ಸರ್ಮಾ ಜೀ! ‘ಬಲಿಷ್ಠ ನಾಯಕ’ರ ಮೂಗಿನ ಕೆಳಗೇ ಶ್ರದ್ಧಾ ಹತ್ಯೆ ಆಯಿತಲ್ಲ?!

ಬೃಂದಾ ಕಾರಟ್

ಭಾರತದ ರಾಜಧಾನಿಯಲ್ಲಿನ ಪೊಲೀಸರು ನೇರವಾಗಿ ಮೋದಿ ಎಂಬ “ಬಲಶಾಲಿ” ಸರ್ಕಾರದ ಅಡಿಯಲ್ಲಿದ್ದಾಗಲೇ ಶ್ರದ್ಧಾಳ ಹತ್ಯೆ ಮತ್ತು ಅದರ ನಂತರ ಅನೇಕ ಘಟನೆಗಳು ಸಂಭವಿಸಿದವು. ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ, ಈ ಸಂದರ್ಭದಲ್ಲಿ ‘ಬಲಿಷ್ಟ ನಾಯಕ’ ಎಲ್ಲಿದ್ದರು? ಅವರು ಮತ್ತು ಅವರ ಹಿಂಬಾಲಕರು, ಬಿಲ್ಕಿಸ್ ಬಾನು ಅತ್ಯಾಚಾರ ಮತ್ತು ನರಮೇಧದ ಘೋರ ಅಪರಾಧಿಗಳನ್ನು ಬಿಡುಗಡೆ ಮಾಡುವಲ್ಲಿ ನಿರತರಾಗಿದ್ದರು.  ಏಕೆಂದರೆ ಆ ಅಪರಾಧಿಗಳ ಹೆಸರು ಅಫ್ತಾಬ್ ಆಗಿರಲಿಲ್ಲ.

ಅಸ್ಸಾಂ ಮುಖ್ಯಮಂತ್ರಿ ಅವರ ಹಿತಮಿತ ಭಾಷೆಗೆ ಹೆಸರಾದವರಲ್ಲ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮನ್ನು ತಾವೇ ಮೀರಿಸಿದ್ದಾರೆ. ಗುಜರಾತಿನ ಸೂರತ್ ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಅವರು, ‘ಮೋದಿಗೆ ಮತ ನೀಡಿ-ದೇಶದಲ್ಲಿ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್ ನಂತಹ ಕೊಲೆಗಡುಕರು ಪ್ರತಿ ನಗರದಲ್ಲಿಯೂ ಹುಟ್ಟಿಕೊಳ್ಳುತ್ತಾರೆ, ನಮ್ಮ ಸಮಾಜವನ್ನು ಕಾಪಾಡಲು ಸಾಧ್ಯವಿಲ್ಲ’ ಎಂದರು. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಇಲಾಖೆಯ (ಎನ್‌ಎಫ್‌ಹೆಚ್‌ಎಸ್‌) ಸಮೀಕ್ಷೆಯ ಪ್ರಕಾರ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯದ ಪ್ರಮಾಣದಲ್ಲಿ ದೇಶದ ಐದು ರಾಜ್ಯಗಳಲ್ಲಿ ಒಂದರ (ಆಸ್ಸಾಂ) ನ ಮುಖ್ಯಮಂತ್ರಿ ಶ್ರೀ ಸರ್ಮಾ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ನಡೆದದ್ದಕ್ಕಿಂತಲೂ ಕಡಿಮೆ ವರದಿಯಾಗುವ, ಕೌಟುಂಬಿಕ ಹಿಂಸೆಯ ಸಮರ್ಥನೆಯೂ ಹೆಚ್ಚಿರುವ ರಾಜ್ಯಗಳಲ್ಲಿ ಒಂದು ಇದು. ಅವರು ಎಂದಾದರೂ ಸಾರ್ವಜನಿಕ ಹೇಳಿಕೆಗಳ ಮೂಲಕ ಅಥವಾ ಸರ್ಕಾರದ ನೀತಿಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದ್ದಾರೆಯೇ? ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಕೌಟುಂಬಿಕ ಹಿಂಸಾಚಾರ ಮತ್ತು/ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎಂದು ಎನ್‌ಎಫ್‌ಹೆಚ್‌ಎಸ್‌-5 ತನ್ನ 2021ರ ವರದಿಯಲ್ಲಿ ದಂಗುಬಡಿಸುವ ಅಂಕಿ ಅಂಶವನ್ನು ಬಹಿರಂಗಪಡಿಸಿದೆ. ಪ್ರತಿಶತ 77ರಷ್ಟು ಮಹಿಳೆಯರುಈ ಸಮಸ್ಯೆಯನ್ನು ವರದಿ ಮಾಡದಿರುವುದು ಇನ್ನೂ ಹೆಚ್ಚು ಆತಂಕ ಮೂಡಿಸುವ ಸಂಗತಿಯಾಗಿದೆ.

ಬಲಿಷ್ಠ ನಾಯಕ ಎಲಿದ್ದರು?

ಭಾರತವು ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನವನ್ನು ಹೊಂದಿದೆ. ಸಂವಿಧಾನವನ್ನು ಅಳವಡಿಸಿಕೊಂಡ 73 ವರ್ಷಗಳ ನಂತರವೂ, ಮಹಿಳೆಯರ ವಿರುದ್ಧ ಪುರುಷರು ನಡೆಸುವ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಲ್ಲಿ ಆ ಖಾತರಿಯನ್ನು ಚೂರುಚೂರು ಮಾಡಲಾಗಿದೆ, ಅದರಲ್ಲಿ ಹೆಚ್ಚಿನ ಶೇಕಡಾವಾರು ಪ್ರಕರಣಗಳು ವರದಿಯಾಗಿಲ್ಲ. ಹೆಂಡತಿಯನ್ನು ಹೊಡೆಯುವ ಇವರೆಲ್ಲ ಅಫ್ತಾಬರೇ? ಈ ಎಲ್ಲಾ ಮದುವೆಗಳು “ಲವ್ ಜಿಹಾದ್” ಮದುವೆಗಳೇ?  ತಮ್ಮ ಮನೆಯಲ್ಲಿಯೇ ಏಕೆ ಮಹಿಳೆಯರು ಅಸುರಕ್ಷಿತರಾಗಿದ್ದಾರೆ? ಮುಖ್ಯಮಂತ್ರಿ ಪ್ರಕಾರ ಸಮಸ್ಯೆಗೆ ಪರಿಹಾರವಾದ ಬಲಿಷ್ಠ ನಾಯಕ ಎಲಿದ್ದರು? ಸರ್ಮಾ ಮುಂತಾದ ನಾಯಕರು; ಇಂತಹ ಅಪರಾಧಗಳ ಮೂಲ ಕಾರಣವನ್ನು ತಿಳಿಸುವ ಬದಲು ತಮ್ಮ ವಿಷಕಾರಿ ಇಸ್ಲಾಮೋಫೋಬಿಯಾವನ್ನು ಹೆಚ್ಚಿಸಲು ಅತ್ಯಂತ ಭಯಾನಕ ಅಪರಾಧವನ್ನು ಬಳಸುತ್ತಾರೆ, ಇದು ಈ ದೇಶಕ್ಕೆ ಅವಮಾನಕರವಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಅದೇ ರೀತಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯೂ ವಾಸ್ತವದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಭಾರತದ ರಾಜಧಾನಿಯಲ್ಲಿನ ಪೊಲೀಸರು ನೇರವಾಗಿ ಮೋದಿ ಎಂಬ “ಬಲಶಾಲಿ” ಸರ್ಕಾರದ ಅಡಿಯಲ್ಲಿದ್ದಾಗಲೇ ಶ್ರದ್ಧಾಳ ಹತ್ಯೆ ಮತ್ತು ಅದರ ನಂತರ ಅನೇಕ ಘಟನೆಗಳು ಸಂಭವಿಸಿದವು. ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ, ಇದು ದೇಶದ ಅತ್ಯಂತ ಅಸುರಕ್ಷಿತ ನಗರವಾಗಿ ಮಾರ್ಪಾಡಾಗಿದೆ. ಈ ಸಂದರ್ಭದಲ್ಲಿ ಬಲಿಷ್ಟ ನಾಯಕ ಎಲ್ಲಿದ್ದಾರೆ? ಅವರು ಮತ್ತು ಅವರ ನೆರಳಿನಂತಿರುವ ಚೇಲಾ ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಬಿಡುಗಡೆ ಮಾಡುವಲ್ಲಿ ನಿರತರಾಗಿದ್ದರು. ಏಕೆಂದರೆ ಅಪರಾಧಿಗಳ ಹೆಸರುಗಳು ಅಫ್ತಾಬ್ ಆಗಿರಲಿಲ್ಲ. ಮಹಿಳೆಯ ವಿರುದ್ಧ ಅಪರಾಧ ಎಸಗಿದ ಅಪರಾಧಿಯು ಅಫ್ತಾಬ್ ಅಥವಾ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಘೋರ ಕೊಲೆ/ಅತ್ಯಾಚಾರಗಳ ಅಪರಾಧಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧ್ಯೇಶಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ಟ್, ರಮೇಶ್ ಚಂದನ್‌ ಏನೇ ಆಗಿದ್ದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ; ಅಥವಾ ಹತ್ರಾಸ್‌ ನಲ್ಲಿ ಯುವ ದಲಿತ ಮಹಿಳೆಯ ಅತ್ಯಾಚಾರಿಗಳು ಮತ್ತು ಕೊಲೆಗಾರರಾದ ಸಂದೀಪ್, ರಾಮು, ಲವ್ಕುಶ್ ಮತ್ತು ರವಿ – ಯಾರೇ ಆಗಿದ್ದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಪರಾಧವನ್ನು ಕೋಮುವಾದಗೊಳಿಸುವುದು ಭಾರತದ ಕಾನೂನು ಚೌಕಟ್ಟಿನ ಮೇಲಿನ ಆಕ್ರಮಣವಾಗಿದೆ.

ಮಹಿಳೆಯರ ಬಗ್ಗೆ ಸೂಕ್ಷ್ಮ ಸಂವೇದನೆಯಿಲ್ಲದೇ ವ್ಯವಹರಿಸುವಲ್ಲಿ ಕೇವಲ ಅಸ್ಸಾಂ ಮುಖ್ಯಮಂತ್ರಿ ಮಾತ್ರವಲ್ಲ ಇನ್ನೂ ಅನೇಕರಿದ್ದಾರೆ. ಇಂತಹ ನಾಯಕರ ಸಾಲಿನಲ್ಲಿ ಮತ್ತೊಬ್ಬರು ಸೇರಿದ್ದಾರೆ. ಅವರೇ ಮೋದಿ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೌಶಲ್ ಕಿಶೋರ್. “ಶಿಕ್ಷಿತ ಹುಡುಗಿಯರು ಅಂತಹ ಸಂಬಂಧಗಳನ್ನು ಹೊಂದಬಾರದು. ಇಂತಹ ಘಟನೆಗಳಿಂದ ಅವರು ಪಾಠ ಕಲಿಯಬೇಕು. ಅವರು ತಮ್ಮ ಪೋಷಕರ ಅನುಮತಿಯೊಂದಿಗೆ ಯಾರೊಂದಿಗಾದರೂ ಇರಬೇಕು – ಮತ್ತು ಸಂಧವನ್ನು ನೋಂದಾಯಿಸಿಕೊಳ್ಳಬೇಕು.” ಎಂದು ಈ ಸಚಿವರು ಹೇಳಿದ್ದಾರೆ. ಈ ಮಹಿಳೆಯ ಕೊಲೆಗೆ ಅವಳನ್ನೇ ದೂಷಿಸಿರುವ ಅವರ ಹೇಳಿಕೆ ತೀವ್ರ ಖಂಡನೆಗ ಗುರಿಯಾದ್ದು ಸರಿಯಾಗಿಯೇ ಇದೆ.  ಇಂಥವರ ದೃಷ್ಟಿಯಲ್ಲಿ (1) ಅವಳು ತನ್ನ ಹೆತ್ತವರನ್ನು ಧಿಕ್ಕರಿಸಿ ತನ್ನ ಸಂಗಾತಿಯನ್ನು ಆರಿಸಿಕೊಂಡದ್ದು ತಪ್ಪಾಗಿದೆ. (2) ಅವಳು ಲಿವ್-ಇನ್ (ಮದುವೆಯಾಗದೆ ಜೊತೆಯಾಗಿ ವಾಸಿಸುವ) ಸಂಬಂಧದಲ್ಲಿರುವುದರ ಬದಲು ತನ್ನ ಸಂಬಂಧವನ್ನು ನೋಂದಾಯಿಸಿದ್ದರೆ, ಮದುವೆಯಾಗಿದ್ದರೆ, ಇದು ಸಂಭವಿಸುತ್ತಿರಲಿಲ್ಲ. (3) ವಿದ್ಯಾವಂತಳಾಗಿದ್ದರಿಂದ ಅವಳು ಇದನ್ನು ತಿಳಿದಿರಬೇಕಿತ್ತು. ಅವರ ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಏಕೆಂದರೆ ಸರ್ಕಾರದಲ್ಲಿರುವ ಯಾವ ವ್ಯಕ್ತಿಯೂ ಅಥವಾ ಪಕ್ಷದ ಯಾವ ನಾಯಕರೂ ಇದನ್ನು ನಿರಾಕರಿಸಿಲ್ಲ.

ವಿದ್ಯಾವಂತ ಮಂತ್ರಿಯವರಿಗೆ ಕಾನೂನು ತಿಳಿದಿಲ್ಲವೇ?

ಮಂತ್ರಿಯವರು ವಿದ್ಯಾವಂತರೆಂದೇ ಅಂದುಕೊಳ್ಳೋಣ, ಹಾಗಾಗಿ ಅವರಿಗೆ ಚೆನ್ನಾಗಿ ತಿಳಿದಿರಬೇಕಿತ್ತು. ಇತ್ತೀಚಿನ ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ಪ್ರಕರಣಗಳ ಕಚೇರಿ) ವರದಿಯ ಪ್ರಕಾರ ಕಳೆದ ವರ್ಷ (2021) ವರದಕ್ಷಿಣೆ/ಸಂಬಂಧಿತ ಸಾವುಗಳಲ್ಲಿ 6,589 ಮಹಿಳೆಯರು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಹೆಚ್ಚಿನವು “ಪೋಷಕರಿಂದ ಮಾಡಿದ ಮದುವೆಗಳೇ”. ಎನ್‌ಎಫ್‌ಹೆಚ್‌ಎಸ್‌ ಮಾಹಿತಿಯು ಮುಖ್ಯವಾಗಿ ಈ ವರ್ಗದಲ್ಲಿರುವ ಕುಟುಂಬಗಳದ್ದಾಗಿದೆ. ಮದುವೆಗಾಗಿ ನೀಡಿದ ಪೋಷಕರ ಅನುಮೋದನೆಯು ಈ ಯುವತಿಯರನ್ನು ಕೊಲ್ಲುವುದನ್ನು ಅಥವಾ ಮೂರನೇ ಒಂದು ಭಾಗದಷ್ಟು ಮಹಿಳೆಯರು ಎದುರಿಸುತ್ತಿರುವ ಕೌಟುಂಬಿಕ ಹಿಂಸೆಯನ್ನು ತಡೆದಿದೆಯೇ? ಇದಲ್ಲದೆ, ಸಚಿವರು ಕಾನೂನಿನ ಬಗ್ಗೆ ಸ್ವತಃ ಶಿಕ್ಷಣ ಪಡೆಯಬೇಕಿದೆ. ಕೌಟುಂಬಿಕ ಹಿಂಸಾಚಾರದ ದೂರುಗಳ ಪ್ರಕರಣಗಳಲ್ಲಿ ಲೀವ್ ಇನ್ ಸಂಬಂಧವನ್ನು ಕಾನೂನು ಮನ್ನಿಸುತ್ತದೆ. ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯವು ಎಲ್ಲಾ ಮಹಿಳೆಯರಿಗೆ, ಅವರು ವಿವಾಹಿತರಾಗಿರಲಿ ಅಥವಾ ಒಂಟಿಯಾಗಿರಲಿ- ಅವರ ಸಂತಾನೋತ್ಪತ್ತಿ ಸ್ವಾಯತ್ತತೆಯನ್ನು ಸಹ ಎತ್ತಿಹಿಡಿದಿದೆ.

ಈ ಸಚಿವರು ಮಾಡಿದಂತಹ ವಾದಗಳು ಆಕ್ಷೇಪಾರ್ಹವಾಗಿವೆ. ಏಕೆಂದರೆ ಅವರು ಹಿಂಸಾಚಾರಕ್ಕೆ ಅದಕ್ಕೆ ಬಲಿಯಾದವರನ್ನೇ ದೂಷಿಸುತ್ತಾರೆ, ಆದರೆ ಅವರು “ಅನುಮೋದಿತ” ವಿವಾಹಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಕೌಟುಂಬಿಕ ಹಿಂಸೆಯನ್ನು ಮರೆಮಾಚುತ್ತಾರೆ ಮತ್ತು ನಿರ್ಲಕ್ಷಿಸುತ್ತಾರೆ. ಪಿತೃಪ್ರಭುತ್ವದ ಲಕ್ಷ್ಮಣ ರೇಖೆಯನ್ನು ಶ್ರದ್ಧಾ ಉಲ್ಲಂಘಿಸಿದಂತೆ ಉಲ್ಲಂಘಿಸಿದರೆ ಅಂತಹ ಮಹಿಳೆಯ ಮೇಲಿನ ದೌರ್ಜನ್ಯವನ್ನು ಸಮರ್ಥಿಸುತ್ತಾರೆ. ಹುಡುಗಿಯರು ತಮ್ಮ ವಿರುದ್ಧದ ಹಿಂಸಾಚಾರವನ್ನು ವರದಿ ಮಾಡಲು ಮತ್ತು ಹಿಂಸಾತ್ಮಕ ಸಂಬಂಧದಿಂದ ಹೊರಬರಲು ಸಮಾಜದ ಪೂರ್ವಾಗ್ರಹದ ವರ್ತನೆಗಳು ಮತ್ತು ಸಾಮಾಜಿಕ ಕಳಂಕದ ಭಯವು ಹೆಚ್ಚಿನ ತಡೆಗೋಡೆಯಾಗಿದೆ.

ಅಫ್ತಾಬ್ ಪೂನಾವಾಲಾ ಮಾಡಿದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆ ಮತ್ತು ಆಕೆಯ ದೇಹವನ್ನು ತುಂಡರಿಸಿದ ಕ್ರೌರ್ಯವು, ಸರಣಿ ಅತ್ಯಾಚಾರಿಯೊಂದಿಗೆ ಅಮಾನವೀಯ ಸಂಬಂಧದಲ್ಲಿ ಸಿಲುಕಿರುವ ಯುವತಿಯ ಸಂಪೂರ್ಣ ದುರ್ಬಲತೆಯನ್ನು ತೋರಿಸಿದೆ. ಆಕೆಯ ಹಿತೈಷಿಗಳು ಮತ್ತು ಕೆಲಸದಲ್ಲಿರುವ ಆಕೆಯ ಸಹೋದ್ಯೋಗಿಗಳ ಸಾಕ್ಷ್ಯಗಳ ಪ್ರಕಾರ ಅವಳೊಂದಿಗಿನ ಪುನರಾವರ್ತಿತ ಹಿಂಸಾಚಾರಕ್ಕೆ ಗುರಿಯಾದ ತನ್ನ ಅನುಭವವನ್ನು ಅವರೊಂದಿಗೆ ಹಂಚಿಕೊಂಡಿದ್ದಾಳೆ, ಆದರೂ ಆ ಹಿಂಸಾಚಾರಕ್ಕೆ ಗುರಿಯಾದ ಸಂಬಂಧದಿಂದ ಹೊರತರಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈಗ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಆಕೆಯ ವಿರುದ್ಧದ ಹಿಂಸಾಚಾರದ ಸಾಕ್ಷ್ಯವನ್ನು ಆಕೆಯ ಸ್ನೇಹಿತರು ಎಂದಿಗೂ ಪೊಲೀಸರೊಂದಿಗೆ ಹಂಚಿಕೊಂಡಿರಲಿಲ್ಲ.

ಹಿಂಸಾತ್ಮಕ ಸಂಬಂಧದಿಂದ ಹೊರಬರುವ ಸ್ಥೈರ್ಯವನ್ನು ಮಹಿಳೆಯಲ್ಲಿ ಮೂಡಿಸುವ ವಾತಾವರಣ ಬೇಕು

ಪತಿವ್ರತೆಯ ಪರಿಕಲ್ಪನೆಯನ್ನು ಪ್ರಶ್ನಿಸುವ, ಅದರ ವಿರುದ್ಧ ದಂಗೆಯೇಳುವ ಅಥವಾ ಅಧೀನತೆಯ ವಿರುದ್ಧ ಮಾತನಾಡುವ ಮಹಿಳೆಯನ್ನು ದೂಷಿಸುವ ಸಂಸ್ಕೃತಿ, ಅಂತಹ ನಿಂದನೆಯನ್ನು ಸಾಮಾನ್ಯೀಕರಿಸುವ ಅಥವಾ ಸಹಿಸಿಕೊಳ್ಳುವ ಸಂಸ್ಕೃತಿಯಿಂದಲೇ ಕೌಟುಂಬಿಕ ಸಂಬಂಧದಲ್ಲಿ ಪುರುಷ ಹಿಂಸಾಚಾರಕ್ಕೆ ಬಲ ತುಂಬಿದೆ. ಮನುಸ್ಮೃತಿಯ ಮಾತಿನಲ್ಲಿ ಹೇಳುವುದಾದರೆ, “ಒಳ್ಳೆಯ ಮಹಿಳೆ ತನ್ನ ಪತಿಯನ್ನು ಯಾವಾಗಲೂ ದೇವರಂತೆ ಪೂಜಿಸಬೇಕು”. ನಮ್ಮ ಶಿಕ್ಷಣ ವ್ಯವಸ್ಥೆಯು ಯುವಜನರಲ್ಲಿ ಇಂತಹ ಆಲೋಚನೆಗಳನ್ನು ಕೆಡಹುವುದು ಒಟ್ಟಿಗಿರಲಿ, ಪ್ರಶ್ನಿಸುವುದದು ಸಹ ಇಲ್ಲ; ವ್ಯತಿರಿಕ್ತವಾಗಿ, ಗಂಡುಮಗನಿಗೆ ಆದ್ಯತೆಯ ಸಿದ್ಧಾಂತಗಳು ಮೇಲುಗೈ ಸಾಧಿಸುತ್ತವೆ. ಯುಜಿಸಿ ನಿರ್ದೇಶನಗಳ ನಿರ್ದೇಶನದಂತೆ ನಮ್ಮ ಮಕ್ಕಳಿಗೆ ಖಾಪ್ ಪಂಚಾಯತ್ ಗಳ ಅದ್ಭುತಗಳು, “ಗೌರವ ಹತ್ಯೆಯ ಘೋರ ಅಪರಾಧಗಳಲ್ಲಿ” ಅವರ ಪಾತ್ರಕ್ಕಾಗಿ ಸುಪ್ರೀಂ ಕೋರ್ಟಿನಿಂದ ದೋಷಾರೋಪಣೆಗೆ ಒಳಗಾದ ಖಾಪ್ ಪಂಚಾಯತ್ ಗಳು, ಜಾತಿವಾದಿ ಸಂಸ್ಥೆಗಳು ‘ಎಂತಹ ‘ಅದ್ಭುತಗಳು’ ಎಂದು ಯುಜಿಸಿ ನಿರ್ದೇಶನದ ಪ್ರಕಾರ ಕಲಿಸಬೇಕು ಎಂದು ಪ್ರೇರೇಪಿಸುವಂತಹ ಸಿದ್ಧಾಂತಗಳನ್ನು ಒಪ್ಪುವವರು ಇಂದು ಅಧಿಕಾರದಲ್ಲಿದ್ದಾರೆ.

ಕಳೆದ ದಶಕದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಯ ಚೌಕಟ್ಟು ಗಂಭೀರವಾದ ಹಿನ್ನಡೆಯನ್ನು ಕಂಡಿದೆ. ಸತ್ತುಹೋಗಿರುವ ಅತ್ಯಂತ ಪ್ರತಿಗಾಮಿ ಸಾಮಾಜಿಕ ಚಿಂತನೆಯನ್ನು, ಸ್ತ್ರೀಯರ ಸ್ವಾಯತ್ತತೆಯ ವಿರುದ್ಧ ಉತ್ತೇಜಿಸಲು ಯಾವುದೇ ಹಿಂಜರಿಕೆಯಿಲ್ಲದವರು ರಾಜಕೀಯ ಅಧಿಕಾರ ಪಡೆದಿರುವುದರಿಂದ, ಭಾರತದಲ್ಲಿ ಪಿತೃಪ್ರಭುತ್ವದ ಕಲ್ಪನೆಗಳು ಮತ್ತು ಆಚರಣೆಗಳು ಹೊಸ ಜೀವವನ್ನು ಪಡೆದುಕೊಂಡಿದೆ. ಮನುಸ್ಮೃತಿಯನ್ನು ಭಾರತದ ಸಂವಿಧಾನದ ಆಧಾರವನ್ನಾಗಿ ಬಯಸಿದ ಶಕ್ತಿಗಳು ಈಗ ಅಧಿಕಾರದಲ್ಲಿವೆ.  ಅಧಿಕಾರದಲ್ಲಿರುವವರು ಪ್ರಚಾರ ಮಾಡುತ್ತಿರುವ ಚಾಲ್ತಿಯಲ್ಲಿರುವ ಸಂಸ್ಕೃತಿಗಳು ಎಲ್ಲಿಯವರೆಗೆ ಇರುತ್ತವೆಯೋ, ಅಲ್ಲಿಯವರೆಗೆ ಭಾರತದ ಹೆಣ್ಣುಮಕ್ಕಳು ಸಂವಿಧಾನವು ಅವರಿಗಾಗಿ ಖಾತರಿಪಡಿಸಿದ – ಬದುಕುವ ಹಕ್ಕು – ಹಕ್ಕುಗಳನ್ನು ಚಲಾಯಿಸಲು ಮತ್ತು ಸಾಕಷ್ಟು ಹೋರಾಟದ ನಂತರ ಪಡೆದ ರಕ್ಷಣೆಯ ಕಾನೂನಿನ ಬಳಕೆ ಮಾಡಲು ಕಷ್ಟವಾಗುತ್ತದೆ. ತನ್ನ ಹೆತ್ತವರಿಂದ ಅನುಮೋದಿಸಲ್ಪಟ್ಟ ಸಂಬಂಧವೇ ಆಗಿರಲಿ ಅಥವಾ ಸ್ವಯಂ-ಆಯ್ಕೆಯ ಸಂಬಂಧವಾಗಲೀ – ಯಾವುದೇ ಮಹಿಳೆ ಸಂಬಂಧದೊಳಗೆ ಹಿಂಸೆಯನ್ನು ಎದುರಿಸಬೇಕಾಗಿಲ್ಲ. ಯುವತಿಯರಿಗೆ ಯಾವುದೇ ರೀತಿಯ ಸಂಬಂಧಗಳಿಂದ ದೂರ ಸರಿಯುವ ಶಕ್ತಿಯನ್ನು ನೀಡುವ ಸಮಾಜ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ನಾವು ನಿರ್ಮಿಸಬೇಕಾಗಿದೆ. ಇಂತಹ ಸಮಾಜವನ್ನು ನಿರ್ಮಿಸಿದ್ದರೆ ಇಂದು ಶ್ರದ್ಧಾ ನಮ್ಮೊಂದಿಗೆ ಇರುತ್ತಿದ್ದರು.

ಅನು: ಲವಿತ್ರ ವಸ್ತ್ರದ

Donate Janashakthi Media

Leave a Reply

Your email address will not be published. Required fields are marked *