1966 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ವಿಶಿಷ್ಠವಾದ ಸರ್ಕಾರಿ ಅನುಧಾನದಲ್ಲಿ ನಡೆಯುತ್ತಿರುವ ಸಂಸ್ಥೆ ಕಳೆದ 55 ವರ್ಷಗಳಿಂದ ಭಾರತದ ಶ್ರವಣ ದೋಷ (ಕಿವಿ ಕೇಳಿಸದೇ ಇರುವುದು ಅಥವ ಕಿವಿ ಸಂಬಂಧಿಸಿದ ಸಮಸ್ಯೆಗಳು) ಮತ್ತು ವಾಕ್ ದೋಷ (ಮಾತು ಬಾರದಿರುವುದು ಮತ್ತು ಗಂಟಲು ಸಂಭಂದಿಸಿದ ಸಮಸ್ಯೆಗಳು) ಇರುವ ಜನರಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.
– ಹೆಚ್.ಆರ್.ನವೀನ್ ಕುಮಾರ್, ಹಾಸನ.
ಸಾಂಸ್ಕೃತಿಕ ನಗರಿಗೆ ಪ್ರವೇಶ ಪಡೆಯುವುದು ಅಲ್ಲಿ ಅಡ್ಡಾಡುವುದೆಂದರೆ ಅದೇನೋ ಒಂದು ರೀತಿಯ ಮಾನಸಿಕ ನೆಮ್ಮದಿ, ಬೆಂಗಳೂರಿನಂತೆ ಯಾಂತ್ರಿಕ ಜೀವನಕ್ಕೆ ಮಾರುಹೋಗದ ಮೈಸೂರಿಗರು ನಗರವನ್ನು ಸುಂದರವಾಗಿಟ್ಟುಕೊಂಡಿರುವುದು ಮಾತ್ರವಲ್ಲದೆ ಮನಸ್ಸುಗಳನ್ನು ಅಷ್ಟೇ ಶಾಂತತೆಯಿಂದ ಇಟ್ಟುಕೊಂಡಿದ್ದಾರೆ.
ಇಂತಹ ನಗರದಲ್ಲಿ ಏಷ್ಯಾದಲ್ಲೇ ಹೆಸರುವಾಸಿಯಾದ ಒಂದು ಶಿಕ್ಷಣ ಸಂಸ್ಥೆ ಮತ್ತು ಚಿಕಿತ್ಸಾ ಕೇಂದ್ರವಿದೆ. ಈ ಸಂಸ್ಥೆಯ ಒಳಗೆ ಪ್ರವೇಶಿಸಿದರೆ ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿದೆ. ಎಲ್ಲಿಂದಲೇ, ಯಾರೇ ಬರಲಿ, ಯಾವ ಶಿಫಾರಸ್ಸು ಇಲ್ಲದೇ ಬರಲಿ ಎಲ್ಲರನ್ನು ಒಂದೇ ರೀತಿ ನೋಡುವ, ಅವರಿಗೆ ಅಗತ್ಯವಾದ ಸಲಹೆ, ಸಹಕಾರಗಳನ್ನು ನೀಡುವ ಅತ್ಯಂತ ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಿಬ್ಬಂದಿ ವರ್ಗ ಎಲ್ಲಡೆ ಕಾಣುತ್ತಾರೆ. ತನ್ನ ಸಮಸ್ಯೆಯನ್ನು ಹೇಳಿಕೊಂಡು ಒಬ್ಬರೇ ಬಂದರೂ ಸಾಕು ಅವರಿಗೆ ಎಲ್ಲ ರೀತಿಯ ಚಿಕಿತ್ಸಾ ನೆರವನ್ನು ಇಲ್ಲಿಯ ಸಿಬ್ಬಂದಿ ನೀಡುತ್ತಾರೆ.
ಈ ಸಂಸ್ಥೆಯೇ “ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ”, ಮೈಸೂರು.
All India Institute Of Speech and Hearing, Mysuru
32 ಎಕ್ಕರೆ ಭೂಪ್ರದೇಶದಲ್ಲಿ ವಿಸ್ತರಿಸಿರುವ ಇಡೀ ಕ್ಯಾಂಪಸ್ ಅಚ್ಚಹಸಿರಿನಿಂದ ಕೂಡಿದೆ ಮಾತ್ರವಲ್ಲ ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು. ಮೈಸೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಗೆ ಹೊಂದಿಕೊಂಡಂತಿರುವ ಈ ಸಂಸ್ಥೆಯು ಯಾವ ವಿದೇಶಿ ಖಾಸಗೀ ಶಿಕ್ಷಣ ಸಂಸ್ಥೆ ಅಥವಾ ಚಿಕಿತ್ಸಾಲಯಕ್ಕೆ (ಆಸ್ಪತ್ರೆ) ಏನೂ ಕಡಿಮೆಯಿಲ್ಲ. ಇಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ.
ಮೊದಲಿಗೆ ಟೋಕನ್ ತೆಗೆದುಕೊಂಡು ಒಳ ಪ್ರವೇಶಿಸಿದರೆ (ಟೋಕನ್‌ಗೆ ಹಣ ಇಲ್ಲ) ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಅವರ ಟೆಂಪರೇಚರ್ ದಾಖಲಿದಿಕೊಂಡು ಒಳಗೆ ಕಳುಹಿಸುತ್ತಾರೆ. (ಕರೋನಾ ಕಾರಣಕ್ಕೆ) ಪ್ರವೇಶ ದ್ವಾರದಲ್ಲಿಯೇ ಮೂರು ವಿಚಾರಣಾ ಕೌಂಟರ್ ಗಳಿವೆ. ಅಲ್ಲಿ ಗಾಜಿನ ಬಾಕ್ಸ್ ನಲ್ಲಿ ಕುಳಿತಿರುವವರು ಮೈಕ್ ಮೂಲಕ ರೋಗಿಯ ವಿವರಗಳನ್ನು ಪಡೆದು ಒಂದು ಅರ್ಜಿಯಲ್ಲಿ ಬರ್ತಿಮಾಡುತ್ತಾರೆ. ಅದಕ್ಕೆ ಸಹಿ ಹಾಕಿಸಿ ನೊಂದಣಿಯ ಕೌಂಟರ್ ಗೆ ಕಳುಹಿಸುತ್ತಾರೆ. ಅಲ್ಲಿ ಸಹಾಯಕ್ಕೆ ನಿಂತಿರುವ ಸಿಬ್ಬಂದಿ ನೊಂದಣಿಗೆ ಸಹಾಯ ಮಾಡುತ್ತಾರೆ. ನೊಂದಣಿಗೆ ಕೇವಲ 40 ರೂಪಾಯಿಗಳು.
ಅಲ್ಲಿಂದ ಸಮಸ್ಯೆಗೆ ಸಂಬಂಧಿಸಿದ ವಿಭಾಗಕ್ಕೆ ಒಬ್ಬರು ಸಿಬ್ಬಂದಿ ನೊಂದಣಿ ಫೈಲ್ ನೊಂದಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಹಂತ ಹಂತವಾಗಿ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಿ ಸಮಸ್ಯೆಗೆ ಕಾರಣವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುತ್ತಾರೆ. ಪ್ರತೀ ಹಂತದಲ್ಲಿ ಒಬ್ಬ ರೋಗಿಯ ಜೊತೆಗೆ ಒಬ್ಬ ಸಿಬ್ಬಂದಿ ಇರುತ್ತಾರೆ.
ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನದಿಂದ ಪರೀಕ್ಷೆಗಳನ್ನು ನಡೆಸಿದರೂ ಎಲ್ಲವೂ ಉಚಿತ, ಇದೇ ಪರೀಕ್ಷೆಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದರೆ ಸಾವಿರಾರು ರೂ ಖರ್ಚು. ಕ್ಯಾಂಪಸ್ ನಲ್ಲಿರುವ ಕ್ಯಾಂಟಿನ್ ನಲ್ಲಿ ಅತ್ಯಂತ ಶುಚಿ ಮತ್ತು ರುಚಿಕರವಾದ ಕಡಿಮೆ ದರದ ಊಟ, ತಿಂಡಿ, ಮಕ್ಕಳ ಜೊತೆ ಬಂದರೆ ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆ ಎಲ್ಲವೂ ಇದೆ.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮೈಸೂರು.
All India Institute Of Speech and Hearing, Mysuru
1966 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ವಿಶಿಷ್ಠವಾದ ಸರ್ಕಾರಿ ಅನುಧಾನದಲ್ಲಿ ನಡೆಯುತ್ತಿರುವ ಸಂಸ್ಥೆ ಕಳೆದ 55 ವರ್ಷಗಳಿಂದ ಭಾರತದ ಶ್ರವಣ ದೋಷ (ಕಿವಿ ಕೇಳಿಸದೇ ಇರುವುದು ಅಥವ ಕಿವಿ ಸಂಬಂಧಿಸಿದ ಸಮಸ್ಯೆಗಳು) ಮತ್ತು ವಾಕ್ ದೋಷ (ಮಾತು ಬಾರದಿರುವುದು ಮತ್ತು ಗಂಟಲು ಸಂಭಂದಿಸಿದ ಸಮಸ್ಯೆಗಳು) ಇರುವ ಜನರಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.
ಈ ಕ್ಯಾಂಪಸ್ ನಲ್ಲಿ ಕುಳಿತಿರುವಾಗ ನನಗೆ ಒಂದು ವಿಷಯ ಕಿವಿಗೆ ಬಿತ್ತು. ನನ್ನ ಪಕ್ಕದಲ್ಲಿ ಕುಳಿತಿದ್ದ ಚಾಮರಾಜನಗರದಿಂದ ಬಂದಿದ್ದ ಸರಿಸುಮಾರು 70 ವರ್ಷದ ಒಬ್ಬರು ತನ್ನ ಪಕ್ಕದಲ್ಲಿ ಮಡಿಕೇರಿಯಿಂದ ಬಂದವರಿಗೆ ಹೀಗೆ ಹೇಳುತ್ತಿದ್ದರು “ನನಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಯಾವುದ್ಯಾವುದೋ ಆಸ್ಪತ್ರೆಗಳಿಗೆಲ್ಲ ಓಡಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದೆ ಆದರೆ ಏನು ಪ್ರಯೋಜನವಾಗಲಿಲ್ಲ. ಇಲ್ಲಿಗೆ ಬಂದು ತೋರಿಸಿದ ಮೇಲೆ ಕಿವಿಗೆ ಒಂದು ಮಿಷನ್ ನೀಡಿದ್ದಾರೆ. ಈಗ ನನ್ನಗೆ ಕಿವಿ ಕೇಳಿಸುತ್ತಿದೆ. ಈ ಮಿಷನ್ ಹೊರಗಡೆ ಎಂಟು ಸಾವಿರ ರೂಪಾಯಿ ಇಲ್ಲಿ ಫ್ರೀಯಾಗಿ ಕೊಟ್ಟಿದ್ದಾರೆ” ಎಂದರು.
ಇದನ್ನು ಕೇಳಿದಾಗ ದೇಶದ ಎಲ್ಲ ಸಾರ್ವಜನಿಕ ಸಂಪತ್ತನ್ನ ಖಾಸಗೀಕರಣ ಮಾಡಲು ಹೊರಟ ಸರ್ಕಾರದ ಮೇಲೆ ಆಕ್ರೋಶ ಹೆಚ್ಚಾಯಿತು. ಸರ್ಕಾರ ತನ್ನ ಸ್ವಾಮ್ಯದ ಸಂಸ್ಥೆಗಳನ್ನು ಉಳಿಸಿ ಅವುಗಳನ್ನು ಉನ್ನತೀಕರಿಸಿ, ಬೆಳೆಸಿ ಜನಸಾಮಾನ್ಯರಿಗೆ ಸಹಾಯವಾಗುವಂತೆ ಮಾಡುವ ಬದಲು ಅದರಿಂದ ಲಾಭ ಮಾಡಿ ಜನರ ಶೋಷಣೆ ಮಾಡಲು ಹೊರಟಿದೆ.
ಮತ್ತೊಂದು ವಿಚಾರ ನನಗೆ ಹೊಳೆದದ್ದೇನೆಂದರೆ ಜನಸಾಮಾನ್ಯರ ಸಮಸ್ಯೆಗೆಳಿಗೆ ಕಿವಿಗೊಡದೆ ಕಿವುಡಾಗಿರುವ ಸರ್ಕಾರವನ್ನ, ಅದರ ನೇತೃತ್ವದಲ್ಲಿರುವ ಪ್ರಧಾನಿ, ಮಂತ್ರಿಗಳು, ಜನಪ್ರತಿನಿಧಿಗಳನ್ನ ಒಮ್ಮೆ ಇಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕು ಎನಿಸಿತು.
ಏನೇ ಇರಲಿ ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಅದರಿಂದ ದೇಶದ ಅಸಂಖ್ಯಾತ ಬಡ ಜನರಿಗೆ ಪ್ರಯೋಜನವಾಗುತ್ತದೆ. ಬದಲಿಗೆ ಇವುಗಳನ್ನು ಖಾಸಗೀಕರಿಸಿದರೆ ಕೆಲವರಿಗೆ ಮಾತ್ರ ಲಾಭವಾಗುತ್ತದೆ.