ಸಾರಿಗೆ ನೌಕರರ ಮುಷ್ಕರ: ಒಂದು ದಿನ ಮುನ್ನವೇ ಕಾವೇರಿತು

ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸತತ ಆರು ದಿನಗಳು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೂ ಸಹ ರಾಜ್ಯ ಸರಕಾರ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಇಂದಿನಿಂದ ಸಾರಿಗೆ ಮುಷ್ಕರಕ್ಕೆ ನೌಕರರು ಕರೆ ನೀಡಿದ್ದರು.

ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ಸಾರ್ವಜನಿಕ ಸಾರಿಗೆ ಸ್ತಬ್ಧ

ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿಯ ನಾಲ್ಕು ನಿಗಮಗಳ ನೌಕರರು ರಾಜ್ಯಾದ್ಯಂತ ಮತ್ತು ಬೆಂಗಳೂರಿನಲ್ಲಿ ಸಂಚರಿಸುವ ಸಾವಿರಾರು ಬಸ್‌ಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂದಿನಿಂದ ನಡೆಯುವ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಮುಷ್ಕರಕ್ಕೆ ಕರೆ ನೀಡಿರಿರುವ ಮುಖಂಡರು ತಿಳಿಸಿದ್ದಾರೆ.

ಮುಷ್ಕರಕ್ಕೆ ಕಾರಣ: ಸಾರಿಗೆ ನೌಕರರ ಪ್ರಮುಖ ಬೇಡಿಕೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ತಮಗೆ ರಾಜ್ಯ ಸರ್ಕಾರ ವೇತನ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕೂ ನಿಗಮದ ಸುಮಾರು 1.30 ಲಕ್ಷ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ನೆನ್ನೆ ಸಂಜೆಯಿಂದಲೇ ರಾಜ್ಯ ರಸ್ತೆ ಸಾರಿಗೆಗಳು ಬಹುತೇಕ ಕಡೆಗಳಲ್ಲಿ ರಸ್ತೆಗಿಳಿದಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಬಸ್ಗಳ ಓಡಾಟ ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಜನರ ದಿನನಿತ್ಯದ ವಹಿವಾಟುಗೆ, ಕೆಲಸ-ಕಾರ್ಯಗಳಿಗೆ ಸಾರ್ವಜನಿಕ ಬಸ್ ಗಳಲ್ಲೇ ಸಂಚಾರ ಮಾಡುವ ಲಕ್ಷಾಂತರ ಮಂದಿ ಇಂದು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದರ ಬೆನ್ನಲೇ ಖಾಸಗಿ ಸಾರಿಗೆ ಬಸ್ಸುಗಳು ರಸ್ತೆಗಳಲ್ಲಿ ಅತ್ಯಧಿಕವಾಗಿ ಓಡಾಡುತ್ತಿವೆ. ಹಲವೆಡೆ ಸಾರ್ವಜನಿಕರಿಂದ ದುಪ್ಪಟ್ಟು ದರ ಕೇಳುವುದು, ಪ್ರಯಾಣಿಕರಿಂದ ದುಬಾರಿ ದರ ಸುಲಿಗೆ ಮಾಡುವುದು ವ್ಯಾಪಕವಾಗಿ ನಡೆಯುತ್ತಿದೆ.  ಮುಷ್ಕರದ ಪರಿಣಾಮ ಖಾಸಗಿ ಬಸ್ಸುಗಳ ಮಾಲೀಕರಿಗೆ ಹೆಚ್ಚಿನ ಲಾಭವನ್ನು ಸೇರುತ್ತದೆ.

ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 20 ಸಾವಿರ ಸರಕಾರಿ ಬಸ್ಸುಗಳು ಓಡಾಡುತ್ತಿದ್ದು, ಸುಮಾರು 1 ಕೋಟಿ ಪ್ರಯಾಣಿಕರು ಅದರ ಅವಲಂಬಿತರು. ಆದರೆ ಇಂದು ಸಾರ್ವಜನಿಕರಿಗೆ ಸಾರಿಗೆ ಬಸ್ಸುಗಳು ಇಲ್ಲದ ಪರಿಣಾಮವಾಗಿ ಖಾಸಗಿ ಬಸ್ಸುಗಳನ್ನೇ ನಂಬಿಕೊಳ್ಳಬೇಕಾದ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ.

ಆದರೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಲವು ಕಡೆಗಳಿಗೆ ಇಂದು ಬೆಳಗ್ಗೆ ಕೆಲವು ಬಸ್ಸುಗಳ ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿರುವುದು ಕಂಡುಬಂದಿತ್ತು.

ಇದನ್ನು ಓದಿ : ಬೇಡಿಕೆ ಈಡೇರಿಕೆಗಾಗಿ ವಾರಪೂರ್ತಿ ಸಾರಿಗೆ ನೌಕರರ ವಿನೂತನ ಪ್ರತಿಭಟನೆ

ಮಂಡ್ಯದಲ್ಲಿ ನೆನ್ನೆಯಿಂದಲೇ ಮುಷ್ಕರದ ಬಿಸಿ ತಟ್ಟಿದೆ

ಸಾರಿಗೆ ನೌಕರರ ಮುಷ್ಕರದ ಬಿಸಿ ನೆನ್ನೆಯಿಂದಲೇ ಸಾರ್ವಜನಿಕರಿಗೆ ತಟ್ಟಿದ್ದು, ಮಧ್ಯಾಹ್ನದ ನಂತರ ಬಸ್‌ಗಳ ಓಡಾಟ ತುಂಬಾ ಕಡಿಮೆ ಇದ್ದ ಪರಿಣಾಮ ಜನರು ತಮ್ಮತಮ್ಮ ಊರಿಗೆ ಮರಳಲು ಪರದಾಡಿದರು.

ಮಂಡ್ಯ ವಿಭಾಗದಲ್ಲಿ ನೆನ್ನೆ ಶೇ 60 ರಷ್ಟು ಬಸ್‌ಗಳು ಮಾತ್ರ ರಸ್ತೆಗಳಿದಿದ್ದು, ಮಧ್ಯಾಹ್ನದ ನಂತರದ ಎಬಿ ಮಾರ್ಗಗಳು, ಹಾಲ್ಟಿಂಗ್‌ ಬಸ್‌ಗಳು ಬಸ್‌ ಘಟಕಗಳಿಂದ ತೆರಳಲಿಲ್ಲ. ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾದರೆ ಇಂದು ಸಹ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮುಷ್ಕರಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಿಬ್ಬಂದಿ ಮುಷ್ಕರದ ತಯಾರಿ ಮಾಡಿಕೊಂಡರು.

ನಿತ್ಯ 345 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆದರೆ, ಮಂಗಳವಾರ 262 ಬಸ್‌ಗಳಷ್ಟೇ ರಸ್ತೆಗಿಳಿದಿದ್ದು, ಎಲ್ಲಾ ಬಸ್‌ಗಳು ಮಂಗಳವಾರ ರಾತ್ರಿ ಘಟಕಗಳಿಗೆ ಹಿಂದಿರುಗಿದವು. ಸಂಜೆ ನಂತರ ಬಸ್‌ಗಳಿಲ್ಲದೆ ಪ್ರಯಾಣಿಕರು ಖಾಸಗಿ ಬಸ್‌, ಆಟೋಗಳನ್ನು ಹಿಡಿಯಬೇಕಾಯಿತು.

ಮಳವಳ್ಳಿಗೆ ಅರ್ಧ ಗಂಟೆಗೆ ಒಂದರಂತೆ ಬಸ್‌ಗಳು ಇದ್ದವು. ಆದರೆ ಸಂಜೆ 4.45ಕ್ಕೆ ಮಳವಳ್ಳಿಗೆ ಒಂದು ಬಸ್‌ ಹೋಯಿತು. ನಂತರ 6.15 ರವರೆಗೆ ಯಾವುದೇ ಬಸ್‌ ಸಂಚರಿಸಲಿಲ್ಲ.

ರಾಯಚೂರುನಲ್ಲಿ ಬಿಕೋಎನ್ನುತ್ತಿರುವ ನಿಲ್ದಾಣಗಳು

ಸಾರ್ವಜನಿಕ ಬಸ್ ಓಡಾಟದಿಂದ ಜನಜಂಗುಳಿಯಂತೆ ಕೂಡಿರುತ್ತಿದ್ದ ರಾಯಚೂರು ಕೇಂದ್ರ ಬಸ್ ನಿಲ್ದಾಣ ಇಂದು ಬಿಕೋ ಎನ್ನುತ್ತಿದೆ. ಜಿಲ್ಲೆಯ ಎಲ್ಲ ಏಳು ಡಿಪೋಗಳಲ್ಲಿಯೂ ಇದೇ ಸ್ಥಿತಿ ಇದೆ. ಮುಷ್ಕರಕ್ಕೆ ಬೆಂಬಲ ನೀಡಿರುವ ಚಾಲಕರು ಮತ್ತು‌ ನಿರ್ವಾಹಕರು ಬಸ್ ನಿಲ್ದಾಣದತ್ತ ಸುಳಿಯುತ್ತಿಲ್ಲ.

ಇದನ್ನು ಓದಿ : ಬಿಎಂಟಿಸಿ ಖಾಸಗೀಕರಣಕ್ಕೆ ನೌಕರರ ಫೆಡರೇಷನ್ ತೀವ್ರ ವಿರೋಧ

ಪ್ರಮುಖ ಬಸ್ ನಿಲ್ದಾಣದ ಮುಂಭಾಗ ಕ್ರೂಸರ್, ಜೀಪ್ ಹಾಗೂ ಆಟೋಗಳನ್ನು ನಂಬಬೇಕಾದ ಸ್ಥಿತಿ ಸಾರ್ವಜನಿಕರಿಗೆ ಎದುರಾಯಿತು.

ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ‌ ಸರ್ಕಾರಿ ಬಸ್ ಗಳು ಬರುತ್ತಿದ್ದು, ಕರ್ನೂಲ್, ಮಂತ್ರಾಲಯ, ಗದ್ವಾಲ್‌, ಮೆಹಬೂಬನಗರ್ ಕಡೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ತುಮಕೂರು ಬಸ್‌ ನಿಲ್ದಾಣ

ಮುಷ್ಕರಕ್ಕೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಚಿಕ್ಕಮಗಳೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ನೌಕರರು ಬಸ್ ಸಂಚಾರ ನಡೆಸದೇ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂಜಾನೆಯೇ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಸಾರಿಗೆ ಬಸ್ ಇಲ್ಲದಿರುವುದರಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು.

ಜಿಲ್ಲೆಯಲ್ಲಿ 150ಕ್ಕೂ ಅಧಿಕ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ. ಬಸ್ ನಿಲ್ದಾಣದಲ್ಲಿಯೇ ಅಧಿಕಾರಿಗಳು ಬೀಡುಬಿಟ್ಟು ಖಾಸಗಿ ಬಸ್ ಗಳನ್ನು ಪ್ರಯಾಣಕ್ಕೆ ಅವಕಾಶ ನೀಡಿದ್ದರು. ಆದರೂ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು.

ಸರ್ಕಾರಿ ಬಸ್ಸುಗಳು ನಿಲ್ದಾಣಕ್ಕೆ ಬರದಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಸಾಲುಗಟ್ಟಿ ನಿಂತಿದ್ದವು. ಜಿಲ್ಲೆಯ ತರೀಕೆರೆ, ಕಡೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿಯೂ ಸಹ ಖಾಸಗಿ ಬಸ್ ಗಳನ್ನು ನಿಯೋಜನೆ ಮಾಡಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *