ಕುರಿತು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹಂತಹಂತವಾಗಿ ಸಾರ್ವಜನಿಕ ಹೂಡಿಕೆಯಿಂದ ಹಿಂದೆ ಸರಿಯುತ್ತಿದೆ.
ಆದರೆ ಮತ್ತೊಂದೆಡೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಕಂಪ್ಯೂಟರ್‌ಗಳ ಕೊರತೆಯನ್ನು ನೀಗಿಸಲು ಸರಕಾರವು ಯಾವುದೇ ಬಗೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ಗಾಯದ ಮೇಲೆ ಬರೆ ಇಟ್ಟಂತೆ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಮೊತ್ತವನ್ನು ಸಹ ಕಡಿತಗೊಳಿಸುತ್ತಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ (2014-22) ಕೇಂದ್ರ ಸರಕಾರವು ತನ್ನ ಬಜೆಟ್ ವೆಚ್ಚದ ಶೇ. 3.30, ಜಿಡಿಪಿಯ ಸರಾಸರಿ ಶೇ.0.45 ಮೊತ್ತವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ.
ಕಳೆದ ಏಳು ವರ್ಷಗಳಲ್ಲಿ (2016-22) ಕರ್ನಾಟಕ ಸರಕಾರವು ತನ್ನ ಬಜೆಟ್ ವೆಚ್ಚದ ಸರಾಸರಿ ಶೇ 11.77, ಜಿಡಿಪಿಯ ಸರಾಸರಿ ಶೇ. 1.85 ಮೊತ್ತವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ.
ಮೇಲಿನ ಅಂಕಿ ಸಂಖ್ಯೆಗಳನ್ನು ವಿಶ್ಲೇಷಣೆ ಮಾಡಿದಾಗ ಕಳೆದ ಏಳು ವರ್ಷಗಳಲ್ಲಿ ಶಿಕ್ಷಣಕ್ಕೆ ಮೀಸಲಿಡುವ ಹಣದ ಮೊತ್ತ ಕಡಿಮೆಯಾಗುತ್ತಾ ಬಂದಿರುವುದು ನಿಚ್ಚಳವಾಗಿದೆ. 2014ರಲ್ಲಿ ಕೇಂದ್ರದ ಬಜೆಟ್‌ನ ಶೇ. 4.14ರಷ್ಟು ಮತ್ತು ಜಿಡಿಪಿಯ 0.53ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಒಂಬತ್ತು ವರ್ಷಗಳ ನಂತರ 2022ರಲ್ಲಿ ಕೇಂದ್ರದ ಬಜೆಟ್‌ನ ಶೇ. 2.6ರಷ್ಟು ಮತ್ತು ಜಿಡಿಪಿಯ 0.45ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಅಂದರೆ ಕ್ರಮವಾಗಿ ಶೇ.2 ಮತ್ತು ಶೇ.0.1ರಷ್ಟು ಕಡಿತಗೊಳಿಸಲಾಗಿದೆ. ಅದೇ ರೀತಿಯಲ್ಲಿ 2016ರಲ್ಲಿ ಕರ್ನಾಟಕದ ಬಜೆಟ್‌ನ ಶೇ. 13.4ರಷ್ಟು ಮತ್ತು ಜಿಡಿಪಿಯ 2.2ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಏಳು ವರ್ಷಗಳ ನಂತರ 2022ರಲ್ಲಿ ಕರ್ನಾಟಕದ ಬಜೆಟ್‌ನ ಶೇ.11.65ರಷ್ಟು ಮತ್ತು ಜಿಡಿಪಿಯ 1.72ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ. ಅಂದರೆ ಕ್ರಮವಾಗಿ ಶೇ. 1.75 ಮತ್ತು ಶೇ. 0.48ರಷ್ಟು ಕಡಿತಗೊಳಿಸಲಾಗಿದೆ. ಇದು ಪ್ರಭುತ್ವವು ಸಾರ್ವಜನಿಕ ಶಿಕ್ಷಣದಿಂದ ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಸೂಚಿಸುತ್ತದೆ.
ನಿಜದಲ್ಲಿ ರಾಜ್ಯ ಬಜೆಟ್‌ನ ಶೇ. 26ರಷ್ಟು ಮತ್ತು ಜಿಡಿಪಿಯ ಶೇ. 6ರಷ್ಟು ಹಣ ಹಂಚಿಕೆ ಮಾಡಬೇಕಾಗಿತ್ತು. ಆದರೆ ರಾಜ್ಯ ಸರಕಾರವು ಕ್ರಮವಾಗಿ ಶೇ. 14.23 ಮತ್ತು ಶೇ. 4.15ರಷ್ಟು ಕಡಿಮೆ ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಿದೆ. ಕೇಂದ್ರ ಬಜೆಟ್‌ನ ಶೇ. 15ರಷ್ಟು ಮತ್ತು ಜಿಡಿಪಿಯ ಶೇ. 6ರಷ್ಟು ಹಣ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೇಂದ್ರ ಸರಕಾರವು ಕ್ರಮವಾಗಿ ಶೇ. 11.6 ಮತ್ತು ಶೇ. 5.55ರಷ್ಟು ಕಡಿಮೆ ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಿದೆ. ಮುಖ್ಯವಾಗಿ ಕಳೆದ ಏಳು ವರ್ಷಗಳಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಹತ್ತು ಪಟ್ಟು ದುಬಾರಿಯಾಗಿದೆ. ವಿದ್ಯುತ್, ನೀರಿನ ವೆಚ್ಚವೂ ದುಬಾರಿಯಾಗಿದೆ. ಹಣದುಬ್ಬರವೂ ಹೆಚ್ಚಾಗಿದೆ. ಆದರೆ ಶಿಕ್ಷಣಕ್ಕಾಗಿ ಸರಕಾರದ ವೆಚ್ಚ ಮಾತ್ರ ಅರ್ಧದಷ್ಟು ಕಡಿಮೆಯಾಗಿದೆ.
ಕೇಂದ್ರ ಸರಕಾರವು 2022-23ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ 1,04,278 ಕೋಟಿ ಮೊತ್ತವನ್ನು ಹಂಚಿಕೆ ಮಾಡಿದೆ. ಇದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 63,449 ಕೋಟಿ (2021-22ರಲ್ಲಿ 54,873 ಕೋಟಿ) ಹಂಚಿಕೆ ಮಾಡಿದೆ. ಉನ್ನತ ಶಿಕ್ಷಣಕ್ಕೆ 40,810 ಕೋಟಿ (2021-22ರಲ್ಲಿ 38,350 ಕೋಟಿ ಹಂಚಿಕೆ ಮಾಡಿತ್ತು. ನಂತರ ಅದನ್ನು ಪರಿಷ್ಕರಿಸಿ 36,031 ಕೋಟಿಗೆ ಕಡಿತಗೊಳಿಸಿತ್ತು) ಹಂಚಿಕೆ ಮಾಡಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಸಮಗ್ರ ಶಿಕ್ಷಣ ಅಭಿಯಾನ್ ಗೆ 2022ರಲ್ಲಿ 37,383 ಕೋಟಿ ಹಂಚಿಕೆ ಮಾಡಿದ್ದಾರೆ. 2021ರಲ್ಲಿ 31,050 ಕೋಟಿ, 2020ರಲ್ಲಿ 38,750 ಕೋಟಿ ಹಂಚಿಕೆ ಮಾಡಿದ್ದರು. ಅಂದರೆ ಎರಡು ವರ್ಷಗಳಲ್ಲಿ 1367 ಕೋಟಿ ಕಡಿತಗೊಳಿಸಿದ್ದಾರೆ.
2022ರಲ್ಲಿ ಸ್ಕಾಲರ್ಶಿಪ್‌ಗೆ 350 ಕೋಟಿ ಹಂಚಿಕೆ ಮಾಡಿದ್ದಾರೆ. 2021ರಲ್ಲಿ 350 ಕೋಟಿ, 2020ರಲ್ಲಿ 375 ಕೋಟಿ ಹಂಚಿಕೆ ಮಾಡಿದ್ದರು. ಅಂದರೆ ಎರಡು ವರ್ಷಗಳಲ್ಲಿ 25 ಕೋಟಿ ಕಡಿತಗೊಳಿಸಿದ್ದಾರೆ.
2022ರಲ್ಲಿ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಮೊತ್ತವನ್ನು ಕೊಟ್ಟಿಲ್ಲ. 2021ರಲ್ಲಿ 1 ಕೋಟಿ, 2020ರಲ್ಲಿ 110 ಕೋಟಿ ಹಂಚಿಕೆ ಮಾಡಿದ್ದರು. ಅಂದರೆ ಎರಡು ವರ್ಷಗಳಲ್ಲಿ 110 ಕೋಟಿ ಕಡಿತಗೊಳಿಸಿದ್ದಾರೆ.
2022ರಲ್ಲಿ ಮದ್ಯಾಹ್ನದ ಬಿಸಿಯೂಟಕ್ಕೆ (ಪಿಎಮ್ ಪೋಷಣ್) 10,233 ಕೋಟಿ ಹಂಚಿಕೆ ಮಾಡಿದ್ದಾರೆ. 2021ರಲ್ಲಿ 11500 ಕೋಟಿ, 2020ರಲ್ಲಿ 11000 ಕೋಟಿ ಹಂಚಿಕೆ ಮಾಡಿದ್ದರು. ಅಂದರೆ ಒಂದು ವರ್ಷದಲ್ಲಿ 767 ಕೋಟಿ ಕಡಿತಗೊಳಿಸಿದ್ದಾರೆ
2020ರಲ್ಲಿ ಕೇಂದ್ರ ಸರಕಾರವು ಶಿಕ್ಷಣಕ್ಕೆ 99,311 ಕೋಟಿ ಮೊತ್ತವನ್ನು ಮೀಸಲಿಟ್ಟಿತು. ಆದರೆ ಕೋವಿಡ್ ನೆಪದಲ್ಲಿ ಅದನ್ನು ಪರಿಷ್ಕರಿಸಿ 85,089 ಕೋಟಿಗೆ ಕಡಿತಗೊಳಿಸಿತು. ಅಂದರೆ ಶಿಕ್ಷಣಕ್ಕೆ ಬಜೆಟ್ ಹಂಚಿಕೆಯಿಂದ 14,222 ಕೋಟಿಯನ್ನು ಕಡಿಮೆ ಮಾಡಿದೆ.
2021ರ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ 54,873 ಕೋಟಿ ಹಂಚಿಕೆ ಮಾಡಿದ್ದರು. 2020ರಲ್ಲಿ 59,845 ಕೋಟಿ ಕೊಟ್ಟಿದ್ದರು. ಅಂದರೆ ಒಂದು ವರ್ಷದಲ್ಲಿ 4971 ಕೋಟಿ ಕಡಿತಗೊಳಿಸಿದ್ದಾರೆ. ಈ ಭಾರಿ ಹಿನ್ನಡೆಯನ್ನು ಸರಿಪಡಿಸಲು ಅತಿ ಹೆಚ್ಚಿನ ಪ್ರಮಾಣದ ಸಾರ್ವಜನಿಕ ವೆಚ್ಚದ ಅವಶ್ಯಕತೆಯಿದೆ. ಒಂದೆಡೆ ಸರಕಾರಿ ಶಾಲೆಗಳು ಪ್ರಭುತ್ವದಿಂದ ಹಣಕಾಸಿನ ನೆರವಿಲ್ಲದೆ ದುರ್ಬಲಗೊಳ್ಳುತ್ತಿವೆ. ಆದರೆ ಪ್ರಭುತ್ವವು ತನ್ನ ಹೋಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಬದಲಿಗೆ ಶಿಕ್ಷಣವವನ್ನು ಖಾಸಗೀಕರಣಗೊಳಿಸುವತ್ತ ತನ್ನ ಎಲ್ಲಾ ಶ್ರಮವನ್ನು ವ್ಯಯಿಸುತ್ತಿದೆ.
ಕೇಂದ್ರ ಸರಕಾರದ ಬಜೆಟ್‌ನ ಶೇ.33ರಷ್ಟು ಸಮಗ್ರ ಶಿಕ್ಷಣ ಅಭಿಯಾನಕ್ಕೆ, ಸ್ವಾಯತ್ತತ ಸಂಸ್ಥೆಗಳಿಗೆ ಶೇ.12 ರಷ್ಟು, ಮದ್ಯಾಹ್ನದ ಬಿಸಿಯೂಟಕ್ಕೆ ಶೇ.12ರಷ್ಟು, ಕೇಂದ್ರೀಯ ವಿವಿಗಳಿಗೆ ಅನುದಾನ ಶೇ.8ರಷ್ಟು, ಐಐಟಿಗಳಿಗೆ ಶೇ.8ರಷ್ಟು, ಯುಜಿಸಿ & ಎಐಸಿಟಿಇಗೆ ಶೇ. 5ರಷ್ಟು ವೆಚ್ಚವಾಗುತ್ತದೆ. ರಾಜ್ಯ ಸರಕಾರಗಳ ಬಜೆಟ್‌ನ ಶೇ.72 ಪ್ರಮಾಣದ ಮೊತ್ತವು ಶಿಕ್ಷಕರ ವೇತನಕ್ಕೆ ಖರ್ಚಾಗುತ್ತದೆ. ಕರ್ನಾಟಕದಲ್ಲಿ 30000 ಶಿಕ್ಷಕರ ಹುದ್ದೆಗಳು ಖಾಲಿಯಿದೆ (1:30 ಅನುಪಾತದ ಆಧಾರದಲ್ಲಿ). ದೇಶದಾದ್ಯಂತ ಶೇ.10ರಷ್ಟು ಏಕೋಪಾದ್ಯಾಯ ಶಾಲೆಗಳಿವೆ. ಆದರೆ ಸರಕಾರವು ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿಲ್ಲ. ಆದರೆ ಅತ್ಯಂತ ಕಡಿಮೆ ಸಂಬಳದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶೇ.3ರಷ್ಟು ಮೊತ್ತ ಆಡಳಿತದ ವೆಚ್ಚ, ಶೇ.10ರಷ್ಟು ಶಾಲೆಯ ಮೂಲಭೂತ ಸೌಕರ್ಯ, ಗುಣಮಟ್ಟ ಮತ್ತು ಶಿಕ್ಷಕರ ತರಬೇತಿ ಶೇ.1ರಷ್ಟು ವೆಚ್ಚವಾಗುತ್ತಿದೆ. ಅಂದರೆ ಗುಣಮಟ್ಟ ಶಿಕ್ಷಣ, ಶಿಕ್ಷಕರ ತರಬೇತಿ, ಮೂಲಭೂತ ಸೌಕರ್ಯಗಳಿಗೆ ಶೇ. 30ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸು ನೆರವು ದೊರಕಬೇಕಿತ್ತು. ಆದರೆ ಕೇವಲ ಶೇ.11ರಷ್ಟು ಮಾತ್ರ ಕೊಡುತ್ತಿದ್ದಾರೆ. ಇದು ಮಕ್ಕಳ ವ್ಯಾಸಂಗಕ್ರಮದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉದಾಹರಣೆಗೆ 2018ರ ಸಮೀಕ್ಷೆಯ ಪ್ರಕಾರ ಎರಡನೇ ತರಗತಿಯಲ್ಲಿ ಪಠ್ಯವನ್ನು ಓದುವ ಸಾಮರ್ಥ್ಯದ ಪ್ರಮಾಣ ಸರಾಸರಿ 9.3ರಷ್ಟಿತ್ತು, 3ನೆ ತರಗತಿಯಲ್ಲಿ 20.9, 4ನೇ ತರಗತಿಯಲ್ಲಿ 34.2, 5ನೇ ತರಗತಿಯಲ್ಲಿ 44.2ರಷ್ಟಿದೆ. ಆದರೆ ಇದನ್ನು ಉತ್ತಮಗೊಳಿಸಲು ಶಿಕ್ಷಕರ ತರಬೇತಿಗೆ ಮತ್ತು ಕಲಿಕಾ ಉಪಕರಣಗಳಿಗೆ ಸರಕಾರವು ಹಣ ಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳು ಉಳಿಯುವ ಸಾದ್ಯತೆಗಳೇ ಇಲ್ಲ. ಶೇ.66ರಷ್ಟಿರುವ ಬಡ ಕುಟುಂಬದ ಮಕ್ಕಳು ಗಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಈ ಎಲ್ಲಾ ಹೆಳವಂಡಗಳು ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುತ್ತಿವೆ. ಜೊತೆಗೆ ಪ್ರತಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವರು ಶಿಕ್ಷಣದ ಡಿಜಟಲೀಕರಣದ ಕುರಿತು ಉತ್ಸಾಹದಿಂದ ಪ್ರಸ್ತಾಪಿಸುತ್ತಾರೆ. ಶಿಕ್ಷಣ ಸಚಿವರೂ ಸಹ ಭವಿಷ್ಯದಲ್ಲಿ ಶೇ.40 ಪ್ರಮಾಣದಲ್ಲಿ ಆನ್‌ಲೈನ್ ಕಲಿಕೆ ಅನಿವಾರ್ಯ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಶಿಕ್ಷಣಕ್ಕೆ ಅತಿ ಕಡಿಮೆ ಮೊತ್ತವನ್ನು ಮೀಸಲಿಡುತ್ತಾರೆ ಮತ್ತು ಡಿಜಿಟಲೀಕರಣಕ್ಕೆ ನಯಾಪೈಸೆಯೂ ಉಳಿಯುವುದಿಲ್ಲ. ಹಾಗಿದ್ದ ಪಕ್ಷದಲ್ಲಿ ಶೇ.40ರಷ್ಟು ಆನ್‌ಲೈನ್ ಹೇಗೆ ಸಾದ್ಯ ಎನ್ನುವ ಪ್ರಶ್ನೆಗೆ ಅದನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹೊರಗುತ್ತಿಗೆ ಕೊಡಲಾಗುತ್ತದೆ ಎಂಬುದೇ ಉತ್ತರ. ಈಗಾಗಲೇ ಶಿಕ್ಷಕರ ತರಬೇತಿಯನ್ನು ಶೇ. 90ರಷ್ಟು ಖಾಸಗಿ ಸಂಸ್ಥೆಗಳಿಂದ ದೊರಕುತ್ತಿದೆ. ಒಮ್ಮೆ ಆನ್‌ಲೈನ್ ಶಿಕ್ಷಣದ ಜವಬ್ದಾರಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಿದ ನಂತರ ಸರಕಾರಿ ಶಾಲೆಗಳ ಆಸ್ತಿತ್ವವೂ ಸಹ ಪರಿಗಣನೆಗೆ ಬರುವುದಿಲ್ಲ.
ಕೇಂದ್ರ ಸರಕಾರವು ಶಾಲಾ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಮೊತ್ತ ಮತ್ತು ನಂತರದ ವಾಸ್ತವದ ಹಂಚಿಕೆ
ಕೇಂದ್ರ ಸರಕಾರವು ಉನ್ನತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಮೊತ್ತ ಮತ್ತು ನಂತರದ ವಾಸ್ತವದ ಹಂಚಿಕೆ
ಮೇಲಿನ ಅಂಕಿಸಂಖ್ಯೆಗಳನ್ನು ವಿಶ್ಲೇಷಿಸಿದಾಗ ಕಳೆದ ಹತ್ತು ವರ್ಷಗಳಲ್ಲಿ ಶಾಲಾ ಶಿಕ್ಷಣಕ್ಕೆ 33,505 ಕೋಟಿ ಮೊತ್ತದ ಹಂಚಿಕೆಯನ್ನು ಕಡಿತಗೊಳಿಸಿದ್ದಾರೆ ಅಥವಾ ಬಳಸಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ 27,753 ಕೋಟಿ ಮೊತ್ತದ ಹಂಚಿಕೆಯನ್ನು ಕಡಿತಗೊಳಿಸಿದ್ದಾರೆ ಅಥವಾ ಬಳಸಿಕೊಂಡಿಲ್ಲ.
ಈ ಅಂಕಿ ಸಂಖ್ಯೆಗಳೇ ಎಲ್ಲವನ್ನೂ ಹೇಳುವುದರಿಂದ ಹೆಚ್ಚಿನ ನಿಶ್ಲೇಷಣೆಯ ಅಗತ್ಯವಿಲ್ಲವೆನಿಸುತ್ತದೆ
ಕಳೆದ ಆರು ವರ್ಷಗಳಲ್ಲಿ (2017-22) ದೆಹಲಿ ಸರಕಾರವು ತನ್ನ ಬಜೆಟ್ ವೆಚ್ಚದ ಸರಾಸರಿ ಶೇ 24.22, ಜಿಡಿಪಿಯ ಸರಾಸರಿ ಶೇ.1.82 ಮೊತ್ತವನ್ನು ಮೀಸಲಿಟ್ಟಿದೆ.
ಮೇಲಿನ ಅಂಕಿ ಸಂಖ್ಯೆಗಳನ್ನು ವಿಶ್ಲೇಷಿಸಿದಾಗ ದೆಹಲಿ ಸರಕಾರವು 2017-22ರ ಆರು ವರ್ಷಗಳ ಅವಧಿಯಲ್ಲಿ ಶಿಕ್ಷಣಕ್ಕೆ ಸರಾಸರಿ ಬಜೆಟ್ ವೆಚ್ಚದ ಶೇ.24.22ರಷ್ಟು ಹಂಚಿಕೆ ಮಾಡಿದೆ. ನಮ್ಮ ಕರ್ನಾಟಕ ಮತ್ತು ಕೇಂದ್ರ ಸರಕಾರದ ಹಂಚಿಕೆಗಳಿಗೆ ಹೋಲಿಸಿದರೆ ದೆಹಲಿ ಸರಕಾರವು ಶಿಕ್ಷಣಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸಿಲ್ಲದಿರುವುದು ಸ್ಪಷ್ಟವಾಗುತ್ತದೆ. ಇದು ಸ್ವಾಗತಾರ್ಹ ಬೆಳವಣಿಗೆ. ಸಾರ್ವಜನಿಕ ಶಿಕ್ಷಣದ ಕುರಿತಾಗಿ ಸಂಪೂರ್ಣ ನಿರ್ಲಕ್ಷ್ಯ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ದೆಹಲಿ ಸರಕಾರವು ಅದರ ಕುರಿತು ತನ್ನ ಬದ್ಧತೆಯನ್ನು ಪ್ರದರ್ಶಿಸಿರುವುದನ್ನು ಮೆಚ್ಚಿಕೊಳ್ಳಬೇಕಾಗುತ್ತದೆ. ಆದರೆ ದೆಹಲಿ ಸರಕಾರವು ಶಿಕ್ಷಣಕ್ಕೆ ಅಗತ್ಯವಿರುವ ಹಣವನ್ನು ಕೊಡುತ್ತಿದೆಯಾದರೂ ಸಹ ಸ್ವತಃ ಶಿಕ್ಷಣ ಇಲಾಖೆಯು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ, ಬದಲಿಗೆ ಬಹುತೇಕ ಜವಬ್ದಾರಿಗಳನ್ನು ಎನ್‌ಜಿಓಗಳಿಗೆ ಹೊರಗುತ್ತಿಗೆ ನೀಡುತ್ತಿದೆ. ಇದು ಸಮಸ್ಯಾತ್ಮಕವಾಗಿದೆ. ಮತ್ತೊಂದೆಡೆ 12ನೆ ತರಗತಿಯಲ್ಲಿ ಉತ್ತಮ ಫಲಿತಾಂಶವನ್ನು ತೋರಿಸಲು ಹಿಂದಿನ ತರಗತಿಗಳಲ್ಲಿ ಮಕ್ಕಳನ್ನು ಫೇಲು ಮಾಡುತ್ತಾರೆ ಎನ್ನುವ ಆರೋಪವಿದೆ. 2 ಜೂನ್ 2018ರ ‘ದ ಪ್ರಿಂಟ್’ ಅಂತರ್ಜಾಲ ಪತ್ರಿಕೆಯ ವರದಿಯ ಅನುಸಾರ 9ನೇ ತರಗತಿಯಲ್ಲಿ ಶೇ.50-45 ಪ್ರಮಾಣದ ವಿದ್ಯಾರ್ಥಿಗಳನ್ನು ಫೇಲು ಮಾಡಿದ್ದಾರೆ ಎಂದು ವರದಿಯಾಗಿದೆ. 2013ರಲ್ಲಿ ಶೇ.44, 2014ರಲ್ಲಿ ಶೇ.48.2, 2015ರಲ್ಲಿ ಶೇ.49.22, 2016ರಲ್ಲಿ ಶೇ.47.72ರಷ್ಟು ಪ್ರಮಾಣದಲ್ಲಿ ಫೇಲು ಮಾಡಲಾಗಿದೆ. 6-8ನೆ ತರಗತಿಯ ದೆಹಲಿ ಸರಕಾರಿ ಶಾಲೆಗಳನ್ನು ಪ್ರತಿಭಾ ವಿದ್ಯಾರ್ಥಿಗಳು, ಸರಾಸರಿಗಿಂತ ಕೆಳಗಿರುವ ವಿದ್ಯಾರ್ಥಿಗಳು, ಸರಾಸರಿ ವಿದ್ಯಾರ್ಥಿಗಳೆಂದು ಮೂರು ಶ್ರೇಣಿಗಳಲ್ಲಿ ವರ್ಗೀಕರಿಸಲಾಗಿದೆ. ಇಲ್ಲಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಶೇ.30ರಷ್ಟು ಮಾತ್ರ ಪಠ್ಯಕ್ರಮ ಬೋದಿಸುತ್ತಾರೆ. ಈ ವಿದ್ಯಾಥಿಗಳು 9ನೆ ತರಗತಿಗೆ ಬಂದಾಗ ಸಂಪೂರ್ಣ ಪ್ರಮಾಣದ ಪರೀಕ್ಷೆ ಬರೆಯಬೇಕಾಗುತ್ತದೆ ಮತ್ತು ಅಲ್ಲಿ ಫೇಲಾಗುತ್ತಾರೆ ಎಂದು ಆರೋಪಿಸಲಾಗಿದೆ.
ಆದರೆ ಆಪ್ ಸರಕಾರವು ಈ ಆರೋಪವನ್ನು ಅಲ್ಲಗೆಳೆಯುತ್ತಾ ಈ 9ನೆ ತರಗತಿಯ ಈ ಕಳಪೆ ಫಲಿತಾಂಶಕ್ಕೆ ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ 2011ರಲ್ಲಿ ಜಾರಿಗೊಂಡ 8ನೆ ತರಗತಿವರೆಗೆ ಫೇಲು ಮಾಡಬಾರದು (ಎನ್‌ಡಿಪಿ) ಎನ್ನುವ ನೀತಿ. ಎರಡನೆಯದು ಹಠಾತ್ತನೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ವಿಶೇಷ ಮುತುವರ್ಜಿ ವಹಿಸಿ ಬೋಧೀಸಬೇಕಾದ ಶಿಕ್ಷಕರು ಒತ್ತಡದಲ್ಲಿರುತ್ತಾರೆ. ಆದರೆ ಈ ಕುರಿತು ಮತ್ತಷ್ಟು ವಿಶ್ಲೇಷಣೆಯ ಅಗತ್ಯವಿದೆ.
ಉಪ ಸಂಹಾರ
ಶಿಕ್ಷಣದಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಮತ್ತು ಸರಕಾರವು ಸಾರ್ವಜನಿಕ ಶಿಕ್ಷಣದ ಸಬಲೀಕರಣಕ್ಕೆ ಮೊದಲ ಆದ್ಯತೆ ಕೊಡಬೇಕಾಗಿರುವುದು. ಈ ಎರಡೂ ಇಂದಿನ ದಿನಗಳಲ್ಲಿ ಅತ್ಯಂತ ಸವಾಲಿನ ಪ್ರಶ್ನೆಗಳು. ಇದಕ್ಕೆ ಪರಿಹಾರ ಸುಲಭವಂತೂ ಅಲ್ಲ. ಮೊದಲಿಗೆ ಪ್ರಭುತ್ವಕ್ಕೆ ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ. ಎರಡನೆಯದಾಗಿ ತನ್ನ ಶಿಕ್ಷಣದ ಖಾಸಗೀಕರಣ ನೀತಿಯಿಂದ ಹೊರಬರಬೇಕಾಗಿದೆ. ಮೂರನೆಯದಾಗಿ ಸಾರ್ವಜನಿಕ ವೆಚ್ಚಕ್ಕಾಗಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಬೇಕಾಗಿದೆ. ಕಳೆದ ಹತ್ತು ವರ್ಷಗಳಲ್ಲಿ 1 ಲಕ್ಷ ಕೋಟಿಗೂ ಅಧಿಕ ಶಿಕ್ಷಣ ಸೆಸ್‌ನ ಮೂಲಕ ತೆರಿಗೆ ಸಂಗ್ರಹಿಸಲಾಗಿದೆ. ಆದರೆ ಅದನ್ನು ಸಾರ್ವಜಿಕ ವೆಚ್ಚಕ್ಕೆ ಬಳಸಿಕೊಂಡಿಲ್ಲ. ಶೇ.1 ಪ್ರಮಾಣದಲ್ಲಿರುವ ಅತಿ ಶ್ರೀಮಂತರಿಗೆ ಶೇ.2 ಪ್ರಮಾಣದ ತೆರಿಗೆ ವಿಧಿಸುವುದರ ಮೂಲಕ ಸಂಗ್ರಹಿಸಿದ ಹಣವನ್ನು ಶಿಕ್ಷಣಕ್ಕೆ ಬಳಸಿಕೊಳ್ಳಬೇಕಾಗಿದೆ. ಮನಸ್ಸಿದ್ದರೆ ಮಾರ್ಗಗಳಿವೆ. ಅದರೆ ಒಲ್ಲದ ಮನಸ್ಸಿಗೆ ಯಾವುದೇ ಮಾರ್ಗಗಳು ಕಾಣುವುದಿಲ್ಲ. ಇದು ಇಲ್ಲಿನ ದುರಂತ.