ಕನ್ನಡದ ಹಿರಿಯ ಅನುವಾದಕಿಯರಲ್ಲಿ ಒಬ್ಬರಾದ ಶ್ರೀಮತಿ ಸರಸ್ವತಿ ಗಜಾನನ ರಿಸಬೂಡ್ ಈಚೇಗೆ ಅಂದರೆ, 2021ರ ಆಗಸ್ಟ್ 25ರಂದು ನಿಧನರಾದರು. ಬೆಂಗಳೂರಿನ ಜೆ.ಪಿ.ನಗರದಲ್ಲಿ ಮಗ ಡಾ.ಜಯಂತ ರಿಸಬೂಡ ಅವರೊಂದಿಗೆ ವಾಸವಾಗಿದ್ದ ಸರಸ್ವತಿ ರಿಸಬೂಡ ಅವರು ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದರು.
ಮಹಾರಾಷ್ಟ್ರದ ಸಾಂಗ್ಲಿಯಿಂದ ಕರ್ನಾಟಕಕ್ಕೆ ಸರಸ್ವತಿ ರಿಸಬೂಡ್ ಅವರು ಕನ್ನಡ ಕಲಿತು, ಮರಾಠಿಯ ಪ್ರಮುಖ ಲೇಖಕಿಯರಾದ ಇರಾವತಿ ಕರ್ವೆ, ದುರ್ಗಾ ಭಾಗವತ್, ಗೋದಾವರಿ ಪರುಲೇಕರ್, ಛಾಯಾ ದಾತಾರ್ ಮುಂತಾದವರ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದರು.
ಸರಸ್ವತಿ ರಿಸಬೂಡ್ ಅವರು ಎಸ್.ಎಸ್.ಎಲ್.ಸಿ. ವಿಧ್ಯಾಭ್ಯಾಸ ಮಾಡಿದ್ದರು. ಅವರ ಪತಿ ಗಜಾನನ ವೆಂಕಟೇಶ ರಿಸಬೂಡ ಅವರು.
ಮಾನವ ಎಚ್ಚೆತ್ತಾಗ:
ಹೋರಾಟಗಳ ಪರಂಪರೆ ಬಗೆಗಿನ ಹಲವಾರು ಕೃತಿಗಳಲ್ಲಿ ಅತ್ಯಂತ ವಿಶಿಷ್ಠವಾದ ಕೃತಿಯೆಂದರೆ ಮಾನವ ಎಚ್ಚೆತ್ತಾಗ ಕೃತಿಯಾಗಿದೆ. ಮೂಲತಃ ಇದು ಏಳು ದಶಕಗಳ ಹಿಂದೆ ಜೀತ ಪದ್ಧತಿಯನ್ನು ನಿರ್ಮೂಲನೆ ಗೊಳಿಸುವಲ್ಲಿ ಯಶಸ್ವಿಯಾದ ವಾರಲೀ ಆದಿವಾಸಿ ಜನಗಳ ಹೋರಾಟದ ಕಥೆ.
ಮಾನವ ಎಚ್ಚೆತ್ತಾಗ ತನಗೆ ಹಾಕಿದ ಕೊಳವನ್ನು ಕಿತ್ತೆಸೆಯಬಲ್ಲ, ಶೋಷಣೆಯ ನೊಗವನ್ನು ಮುರಿದೊಗೆಯಬಲ್ಲ, ಜೀವ ಹಿಂಡುವ ವ್ಯವಸ್ಥೆಯನ್ನು ಬದಲಿಸಬಲ್ಲ ಎಂಬುವುದನ್ನು ಚರಿತ್ರೆಯುದ್ದಕ್ಕೂ ನೋಡುತ್ತೇವೆ. ಹೀಗೆ ನೂರಾರು ವರ್ಷಗಳಿಂದ ಜಮೀನ್ದಾರಿ, ಭೂಮಾಲೀಕರ ಕ್ರೌರ್ಯವನ್ನು ಬಾಯ್ಮುಚ್ಚಿ ಒಪ್ಪಿಕೊಂಡ ಆಗಿನ ಮುಂಬೈ ಪ್ರಾಂತದ ಠಾಣೆ ಜಿಲ್ಲೆಯ ಈ ವಾರಲೀ ಆದಿವಾಸಿ ಸಮುದಾಯ ಎಚ್ಚರಗೊಳ್ಳುವವರೆಗಿನ ಹೋರಾಟದ ಕಥೆಯನ್ನು ಈ ಪುಸ್ತಕದಲ್ಲಿ ಸಶಕ್ತವಾಗಿ ಹಿಡಿದಿಟ್ಟಿದ್ದಾರೆ.
ಅನುವಾದಿತ ಪ್ರಮುಖ ಕೃತಿಗಳು
ಡಾ. ಇರಾವತಿ ಕರ್ವೆ ಅವರ ಯುಗಾಂತ, ಛಾಯಾ ದಾತಾರ್ ಅವರ ಸ್ತ್ರೀ-ಪುರುಷ, ದುರ್ಗಾ ಭಾಗವತ್ ಅವರ ದಿಗಂತದಾಚೆ, ಗೋದಾವರೀ ಪರುಳೇಕರ್ ಅವರ ಮಾನವ ಎಚ್ಚೇತ್ತಾಗ, ಪು.ಲ.ದೇಶಪಾಂಡೆ ಅವರ ಸುಂದರ ನಾನಾಗುವೆ, ಗ.ಪ. ಪ್ರಧಾನ್ ಅವರ ಸ್ವಾತಂತ್ರ್ಯ ಸಂಗ್ರಾಮದ ಮಹಾಭಾರತ, ಶ್ರೀಪಾದ ರಘುನಾಥ ಭಿಡೆ ಅವರ ವಾಲ್ಮೀಕಿ ರಾಮಾಯಣ-ಶಾಪ ಮತ್ತು ವರ ಪುಸ್ತಕಗಳನ್ನು ಅನುವಾದಿಸಿದ್ದಾರೆ.
ಅಲ್ಲದೆ, ಕನ್ನಡ ಶಿಕಾ ಎಂಬ ಕನ್ನಡ ಸ್ವಯಂಬೋಧಿನಿ ಪುಸ್ತಕವನ್ನು ರಚಿಸಿರುವ ಸರಸ್ವತೀ ರಿಸಬೂಡ ಅವರಿಗೆ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಗೌರವ ಪ್ರಶಸ್ತಿ ಲಭಿಸಿದೆ.