ಸರ್ಕಾರಗಳು ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ: ಚಂದ್ರಶೇಖರನ್‌

ಬೆಂಗಳೂರು: ಸಿಐಟಿಯು ಅಖಿಲ ಭಾರತ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಐಎನ್‌ಟಿಯುಸಿ ಮುಖಂಡರಾದ ಚಂದ್ರಶೇಖರನ್‌, ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ತುಂಬಾ ಹಾನಿಯುಂಟು ಮಾಡಿದೆ. ಪ್ರತಿವೊಂದು ಸಮುದಾಯವನ್ನು ವಿಭಜಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಮಾಡಿದ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನ (ಗಾಯತ್ರಿ ವಿಹಾರ)ದ ರಂಜನ ನಿರುಲಾ ಮತ್ತು ರಘುನಾಥ್‌ ಸಿಂಗ್‌ ವೇದಿಕೆ – ಶ್ಯಾಮಲ್‌ ಚಕ್ರವರ್ತಿ ನಗರದಲ್ಲಿ ನಡೆಯುತ್ತಿದೆ. ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರು ಮಾತನಾಡಿದರು.

ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌(ಐಎನ್‌ಟಿಯುಸಿ) ಮುಖಂಡ ಚಂದ್ರಶೇಖರನ್‌ ಮುಂದುವರೆದು ಮಾತನಾಡಿ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕಾರ್ಮಿಕ ವರ್ಗ ಇಂದು ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ದೇಶವನ್ನು ಕೋಮುವಾದ ಆವರಿಸಿದೆ. ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇದ್ದ 26 ಕಾನೂನುಗಳನ್ನು ಬದಲಾವಣೆ ಮಾಡಿ ನಾಲ್ಕು ನೀತಿ ಸಂಹಿತೆಗಳನ್ನಾಗಿ ಮಾಡಲಾಗಿದೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ದೇಶವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಟೀಕಿಸಿದರು.

ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಅಂದರೆ, ವಿಮೆ, ರೈಲ್ವೇ, ರಕ್ಷಣಾ ಇಲಾಖೆ, ಕಲ್ಲಿದ್ದಲು, ಉಕ್ಕು, ಸೇರಿದಂತೆ ಇತರೆ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ. ಬಿಜೆಪಿಯದೇ ಕಾರ್ಮಿಕರ ಸಂಘಟನೆಯಾದ ಬಿಎಂಎಸ್‌ ಈ ನೀತಿಗಳನ್ನು ವಿರೋಧಿಸುತ್ತಿವೆ ಎಂದರು.

ಕೇಂದ್ರ ಸರ್ಕಾರ ಕೋಮು ಅಜೆಂಡಾವನ್ನು ಜಾರಿಗೊಳಿಸುತ್ತಿದ್ದು, ಇಡೀ ದೇಶವನ್ನು ಇಂದು ಕೋಮು ದಳ್ಳುರಿಯಲ್ಲಿ ತಳ್ಳಿದೆ. ಇದರಿಂದ ಅಮೃತ್ಯ ಸೇನ್‌, ರಘುರಾಮ್‌ ರಾಜನ್‌ ಮುಂತಾದ ಆರ್ಥಿಕ ತಜ್ಞರ ಸಲಹೆಗಳನ್ನು ಲೆಕ್ಕಿಸುತ್ತಿಲ್ಲ. ತಮ್ಮದೇ ಆದ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಒಗ್ಗೂಡಿ ಹೋರಾಟಗಳನ್ನು ನಡೆಸಬೇಕಾಗಿದೆ ಎಂದರು.

ಎಐಟಿಯುಸಿಯ ಅಮರ್ಜಿತ್‌ ಕೌರ್‌ ಮಾತನಾಡಿ, ದೇಶದಲ್ಲಿ ಇಂದಿನ ಪರಿಸ್ಥಿತಿ ತುಂಬಾತುಂಬಾ ವಿಷಮವಾಗಿದೆ. ಮೋದಿ ಆಡಳಿತ ಎಲ್ಲಾ ವರ್ಗದ ಜನರ ಸ್ವಾತಂತ್ರ್ಯಕ್ಕೆ ಆತಂಕ ತಂದಿದೆ. ದೇಶದ ಐಕ್ಯತೆ ಮತ್ತು ಸಮಗ್ರತೆ ಆತಂಕದಲ್ಲಿದೆ ಎಂದು ಟೀಕಿಸಿದರು.

ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ದಿನಗೂಲಿ ನೌಕರರು ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಖಾಸಗೀಕರಣದ ಹಾದಿಯನ್ನು ಕೈಬಿಟ್ಟಿಲ್ಲ ಎಂದರು.

ಒಂದು ಕಡೆ ಬಡವರ ಸಂಖ್ಯೆ ಏರಿಕೆ ಕಾಣುತ್ತಿದ್ದರೆ, ಮತ್ತೊಂದು ಕಡೆ ಬಿಲಿಯನರ್‌ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದ ಶೇ. 50ರಷ್ಟು ಆದಾಯ ಕೇವಲ ಶೇ. 3ರಷ್ಟು ಶ್ರೀಮಂತರ ಕೈಯಲ್ಲಿದೆ. ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ.

ಹೆಚ್‌ಎಂಎಸ್‌ ಸಂಘಟನೆಯ ನಾಗನಾಥ್‌ ಮಾತನಾಡಿ, ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದೆ. ದೇಶದಲ್ಲಿ ಶೋಷಣೆ, ಬಡತನ ಹೆಚ್ಚಾಗುತ್ತಿದೆ. ಇದರ ವಿರುದ್ಧ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಮಿಕ ಮುಖಂಡರಾದ ರಾಜೇಂದ್ರ ನಾಯಕ್‌ ಮಾತನಾಡಿ, ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಎಲ್ಲಾ ಸಾರ್ವಜನಿಕ ವಲಯಗಳ ಸಂಸ್ಥೆಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗುತ್ತಿದೆ. ಲಕ್ಷಾಂತರ ಕಾರ್ಮಿಕರು ದಿನೇದಿನೇ ಉದ್ಯೋಗ ವಂಚನೆಗೆ ಒಳಗಾಗುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ವಲಯಗಳು ಖಾಸಗೀಕರಣ ಮಾಡಲಾಗುತ್ತಿದೆ ಎಂದರು.

ಸೇವಾ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಸೂರ್ಯ ಜಾರ್ಜ್‌ ಮಾತನಾಡಿ, ಶೇ. 93ರಷ್ಟು ಇದ್ದ ಅಸಂಘಟಿತರ ಕಾರ್ಮಿಕರ ಸಂಖ್ಯೆ ಶೇ. 98ಕ್ಕೆ ಏರಿದೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಕನಿಷ್ಠ ಸಾಮಾಜಿಕ ಭದ್ರತೆಯೂ ಇಲ್ಲ. ಹೆಚ್ಚು ಹೆಚ್ಚು ಕಾರ್ಮಿಕರನ್ನು ಬಡತನದ ಅಂಚಿಗೆ ತಳ್ಳಲಾಗುತ್ತಿದೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳ 13.5 ಲಕ್ಷ ಕೋಟಿ ಸಾಲಗಳನ್ನು ಮನ್ನಾ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *