ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಖಾಸಗೀಕರಣ

ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ವಲಯಕ್ಕೆ ನೀಡಬಾರದು. ಇದನ್ನು ಸರ್ಕಾರವು ಆದ್ಯತೆಯ ಮೇಲೆ ನಿರ್ವಹಿಸಬೇಕು. ಇದಕ್ಕೆ ಸಂಪನ್ಮೂಲ ಕೊರತೆಯಾದರೆ ದೇಶದಲ್ಲಿರುವ ನೂರಾರು ಬಿಲಿಯನೇರುಗಳು ಮತ್ತು ಸಾವಿರಾರು ಮಿಲಿಯನೇರುಗಳ ಮೇಲೆ ಮುಲಾಜಿಲ್ಲದೆ ತೆರಿಗೆ ವಿಧಿಸಬೇಕು. ಖಾಸಗಿ ವಲಯದ  ರೆಗ್ಯುಲೇಶನ್ ಅತ್ಯಂತ ಅಗತ್ಯವಾದ ಕ್ರಮವಾಗಿದೆ. ಕೋವಿಡ್ ವಿರುದ್ಧ ವ್ಯಾಕ್ಸಿನ್ ನೀಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಒಕ್ಕೂಟ ಸರ್ಕಾರವು ಹಮ್ಮಿಕೊಳ್ಳಬೇಕು. ರಾಜ್ಯ ಸರ್ಕಾರಗಳಿಗೆ ಒಕ್ಕ್ಕೂಟ ಸರ್ಕಾರವು ಉಚಿತವಾಗಿ ವ್ಯಾಕ್ಸಿನ್ಗಳನ್ನು ಪೂರೈಸಬೇಕು. ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬೃಹತ್ ಉಚಿತ ಆಹಾರ ಧಾನ್ಯ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಇದು ಸಾರ್ವಜನಿಕಸಾರ್ವತ್ರಿಕ ಕಾರ್ಯಕ್ರಮವಾಗಬೇಕು. ಸರ್ಕಾರದ ಮೇಲೆ ಒತ್ತಡ ತರಲು ಸಿವಿಲ್ ಸೊಸೈಟಿಯ ಸಂಘಟನೆ, ಹಕ್ಕೊತ್ತಾಯಗಳು, ಜನಾಭಿಪ್ರಾಯ ರೂಪಿಸುವುದು, ಜನಜಾಗೃತಿ ಮುಖ್ಯವಾಗುತ್ತದೆ ಎಂಬ ಪ್ರೊ. ಟಿ.ಆರ್. ಚಂದ್ರಶೇಖರ ಬರಹ.

ನಮ್ಮ ದೇಶವು ಇಂದು ಅತ್ಯಂತ ಉಗ್ರವಾದ ಕೋವಿಡ್ ಪ್ರಣೀತ ಸಮಸ್ಯೆಯನ್ನು ಎದುರಿಸಲಾಗದೆ ಒದ್ದಾಡುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೋವಿಡ್ ಒಂದರ ಅಲೆಗಿಂತ ಅದೆಷ್ಟೋ ಪಟ್ಟು ಎರಡನೆಯ ಅಲೆಯು ತೀವ್ರ ಸ್ವರೂಪದ್ದಾಗಿದೆ. ಕೋವಿಡ್ ಮಹಾರೋಗವು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಅತಿಹೆಚ್ಚಿನ ಒತ್ತಡ ಉಂಟುಮಾಡಿದೆ. ಎಲ್ಲಿಯವರೆಗೆ ಎಂದರೆ ಅದು ಒತ್ತಡವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಮೊದಲ ಅಲೆಯ ನಂತರ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸುವುದಕ್ಕೆ ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವು ಅಕ್ಷಮ್ಯವಾಗಿದೆ. ಇಂದು ದೇಶದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣದಲ್ಲಿನ ವೈಫಲ್ಯಕ್ಕೆ ಅನೇಕ ಕಾರಣಗಳಿವೆ. ಕೋವಿಡ್ ಸೋಂಕಿನಿಂದ ಸಾವಿಗೀಡಾಗುವುದು ಒಂದು ಬಗೆ: ಔಷಧೋಪಚಾರ ದೊರೆಯದೆ. ಆಮ್ಲಜನಕರ ಅಲಭ್ಯತೆ/ಕೊರತೆಯಿಂದ ಜನರು ಅಸುನೀಗುವುದು ಇನ್ನೊಂದು ಬಗೆ. ಮೊದಲನೆಯದನ್ನು ಅರ್ಥ ಮಾಡಿಕೊಳ್ಳಬಹುದು. ಎರಡನೆಯ ಸರ್ಕಾರದ ವೈಫಲ್ಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಚಾಮರಾಜನಗರದಲ್ಲಿ, ಕಲಬುರಗಿಯಲ್ಲಿ, ಕೋಲಾರದಲ್ಲಿ ನಡೆದದ್ದು ಸರ್ಕಾರದ ವೈಫಲ್ಯದ ಘಟನೆಗಳಾಗಿವೆ.

ವ್ಯಂಗ್ಯಚಿತ್ರ ಕೃಪೆ : ಪಿ ಮಹಮ್ಮದ್‌

ಮೊದಲನೆಯದಾಗಿ ಯಾವತ್ತೂ ನಮ್ಮ ದೇಶದಲ್ಲಿ ಆರೋಗ್ಯ ಸೇವೆಯು ಅಭಿವೃದ್ಧಿ ಕಾರ್ಯಕ್ರಮದ ಆದ್ಯತೆಯ ಸಂಗತಿಯಾಗಿಲ್ಲ. ಯು.ಎನ್.ಡಿ.ಪಿ 1990 ರಿಂದಲೂ ಅಭಿವೃದ್ಧಿಯಲ್ಲಿ ವರಮಾನದಷ್ಟೇ ಶಿಕ್ಷಣ ಮತ್ತು ಆರೋಗ್ಯದ ಪಾತ್ರವಿದೆ ಎಂಬುದನ್ನು ಮಾನವ ಅಭಿವೃದ್ಧಿ ವರದಿಗಳ ಮೂಲಕ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದ ಮೂಲಕ ಸಾರಿ ಸಾರಿ ಹೇಳುತ್ತಾ ಬಂದಿದೆ. ಭಾರತದ ಅಭಿವೃದ್ಧಿ ವಿನ್ಯಾಸದ ಬಗ್ಗೆ ಮಾತನಾಡುತ್ತಾ ಅಮರ್ತ್ಯ ಸೆನ್ ಮತ್ತೆ ಮತ್ತೆ ಆರೋಗ್ಯ-ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೊರತೆಯ ಬಗ್ಗೆ ಗಮನ ಸೆಳೆಯುತ್ತಾ ಬಂದಿದ್ದಾರೆ. ಆದರೆ ಸರ್ಕಾರಗಳು ಅಭಿವೃದ್ಧಿಯಲ್ಲಿ ಆರೋಗ್ಯ ಸೇವೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಕಳೆದ ಮೂರು-ನಾಲ್ಕು ವರ್ಷಗಳಿಂದ ಎನ್.ಡಿ.ಎ ಸರ್ಕಾರವು ಬಂಡವಾಳ ಹೂಡಿಕೆ ಬಗ್ಗೆ, ಉದ್ದಿಮೆ ವಲಯದ ಪ್ರೋತ್ಸಾಹದ ಬಗ್ಗೆ, ಎಫ್‌ಡಿಐ ಬಗ್ಗೆ, ಜಿಡಿಪಿ ಬಗ್ಗೆ ಖಾಸಗಿ ವಲಯದ ಸದ್ಗುಣಗಳ ಬಗ್ಗೆ ಇನ್ನಿಲ್ಲದಂತೆ ಮಾತನಾಡುತ್ತಿದೆಯೇ ವಿನಾ ಆರೋಗ್ಯ ಸೇವೆಯ, ಸಾರ್ವಜನಿಕ ಆರೋಗ್ಯ ಮೂಲ ಸೌಲಭ್ಯಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಿಲ್ಲ. ಸರ್ಕಾರಕ್ಕೆ ವೆಲ್ಥ್ ಕ್ರಿಯೇಟರ‍್ಸ್‌ (ಉದ್ದಿಮೆದಾರರು-ಬಂಡವಾಳಿಗರು) ಆದ್ಯತೆಯಾದರೆ ವಿನಾ ಆರೋಗ್ಯ-ವೈದ್ಯಕೀಯ ವ್ಯವಸ್ಥೆಯಲ್ಲ. ಕಾರ್ಮಿಕರು, ದುಡಿಮೆಗಾರರು, ಬೀದಿಬದಿಯ ವ್ಯಾಪಾರಗಾರರು, ತಲೆಮೇಲೆ ಹೊತ್ತುಕೊಂಡು ಮಾರಾಟ ಮಾಡುವವರ ಬಗ್ಗೆ ಈ ಸರ್ಕಾರಕ್ಕೆ ಒಂದಿನಿತು ಕರುಣೆಯಿಲ್ಲ.

ಇದನ್ನು ಓದಿ: ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…

ಎರಡನೆಯದಾಗಿ, ಇಂದಿನ ಒಕ್ಕೂಟ ಸರ್ಕಾರಕ್ಕೆ ‘ಸಾರ್ವಜನಿಕ ವಲಯ’ದ ಬಗ್ಗೆ ಗೌರವವಿಲ್ಲ. ಈ ಕಾರಣಕ್ಕೆ ಅದು ಆರ್ಥಿಕತೆಯ ಎಲ್ಲ ವಲಯಗಳನ್ನೂ(ಬ್ಯಾಂಕುಗಳು, ವಿಮೆ, ರೈಲುಸಾರಿಗೆ, ರಸ್ತೆಸಾರಿಗೆ ಮುಂತಾದವು) ಖಾಸಗೀಕರಣಕ್ಕೆ ಒಳಪಡಿಸುವ ಬಗ್ಗೆ ಉತ್ಸುಕವಾಗಿದೆ ಎಂಬುದು 2019-2020 ಮತ್ತು 2020-2021ರ ಒಕ್ಕೂಟ ಸರ್ಕಾರದ ಬಜೆಟ್ ಭಾಷಣಗಳನ್ನು ಅಧ್ಯಯನ ಮಾಡಿದರೆ ಅರ್ಥವಾಗುತ್ತದೆ(ಡಿಸ್‌ಇನ್‌ವೆಸ್ಟ್‌ಮೆಂಟ್). ಈ ಸರ್ಕಾರಕ್ಕೆ ಜನರ ಆರೋಗ್ಯಕ್ಕಿಂತ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಸೂಚ್ಯಂಕ ಮುಖ್ಯವಾಗಿದೆ. ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸುವುದರ ಬಗ್ಗೆ ಅದಕ್ಕೆ ಆಸಕ್ತಿಯಿಲ್ಲ ಮತ್ತು ಅದು ಅದಕ್ಕೆ ಆದ್ಯತೆಯ ಸಂಗತಿಯೂ ಅಲ್ಲ.

ಕೊರೊನಾ ಮಹಾರೋಗದಿಂದ ಜನರ ಹೆಣಗಳು ಬೀದಿ ಬೀದಿಯಲ್ಲಿ ಬೀಳುತ್ತಿರುವಾಗ, ಆಮ್ಲಜನಕದ ಅಲಭ್ಯತೆಯಿಂದ ಆಸ್ಪತ್ರೆಗಳ ಎದುರಿಗೆ ಜನರು ಪ್ರಾಣ ಬಿಡುತ್ತಿರುವಾಗ, ಜೀವರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವಾಗ, ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಎಂತಹ ನೀಚ ಕೆಲಸಕ್ಕೂ ಸಿದ್ಧವಿರುವಾಗ(ಶುಲ್ಕ ಕಟ್ಟದಿದ್ದರೆ ಕಳೇಬರ ನೀಡುವುದಿಲ್ಲ) ನಮಗೆ ಸರ್ಕಾರಿ-ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮಹತ್ವ ಅರ್ಥವಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಮೂಲ ಉದ್ದೇಶ ತನ್ನ ಶೇರುದಾರರಿಗೆ ಲಾಭಾಂಶವನ್ನು ಕೊಡುವುದೊ ಅಥವಾ ಸಾರ್ವಜನಿಕರಿಗೆ ಸೇವೆ ನೀಡುವುದೋ? ಎರಡನೆಯ ಉದ್ದೇಶಕ್ಕಾಗಿ ಜನರ ಸೇವೆಗೆ ಮುಂದಾಗಿ ಎಂದು ಖಾಸಗಿ ಆಸ್ಪತ್ರೆಗಳನ್ನು ಸರ್ಕಾರಗಳು ಬೇಡುವ ಸ್ಥಿತಿ ಬಂದಿದೆ. ಖಾಸಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಬಡವರು, ಕೂಲಿಕಾರರು, ಕಾರ್ಮಿಕರು, ಬೀದಿಬದಿ ವ್ಯಾಪಾರಗಾರರು ದುಬಾರಿ ಹಣ ನೀಡಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದು ಸಾಧ್ಯವೇ?

ನಮ್ಮ ಸಂವಿಧಾನದ ಪರಿಚ್ಛೇದ 21 ರಲ್ಲಿ ಜನರಿಗೆ ಜೀವಿಸುವ ಹಕ್ಕನ್ನು ನೀಡಿದೆ. ಇಂದು ರಾಜಾರೋಷವಾಗಿ ಈ ಸಂವಿಧಾನಾತ್ಮಕ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ಪರಿಚ್ಛೇದ 21 ರ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಸರ್ವೋಚ್ಛ ನ್ಯಾಯಾಲಯವು ಅನೇಕ ಬಾರಿ ಜೀವಿಸುವ ಹಕ್ಕು ‘ಯೋಗ್ಯ ರೀತಿ ಜೀವಿಸುವುದು’ ಎಂಬುದನ್ನು ಒಳಗೊಂಡಿದೆ ಎಂದು ಹೇಳಿದೆ. ಜನರ ಜೀವ ಉಳಿಸುವುದರಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ ಮಾತ್ರವಲ್ಲ. ಆಮ್ಲಜನಕದ ಅಲಭ್ಯತೆ/ಕೊರತೆ, ಜೀವರಕ್ಷ ಔಷಧಿಗಳ ಕೊರತೆಯಿಂದ ಅಸು ನೀಗಿದ ನತದೃಷ್ಟ ಜನರ ಹೆಣಗಳ ಯೋಗ್ಯ ರೀತಿಯ ಸಂಸ್ಕಾರಕ್ಕೂ ಅವಕಾಶ ನೀಡುವುದರಲ್ಲಿ ಸರ್ಕಾರಗಳು ಸೋತಿವೆ.

ಇದನ್ನು ಓದಿ: ನಗರಗಳಲ್ಲಿ ಉದ್ಯೋಗಕ್ಕಾಗಿ “ಡುಎಟ್” ಯೋಜನೆ

ಮೂರನೆಯದಾಗಿ ನಮ್ಮದು ಒಕ್ಕೂಟ(ಫೆಡರಲ್)ರಾಜಕೀಯ ವ್ಯವಸ್ಥೆ. ನಮ್ಮ ಸಂವಿಧಾನವು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಸಮಾನವಾದ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಮಹಾಕ್ರೈಸಿಸ್ ಸಂದರ್ಭದಲ್ಲಿ ಒಕ್ಕೂಟ(ಕೇಂದ್ರ) ಸರ್ಕಾರವು ರಾಜ್ಯ ಸರ್ಕಾರಗಳ ನೆರವಿಗೆ ಧಾವಿಸಬೇಕು. ಇಂದು ಭಾರತ ಸರ್ಕಾರವು ತನ್ನ ಸಂವಿಧಾನಾತ್ಮಕ ಒಕ್ಕೂಟ ತತ್ವವನ್ನು ಪಾಲಿಸುವುದಿರಲಿ, ಅದನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುತ್ತಿದೆ. ಉದಾ: ಒಕ್ಕೂಟ ಸರ್ಕಾರವು 1950ರಿಂದಲೂ ವಿವಿಧ ಮಾರಕ ರೋಗಗಳ ವಿರುದ್ಧ ರೋಗನಿರೋಧಕ ಚುಚ್ಚುಮದ್ದನ್ನು(ಸಿಡುಬು, ಪೋಲಿಯೋ, ಹೆಪಿಟೈಟಿಸ್, ನಾಯಿಕೆಮ್ಮು(ಮೆಸೆಲ್ಸ್) ಮುಂತಾದವು) ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ದೇಶದಾದ್ಯಂತ ಉಚಿತವಾಗಿ ರಾಜ್ಯ ಸರ್ಕಾರಗಳ ಮೂಲಕ ನೀಡುತ್ತಾ ಬಂದಿದೆ. ಇಂದು ಕೋವಿಡ್ ಮಹಾದುರಂತದ ಸಂದರ್ಭದಲ್ಲಿ ಸಂಪನ್ಮೂಲ ದೃಷ್ಟಿಯಿಂದ(ಹಣಕಾಸು), ಅಧಿಕಾರದ ಮತ್ತು ಬೃಹತ್ ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ಒಕ್ಕೂಟ ಸರ್ಕಾರ ಅತ್ಯಂತ ಪ್ರಬಲ ಸ್ಥಿತಿಯಲ್ಲಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರಗಳು(ಜಿಎಸ್‌ಟಿಯಿಂದ, ಒಂದೇ ಸರ್ಕಾರ ಕೇಂದ್ರ-ರಾಜ್ಯದಲ್ಲಿರುವುದರಿಂದ, ಬಲಿಷ್ಟ ಕೇಂದ್ರ ನಾಯತ್ವವಿರುವುದರಿಂದ) ಅತ್ಯಂತ ದುರ್ಬಲ ಸ್ಥಿತಿಯಲ್ಲಿವೆ. ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಕೋವಿಡ್ ಮಹಾರೋಗವನ್ನು ನಿರ್ವಹಿಸುವ ಜಬಾವ್ದಾರಿಯನ್ನು ಹೇರಿರುವುದರಿಂದ ಅವು ಇದನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿವೆ.

ನಾಲ್ಕನೆಯದಾಗಿ ಕೋವಿಡ್ ಮಹಾರೋಗವು ಇಂದು ಉಲ್ಬಣಿಸಿರುವುದಕ್ಕೆ ಒಕ್ಕೂಟ ಸರ್ಕಾರವು ರೋಗವನ್ನು ನಿಯಂತ್ರಿಸುವುದಕ್ಕೆ ಆದ್ಯತೆ ನೀಡುವುದಕ್ಕೆ ಪ್ರತಿಯಾಗಿ ಚುನಾವಣೆ ಪ್ರಚಾರಕ್ಕೆ, ಬೃಹತ್ ಚುನಾವಣೆ ಸಭೆಗಳ ಆಯೋಜನೆಗಳಿಗೆ ಮತ್ತು ಜಾತ್ಯತೀತತೆಯನ್ನು ಗಾಳಿಗೆ ತೂರಿಬಿಟ್ಟಿರುವ ಒಕ್ಕೂಟ ಸರ್ಕಾರವು ಬೃಹತ್ ಧಾರ್ಮಿಕ ಸಮಾವೇಶಗಳಿಗೆ(ಕುಂಭಮೇಳ, ಜಾತ್ರೆಗಳು ಮುಂತಾದವು)ಅವಕಾಶ ನೀಡಿದ್ದು ಪ್ರಮುಖ ಕಾರಣವಾಗಿದೆ. ಇದಕ್ಕೆ ಇಂದಿನ ಒಕ್ಕೂಟ ಸರ್ಕಾರದ ನಾಯಕತ್ವ ಕಾರಣವಾಗಿದೆ. ಒಕ್ಕೂಟ ತತ್ವದ ಬಗ್ಗೆ ಇಂದಿನ ಒಕ್ಕೂಟ ಸರ್ಕಾರಕ್ಕೆ ಕಿಂಚಿತ್ತೂ ಗೌರವವಿಲ್ಲ.

ನಾವೇನು ಮಾಡಬೇಕು?

ಮೊಟ್ಟಮೊದಲನೆಯದಾಗಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ವಲಯಕ್ಕೆ ನೀಡಬಾರದು. ಇದನ್ನು ಸರ್ಕಾರವು ಆದ್ಯತೆಯ ಮೇಲೆ ನಿರ್ವಹಿಸಬೇಕು. ಇದಕ್ಕೆ ಸಂಪನ್ಮೂಲ ಕೊರತೆಯಾದರೆ ದೇಶದಲ್ಲಿರುವ ನೂರಾರು ಬಿಲಿಯನೇರುಗಳು ಮತ್ತು ಸಾವಿರಾರು ಮಿಲಿಯನೇರುಗಳ ಮೇಲೆ ಮುಲಾಜಿಲ್ಲದೆ ತೆರಿಗೆ ವಿಧಿಸಬೇಕು. ಇಂತಹ ಮಹಾದುರಂತದ ಸಂದರ್ಭದಲ್ಲಿ ಸಾರ್ವಜನಿಕ ವೆಚ್ಚವನ್ನು ಸಾಲ ತರುವ ಮೂಲಕ ಭರಿಸದೆ ತೆರಿಗೆ ವಿಧಿಸುವುದರ ಮೂಲಕ ನಿರ್ವಹಿಸಬೇಕು.

ಎರಡನೆಯದಾಗಿ ಖಾಸಗಿ ವಲಯವನ್ನು ಬಹಿಷ್ಕರಿಸುವ ಅಗತ್ಯವಿಲ್ಲ. ನಮ್ಮದು ಮೂಲತಃ ಮಿಶ್ರ ಆರ್ಥಿಕ ವ್ಯವಸ್ಥೆ. ಇಲ್ಲಿ ಖಾಸಗಿ ವಲಯಕ್ಕೆ ಅವಕಾಶವಿದೆ. ಆದರೆ ಖಾಸಗಿ ವಲಯವು ಅನಿಯಂತ್ರಿತ ವ್ಯವಸ್ಥೆಯಾಗಬಾರದು. ಇಂದು ಸರ್ಕಾರವು ಅನುಸರಿಸುತ್ತಿರುವ ಡಿರೆಗ್ಯುಲೇಶನ್ ಪಾಲಿಸಿಯಿಂದಾಗಿ ಖಾಸಗಿ ವಲಯವು ಪ್ರಬಲವಾಗಿ ಜನರ ಶೋಷಣೆಗೆ ಕಾರಣವಾಗುತ್ತದೆ. ಕೋವಿಡ್ ಮಹಾದುರಂತದಲ್ಲಿ ಅನಿಯಂತ್ರಿತ ಖಾಸಗಿ ಆರೋಗ್ಯ ವ್ಯವಸ್ಥೆಯು ಹೇಗೆ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬುದರ ನಿದರ್ಶನ ನಮ್ಮ ಮುಂದಿದೆ. ಆದ್ದರಿಂದ ಖಾಸಗಿ ವಲಯದ  ರೆಗ್ಯುಲೇಶನ್ ಅತ್ಯಂತ ಅಗತ್ಯವಾದ ಕ್ರಮವಾಗಿದೆ.

ಮೂರನೆಯದಾಗಿ ಮತ್ತು ಪ್ರಮುಖವಾಗಿ ಕೋವಿಡ್ ವಿರುದ್ಧ ವ್ಯಾಕ್ಸಿನ್ ನೀಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಒಕ್ಕೂಟ ಸರ್ಕಾರವು ಹಮ್ಮಿಕೊಳ್ಳಬೇಕು. ರಾಜ್ಯ ಸರ್ಕಾರಗಳಿಗೆ ಒಕ್ಕೂಟ ಸರ್ಕಾರವು ಉಚಿತವಾಗಿ ವ್ಯಾಕ್ಸಿನ್‌ಗಳನ್ನು ಪೂರೈಸಬೇಕು. ದೊಡ್ಡ ಪ್ರಮಾಣದಲ್ಲಿ ಇದನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕು. ಈ ಬಗ್ಗೆ ಒಕ್ಕೂಟ ಸರ್ಕಾರವು ಸೂಕ್ಷ್ಮ ಸಂವೇದನೆಯನ್ನು ತೋರುತ್ತಿಲ್ಲ. ಇದಕ್ಕಾಗಿ ಸರ್ಕಾರದ ಎಲ್ಲ ಇಲಾಖೆಗಳ ಸಂಪನ್ಮೂಲವನ್ನು ಸಂಘಟಿಸಿ ಕೋವಿಡ್ ತಡೆಯಲು ರಾಷ್ಟ್ರೀಯ ವ್ಯಾಕ್ಸಿನ್ ಕಾರ್ಯಕ್ರಮವನ್ನು ‘ಶತಮಾನದಲ್ಲಿ ಒಮ್ಮೆ’ ಎನ್ನುವ ರೀತಿಯಲ್ಲಿ ಆರಂಭ ಮಾಡಬೇಕು. ಕೋವಿಡ್ ಮಹಾದುರಂತಕ್ಕೆ ಸಂಬಂಧಿಸಿದ ಯಾವುದೇ ಕ್ರಮವನ್ನು ಒಕ್ಕೂಟ ಸರ್ಕಾರವು ರಾಜ್ಯಗಳ ಜೊತೆಯಲ್ಲಿ ಸಮಾಲೋಚಿಸಿ ಜಾರಿಗೊಳಿಸಬೇಕು.

ನಾಲ್ಕನೆಯದಾಗಿ ಕೋವಿಡ್‌ನಿಂದಾಗಿ, ಇದಕ್ಕೆ ಸಂಬಂಧಿಸಿದ ಲಾಕ್‌ಡೌನ್/ಕರ್ಪ್ಯೂ ಕಾರಣವಾಗಿ ಅಸಂಘಟಿತ ವಲಯದ ಲಕ್ಷಾಂತರ ದುಡಿಮೆಗಾರರ ವರಮಾನದ ಮೂಲ ಇಲ್ಲವಾಗಿದೆ. ನಿಜಕ್ಕೂ ಜನರು ಬೀದಿಗೆ ಬಿದ್ದಿದ್ದಾರೆ. ಹಸಿವಿನಿಂದ ಜನರು ನರಳುತ್ತಿದ್ದಾರೆ. ಇಂತಹ ದುರಂತದ ಸಂದರ್ಭದಲ್ಲಿ ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬೃಹತ್ ಉಚಿತ ಆಹಾರ ಧಾನ್ಯ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಇದು ಸಾರ್ವಜನಿಕ-ಸಾರ್ವತ್ರಿಕ ಕಾರ್ಯಕ್ರಮವಾಗಬೇಕು. ಜನಶಕ್ತಿಯ-ಶ್ರಮಶಕ್ತಿಯ ಪಾತ್ರವಿಲ್ಲದೆ ಕೋವಿಡ್ ನಂತರ ಆರ್ಥಿಕತೆಯನ್ನು ಮರುಕಟ್ಟುವುದು ಸಾಧ್ಯವಿಲ್ಲ. ಆರ್ಥಿಕತೆ ಎಂದರೆ ಕೇವಲ ಉದ್ದಿಮೆಗಾರರಲ್ಲ, ವ್ಯಾಪಾರಗಾರರಲ್ಲ, ಶೇರು ವ್ಯವಹಾರದಲ್ಲಿರುವವರು ಮಾತ್ರವಲ್ಲ. ಆರ್ಥಿಕತೆಯೆಂದರೆ ಶೇರು ಮಾರುಕಟ್ಟೆ ಮಾತ್ರವಲ್ಲ. ಆರ್ಥಿಕತೆಯ ಮೂಲ ದ್ರವ್ಯ ದುಡಿಮೆಗಾರರು. ನಮ್ಮ ದೇಶದಲ್ಲಿ ಅಂದಾಜು 40 ಕೋಟಿ ದುಡಿಮೆಗಾರರಿದ್ದಾರೆ. ಇವರ ಬಗ್ಗೆ ಸರಕಾರದ ಗಮನವಿರಬೇಕು. ಅಭಿವೃದ್ಧಿಯು ಇವರಿಗೆ ಅಭಿಮುಖಿಯಾಗಿರಬೇಕು. ಇವರು ನಿಜವಾದ ವೆಲ್ಥ್ ಕ್ರಿಯೇಟರ‍್ಸ್‌ ಆಗಿದ್ದಾರೆ. ಕೋವಿಡ್ ನಿಂದ ಹೆಚ್ಚು ದುರಂತಕ್ಕೆ ಒಳಗಾಗಿರುವ ವರ್ಗವೆಂದರೆ ಕಾರ್ಮಿಕ ವರ್ಗ.

ಕೊನೆಯದಾಗಿ ಇಂತಹ ಕ್ರೈಸಿಸ್‌ ಸಂದರ್ಭದಲ್ಲಿ ಮತ್ತು ಖಾಸಗಿವಲಯ ಬಲಿಷ್ಟವಾಗುತ್ತಿರುವಾಗ ಸಿವಿಲ್ ಸೊಸೈಟಿಯ ಪಾತ್ರ ನಿರ್ಣಾಯಕವಾಗಿರುತ್ತದೆ. ನಮ್ಮ ನಾಗರಿಕ ಸಮಾಜವು ಇಂದು ಎದ್ದು ನಿಲ್ಲಬೇಕಾಗಿದೆ. ಸರ್ಕಾರದ ಮೇಲೆ ಒತ್ತಡ ತರಲು ಸಿವಿಲ್ ಸೊಸೈಟಿಯ ಸಂಘಟನೆ, ಹಕ್ಕೊತ್ತಾಯಗಳು, ಜನಾಭಿಪ್ರಾಯ ರೂಪಿಸುವುದು, ಜನಜಾಗೃತಿ  ಮುಖ್ಯವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *