ಬೆಂಗಳೂರು: ಕಳೆದ ಒಂದೂವರೇ ವರ್ಷದಿಂದ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಆರೋಗ್ಯ, ವಿದ್ಯಾಭ್ಯಾಸ, ಆರ್ಥಿಕವಾಗಿ, ಇತ್ಯಾದಿ ಎಲ್ಲಾ ರಂಗಗಳಲ್ಲಿಯೂ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ನಾವು ಒಂದು ವೇದಿಕೆ ಮೂಲಕ ಸಮಸ್ಯೆಗಳ ಕುರಿತು ಚರ್ಚಿಸಿ ನಮ್ಮ ನಿಲುವುಗಳನ್ನು ಸರಕಾರದ ಮುಂದೂಡುತ್ತಿದ್ದೇವೆ ಎಂದು ರೂಪ್ಸಾ ಅಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ಅವರು ಮನವಿ ಮಾಡಿದ್ದಾರೆ.
ನಾವು ರಾಜ್ಯದ 12 ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ವಿವಿಧ ಸಂಘಟನೆಗಳು ಒಟ್ಟುಗೂಡಿ ಕರ್ನಾಟಕ ಖಾಸಗಿ ಶಾಲಾ ಮತ್ತು ಕಾಲೇಜ ಆಡಳಿತ ಮಂಡಳಿಗಳ ಒಕ್ಕೂಟ ಎಂದು ರಚನೆ ಮಾಡಿಕೊಂಡಿದ್ದೇವೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ಪೋಷಕರು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ, ಆದ ಕಾರಣ ಕಳೆದ ವರ್ಷವೂ ನಾವು ಶಾಲಾ ಶುಲ್ಕವನ್ನು ಹೆಚ್ಚಿಸಿಲ್ಲ. ಅದು ಈ ವರ್ಷವೂ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಒಂದೇ ಕಂತಿನಲ್ಲಿ ಪೂರ್ಣ ಶುಲ್ಕ ಕಟ್ಟಿ – ಪೋಷಕರಿಗೆ ಒತ್ತಡ ಹಾಕುತ್ತಿರುವ ಬಿಎನ್ಎಂ ಖಾಸಗಿ ಶಾಲೆ
ಅದೇ ರೀತಿಯಲ್ಲಿ ರೂಪ್ಸಾ ಒಕ್ಕೂಟವು ಕೈಗೊಂಡ ಕೆಲವು ನಿಲುವುಗಳು ಹೀಗಿವೆ. ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ನಮ್ಮ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ.
ರಾಜ್ಯದ ಶೇಕಡಾ 90 ಕ್ಕಿಂತ ಹೆಚ್ಚು ಶಾಲೆಗಳು ರಾಜ್ಯ ಸರ್ಕಾರ ಘೋಷಿಸಿದ ಶುಲ್ಕವನ್ನು ಒಪ್ಪಿಕೊಂಡಿವೆ ಆದರೂ ಇನ್ನೂ ಶೇಕಡಾ 50 ಪೋಷಕರು ಶುಲ್ಕ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ ಹಾಗೂ 2019-20ರ ಶೇಕಡಾ 30 ಭಾಗ ಪೋಷಕರು ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಈ ವಿಚಾರವಾಗಿ ನಿರ್ದೇಶಕರ ಸಮಿತಿಯನ್ನು ನೇಮಕ ಮಾಡಿರುವ ಸರ್ಕಾರ ಅವರ ಮೂಲಕವೇ ಬಾಕಿ ಇರುವ ಶುಲ್ಕದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಲೋಕೇಶ್ ಅವರು ವಿವರಿಸಿದರು.
ಯಾವ ಶಾಲೆಗಳು ಆರ್‌ಟಿಇ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯಕ್ಕಿಂತ ಹೆಚ್ಚು ಪಡೆದು ಗೊಂದಲಕ್ಕೆ ಕಾರಣರಾಗಿವೇಯೋ ಅವರ ಮೇಲೆ ಕ್ರಮಜರುಗಿಸಿ ಶುಲ್ಕ ಗೊಂದಲಕ್ಕೆ ತೆರೆ ಎಳೆಯಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಖಾಸಗಿ ಅನುದಾನ ರಹಿತ ಶಾಲೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಅನೇಕ ಸುತ್ತೋಲೆಗಳನ್ನು ಹೊರಡಿಸುವ ಮೂಲಕ 2002ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಲಾಗುತ್ತಿದೆ ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಒಕ್ಕೂಟವೂ ಆಗ್ರಹಿಸಿದೆ.
ಇದನ್ನು ಓದಿ: ಶುಲ್ಕ ಕಟ್ಟಿಸಿಕೊಳ್ಳಲು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ಎಸ್.ಎಫ್. ಐ ಆಗ್ರಹ
ನಮ್ಮ ಸಂವಿಧಾನ ದೇಶದ ಎಲ್ಲಾ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕನ್ನು ಹೇಗೆ ನೀಡಿದೆಯೋ ಹಾಗೆಯೇ ಆಹಾರದ ಭದ್ರತೆಯನ್ನು ನೀಡಿದೆ ಅದು ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿ ಅತಿಮುಖ್ಯ ಆದ್ದರಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳು ಎಂಬ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೆ ಬಿಸಿಊಟ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಲೋಕೇಶ್ ಅವರು ಉಲ್ಲೇಖಿಸಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆಗಳು ನಡೆಯದೆ ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿವೆ, ಅಲ್ಲಿಯ ಶಿಕ್ಷಕರಿಗೆ ಹಾಗೂ ಆಡಳಿತ ಮಂಡಳಿಗಳಿಗೆ ಆರ್ಥಿಕ ನೆರವನ್ನು ಘೋಷಿಸಬೇಕು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಗೊಂದಲವೂ, ಸೇರಿಕೊಂಡಂತೆ ಪ್ರಥಮ ಪಿಯು ಫಲಿತಾಂಶ ಹಾಗೂ ಪಠ್ಯಕ್ರಮ ಬೋಧನೆ, ನಿರಂತರ ಮೌಲ್ಯಮಾಪನ ಕುರಿತು ಈ ಎಲ್ಲಾ ವಿಷಯಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಪರಿಹಾರಗಳನ್ನು ನಿರಂತರವಾಗಿ ನೀಡಲು ಶಿಕ್ಷಣ ತಜ್ಞರ ಸಮಿತಿಯನ್ನು ಖಾಯಂ ಆಗಿ ನೇಮಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಹತ್ತನೇ ತರಗತಿಯಿಂದ ಸುಮಾರು 11 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಗೊಂಡು ಪಿಯುಸಿಗೆ ಪ್ರವೇಶ ಪಡೆಯಲು ಬರುವುದರಿಂದ ಇರುವ ಕಾಲೇಜುಗಳ ವಿಭಾಗಗಳನ್ನು ಹೆಚ್ಚಿಸಿಕೊಳ್ಳಲು ಸುತ್ತೋಲೆ ಹೊರಡಿಸಬೇಕು.
ಸ್ವಾಭಾವಿಕ ಬೆಳವಣಿಗೆ ಹೊಂದಲು ಹಾಗೂ ಹೊಸ ಶಾಲೆಗಳು ಅನುಮತಿ ಪಡೆಯಲು ಕಳೆದ ಎರಡು ವರ್ಷದಿಂದ ಶಾಲೆಗಳು ಕಾಯುತ್ತಿದ್ದು ಇದು ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗುತ್ತದೆ ಆದ್ದರಿಂದ ತಕ್ಷಣ ಈ ಕುರಿತು ಕ್ರಮವಹಿಸಬೇಕು.
ಮಾನ್ಯ ಶಿಕ್ಷಣ ಸಚಿವರು ಭರವಸೆ ಕೊಟ್ಟಂತೆ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು.
ಖಾಸಗಿ ಶಾಲೆಗಳು ಆರ್ಥಿಕವಾಗಿ ತೊಂದರೆಯಲ್ಲಿದ್ದು ಅವರ ಸಾಲಗಳ ಇಎಂಐ ಅನ್ನು ಶಾಲೆಗಳು ಪ್ರಾರಂಭವಾಗುವವರೆಗೂ ಮುಂದೂಡಿ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರೂಪ್ಸಾ ಒಕ್ಕೂಟ ಆಗ್ರಹಿಸಿದೆ.
ಈ ಮೇಲಿನ ಸಮಸ್ಯೆಗಳು ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಅಸ್ತಿತ್ವ ಹಾಗೂ, ಸ್ವತಂತ್ರ ಕಾರ್ಯಚಟುವಟಿಕೆಗೆ ಅಡ್ಡಿ ಉಂಟು ಮಾಡುತ್ತಿವೆ, ಇದು ಮಕ್ಕಳ ಗುಣಮಟ್ಟದ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ, ಈ ರೀತಿಯ ಇಲಾಖೆಯ ಪ್ರವೃತ್ತಿ ಹೀಗೆ ಮುಂದುವರೆದರೆ ಖಾಸಗೀ ಶಾಲಾ ಕಾಲೇಜುಗಳು ಶಾಶ್ವತವಾಗಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ದಯಮಾಡಿ ಈ ಕುರಿತು ತಕ್ಷಣ ಕ್ರಮಜರುಗಿಸಬೇಕೆಂದು ರೂಪ್ಸಾ ಒಕ್ಕೂಟ ಹೇಳಿಕೆಯನ್ನು ನೀಡಿದೆ.
Soopr sir…
soopr sir… Sariyahine ede…