ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ವಿದ್ಯಾರ್ಥಿನಿ ರಕ್ಷಿತಾ ಬಾಯಿ(17 ವರ್ಷ) ಅವರ ಪೋಷಕರು ಅಂಗಾಂಗ ದಾನಕ್ಕೆ ಮುಂದಾಗಿ ಸಾರ್ಥಕತೆ ಮೆರೆದಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರ್ ನಾಯಕ್ ಮತ್ತು ಲಕ್ಷ್ಮಿ ಬಾಯಿ ದಂಪತಿಗಳ ಪುತ್ರಿ ರಕ್ಷಿತಾ ಬಾಯಿ ಚಿಕ್ಕಮಗಳೂರು ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ರಕ್ಷಿತಾ ಬಾಯಿ ಎಐಟಿ ವೃತ್ತದ ಸಮೀಪ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿತು.
ಆಯತಪ್ಪಿ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮೆದುಳು ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದಿತು. ಕೂಡಲೇ ಜಿಲ್ಲಾಸ್ಪತ್ರೆಯವರು ರಕ್ಷಿತಾ ಅವರ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ ಪಡೆದುಕೊಂಡರು.
ರಕ್ಷಿತಾ ಬಾಯಿ ಅವರ ಹೃದಯ, ಶ್ವಾಸಕೋಶ, ಲಿವರ್, ಮೂತ್ರಕೋಶ, ನೇತ್ರಗಳನ್ನು ದಾನ ಮಾಡಲಾಗುವುದು ಎಂದು ಪೋಷಕರಿಗೆ ತಿಳಿಸಲಾಯಿತು ಅವರು ಇದಕ್ಕೆ ಸಮ್ಮತಿ ಸೂಚಿಸಿದರು. ತಜ್ಞರ ತಂಡವು ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1 ಗಂಟೆವರೆಗೆ ಅಂಗಾಂಗಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದರು.
ಪತ್ರಿಕೆಯೊಂದಿಗೆ ವಿದ್ಯಾರ್ಥಿನಿ ತಾಯಿ ಲಕ್ಷ್ಮಿಬಾಯಿ ಮಾತನಾಡಿ, ನಮ್ಮ ಮಗಳು ಸಾಯಬಾರದು. ಹಲವು ವರ್ಷ ಬದುಕಬೇಕೆಂದು ಮಹಾದಾಸೆಯಿಂದ ಅವಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ಕಣ್ಣೀರು ಹಾಕಿದರು.
ಜೀವನ ಸಾರ್ಥಕ ಸಂಸ್ಥೆಯವರ ಮಾರ್ಗದರ್ಶನದಂತೆ ಅಗತ್ಯವಿರುವವರ ಅಂಗಗಳ ಜೋಡಣೆಗೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಅಂಗಾಂಗಳನ್ನು ರವಾನಿಸಲಾಯಿತು. ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು. ಆಂಬುಲೆನ್ಸ್ ಸಂಚಾರಕ್ಕೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ಬೇರ್ಪಡಿಸಲಾಗಿದೆ.
‘ಅಂಗಾಂಗ ತೆಗೆಯುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಈ ಪ್ರಕ್ರಿಯೆ ನಡೆಸಿದ ರಾಜ್ಯದ ಪ್ರಥಮ ಜಿಲ್ಲಾಸ್ಪತ್ರೆ ಇದು’ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್ ಕುಮಾರ್ ತಿಳಿಸಿದರು.
‘ಹೃದಯವನ್ನು 9 ವರ್ಷದ ವ್ಯಕ್ತಿಗೆ ಜೋಡಣೆ ಮಾಡಲು ಒಯ್ಯಲಾಗಿದೆ. ತೆಗೆದಿರುವ ಹೃದಯ, ನೇತ್ರ, ಮೂತ್ರ ಕೋಶ, ಯಕೃತ್ತನ್ನು ಒಟ್ಟು ಒಂಬತ್ತು ಮಂದಿಗೆ ಜೋಡಿಸಲು ಅವಕಾಶ ಇದೆ. ಶ್ವಾಸಕೋಶ ಜೋಡಣೆಗೆ ವ್ಯಕ್ತಿಯ ರಕ್ತ ಗುಂಪು, ದೈಹಿಕ ಅವಯವ ಹೊಂದಾಣಿಕೆಯಾಗಲ್ಲ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದರಿಂದ ಆ ಅಂಗ ತೆಗೆಯಲಿಲ್ಲ’ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಜಿಲ್ಲಾಡಳಿತದ ವತಿಯಿಂದ ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಅಂಗಾಂಗಗಳನ್ನುಕೊಂಡೊಯ್ಯಲು ಎರಡು ಹೆಲಿಕಾಪ್ಟರ್‌ಗಳನ್ನು ನಗರಕ್ಕೆ ಕರೆಸಿಕೊಳ್ಳಲಾಯಿತು. ಐಡಿಎಸ್‌ಜಿ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ವ್ಯವಸ್ಥೆಯೊಂದಿಗೆ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
ಹೆಲಿಕ್ಯಾಪ್ಟರ್ ಮುಖಾಂತರ ಚೆನ್ನೈ ಮತ್ತು ಇತರಡೆಗೆ ಅಂಗಾಂಗಗಳನ್ನು ಒಯ್ಯುಲಾಗುವುದು. ಇನ್ನು ಕೆಲವು ಅಂಗಾಂಗಗಳನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ವಾಹನದಲ್ಲಿ ಸಾಗಿಸಲಾಗುವುದು. ಈ ಸಂದರ್ಭದಲ್ಲಿ ಮಾರ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಅಂಗಾಂಗ ದಾನದ ಬಳಿಕ ದೇಹ ಹಸ್ತಾಂತರ
ಅಂಗಾಂಗ ತೆಗೆದ ಬಳಿಕ ಯುವತಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಯುವತಿ ಓದುತ್ತಿದ್ದ ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದರು, ಕಂಬನಿ ಮಿಡಿದರು.