ಸಿ. ಕುಮಾರಿ
ಮಂಡ್ಯ ಜಿಲ್ಲೆಗೆ `ಸಕ್ಕರೆ ನಾಡು’ ಎಂಬ ಹೆಸರು ತಂದು ಕೊಟ್ಟ ಮೈಷುಗರ್ ಕಾರ್ಖಾನೆಯು ದೇಶ, ರಾಜ್ಯ ಹಾಗೂ ಜಿಲ್ಲೆಯ ಆರ್ಥಿಕತೆಗೆ ಬಹು ದೊಡ್ಡ ಕೊಡುಗೆ ನೀಡಿದೆ. ಮೈಷುಗರ್ ಕಾರ್ಖಾನೆಯಿಂದ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಗಾದ ಅನುಕೂಲಗಳು ಇತಿಹಾಸದಲ್ಲಿ ಮಾಸದ ಸ್ಮರಣೀಯ ನೆನಪುಗಳಾಗಿ ಜನಮಾನಸದಲ್ಲಿ ಉಳಿದಿವೆ. ಇಂತಹ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಿಸಲು ಹೊರಟಿದ್ದ ಜಿಲ್ಲೆಯ ಸಂಸದರು ಹಾಗು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹೂಡಲಾದ ದೀರ್ಘ ಸಫಲ ಜನಾಂದೋಲನದ ಮೂಲಕ, ಜನರ ಆಸ್ತಿಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಲು ಸಾಧ್ಯವಾಗಿದೆ. ದೇಶದ ಸಂಪತ್ತನ್ನು ಮಾರಲು ಹೊರಟಿರುವ ಮೋದಿ ಸರ್ಕಾರದ ಈ ಕಾಲಘಟ್ಟದಲ್ಲಿ ಸಾರ್ವಜನಿಕ ಉದ್ದಿಮೆಗಳ ಉಳಿವಿನ ಹೋರಾಟದ ಸ್ಫೂರ್ತಿಯಾಗಿ ಮೈಷುಗರ್ ಹೋರಾಟ ಹೊಮ್ಮಿದೆ. ವ್ಯಾಪಕ ಜನವಿಭಾಗಗಳು ಮತ್ತು ವಿವಿಧ ಸಂಘಟನೆಗಳನ್ನು ಈ ಜನಾಂದೋಲನಕ್ಕೆ ಅಣಿ ನೆರೆಸಿದ್ದು, ಅದನ್ನು ವಿಫಲಗೊಳಿಸಲು ಜನರನ್ನು ದಾರಿತಪ್ಪಿಸಲು ಉದ್ಯಮಿ-ರಾಜಕಾರಣಿಗಳ ಶಾಸಕರ ಹುನ್ನಾರಗಳು, ವಿವಿಧಗುತ್ತಿಗೆ ವಿಧಾನದ ಮೂಲಕ ಖಾಸಗೀಕರಣದ ಅಪಾಯದ ಬಗ್ಗೆ ಅರಿವು ನೀಡುವಲ್ಲಿ ಜನಾಂದೋಲನದ ಸಫಲತೆ, ಜೊತೆಗೆ ಮೈಶುಗರ್ ನ ಸಾಧನೆಗಳ ಇತಿಹಾಸದ ರೋಚಕ ವಿವರಗಳಿಗಾಗಿ ಮುಂದೆ ಓದಿ.
ಮೈಷುಗರ್ ಹಿನ್ನೆಲೆ
ಹಳೇ ಮೈಸೂರು ಪ್ರಾಂತ್ಯದ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ನೂರಾರು ಮಾದರಿಗಳಲ್ಲಿ ಅಗ್ರಸ್ಥಾನ ಹೊಂದಿರುವ ಉದ್ದಿಮೆ ಮೈಷುಗರ್. ಕರ್ನಾಟಕದಲ್ಲಿ ಮೊಟ್ಟಮೊದಲ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಮೈಷುಗರ್ ಕಾರ್ಖಾನೆಯು ಪಾತ್ರವಾಗಿದೆ. ನಾಲ್ವಡಿಯವರ ದೂರದೃಷ್ಟಿಯ ಕಾರಣಕ್ಕಾಗಿ ಮಂಡ್ಯ ಜಿಲ್ಲೆಯ ರೈತರ ಆದಾಯ ಮತ್ತು ಜನರ ಆರ್ಥಿಕ ಬದುಕಿನ ಬೆನ್ನೆಲುಬಾಗಿರುವ ಮೈಷುಗರ್ ಕಾರ್ಖಾನೆಯು, ಜಿಲ್ಲೆಯ ಅಭಿವೃದ್ಧಿಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಹಳೇ ಮೈಸೂರು ಪ್ರಾಂತ್ಯಕ್ಕೆ ಕಿರೀಟದಂತಿರುವ ಕಾರ್ಖಾನೆಯು ವಾಣಿಜ್ಯ ದೃಷ್ಟಿಯಿಂದಲೂ ಜಿಲ್ಲೆಗೆ ಬಹು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಹಾಗೂ ಸಣ್ಣ ಹಿಡುವಳಿ ರೈತರ ಜೀವಾಳವಾಗಿದೆ. ಅಷ್ಟು ಮಾತ್ರವಲ್ಲ ರಾಷ್ಟ್ರ ಮತ್ತು ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಮಂಡ್ಯ ಜಿಲ್ಲೆಯು ‘ಸಕ್ಕರೆ ನಾಡು’ಎಂದು ಖ್ಯಾತಿ ಪಡೆಯಲು ಕಾರಣವಾಗಿದೆ. ಹಾಗೂ ಜಿಲ್ಲೆಯ ಜನರ ಸ್ವಾಭಿಮಾನದ ಸಂಕೇತವೂ ಹೌದು.
ಇದನ್ನು ಓದಿ: ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಾದ ಸರಕಾರ : ಟೆಂಡರ್ ಪ್ರಕ್ರಿಯೆ ರದ್ದಿಗೆ ರೈತರ ಆಗ್ರಹ
ದೇಶ ಸ್ವಾತಂತ್ರ್ಯಗೊಳ್ಳುವ ಮೊದಲೇ 1931ರಲ್ಲಿ ಇರ್ವಿನ್ ನಾಲೆಯ ಮೂಲಕ ಮಂಡ್ಯ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿ ನೀರಾವರಿಗೊಂಡಿತು. ರೈತರು ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆಯುವಂತೆ ಮಾಡಿ, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದು ಸೂಕ್ತವೆಂದು ಕೃಷಿ ವಿಜ್ಙಾನಿಯಾಗಿದ್ದ ಡಾ.ಲೆಸ್ಲಿ.ಸಿ. ಕೋಲ್ಮನ್ರವರು ಸರ್ಕಾರಕ್ಕೆ ವರದಿ ಸಲ್ಲಿಸಿದರು. ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಒಪ್ಪಿಗೆ ನೀಡಿ. ಹಾಗೂ ದಿವಾನರಾಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ರವರು, ಸರ್.ಎಂ. ವಿಶ್ವೇಶ್ವರಯ್ಯನವರು ಸಕ್ಕರೆ ಕಾರ್ಖಾನೆ ಆರಂಭಿಸಲು ಸಿದ್ದತೆ ನಡೆಸುವಂತೆ ತಿಳಿಸಿದರು. ಜೊತೆಗೆ ದೂರ ದೃಷ್ಟಿಯಲ್ಲಿ ಗ್ರಾಮೀಣ ಜನರ ಆರ್ಥಿಕತೆಯ ಬೆನ್ನುಲುಬಾಗಿ ಬೃಹತ್ತಾಗಿ ಕೃಷಿಯಾಧಾರಿತ ವಾಣಿಜ್ಯ ಉದ್ದಿಮೆ ಬೆಳವಣಿಗೆ ಹೊಂದಲು ಸಕಲ ನೆರವು ಒದಗಿಸಲು ತೀರ್ಮಾನಿಸಿದ ಪರಿಣಾಮ 20 ಲಕ್ಷದ ಷೇರು ಬಂಡವಾಳದೊಂದಿಗೆ ಜಾಯಿಂಟ್ ಸ್ಟಾಕ್ ಕಂಪನಿಯಾಗಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು 1933-34ರಲ್ಲಿ ರೈತರ ಸುಮಾರು 14,046 ಷೇರುದಾರರು ಹಾಗೂ ಸರ್ಕಾರದ ಹಣಕಾಸಿನ ಸಹಾಯದೊಂದಿಗೆ ಜಿಲ್ಲೆಯ ಅಭಿವೃದ್ಧಿಯ ದೂರದೃಷ್ಟಿಯ ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಇರುವ ಕೃಷಿಯಾಧಾರಿತ ಸಕ್ಕರೆ ಉದ್ದಿಮೆಯನ್ನು ಪ್ರಾರಂಭಿಸಲಾಗಿದೆ.
ಆಡಳಿತ ದಕ್ಷತೆ ಮತ್ತು ಆದಾಯದಾಯಕ ಉಪಉತ್ಪನ್ನಗಳು:
ಸುಸಜ್ಜಿತ ಯಂತ್ರೋಪಕರಣಗಳು ಹಾಗೂ ಅದರ ನಿರ್ವಹಣೆಯಲ್ಲಿ ಕೆಮಿಸ್ಟ್, ಎಂಜಿನಿಯರ್ಗಳು ಮತ್ತು ಆಡಳಿತ ವರ್ಗದ ದಕ್ಷತೆ, ಕಾರ್ಯಕ್ಷಮತೆ, ನಿಷ್ಠೆ, ಹಾಗು ಪ್ರಾಮಾಣಿಕತೆ, ಪಾರದರ್ಶಕತೆ ಅಂದು ಎದ್ದು ಕಾಣುತ್ತಿತ್ತು. ರೈತ-ಕಾರ್ಮಿಕರ ಪರಿಶ್ರಮದಿಂದ ಕಾರ್ಖಾನೆಯು ಅಭಿವೃದ್ಧಿ ಹೊಂದಿ, ದಿನ ಒಂದಕ್ಕೆ ಪ್ರಸ್ತುತ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಕೋ-ಜನರೇಷನ್ ಹಾಗೂ ಡಿಸ್ಟಿಲರಿ, ಆಮ್ಲಜನಕ ಘಟಕ, ಗ್ಲೂಕೋಸ್ ಮತ್ತು ಚಾಕೋಲೇಟ್ ನಂತಹ ಇನ್ನಿತರ ಉಪ ಉತ್ಪನ್ನಗಳನ್ನು ಉತ್ಪಾದಿಸಿದೆ. ಡಿಸ್ಟಿಲರಿ ಘಟಕವು ಕಾರ್ಖಾನೆಯ ಜೊತೆಯಲ್ಲಿಯೇ 1935 ರಲ್ಲಿಯೇ ಆರಂಭವಾಗಿ ಪ್ರತಿದಿನ 35 ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರತಿ ವರ್ಷ ಕನಿಷ್ಟ 200 ದಿನಗಳ ಕಾಲ ಕಾರ್ಯನಿರ್ವಹಿಸುವಷ್ಟು ಕಾಕಂಬಿ ಪ್ರಮಾಣವೂ ದೊರೆಯುತ್ತದೆ. ಇದರಿಂದ ಬರುವ ಲಾಭವು ಕಂಪನಿಯ ವ್ಯವಹಾರಗಳಿಗೆ ಅನುಕೂಲವಾಗುತ್ತದೆ. ಕಂಪನಿಯು ದಕ್ಷತೆಯ ಆಡಳಿತ ನಿರ್ವಹಣೆ ಇದ್ದ ಸಂದರ್ಭದಲ್ಲಿ, ಕಂಪನಿ ಉತ್ಪಾದಿಸುವ ಕಾಕಂಬಿಯಲ್ಲಿ ಅತಿ ಹೆಚ್ಚು ಸಕ್ಕರೆ ಅಂಶ ಹೊಂದಿದ್ದು, ಅದರಿಂದ ಇಳುವರಿಯಾಗಿ ಬದಲಾಯಿಸುವ ಮೂಲಕ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಮೈಷುಗರ್ನಲ್ಲಿ ಉತ್ಪಾದಿಸಲಾಗುತ್ತಿದ್ದ ರಂ ಇಂಡಿಯನ್ ಮೇಡ್ ಲಿಕ್ಕರ್ಸ್ (ಐಎಂಎಲ್) ರಕ್ಷಣಾ ಇಲಾಖೆಗೆ ಪೂರೈಕೆಯಾಗುತ್ತಿತ್ತು. ಮೈಷುಗರ್ನಲ್ಲಿ ಉತ್ಪಾದಿಲಾಗುತ್ತಿದ್ದ ಗೋಲ್ಡನ್ ಸಿರಪ್ ಇಂಗ್ಲೇಂಡಿನಲ್ಲಿ ಪ್ರಸಿದ್ಧಿ ಪಡೆದಿತ್ತು. 18 ವರ್ಷಕ್ಕೂ ಹೆಚ್ಚು ಶೇ.20, ಶೇ30 ರಷ್ಟು ಷೇರು ಡಿವಿಡೆಂಡನ್ನು ರೈತರಿಗೆ ನೀಡಿರುವ ಇತಿಹಾಸ ಮೈಷುಗರ್ ಹೊಂದಿದೆ. ಅಲ್ಲದೆ ಕೆಲವೊಮ್ಮೆ ವರ್ಷದಲ್ಲಿ 2 ಬಾರಿ ಕಾರ್ಮಿಕರಿಗೂ ಬೋನಸ್ ಕೊಟ್ಟಿರುವ ಉದಾಹರಣೆಯೂ ಇದೆ. ಹೀಗೆ ಮೈಷುಗರ್ ವೈಭವ ಜನರ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಗಳಾಗಿವೆ. ಅಷ್ಟು ಮಾತ್ರವಲ್ಲ ಮೈಷುಗರ್ ಆಡಳಿತ ಹಾಗೂ ಅದರ ಉತ್ಪನ್ನಗಳು ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತದೆ.
ಕಾರ್ಖಾನೆಯು ಬೆಂಗಳೂರಿನಲ್ಲಿ ಸ್ವಂತ ಕೇಂದ್ರ ಕಛೇರಿಯನ್ನು ಹೊಂದಿದ್ದು ಜಿಲ್ಲೆಯಲ್ಲಿ 237 ಎಕರೆಗೂ ಹೆಚ್ಚು ಸ್ಥಿರ-ಚರ ಆಸ್ತಿಯೊಟ್ಟಿಗೆ 16 ಫಾರಂಗಳನ್ನು ಹಾಗೂ ವಿದ್ಯಾ ಸಂಸ್ಥೆಗಳನ್ನು ಮತ್ತು ರೈತ ಸಮುದಾಯ ಭವನಗಳನ್ನು ಹೊಂದಿದೆ. ದೇಶ, ರಾಜ್ಯ ಹಾಗೂ ಜಿಲ್ಲೆಯ ಆರ್ಥಿಕತೆಗೆ ಮೈಷುಗರ್ ಕಾರ್ಖಾನೆಯು ಬಹು ದೊಡ್ಡ ಕೊಡುಗೆ ನೀಡಿದೆ. ದೇಶದ ಆರ್ಥಿಕ ಬೆಳವಣಿಗೆಯ ಚೈತನ್ಯವು ಸಾರ್ವಜನಿಕ ವಲಯದಲ್ಲಿದೆ ಎನ್ನುವುದನ್ನು ಹಲವು ಸಮೀಕ್ಷೆಗಳು ಈಗಾಗಲೇ ಸಾಕ್ಷೀಕರಿಸಿವೆ.
1950ರ ಸುಮಾರಿಗೆ 4000 ಕೆಲಸಗಾರರಿದ್ದು ದಿನವೊಂದಕ್ಕೆ 2000 ಟನ್ನಿಂದ ಪ್ರಾರಂಭವಾಗಿ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಅಂದು ಕಾರ್ಖಾನೆಯಲ್ಲಿಯೇ ಅಗತ್ಯ ವಿದ್ಯುತ್ ತಯಾರಾಗುತ್ತಿತ್ತು. (ಕೋ ಜನರೇಷನ್) ಹಲವು ಸಂದರ್ಭ ನಗರಕ್ಕೆ ವಿದ್ಯುತ್ ನೀಡಿರುವ ಉದಾಹರಣೆಗಳಿವೆ. ಕಾರ್ಮಿಕರಿಗೆ ವಸತಿ ಸೌಕರ್ಯ, ಉಚಿತ ಆಸ್ಪತ್ರೆ, ಶಾಲಾ-ಕಾಲೇಜುಗಳು, ಕ್ರೀಡಾಂಗಣ, ಟೆನಿಸ್ ಕೋರ್ಟ್, ಮಹಿಳಾ ಮತ್ತು ಪುರುಷರ ಪ್ರತ್ಯೇಕ ಕ್ಲಬ್ಗಳು, ಕೆ.ಆರ್.ಎಸ್.ನ ಬೃಂದಾವನ ನೆನಪಿಸುವ ವರ್ಣರಂಜಿತ ಕಾರಂಜಿಗಳು ಈ ವೈಭವದಲ್ಲಿ ಕಂಗೊಳಿಸಿದ, ಮೈಶುಗರ್ ಒಂದು ಬೃಹತ್ ಗ್ರಂಥವಾಗಿ ಬರೆಯುವ ಚಾರಿತ್ರಿಕ ಹಿನ್ನೆಲೆ ಉಳ್ಳದ್ದು. ಅಲ್ಲದೆ ದೂರದ ಊರುಗಳಿಂದ ಶಾಲೆಗೆ ಬರುತ್ತಿದ್ದ, ವಿದ್ಯಾರ್ಥಿಗಳಿಗೆ ಮೈಶುಗರ್ ಕಂಪನಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಮೈಶುಗರ್ ಕಂಪನಿಯು ಶೈಕ್ಷಣಿಕ ಅಭಿವೃದ್ಧಿಗೆ ಹೀಗೆ ತನ್ನ ಸಹಾಯ ಹಾಗೂ ಸಹಕಾರ ನೀಡುತ್ತಿತ್ತು. ಮೈಷುಗರ್ ಕಾರ್ಖಾನೆಯಿಂದ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಗಾದ ಅನುಕೂಲಗಳು ಇತಿಹಾಸದಲ್ಲಿ ಮಾಸದ ಸ್ಮರಣೀಯ ನೆನಪುಗಳಾಗಿ ಜನಮಾನಸದಲ್ಲಿ ಉಳಿದಿವೆ.
ಮೈಶುಗರ್ ನೆನಪಿನಂಗಳದ ತುಣುಕುಗಳು:
70 ವರ್ಷಗಳ ಹಿಂದೆ ಅಂದರೆ 1950 ಮತ್ತು 1954ರಲ್ಲಿ ಕನ್ನಂಬಾಡಿ ಕಟ್ಟೆ ತುಂಬದಿದ್ದ ಸಂದರ್ಭದಲ್ಲಿ 4 ವರ್ಷ ಕಾರ್ಖಾನೆ ಕೆಲಸ ನಿಲ್ಲಿಸಿದ್ರು, ವಿಪರೀತ ನಷ್ಟ ಅನುಭವಿಸಿದ್ದರೂ ಕೂಡ, ಯಾವ ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟಿಲ್ಲ. ವೇತನ ನೀಡಿರುವ ಹಾಗೂ ಷೇರುದಾರರಿಗೆ ಡಿವಿಡೆಂಡ್ ಕೊಟ್ಟಿರುವುದು ತುಂಬಾ ಶ್ಲಾಘನೀಯ ವಿಚಾರ. ರೈತರು ಬೆಳೆದ ಕಬ್ಬನ್ನು ತೂಕ ಹಾಕಿಸಲು ಜಿಲ್ಲೆಯ ನಾಲ್ಕು ರೈಲ್ವೆ ಸ್ಟೇಷನ್ಗಳಲ್ಲಿ ತೂಕದ ಮನೆಗಳನ್ನು(weigh bridge) ನಿರ್ಮಿಸಲಾಗಿದೆ. ಎಲಿಯೂರು, ಪಾಂಡವಪುರ, ಮದ್ದೂರು ಮತ್ತು ಹನಕೆರೆ ರೈಲ್ವೆ ಸ್ಟೇಷನ್, ರೈತರ ಹಿತವೇ ಮುಖ್ಯವಾಗಿದ್ದ ಕಾಲಘಟ್ಟದಲ್ಲಿ ತೂಕವಾದ ಕಬ್ಬನ್ನು ಕಾರ್ಖಾನೆಗೆ ಸಾಗಿಸುವ ವ್ಯವಸ್ಥೆಯನ್ನು ಕಂಪನಿ ತನ್ನ ವಾಹನಗಳಿಂದ ನಿರ್ವಹಿಸುತ್ತಿತ್ತು. ತೂಕದ ನಂತರ ರೈಲ್ವೆ ವ್ಯಾಗಿನ್ಗಳಿಗೆ ತುಂಬುತ್ತಿದ್ದರು, ತುಂಬಿದ ವ್ಯಾಗಿನ್ಗಳನ್ನು ಮಂಡ್ಯ ರೈಲ್ವೆ ಸ್ಟೇಷನ್ಗೆ ತಂದು ಬಿಡುತ್ತಿದ್ದರು. ಕೇನ್ಕ್ರಷರ್ವರೆಗೆ ತಲುಪಿಸಿದ ನಂತರ ಕೇನ್ ಕೇರಿಯರ್ಗೆ ತುಂಬುತ್ತಿದ್ದರು. ಡಿಸ್ಟಿಲರಿ ವಿಭಾಗದಲ್ಲಿ ಮದ್ಯಸಾರ (ಆಲ್ಕೋಹಾಲ್) ತಯಾರಾಗುತ್ತಿತ್ತು. ಅದನ್ನೇ ಕಂಪನಿಯ ಲಾರಿ, ಟ್ರ್ಯಾಕ್ಟರ್ ಮತ್ತು ರೈಲ್ವೆ ಎಂಜಿನ್ಗಳಿಗೆ ಪೆಟ್ರೋಲ್ ಬದಲಿಗೆ ಇಂಧನವಾಗಿ ಉಪಯೋಗಿಸಲಾಗುತ್ತಿತ್ತು.
ಇದನ್ನು ಓದಿ: ಮೈಶುಗರ್ ಕಾರ್ಖಾನೆ ಕೇವಲ 2 ವರ್ಷಗಳವರೆಗೆ ಮಾತ್ರ ಸರ್ಕಾರಿ ಒಡೆತನದಲ್ಲಿ!
ಪ್ರಾರಂಭದ ದಿನಗಳಲ್ಲಿ 3 ಲಕ್ಷ ಟನ್ನಿಂದ 10 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ಕಂಪನಿಯು ಕಬ್ಬಿನ ಇಳುವರಿ ಹೆಚ್ಚಿಸಲು ರೈತರಿಗೆ ನೆರವಾಗುವ ರೀತಿಯಲ್ಲಿ ಪ್ರೋತ್ಸಾಹಿಸುತ್ತಿದ್ದರು. ಹೆಚ್ಚಿನ ಇಳುವರಿ ಪಡೆದ ರೈತರಿಗೆ ಬಹುಮಾನ ನೀಡುವ ಮೂಲಕ ರೈತರ ಬೆನ್ನು ತಟ್ಟುತ್ತಿದ್ದರು. ಮೈಶುಗರ್ ಒಡೆತನದಲ್ಲಿ ಸುಮಾರು 16 ಫಾರಂಗಳಿವೆ. 50,000 ಎಕರೆಯಲ್ಲಿ ವರ್ಷಕ್ಕೆ 10 ರಿಂದ 12 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. ಅದರಲ್ಲಿ ಮೈಶುಗರ್ ಕಾರ್ಖಾನೆಗೆ 8 ಲಕ್ಷ ಟನ್ ಒಪ್ಪಿಗೆ ಆಗಿದ್ದು ಕಬ್ಬು ಕಟಾವಿಗೆ ಸಿದ್ದವಿದೆ. ಆದರೆ ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಖಾಸಗೀಕರಿಸಲು ಹೊರಟಿದ್ದ ಜಿಲ್ಲೆಯ ಸಂಸದರು ಹಾಗು ಯಡಿಯೂರಪ್ಪ ಸರ್ಕಾರ, ಮೈಶುಗರ್ ಹಿರಿಮೆಯನ್ನು ನಾಶ ಮಾಡಲು ಕೈಹಾಕಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಪರಿಶ್ರಮ, ಕೋಲ್ಮನ್ರವರ ಆಶಯವನ್ನು ಮಣ್ಣುಪಾಲು ಮಾಡಲು ಬಿಡುವುದಿಲ್ಲ ಎನ್ನುವ ಜನರ ಕೂಗು ಮುಗಿಲೆತ್ತರಕ್ಕೆ ಇದೆ ಎನ್ನುವುದನ್ನು, ಬೊಮ್ಮಾಯಿ ಸರ್ಕಾರ ಕೊನೆಗೂ ಮನಗಾಣಬೇಕಾಯಿತು.
ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆಗಾಗಿ ಮನವರಿಕೆ:
2020ರ ಜನವರಿಯಲ್ಲಿ ಅಂದಿನ ಸಚಿವರಾಗಿದ್ದ ಸಿ.ಟಿ.ರವಿ ಹಾಗೂ ಸಂಸದೆ ಸುಮಲತಾರವರುಗಳು ಕಾರ್ಖಾನೆ ಖಾಸಗೀಕರಿಸುವ ಹುನ್ನಾರ ಸಭೆ ನಡೆಸಿರುವುದು, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಎದ್ದುಕಾಣಿಸಿತು. ಪತ್ರಿಕೆಯನ್ನು ಓದಿದ ನಾನು ತಕ್ಷಣ ರೈತ ಹೋರಾಟಗಾರ್ತಿ ಕಬ್ಬು ಅಭಿವೃದ್ಧಿ ನಿಯಂತ್ರಣ ಮಂಡಳಿ ಸದಸ್ಯರಾಗಿದ್ದ ಸುನಂದಾ ಜಯರಾಂರವರಿಗೆ ಫೋನ್ ಮಾಡಿ, ಅವರ ಹೇಳಿಕೆ ಇರುವ ಬಗ್ಗೆ ಕೇಳಿದಾಗ, ಆಗ ಅವರು ನನ್ನ ಹೆಸರು ಹಾಕಿದ್ದಾರೆ, ಆದರೆ ಹೇಳಿಕ ತಮ್ಮದಲ್ಲವೆಂದು ತಿಳಿಸಿದರು. ಅಲ್ಲದೆ ಖಾಸಗೀಕರಣಕ್ಕೆ ತಮ್ಮ ವಿರೋಧವೂ ಇರುವುದಾಗಿ ತಿಳಿಸಿದರು. ನಂತರ ವಿವಿಧ ಸಂಘಟನೆಗಳ ಜೊತೆಗೂಡಿ ಸಭೆ ನಡೆಸಿ ಹಂತ ಹಂತವಾಗಿ, ಸಾಂಘಿಕವಾಗಿ ಹೋರಾಟ ರೂಪಿಸಲಾಯಿತು. ಸಾವಿರಾರು ಕೋಟಿ ರೂ, ಆಸ್ತಿ ಹೊಂದಿರುವ ಮೈಷುಗರ್ ಕಾರ್ಖಾನೆಯನ್ನು ಮೂರು ಕಾಸಿಗೆಮಾರಾಟ ಮಾಡುವುದು, ಗುತ್ತಿಗೆಗೆ ನೀಡುವುದು ಅಥವಾ O&M (Operation And Maintenance: ಕಾರ್ಖಾನೆಯನ್ನು ನಡೆಸುವ, ಆದಾಯ ತೆಗೆದುಕೊಳ್ಳುವ ಮತ್ತು ಅಗತ್ಯ ರಿಪೆರಿಯನ್ನು ತಾವೇ ಮಾಡಿಕೊಳ್ಳುವ ಗುತ್ತಿಗೆ ವಿಧಾನ) ಮಾಡುವುದು ಸರಿಯಲ್ಲ ಎಂದು ಜಿಲ್ಲೆಯ ಜನ ಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ಸರ್ಕಾರಿ ಸ್ವಾಮ್ಯದಲ್ಲೆ ಮೈಷುಗರ್ ನಿರ್ವಹಣೆಗೆ ಮನವರಿಕೆ ಮಾಡಿ ಒತ್ತಾಯಿಸಲಾಯಿತು. ಹಲವು ಹಂತದ ಹೋರಾಟಗಳನ್ನು ನಡೆಸಲಾಯಿತು ಹಾಗೂ ಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಮಾಧ್ಯಮಗಳಲ್ಲಿ ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕೆಂಬ ಅರಿವಿನ ಚರ್ಚೆಯನ್ನು ಹುಟ್ಟುಹಾಕಲಾಯಿತು. ಹಳ್ಳಿ ಹಳ್ಳಿಯಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರಿ ಸ್ವಾಮ್ಯದಲ್ಲಿಯೇ ಏಕೆ ಮೈಷುಗರ್ ಉಳಿಯಬೇಕೆಂಬುದನ್ನು ಅರ್ಥಮಾಡಿಸುತ್ತಾ, ಹೇಗಾದರೂ ಆಗಲಿ ಕಾರ್ಖಾನೆ ಆರಂಭವಾಗಲಿ ಎನ್ನುವ ಮತ್ತು O&M ಗುತ್ತಿಗೆ ನೀಡಬೇಕೆನ್ನುವ ಖಾಸಗೀಕರಣದ ಪರ ಇರುವ ಮನಸ್ಥಿತಿಯ ವಿರುದ್ಧ ಹಾಗೂ ಸಾವಿರಾರು ಕೋಟಿ ಬೆಲೆಬಾಳುವ ಮೈಷುಗರ್ ಆಸ್ತಿಯನ್ನು ಲೂಟಿಮಾಡಲು ಹವಣಿಸಲಾಗುತ್ತಿದೆ ಎಂದು ಎಚ್ಚರಿಸಲಾಯಿತು. ಕಾರ್ಖಾನೆ ನಡೆಸುವ ಸಾಮರ್ಥ್ಯ ಸರ್ಕಾರಕ್ಕಿದೆ, ಮೈಷುಗರ್ ಆಸ್ತಿ ಉಳಿಸುವ ಹಾಗೂ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆ ಆಗಬೇಕೆಂದು ಸರ್ಕಾರವನ್ನು ಆಗ್ರಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸುವ ಕರಪತ್ರಗಳನ್ನು ತಯಾರಿಸಲಾಯಿತು.
ಇದನ್ನು ಓದಿ: ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕೆಂದು ಅನಿರ್ದಿಷ್ಟ ಹೋರಾಟ
ಕರಪತ್ರಗಳನ್ನು ಜನಾಂದೋಲನದ ಮೂಲಕ ಜನರಿಗೆ ನೀಡಲು ಇಂಡುವಾಳು ಬೂದನೂರಿನಲ್ಲಿ ಸಭೆ ಮಾಡಲಾಯಿತು. ಮರುದಿನ ಕಾರ್ಖಾನೆ ಆವರಣದಿಂದ ಪ್ರಚಾರ ಕೈಗೊಂಡು ನಗರದ ಮಹಾವೀರ ಸರ್ಕಲ್ ಮೂಲಕ ಹಾದು ವಿ.ವಿ.ರಸ್ತೆಯಲ್ಲಿ ಕರಪತ್ರ ವಿತರಿಸುತ್ತಿದ್ದಾಗ ಖಾಸಗೀಕರಣದ ಹುನ್ನಾರವನ್ನರಿಯದ ಶಕ್ತಿಗಳು ನಮ್ಮ ಮೇಲೆ ಮುಗಿಬಿದ್ದು ನಿಂದನೆಯ ಮಾತುಗಳನ್ನಾಡಿದರು. ಅಪಪ್ರಚಾರಕ್ಕಿಳಿದು ಅಡ್ಡಿಪಡಿಸಲು ಯತ್ನಿಸಿದರು. ಅಷ್ಟರಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತು ಅಂತಹ ಶಕ್ತಿಗಳನ್ನು ನಿಯಂತ್ರಿಸಿದರು. ಈ ಘಟನೆಯಿಂದ ಕೆಲವರು ಹಿಂದಕ್ಕೆ ಸರಿದರು. ಆದರೆ ಸೈದ್ಧಾಂತಿಕವಾಗಿ ಬದ್ದತೆಯುಳ್ಳ ಹೋರಾಟಗಾರರು ವಿಚಲಿತರಾಗದೆ ಸರ್ಕಾರದ ಮೇಲೆ ಹಂತ ಹಂತವಾಗಿ ನಿರಂತರ ಒತ್ತಡ ತರಲಾಯಿತು. ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಮೈಷುಗರ್ನ ಹಿನ್ನೆಲೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿ, ಮಿರ್ಜಾ ಇಸ್ಮಾಯಿಲ್ ಮತ್ತು ಲೆಸ್ಲಿ.ಸಿ. ಕೋಲ್ಮನ್ರವರ ಅಪಾರ ಪರಿಶ್ರಮ ಹಾಗೂ ಮೈಷುಗರ್ನ ದೀರ್ಘಕಾಲದ ಆದಾಯದ ಗತ ವೈಭದ ಮಾಹಿತಿಯನ್ನೊಳಗೊಂಡ, ಒಂದು ಕಿರು ಪುಸ್ತಕ ಹಾಗೂ ಅಧ್ಯಯನ ವರದಿಯನ್ನು ಪ್ರಕಟಿಸಲಾಯಿತು. ಮೈಷುಗರ್ ಕಾರ್ಖಾನೆಯ ಹಿನ್ನೆಲೆ, ಅದಕ್ಕಿರುವ ಮಹತ್ವ ಮತ್ತು ಜಿಲ್ಲೆಯ ಆರ್ಥಿಕ ಸೆಲೆಯಾಗಿರುವ ಹಾಗೂ ರೈತರ ಜೀವಾಳವಾದ ಮೈಷುಗರ್ ಮಂಡ್ಯ ಸಕ್ಕರೆ ನಾಡು ಎಂಬ ಖ್ಯಾತಿ ಕೊಟ್ಟ ಇತಿಹಾಸದ ಬಗ್ಗೆ ತಿಳಿಸುವ ಮಾಹಿತಿಯನ್ನು ಈ ಎರಡು ಪುಸ್ತಕಗಳಲ್ಲಿ ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ನಿರ್ವಹಣೆಗೆ ಆಗ್ರಹಿಸುತ್ತಿದ್ದ ಹೋರಾಟಗಾರರು ದಾಖಲಿಸಿದ್ದರು.
ದಿನಾಂಕ 30 ಜೂನ್ 2020 ರಂದು ಮಂಡ್ಯದ ಪತ್ರಿಕಾ ಭವನದಲ್ಲಿ ಮೈಷುಗರ್ ಕಾರ್ಖಾನೆ ಖಾಸಗೀಕರಣ ಹಿನ್ನೆಲೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಪರಿಣಾಮಗಳ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಈ ವಿಚಾರ ಸಂಕಿರಣದ ಆನ್ಲೈನ್ ಉದ್ಘಾಟನೆಯನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡರು ನೆರವೇರಿಸಿಕೊಟ್ಟಿದ್ದರು. ಡಾ.ಜಿ. ಮಾದೇಗೌಡರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್ರವರು ವಿಷಯ ಮಂಡನೆ ಮಾಡಿದರು. ಉಳಿದಂತೆ ವೇದಿಕೆಯಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ರೈತ ಹಿತರಕ್ಷಣಾ ಸಮಿತಿಯ ಸುನಂದಾಜಯರಾಂ, ಡಿ.ಎಸ್.ಎಸ್.ನ ಎಂ.ಬಿ.ಶ್ರೀನಿವಾಸ್, ಸಿಐಟಿಯುನ ಸಿ.ಕುಮಾರಿ, ರೈತ ಹಿತರಕ್ಷಣಾ ಸಮಿತಿಯ ಕೆ.ಬೋರಯ್ಯ, ಅಖಂಡ ರೈತಸಂಘದ ಸುಧೀರ್ ಕುಮಾರ್, ರೈತ ಸಂಘ(ಮೂಲ)ದ ಇಂಡುವಾಳು ಚಂದ್ರಶೇಖರ್, ರೈತಸಂಘದ ಮುದ್ದೇಗೌಡ, ಪ್ರಾಂತ ರೈತ ಸಂಘದ ಟಿ.ಎಲ್. ಕೃಷ್ಣೇಗೌಡ, ಟಿ. ಯಶವಂತ್, ಪ್ರಾಂತ ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಮಂಜುನಾಥ್ ಇದ್ದರು. ವಿಚಾರ ಸಂಕಿರಣದಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಪ್ರಗತಿಪರ ಸಂಘಟನೆಯ ಕಾರ್ಯಕರ್ತರು, ಕಬ್ಬು ಬೆಳೆಯುವ ರೈತರು ಭಾಗವಹಿಸಿದ್ದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡರು ಖಾಸಗೀಕರಣಕ್ಕೆ ಒಲವು ತೋರುತ್ತಿರುವ ಸರ್ಕಾರಕ್ಕೆ ಸಾವಿರಾರು ಕೋಟಿ ಆಸ್ತಿಯುಳ್ಳ ರಾಜ್ಯ ಸರ್ಕಾರದ ಅಧೀನದ ಮೈಷುಗರ್ ಕಾರ್ಖಾನೆಯನ್ನು ಸಹಸ್ರಾರು ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು ಅವಲಂಬಿಸಿದ್ದಾರೆ. ಇದನ್ನು ಪರಿಗಣಿಸಿ ಈ ಎಲ್ಲಾ ಅವಲಂಬಿತರ ಹಾಗೂ ರಾಜ್ಯದ ಜನರ ಮಾಲೀಕತ್ವದ ಕಾರ್ಖಾನೆಯನ್ನು ಸಂರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸರ್ಕಾರವನ್ನು ಎಚ್ಚರಿಸಿದರು. ನಮ್ಮ ಸಂವಿಧಾನ ಪ್ರಜಾಪ್ರಭುತ್ವ, ಗಣತಂತ್ರ, ಸಮಾಜವಾದ, ಸಾಮಾಜಿಕ ನ್ಯಾಯ ಮತ್ತು ಧರ್ಮ ನಿರಪೇಕ್ಷತೆ ಮುಂತಾದ ಮೂಲಭೂತ ತತ್ವಗಳನ್ನು ಹೊಂದಿದೆ. ಎಲ್ಲರಿಗೂ ಸಮಾನವಾದ ಅವಕಾಶ ನೀಡುವ ಕರ್ತವ್ಯವನ್ನು ಸಂವಿಧಾನ ಸರ್ಕಾರಗಳಿಗೆ ನೀಡಿದೆ. ಆದ್ದರಿಂದ ಈ ಜವಾಬ್ದಾರಿಗಳನ್ನು ನಿರ್ವಹಿಸಲು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿವೆ. ಸರ್ಕಾರವು ಕೈಗೊಳ್ಳುವ ಖಾಸಗೀಕರಣವು ಇಂತಹ ಘನ ಉದ್ದೇಶಕ್ಕೆ ಚ್ಯುತಿಯಾಗುತ್ತದೆ. 2013-14 ಸಾಲಿನ ಮೈಷುಗರ್ ವಾರ್ಷಿಕ ಮಹಾ ಸಭೆಯನ್ನು 22-6-2020 ರಂದು ಆನ್ಲೈನ್ ಮೂಲಕ ಸಭೆ ನಿಗದಿಗೊಳಿಸಿ ಮಂಡಿಸಲು ಹೊರಟಿದ್ದ ವರದಿಯಲ್ಲಿ ಒಂದು ಮಿಲ್ ಸುಸ್ಥಿತಿಯಲ್ಲಿದೆ 5 ಸಾವಿರ ಟನ್ ಪ್ರತಿದಿನ ನುರಿಸುವ ಸಾಮರ್ಥ್ಯವಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಸಂವಿಧಾನ ಬದ್ದವಾಗಿಲ್ಲ, ಕಾನೂನು ಬದ್ದವಾಗಿಲ್ಲ. ರಾಜ್ಯ ಸರ್ಕಾರ ಮೈಷುಗರ್ನಂತಹ ಸಾರ್ವಜನಿಕ ಉದ್ದಿಮೆಯ ಖಾಸಗೀಕರಣವನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದರು.
ಮೈಷುಗರ್ ಖಾಸಗೀಕರಣದಲ್ಲಿ ರಾಜ್ಯ ಸರ್ಕಾರದ ಹುನ್ನಾರ:
ಮಂಡ್ಯ ಜಿಲ್ಲೆಯ ರೈತ ಹಿತರಕ್ಷಣಾ ಸಮಿತಿ ಸಭೆಯು ಹಿರಿಯ ರಾಜಕಾರಣಿ ಹಾಗೂ ಹೋರಾಟಗಾರರಾದ ಡಾ.ಜಿ. ಮಾದೇಗೌಡರ ಅಧ್ಯಕ್ಷತೆಯಲ್ಲಿ 16 ಮೇ 2020 ರಲ್ಲಿ ಸಭೆ ಸೇರಿತು. ಸರ್ಕಾರಿ ಸ್ವಾಮ್ಯದಲ್ಲೆ ಮೈಷುಗರ್ ನಿರ್ವಹಣೆಯಾಗಬೇಕು, ಇಲ್ಲದಿದ್ದರೆ ಜನ ದಂಗೆ ಏಳುತ್ತಾರೆ ಎಂದು ಸಭೆಯಲ್ಲಿ ಡಾ.ಜಿ. ಮಾದೇಗೌಡರು ಘೋಷಿಸಿದರು. ಈ ಘೋಷಣೆಯ ಕುರಿತು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿದೃಶ್ಯ ಮಾಧ್ಯಮಗಳು ಮೈಷುಗರ್ ಕುರಿತು ಪ್ರತಿಕ್ರಿಯೆ ಕೇಳಿದಾಗ, ಸಾಲ ಮಾಡಿಯಾದರೂ ಸರ್ಕಾರಿ ಸ್ವಾಮ್ಯದಲ್ಲಿಯೇ ಮೈಷುಗರ್ ನಿರ್ವಹಣೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಆ ಘೋಷಣೆ ಮಾಧ್ಯಮಗಳಲ್ಲಿ ಬಿತ್ತರಗೊಂಡ ತತಕ್ಷಣವೇ ಖಾಸಗೀಕರಣದ ಮೂಲಕ ಮೈಷುಗರ್ ಆಸ್ತಿ ಹೊಡೆಯಲು ಹೊಂಚು ಹಾಕಿದ್ದ ರಾಜಕಾರಣಿ ವಿಲವಿಲ ಒದ್ದಾಡಿ ಜಿಲ್ಲೆಯ ಹಿರಿಯ ರಾಜಕಾರಣಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, M&JA ಗೆ ಒತ್ತಾಯಿಸಿದರು. ಸಭೆ ಮಾಡಿ ಸರ್ಕಾರಿ ಸ್ವಾಮ್ಯದಲ್ಲಿ ಮೈಷುಗರ್ ಉಳಿಯ ಬೇಕೆನ್ನುವ ಮುಂಚೂಣಿಯಲ್ಲಿದ್ದ ಹೋರಾಟಗಾರರನ್ನು ಡೋಂಗಿಗಳೆಂದು ಕರೆದು ಅಪಮಾನಗೊಳಿಸಿದರು. ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ನಂತರ ಸರ್ಕಾರದ ಮೇಲೆ ಪ್ರಭಾವ ಬೀರಿ ದಿನಾಂಕ 22 ಜೂನ್ 2020 ರಂದು ಆನ್ಲೈನ್ ಮೂಲಕ ಷೇರುದಾರರ ಸಭೆ ನಡೆಸಲು ಮುಂದಾಗಿದ್ದನ್ನು, ಹೋರಾಟದ ಮೂಲಕ ತಡೆದು ನಿಲ್ಲಿಸಲಾಯಿತು.
ಇದನ್ನು ಓದಿ: ಮೈಸೂರು: ಕಬ್ಬು ಬೆಲೆ ನಿಗದಿಗೆ ಆಗ್ರಹ, ರಸ್ತೆಯಲ್ಲಿ ಮಲಗಿ ರೈತರ ಆಕ್ರೋಶ
ತತ್ಕ್ಷಣವೇ ಜಿಲ್ಲೆಯ ಈ ಸಂದರ್ಭವನ್ನು ದೋಚುವ ಸಲುವಾಗಿ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಫುಟ ಸಭೆ ಸೇರಿ ಮೈಷುಗರ್ ಅಧ್ಯಯನ ವರದಿ ನೀಡಲು ಉಪಸಮಿತಿ ರಚಿಸಿತು. ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿಯ ನೇತೃತ್ವದ ಸಮಿತಿಯ ವರದಿ ಪ್ರಕಾರ, ಎಲ್.ಆರ್.ಒ.ಟಿ (Lease-Refurbish-Operate-Transfer-ಗುತ್ತಿಗೆ ತೆಗೆದುಕೊಂಡು, ಅಗತ್ಯ ದುರಸ್ತಿ ಮಾಡಿ, ಒಂದು ಅವಧಿಯವರೆಗೆ ನಡೆಸಿ, ವಾಪಸು ಮೂ ಒಡೆಯರಿಗೆ ವಾಪಸು ಮಾಡುವ ಗುತ್ತಿಗೆಯ ವಿಧಾನದ ಮೂಲಕ ಖಾಸಗೀಕರಣ ಮಾಡುವ ಪದ್ಧತಿ) ಅಥವಾ M&JA ಸಾಧ್ಯವೇ ಇಲ್ಲವೆಂದು ಸ್ಪಷ್ಟಪಡಿಸಿ, 40 ವರ್ಷಗಳ ಎಲ್.ಆರ್.ಒ.ಟಿ. ಕೈಬಿಟ್ಟು 2033ಕ್ಕೆ ಶತಮಾನ ಪೂರೈಸಲಿರುವ ಪುರಾತನ ಸಂಸ್ಥೆಯಾದ ಮೈಷುಗರ್ ಕಾರ್ಖಾನೆಯನ್ನು ಉಳಿಸಲು ಮುಂದಾಗಬೇಕೆಂದು ವರದಿ ನೀಡಿತು.
ಇಷ್ಟೆಲ್ಲಾ ಇತಿಹಾಸವಿರುವ ಮೈಷುಗರ್ ಕಾರ್ಖಾನೆಯನ್ನು ಗುತ್ತಿಗೆ ಸ್ವರೂಪದ ಯಾವುದೇ ಖಾಸಗೀಕರಣ ಮಾಡಬಾರದೆಂದು ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿದು ನಿರ್ವಹಣೆಯಾಗಲು ಕಳೆದ ಒಂದೂವರೆ ವರ್ಷದಿಂದ ಚಳುವಳಿ ರೂಪಿಸಲಾಯಿತು. ಈ ಚಳುವಳಿಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ, ದಲಿತ, ಕಾರ್ಮಿಕ, ಮಹಿಳಾ, ಕನ್ನಡ ಸೇನೆ, ಪ್ರಗತಿಪರ ಸಂಘಟಣೆಗಳು ನಾಯಕತ್ವ ವಹಿಸಿದ್ದವು.
2020 ಮಾರ್ಚ್ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದಲ್ಲೆ ಮೈಷುಗರ್ ನಿರ್ವಹಣೆಯಾಗಬೇಕೆಂದು ಹೋರಾಟ ಆರಂಭವಾಯಿತು. ಜಿಲ್ಲೆಯ ಉಸ್ತುವಾರಿ ಸಚಿವರು, ಹಾಗು ತದನಂತರ ಸರ್ಕಾರ ಖಾಸಗೀಕರಣದತ್ತನೇ ಒಲವು ತೋರಿ ಜಿಲ್ಲೆಯಲ್ಲಿ ಸಂಸದರ ಮಾತಿಗೆ ಮಣೆಹಾಕುತ್ತಾ ಬಂತು. ಇದೇ ಸಂದರ್ಭವನ್ನು ಸಂಸದರು ಬಳಸಿಕೊಂಡು ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕಿದರು. ರೈತರ ಹಿತವೆನ್ನುವ ನೆಪಮಾಡಿಕೊಂಡು ಹೇಗಾದರೂ ಆಗಲಿ ಕಾರ್ಖಾನೆ ಆರಂಭವಾಗಲಿ ಎಂಬುದನ್ನು ರೈತರ ನಡುವೆ ಹರಿಬಿಟ್ಟರು.
O&M ಮತ್ತಿತರ ಗುತ್ತಿಗೆ ಮೂಲಕ ಖಾಸಗೀಕರಣದ ಅಪಾಯದ ಬಗ್ಗೆ ಅರಿವು ನೀಡುವಲ್ಲಿ ಸಫಲತೆ:
O&M ಅಥವಾ ಗುತ್ತಿಗೆ ಎನ್ನುವುದು ಸರ್ಕಾರಕ್ಕಿರುವ ಸಾಮರ್ಥ್ಯವನ್ನು ಅಲ್ಲಗಳೆಯು ವಂತಿದೆ. ಜಿಲ್ಲೆಯೂ ಸೇರಿದಂತೆ ಉಳಿದ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭ ಲೂಟಿಯ ಸಕ್ಕರೆ ಲಾಬಿಯಲ್ಲಿ ಮುಳುಗಿವೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಸಹ ನೂರಾರು ಕೋಟಿ ರೂ, ಬಾಕಿ ಉಳಿಸಿಕೊಂಡಿರುವ ಉದಾಹರಣೆಗಳಿವೆ. ಸರ್ಕಾರವು ಖಾಸಗಿ ಕಾರ್ಖಾನೆಗಳಿಗೆ ಅನುದಾನ ನೀಡಿದರೂ ಬಹುತೇಕ ಖಾಸಗಿ ಕಾರ್ಖಾನೆಗಳು ಲಾಭದಾಯಕವಾಗಿಲ್ಲ. ನಮ್ಮದೇ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ರೈತರು ಕಟ್ಟಿ ಬೆಳೆಸಿದ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕೆಲ ರಾಜಕೀಯ ವ್ಯಕ್ತಿಗಳ ಸ್ವಾರ್ಥಕ್ಕಾಗಿ ಕಾರ್ಖಾನೆಯನ್ನು ಜಿ.ಎಂ. ಷುಗರ್ಸ್ ಗೆ ಗುತ್ತಿಗೆ ನೀಡಿದ 11 ವರ್ಷದಲ್ಲಿಯೇ ರೈತರಿಗೆ ಕಬ್ಬಿನ ಬಾಕಿ ನೀಡದೆ ಕಾರ್ಖಾನೆಯು ಇನ್ನಷ್ಟು ಸಾಲದ ಸುಳಿಗೆ ಸಿಲುಕಿ ನಷ್ಟದತ್ತ ದಾಪುಗಾಲಿಟ್ಟಿದೆ. ಕಾರ್ಖಾನೆ ಮತ್ತು ಅದರ ಇಡೀ ಆಸ್ತಿಯು ಗುತ್ತಿಗೆದಾರನ ಪಾಲಾಗುವ ಭೀತಿಯಲ್ಲಿರುವ ಸ್ಪಷ್ಟ ನಿದರ್ಶನ ನಮ್ಮ ಮುಂದಿದೆ. ಅಲ್ಲಿಯ ರೈತರು ಗುತ್ತಿಗೆದಾರನ ವಿರುದ್ಧ ಸೆಣಸಬೇಕಾದ ಪರಿಸ್ಥಿತಿ ಬಂದೊದಗಿದೆ. ಮೈಷುಗರ್ನಂತಹ ಸಾರ್ವಜನಿಕ ಉದ್ದಿಮೆಯು O&M ಅಥವಾ ಗುತ್ತಿಗೆಯಂತಹ ಪದ್ದತಿಯಲ್ಲಿ ಖಾಸಗಿ ಕಂಪನಿಗಳ ಕೈಯಲ್ಲಿ ಸಿಲುಕಿದರೆ ಅದರ ಆರ್ಥಿಕ ಬೆಳವಣಿಗೆಯನ್ನು ವಿರೂಪಗೊಳಿಸಿದಂತಾಗುತ್ತದೆ. ಹಾಗೂ ರೈತ ಕಾರ್ಮಿಕರನ್ನು ಶಾಶ್ವತ ಶೋಷಣೆಗೆ ನೂಕಿದಂತಾಗುತ್ತದೆ ಎನ್ನುವ ತಾಜಾ ಉದಾಹರಣೆಯನ್ನು ಸರ್ಕಾರಕ್ಕೆ ಅರ್ಥಮಾಡಿಸುವಲ್ಲಿ, ಮೈಷುಗರ್ ಹೋರಾಟವು ಪ್ರಮುಖ ಪಾತ್ರ ವಹಿಸಿತು.
ಸರ್ಕಾರವೇ ನಿರ್ವಹಣೆ ಮಾಡುವುದರಿಂದ ಇರುವ ಅನುಕೂಲಗಳು ಮತ್ತು ಸಾಧ್ಯತೆಗಳು:
ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ನಡೆಸುವುದರಿಂದ ಈಗಾಗಲೇ ಪ್ರತಿದಿನ 5000 ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಗೆ ಲಾಭಗಳಿಸಲು ಹಲವು ಅವಕಾಶಗಳಿವೆ. ಜೊತೆಗೆ ಉಪಉತ್ಪನ್ನ ಘಟಕಗಳಾದ ವಿದ್ಯುತ್, ಡಿಸ್ಟಿಲರಿ ವಿಭಾಗ, ಕಬ್ಬು ತಳಿ ಅಭಿವೃದ್ಧಿ ಫಾರಂಗಳನ್ನು ಹೊಂದಿದೆ. ಸರ್ಕಾರವು ಕಾರ್ಖಾನೆಗೆ ಪ್ರಸಕ್ತ ಅಗತ್ಯ ಹಣಕಾಸು ಮತ್ತು ಸಿಬ್ಬಂದಿಯನ್ನು ಒದಗಿಸಿ ದಕ್ಷತೆಯಿಂದ ನಿರ್ವಹಿಸಿದರೆ ಕಾರ್ಖಾನೆಯು ಉತ್ತಮ ಸ್ಥಿತಿಯಲ್ಲಿ ನಡೆಯುತ್ತದೆ. ಹಾಗೂ ರೈತ ಕಾರ್ಮಿಕರಿಗೆ ಸಕಾಲಕ್ಕೆ ಹಣಕಾಸು ನಿರ್ವಹಣೆ ಮತ್ತು ಜನ ಸಾಮಾನ್ಯರ ಕಲ್ಯಾಣ ಕೆಲಸಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ.
ಮೈಷುಗರ್ ಕಾರ್ಖಾನೆಯು ಈಗಾಗಲೇ ಉತ್ಪಾದಿಸಿರುವ 50 ಸಾವಿರ ಕ್ವಿಂಟಾಲ್ ಸಕ್ಕರೆ ಸ್ಟಾಕ್ ಇದ್ದು ಅದನ್ನು ಮಾರಾಟ ಮಾಡುವುದರಿಂದ ಬರುವ ಮೊತ್ತ ಅಂದಾಜು 15 ಕೋಟಿ ಆಗಲಿದೆ. ಈಗಾಗಲೇ ಮೈಷುಗರ್ ಕಾರ್ಖಾನೆಯಿಂದ ಸಾಕಷ್ಟು ಹಳೆಯದಾದ ಬಾಕಿಗಳಾದ ಆಹಾರ ನಿಗಮ, ವಿದ್ಯುತ್, ಸಾರಾಯಿ ಬಾಕಿಗಳನ್ನು ಸರ್ಕಾರವೆ ಮನ್ನಾ ಮಾಡಬಹುದು. ಲಕ್ಷಾಂತರ ಕೋಟಿ ರೂಪಾಯಿ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ ಮನಸ್ಸು ಮಾಡಿದರೆ ಮೈಷುಗರ್ ಕಾರ್ಖಾನೆಯನ್ನು ಉಳಿಸಿ ನಡೆಸುವುದು ಕಷ್ಟವಲ್ಲ. ಸರ್ಕಾರದ ಉದ್ದಿಮೆಯಾದ್ದರಿಂದ ಅಭಿವೃದ್ಧಿಯ ದೃಷ್ಟಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ತಾಂತ್ರಿಕ ಕಾರ್ಯಾಚರಣೆ, ದಕ್ಷ ಆಡಳಿತ ನಿರ್ವಹಣೆ ಕಾರ್ಖಾನೆಯ ಒಳಗೆ ಮತ್ತು ಹೊರಗೆ ಬಿಗಿಯಾದ ನಿರ್ವಹಣೆಯ ಮೂಲಕ ಸರ್ಕಾರವು ದಕ್ಷತೆಯಿಂದ ನಿರ್ವಹಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಲಾಯಿತು.
ಶಾಶ್ವತವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲು ಸರ್ಕಾರಕ್ಕೆ ಸಲಹೆಗಳು:
ಸಾರ್ವಜನಿಕ ವಲಯದ ಮೈಷುಗರ್ ಉದ್ದಿಮೆಯನ್ನು ಆಧುನೀಕರಣಗೊಳಿಸಿ ಪ್ರಜಾಪ್ರಭುತ್ವೀಕರಣಗೊಳಿಸಬೇಕು. ಅಧಿಕಾರಶಾಹಿ ನಿಯಂತ್ರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು, ಕಟ್ಟುನಿಟ್ಟಾದ ಜವಾಬುದಾರಿಕೆಯನ್ನು ನಿಗದಿಪಡಿಸುವುದು. ಆಡಳಿತದಲ್ಲಿ ರೈತ-ಕಾರ್ಮಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಮತ್ತು ಅದು ಅರ್ಥ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಮಾನ ಹೊಂದುವಂತಾಗಲು ಅವಶ್ಯವಾದ ಸ್ಪರ್ಧಾತ್ಮಕತೆಯನ್ನು ಪಡೆಯುವಂತೆ ಮಾಡುವ ಮೂಲಕ ಬಲಪಡಿಸಬೇಕೆಂದು ಒತ್ತಾಯಿಸಲಾಯಿತು.
- ದಕ್ಷ ಸಮಿತಿ ರಚಿಸಬೇಕು. ಅದರಲ್ಲಿ ಸಕ್ಕರೆ ನಿರ್ದೇಶಕರು, ಕೃಷಿ ನಿರ್ದೇಕರು, ತಾಂತ್ರಿಕ ತಜ್ಞರು, ಆರ್ಥಿಕ ಸಲಹೆಗಾರರು, ಅನುಭವ ಉಳ್ಳ ದಕ್ಷ ಜನರಲ್ ಮ್ಯಾನೇಜರ್, ಚೀಫ್ ಕೆಮಿಸ್ಟ್, ಚೀಫ್ಎಂಜಿನಿಯರ್, ಡಿಸ್ಟಿಲರಿ ಚೀಫ್ಮ್ಯಾನೇಜರ್, ಆರ್ಥಿಕ ಚೀಫ್ಅಕೌಂಟ್ ಆಫೀಸರ್, ಕೇನ್ ಡೆವಲೆಪಮೆಂಟ್ ಆಫೀಸರ್ ಹಾಗೂ ಅಗತ್ಯ ಹಣಕಾಸು ಸಿಬ್ಬಂದಿಗಳನ್ನು ತಕ್ಷಣ ನೇಮಿಸಿಕೊಳ್ಳಬೇಕು.
- ಸುಸ್ಥಿತಿಯಲ್ಲಿರುವ ಒಂದು ಮಿಲ್ ಸರಕಾರದ ಘೋಷಣೆಯಂತೆ 2022ರ ಜೂನ್ ಹಂಗಾಮಿನಲ್ಲೆ ಆರಂಭಿಸಲು ಅಗತ್ಯ ತಯಾರಿ ನಡೆಸಬೇಕು. ಹಾಗೂ ಕಾರ್ಖಾನೆ ಆಧುನೀಕರಣಗೊಳಿಸಬೇಕು.
- ಮೈಷುಗರ್ ವ್ಯಾಪ್ತಿಯ ನೂರಾರು ಹಳ್ಳಿಗಳ ಕಬ್ಬು ಒಪ್ಪಿಗೆದಾರರ ನೋಂದಣಿಯನ್ನು ತಕ್ಷಣ ಆರಂಭಿಸಬೇಕು.
- ಸಕ್ಕರೆ ಉತ್ಪಾದನೆಯ ಜೊತೆಗೆ ಉತ್ಪನ್ನಗಳಾದ ಡಿಸ್ಟಿಲರಿ, ಕೋಜನ್, ಎಥನಾಲ್, ಆಮ್ಲಜನಕ, ಸ್ಯಾನಿಟೈಜರ್ ಹಾಗೂ ಇನ್ನಿತರೆ ಆದಾಯದಾಯಕ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
- ರಾಜ್ಯದ ಜನತೆಗೆ ಮೈಷುಗರ್ನಲ್ಲಿ ಉತ್ಪಾದನೆಯಾಗುವ ಸಕ್ಕರೆಯನ್ನು ಪಡಿತರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು.
- ಸಾಗಾಣಿಕೆ ವೆಚ್ಚವನ್ನು ಬಾಕಿ ಸಮೇತ ರೈತರಿಗೆ ನೀಡಬೇಕು.
- ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸುವ ಕಬ್ಬಿನ ಸಹಾಯಧನ ಸಕಾಲದಲ್ಲಿ ರೈತರಿಗೆ ಪಾವತಿಸುವಂತೆ ಕ್ರಮವಹಿಸುವುದು.
- ಇದುವರೆಗಿನ ಹಣಕಾಸಿನ ಬಗ್ಗೆ ಅಗತ್ಯ ಕ್ರಮವಹಿಸಬೇಕು.
- ಮೈಷುಗರ್ ವ್ಯಪ್ತಿಯ ರೈತರೊಟ್ಟಿಗೆ ನಿರಂತರ ಬಾಂಧವ್ಯ ಏರ್ಪಡಿಸಬೇಕು. ಹೀಗೆ ಮಾಡುವ ಮೂಲಕ ರಾಜ್ಯದ ಏಕಮಾತ್ರ ಸರ್ಕಾರಿ ಸಕ್ಕರೆ ಕಾರ್ಖಾನೆಯನ್ನು 2 ವರ್ಷಕ್ಕೆ ಸೀಮಿತಗೊಳಿಸದೆ ಶಾಶ್ವತವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಿರ್ವಹಣೆಯಾಗುವ ರೀತಿ ಪುನಶ್ಚೇತನಗೊಳಿಸಬೇಕು.
- ಪಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ನಿರಾಣಿ ಷುಗರ್ಸ್ ಗೆ 40ವರ್ಷಕ್ಕೆ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಿ ಸರ್ಕಾರವೆ ಅನುದಾನ ನೀಡುವ ಮೂಲಕ ರೈತರು ಕಟ್ಟಿದ ಸಹಕಾರಿ ಕಾರ್ಖಾನೆ ಸುಸ್ಥಿರಕ್ಕೆ ಕ್ರಮವಹಿಸಬೇಕು.
- ಕಬ್ಬು ಬೆಳೆಯುವ ರೈತರಿಗೆ ಖಾಸಗಿ ಕಾರ್ಖಾನೆಗಳಿಂದ ಅನ್ಯಾಯವರಸಗದಂತೆ ಕ್ರಮ ವಹಿಸುವುದು ಸರ್ಕಾರದ ಆದ್ಯತೆಯಾಗಬೇಕು.
ನಿರಂತರ ಧರಣಿ
ಮೊದ ಮೊದಲು ಅದರ ಹಿಂದಿನ ಖಾಸಗೀಕರಣದ ಹುನ್ನಾರ ಅರ್ಥವಾಗದ ಕೆಲವು ಮಂದಿ ಸಂಸದರ ಜೊತೆಗೆ ಕೈಜೋಡಿಸಿದ್ದು ಇತಿಹಾಸ. ತದನಂತರ ಈ ಸಂದರ್ಭವನ್ನು ಉಪಯೋಗಿಸಿಕೊಂಡ ಸರ್ಕಾರ 40 ವರ್ಷ ಗುತ್ತಿಗೆಗೆ ಕೊಡಲು ಮುಂದಾಗಿತ್ತು. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಡಿ.ಎಸ್.ಎಸ್.ನ ಎಂ.ಬಿ.ಶ್ರೀನಿವಾಸ್, ಸಿಐಟಿಯುನ ಸಿ. ಕುಮಾರಿ, ರೈತ ಸಂಘ(ಮೂಲ)ದ ಇಂಡುವಾಳು ಚಂದ್ರಶೇಖರ್, ರೈತಸಂಘದ ಮುದ್ದೇಗೌಡ, ಅಖಂಡ ರೈತಸಂಘದ ಸುಧೀರ್ ಕುಮಾರ್, ಪ್ರಾಂತ ರೈತ ಸಂಘದ ಟಿ.ಎಲ್. ಕೃಷ್ಣೇಗೌಡ, ಟಿ.ಯಶ್ವಂತ್, ಪ್ರಾಂತ ಕೃಷಿಕೂಲಿಕಾರರ ಸಂಘದ ಎಂ. ಪುಟ್ಟಮಾದು, ಕನ್ನಡ ಸೇನೆಯ ಮಂಜುನಾಥ್ ಇವರುಗಳು ತಮ್ಮ ತಮ್ಮ ಸಂಘಟನೆಗಳ ಕಾರ್ಯಕರ್ತರೊಂದಿಗೆ 13 ಸೆಪ್ಟೆಂಬರ್ 2021 ರಿಂದ ನಿರಂತರ ಧರಣಿ ಪ್ರಾರಂಭಿಸಿದರು.
ಇದರಿಂದ ಇಡೀ ಜಿಲ್ಲೆಯ ಜನ ಪಕ್ಷಾತೀತವಾಗಿ ಕಾರ್ಖಾನೆ ಯಾವ ಕಾರಣಕ್ಕೂ ಖಾಸಗೀಕರಣಗೊಳ್ಳಬಾರದು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕೆಂದು ನಿರಂತರ ಧರಣಿಗೆ ಬೆಂಬಲವಾಗಿ ನಿಂತರು. ಹಾಗೆ ಬೆಂಬಲವಾಗಿ ನಿಂತ ಪ್ರಮುಖರಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ವಿಧಾನಸಭಾ ಸದಸ್ಯರುಗಳಾದ ಡಿ.ಸಿ. ತಮ್ಮಣ್ಣ, ಎಂ. ಶ್ರೀನಿವಾಸ್, ಸಿ.ಎಸ್. ಪುಟ್ಟರಾಜು, ಸುರೇಶ್ಗೌಡ, ಡಾ.ಕೆ. ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಮಾಜಿ ಸಚಿವರುಗಳಾದ ಎನ್.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಬಿ.ಸೋಮಶೇಖರ್, ಎಂ.ಎಸ್.ಆತ್ಮಾನಂದ, ಲೀಲಾದೇವಿ, ಆರ್.ಪ್ರಸಾದ್, ಬಿ.ಟಿ. ಲಲಿತಾನಾಯಕ್, ಮಾಜಿ ಶಾಸಕರುಗಳಾದ ರಮೇಶ್ಬಾಬು ಬಂಡಿಸಿದ್ದೇಗೌಡ, ಜಿ.ಬಿ. ಶಿವಕುಮಾರ್, ಹೆಚ್.ಡಿ. ಚೌಡಯ್ಯ, ಮೈಷುಗರ್ ಮಾಜಿ ಅಧ್ಯಕ್ಷರುಗಳಾದ ಬಿ.ಸಿ.ಶಿವಾನಂದ, ಸಿದ್ದರಾಮೇಗೌಡ, ರಾಮಲಿಂಗಯ್ಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಾದ ಜೆಡಿಎಸ್ ಜಿಲ್ಲಾದ್ಯಕ್ಷ ಡಿ.ರಮೇಶ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಂ.ಪುಟ್ಟಮಾದು, ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಕೆ.ಎಸ್.ಎರ್. ಪಕ್ಷದ ಲಿಂಗೇಗೌಡ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ, ಉಪಾಧ್ಯಕ್ಷ ಡಾ.ಕೆ.ಪ್ರಕಾಶ್, ಕೆ.ಎನ್.ಉಮೇಶ್, ರಾಜ್ಯ ರೈತಸಂಘದ ಬಸವರಾಪ್ಪ, ನಂಜೇಗೌಡ, ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಬೋರಾಪುರ ಶಂಕರೇಗೌಡ, ಮರಿಸ್ವಾಮಿ, ತಗ್ಗಹಳ್ಳಿ ವೆಂಟೇಶ್, ಶಂಭೂನಹಳ್ಳಿ ಕೃಷ್ಣ, ವೇಣು ಸಾತನೂರು, ಸಿ.ಎಂ.ದ್ಯಾವಪ್ಪ, ಭರತ್ರಾಜ್, ಕೀಲಾರ ಕೃಷ್ಣ, ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮಿ ರಘುನಂದನ್, ಜಬಿವುಲ್ಲಾ, ಬಸವರಾಜು, ಜಗದೀಶ್, ಕಾಳೇಗೌಡ ಹುಲಿವಾನ, ಸುಶೀಲ, ಶಿವರತ್ನಮ್ಮ, ಜಯರಾಮು, ಸೋಮಣ್ಣ, ಬೊಮ್ಮೇಗೌಡ, ತೂಬಿನಕೆರೆ ಲಿಂಗರಾಜು, ಫಯಾಜ್, ಅಂಬುಜಮ್ಮ, ಬೋರಲಿಂಗೇಗೌಡ, ಸೊಳ್ಳೇಪುರ ವಿಶ್ವನಾಥ್, ಶಿವರಾಮು, ಪ್ರಕಾಶ್, ಜವರಯ್ಯ, ನಾಗೇಂದ್ರ, ಕೃಷ್ಣಪ್ರಕಾಶ್, ಶಶಿಕಲಾ, ಜಯಲಕ್ಷ್ಮಮ್ಮ, ಟಿ.ಹೆಚ್. ಆನಂದ್, ಹನುಮಂತು, ಜವರಪ್ಪ, ಚಂದ್ರಶೇಖರ್, ರಾಮು, ರಾಜು, ಅಮಾಸೆ, ಸಂತೋಷ, ಮಹದೇವಮ್ಮ, ಸುನೀತ, ಪುಟ್ಟಮ್ಮ, ದೇವರಾಜು, ರತ್ನಮ್ಮ, ಸಬೀನ್ತಾಜ್, ನಾಗೇಂದ್ರ, ತಿಮ್ಮೇಗೌಡ, ಶಿವಕುಮಾರ್, ತುಳಸೀಧರ್, ಗೌರಮ್ಮ, ಲತಾ, ಶೋಭ,ದೇವಿ, ಜಿ.ಟಿ.ವೀರಪ್ಪ, ಬಿ.ಟಿ.ವಿಶ್ವನಾಥ್, ವೆಂಕಟಲಕ್ಷ್ಮಿ, ಲಕ್ಷ್ಮಿ, ಪ್ರಮೀಳ, ಮುರುಳಿ, ಕುಮಾರ್, ಬಾಣಸವಾಡಿ ನಾಗಣ್ಣ, ಹುರುಗಲವಾಡಿ ರಾಮಯ್ಯ, ಸ್ವಾಮಿ ಗಾಮನಹಳಿ, ಮಂಜುಳಾ, ಸಚಿನ್, ಟಿ.ಡಿ.ನಾಗರಾಜು, ವೈರಮುಡಿ, ಮಳವಳ್ಳಿ ಶಾಸಕರಾದ ಡಾ.ಕೆ. ಅನ್ನದಾನಿಯವರು ಮಳವಳ್ಳಿಯಿಂದ ಮಂಡ್ಯದವರೆಗೆ ನೂರಾರು ಜನರೊಟ್ಟಿಗೆ ಪಾದಯಾತ್ರೆ ನಡೆಸಿ ಧರಣಿಗೆ ಬೆಂಬಲ ನೀಡಿದರು. ಅಂತೆಯೇ ಹಲವು ಸಂಘಟನೆಗಳು ಬೈಕ್ ಜಾಥಾ, ಎತ್ತಿನಗಾಡಿಯ ಮೆರವಣಿಗೆಗಳನ್ನು ನಡೆಸಿ ಧರಣಿಯನ್ನು ಬೆಂಬಲಿಸಿದ್ದಾರೆ.
ನಿರಂತರ ಧರಣಿ ಆರಂಭಗೊಂಡ ದಿನವೇ ವಿಧಾನಸಭೆ ಮತ್ತು ವಿಧಾನ ಪರಿಷತ್ಗಳಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಮೈಷುಗರ್ ನಡೆಯಬೇಕೆಂದು ಕೆ.ಟಿ. ಶ್ರೀಕಂಠೇಗೌಡರು ವಿಧಾನ ಸಭೆಯಲ್ಲಿ ಡಿ.ಸಿ. ತಮ್ಮಣ್ಣನವರು, ಡಾ.ಕೆ ಅನ್ನದಾನಿಯವರು, ಸುರೇಶ್ಗೌಡರು ಚರ್ಚಿಸಿದರು. ವಿರೋಧ ಪಕ್ಷದ ನಾಯಕರು ದನಿಗೂಡಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದರು. ತದನಂತರ ಸರ್ಕಾರ ಸಕ್ಕರೆ ಸಚಿವರ ನೇತೃತ್ವದಲ್ಲಿ ಒಂದು ಉಪ ಸಮಿತಿ ರಚಿಸಿ ಕೈಚೆಲ್ಲಿತ್ತು. ನಿರಂತರ ಧರಣಿಯನ್ನು ಕೈ ಬಿಡದೆ ಮುಂದುವರಿಸಿದ ಕಾರಣ ಸಚಿವರುಗಳಾದ ನಾರಾಯಣಗೌಡ ಆರ್.ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರ್, ಆರಗ ಜ್ಞಾನೇಂದ್ರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣರವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು, ಧರಣಿ ಸ್ಥಳಕ್ಕೆ ಭೇಟಿನೀಡಿ ಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದರು.ಅಲ್ಲದೆ ಕೆಲವು ಸಂಘಟನೆಗಳ ರಾಜ್ಯ ಮಟ್ಟದ ಮುಖಂಡರುಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಅದರಲ್ಲಿ ಸಿಐಟಿಯು, ರೈತ ಸಂಘಗಳು, ಕನ್ನಡ ಸೇನೆ, ಒಕ್ಕಲಿಗರ ರಕ್ಷಣಾ ವೇದಿಕೆ ಪ್ರಮುಖವಾಗಿವೆ.
ಜಿಲ್ಲೆಯ ಜನಪರ ಸಂಘಟನೆಗಳ ಮುಖಂಡರುಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದ್ದಾರೆ. ದಿನೇ ದಿನೇ ಹೋರಾಟಕ್ಕೆ ಸಿಗುತ್ತಿದ್ದ ಬೆಂಬಲವನ್ನು ಗಮನಿಸಿದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು 15-10-2021 ರಂದು ಧರಣಿ ಸ್ಥಳಕ್ಕೆ ಆಗಮಿಸಿ ದಿನಾಂಕ 18-10-2021 ರಂದು ವಿಧಾನ ಸೌಧದಲ್ಲಿ ಸಭೆ ಕರೆಯಲಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆ ಹೋರಾಟ ನಿರತ ಮುಖಂಡರು ಸಭೆಗೆ ಬರುವಂತೆ ಆಹ್ವಾನ ನೀಡಿದರು. ಅಲ್ಲಿಗೆ ಧರಣಿ ಪ್ರಾರಂಭಿಸಿ 35 ದಿನಗಳಾಗಿದ್ದವು. ಧರಣಿ ಸ್ಥಳದಲ್ಲೇ ಪತ್ರಿಕಾ ಗೋಷ್ಠಿ ನಡೆಸಿ, ಧರಣಿಗೆ ಬೆಂಬಲ ನೀಡಿದ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆಯಾಗಬೇಕೆಂದು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ, ದಲಿತ, ಕಾರ್ಮಿಕ, ಮಹಿಳಾ, ಕನ್ನಡಸೇನೆ, ಪ್ರಗತಿಪರ ಸಂಘನೆಗಳ ನೇತೃತ್ವದಲ್ಲಿ ಪ್ರಾರಂಭವಾಗಿದ್ದ ಈ ಧರಣಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಹಾಲಿ-ಮಾಜಿ ಶಾಸಕರುಗಳು, ಜೆಡಿಎಸ್, ಕಾಂಗ್ರೆಸ್, ಸಿಪಿಐ(ಎಂ), ಬಿ.ಎಸ್.ಪಿ, ಕೆ.ಎಸ್.ಆರ್.ಪಕ್ಷದ ಮುಖಂಡರುಗಳು, ಇಂಡುವಾಳು, ಸಿದ್ದಯ್ಯನ ಕೊಪ್ಪಲು, ಮೋಳೆಕೊಪ್ಪಲು, ತಗ್ಗಹಳ್ಳಿ, ಕಾರಸವಾಡಿ, ಸೂನಗಹಳ್ಳಿ, ಮಂಗಲ, ಸಂತೆಕಸಲಗೆರೆ, ಸಾತನೂರು, ಹುಲಿವಾನ, ಗುನ್ನಾಯಕನಹಳ್ಳಿ, ಬೂದನೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು, ಸಿ.ಐ.ಟಿ.ಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ,ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರು, ಕಬ್ಬು ಒಪ್ಪಿಗೆದಾರರ ಸಂಘ, ಪತ್ರಕರ್ತರ ಸಂಘ, ಸ್ವಂತ ಮನೆ ನಮ್ಮ ಹಕ್ಕು ಸಂಘಟನೆ, ಸ್ಪಂದನಾ ಮಹಿಳಾ ಸಂಘಟನೆ, ವಿಮೋಚನಾ ಮಹಿಳಾ ಸಂಘಟನೆ, ಜನಪರ ಟ್ರಸ್ಟ್, ಮೈಷುಗರ್ ಕಾರ್ಖಾನೆಯ ನಿವೃತ್ತ ನೌಕರರು, ಛಾಯಾಗ್ರಾಹಕರ ಸಂಘ, ಕಲಾವಿದರ ಸಂಘ, ಮಂಡ್ಯ ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ, ಜಯಕರ್ನಾಟಕ ಅಂಗವಿಕಲರ ಸಂಘ, ಅಖಂಡ ರಕ್ಷಣಾ ಸೇವಾದಳ, ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ಆಟೋ ಚಾಲಕರ ಸಂಘ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿಮಾನಿಗಳ ಸಂಘ, ಬಿಸಿಯೂಟ, ಅಂಗನವಾಡಿ, ಬೀದಿಬದಿ, ಬೀಡಿ ಕಾರ್ಮಿಕರು, ಗ್ರಾಮಪಂಚಾಯಿತಿ, ಕಟ್ಟಡ, ಕೈಗಾರಿಕಾ ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಗಳು, ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು, ಅಂಕಣಕಾರರು, ಬರಹಗಾರರು ಸೇರಿದಂತೆ 70ಕ್ಕೂ ಅಧಿಕ ಸಂಘಟನೆಗಳು ಧರಣಿಯನ್ನು ಬೆಂಬಲಿಸಿ ಧರಣಿಯಲ್ಲಿ ಭಾಗವಹಿಸಿದ್ದಾರೆ.
ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆ ಹೋರಾಟಕ್ಕೆ ಸಿಕ್ಕ ಜಯ:
ದಿನಾಂಕ 18-10-2021ರ ಮುಖ್ಯಮಂತ್ರಿಗಳ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ 2 ವರ್ಷಗಳ ಅವಧಿಗೆ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ನಿರ್ವಹಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು. 2 ವರ್ಷಗಳ ನಂತರ ಅದರ ಸಾಧಕ-ಬಾಧಕಗಳನ್ನು ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಇಂತಹ ಇತಿಹಾಸವಿರುವ ಕಾರ್ಖಾನೆಯನ್ನು ಲಾಭಕೋರ ನೀತಿಗೆ ವರ್ಗಾಯಿಸಲು ಹೊರಟಿದ್ದ ಸ್ವಾರ್ಥ ಹಾಗೂ ಸಮಯಸಾದಕ ರಾಜಕಾರಣವನ್ನು, ಭ್ರಷ್ಟಾಚಾರವನ್ನು ಹಿಮ್ಮೆಟ್ಟಿಸಲಾಗಿದೆ. ದೊಡ್ಡ ಜನಾಂದೋಲನದ ಮೂಲಕ ಮೈಶುಗರ್ ಜನರ ಆಸ್ತಿಯನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಲು ಸಾಧ್ಯವಾಗಿದೆ.
ದೇಶದ ಸಂಪತ್ತನ್ನು ಮಾರಲು ಹೊರಟಿರುವ ಮೋದಿ ಸರ್ಕಾರದ ಈ ಕಾಲಘಟ್ಟದಲ್ಲಿ ಸಾರ್ವಜನಿಕ ಉದ್ದಿಮೆಗಳ ಉಳಿವಿನ ಹೋರಾಟದ ಸ್ಫೂರ್ತಿಯಾಗಿ ಮೈಷುಗರ್ ಒಂದು ಸ್ಮರಣೀಯ ನೆನಪು.