ಚಿಕ್ಕಮಗಳೂರು: ರಾಜ್ಯ ಸರಕಾರ 13 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ವಿಲೀನ ಮಾಡುವುದಾಗಿ ಹೇಳಿದ ಬೆನ್ನಲ್ಲೆ ಚಿಕ್ಕಮಗಳೂರಿನಲ್ಲಿ 26 ಶಾಲೆಗಳನ್ನು ಬಂದ್ ಮಾಡಿ 6 ಖಾಸಗಿ ಶಾಲೆಗಳಿಗೆ ಪರವಾನಗಿ ನೀಡಿದ ಅಪಾಯಕಾರಿ ಬೆಳವಣಿಗೆ ನಡೆದಿದೆ.
ಹೌದು ಚಿಕ್ಕಮಗಳೂರು ಜಿಲ್ಲೆಯಲ್ಲಿ 26 ಶಾಲೆಗಳನ್ನು ಈ ಶೈಕ್ಷಣಿಕ ಅವಧಿಯಲ್ಲಿ ಮುಚ್ಚಲಾಗಿದೆ. ಹಾಜರಾತಿಯ ನೆಪವೊಡ್ಡಿ ಶಾಲೆಗಳನ್ನು ಮುಚ್ಚಲಾಗಿದೆ. ಖಾಸಗಿ ಶಾಲೆಗಳನ್ನು ಬಲಗೊಳಿಸಲು ಸರಕಾರ ಇಂತಹ ಕ್ರಮಗಳನ್ನು ತೆಗೆದುಕೊಂಡಿದೆ. ಸರಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗೆ ಅನುಮತಿ ನೀಡುತ್ತಿದ್ದಾರೆ, ಇದು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಭಾಗವಾಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ವರ್ಷದಿಂದ ವರ್ಷಕ್ಕೆ ಚಿಕ್ಕಮಗಳೂರಿನಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಾನೆ ಇದೆ. 2011ರಿಂದ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 105 ಸರಕಾರಿ ಕನ್ನಡ ಶಾಲೆಗಳು ಬಂದ್ ಆಗಿವೆ. ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡ್ತಿರೋದ್ರಿಂದಲೇ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬಂದಿದೆ ಎಂಬುದು ಪೋಷಕರ ವಾದವಾಗಿದೆ.
ಒಂದೆಡೆ, ಪೋಷಕರ ಇಂಗ್ಲೀಷ್ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳು ಅಂದ ಚಂದ ಕಾಣದ ಪರಿಣಾಮ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಲೇ ಇದೇ, ಸರ್ಕಾರ ಕೇಳ್ದೋರ್ಗೆಲ್ಲಾ ಖಾಸಗಿ ಶಾಲೆಗಳಿಗೆ ಅನುಮತಿ ನಿಡುತ್ತಿರುವುದರಿಂದ ಈ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಸಾಹಿತಿಗಳು ಆರೋಪಿಸಿದ್ದಾರೆ.
ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಪುಸ್ತಕ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ವಾತವರಣವನ್ನು ಸರಕಾರ ಸೃಷ್ಟಿ ಮಾಡುತ್ತಿಲ್ಲ. ರಾಜ್ಯ ಸರಕಾರ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಕಾರಣ ಹಾಗೂ ಸರ್ಕಾರಗಳ ವ್ಯಾಪಾರೀಕರಣ, ಖಾಸಗೀಕರಣ ನೀತಿಯಿಂದ ಸರ್ಕಾರಿ ಶಾಲೆಗಳು ಬೀಗ ಕಾಣ್ತಿವೆಯಾ ಎಂದು ಸರ್ಕಾರದ ಮೇಲೆ ಅನುಮಾನ ಮೂಡುತ್ತಿದೆ. ಇನ್ನಾದ್ರು ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸೋ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆಯಾ? ಕಾದುನೋಡಬೇಕಿದೆ.