ಸರ್ಕಾರಿ ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ; ʻʻಧ್ಯಾನʼʼದಲ್ಲಿ ಮುಳುಗಿದೆ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆರೋಗ್ಯ ತಪಾಸಣೆ ಇಲ್ಲ. ಹೀಗೆ ಸಾಕಷ್ಟು ಸಮಸ್ಯೆಗಳು ಸರ್ಕಾರಿ ಶಾಲೆಗಳು ಎದುರಿಸುತ್ತಿದ್ದರು ಸಹ ರಾಜ್ಯ ಸರ್ಕಾರ ಪರಿಹರಿಸುವ ಬದಲು ಅನಾವಶ್ಯಕ ಆದೇಶಗಳನ್ನು ಮಾಡುವ ಮೂಲಕ ʻʻಧ್ಯಾನʼʼದಲ್ಲಿ ಮುಳುಗಿದೆ ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಅರ್ಗನೈಜೇಶನ್‌ (ಎಐಡಿಎಸ್‌ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಸಿದ್ಧಪಡಿಸಿರುವ ವರದಿ(ಯು.ಡಿ.ಐ.ಎಸ್.ಇ.+) ಯಲ್ಲಿ ಹಲವು ಆಘಾತಕಾರಿ ಅಂಶಗಳು ಹೊರಬಂದಿವೆ. ವರದಿಯ ಪ್ರಕಾರ, ರಾಜ್ಯದ 76,450 ಶಾಲೆಗಳ ಪೈಕಿ, ಸುಮಾರು 1001 ಶಾಲೆಗಳಲ್ಲಿ ಅಂದರೆ, 943 ಸರ್ಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು ಮತ್ತು 48 ಖಾಸಗಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. 75,919 ಹೆಣ್ಣು ಮಕ್ಕಳ ಶಾಲೆಗಳ ಪೈಕಿ 1,570 ಶಾಲೆಗಳ ಶೌಚಾಲಯ ಕ್ರಿಯೆಯಲ್ಲಿ ಇಲ್ಲ ಮತ್ತು 328 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ ಎಂದು ಸರ್ಕಾರವೇ ವರದಿಯಲ್ಲಿ ತಿಳಿಸಿದೆ.

ಅಲ್ಲದೆ, 74,975 ಶಾಲೆಗಳ ಪೈಕಿ, 2,628 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ ಮತ್ತು 3,522 ಶಾಲೆಗಳ ಶೌಚಾಲಯ ಕ್ರಿಯೆಯಲ್ಲಿ ಇಲ್ಲ! ಮುಂದುವರೆದು, 712 ಶಾಲೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲ ಮತ್ತು 220 ಶಾಲೆಗಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. 8,153 ಶಾಲೆಗಳಲ್ಲಿ ಕೈ ತೊಳೆಯಲು ಸೌಲಭ್ಯ ಇಲ್ಲ. 22,616 ಶಾಲೆಗಳಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ ಇಳಿಜಾರಿನ ವ್ಯವಸ್ಥೆ ಇಲ್ಲ. 12,442 ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆದಿಲ್ಲ. ದೇಶದಲ್ಲಿನ ಶೈಕ್ಷಣಿಕ ಸ್ಥಿತಿಗತಿಯ  ಪರಿಸ್ಥಿತಿ ಇಷ್ಟೊಂದು ಅಧೋಗತಿಗೆ ಇಳಿದಿದೆ. ಇವುಗಳನ್ನು ಪರಿಹರಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಅಜಯ್‌ ಕಾಮತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿನ ಮೂಲಭೂತ ವ್ಯವಸ್ಥೆಯ ಸ್ಥಿತಿ – ಗತಿ. ದೇಶದ ಭವಿಷ್ಯವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಶಾಲೆಗಳ ದಯನೀಯ ಪರಿಸ್ಥಿತಿಯ ಬಗೆಗೆ ಸರ್ಕಾರವು ನಿರ್ಲಕ್ಷ್ಯದಿಂದ ಇರುವುದು ಅತ್ಯಂತ  ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳ ವಾಸ್ತವ ಪರಿಸ್ಥಿತಿ ಇನ್ನೂ ಘೋರವಾಗಿದೆ. ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 35,000 ಶಿಕ್ಷಕರ ಕೊರತೆ ಇದೆ ಮತ್ತು 4,767 ಏಕ ಶಿಕ್ಷಕ ಶಾಲೆಗಳಿವೆ. ಅಂತಹ ಏಕ ಶಿಕ್ಷಕರಿರುವ 10 ಶಾಲೆಗಳು ಚಾಮರಾಜನಗರದಲ್ಲಿ, 30 ಶಾಲೆಗಳು ರಾಯಚೂರಿನಲ್ಲಿ ಇದೆ. ಅಲ್ಲದೆ, ಈ ವರ್ಷ 1,60,000 ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದಿದ್ದಾರೆ. ಅಭಿವೃದ್ಧಿಗೊಳಿಸಲು, ಮೂಲ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರದ ಮುಂದೆ ಇಷ್ಟು ಅಗಾಧ ಸಾಧ್ಯತೆಗಳು ಮತ್ತು ಜವಾಬ್ದಾರಿ ಇರುವಾಗ, ಇದರ ಬಗ್ಗೆ ಕಿಂಚಿತ್ತೂ ಕ್ರಮ ವಹಿಸದೆ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸಲು ಹತ್ತು ನಿಮಿಷಗಳ ಧ್ಯಾನ ಮಾಡಿ ಎಂದು ಹೇಳುತ್ತಿರುವುದು ಸಂಘಪರಿವಾರದ ಹಿಡೆನ್‌ ಅಜೆಂಡಾಗಳನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಶೈಕ್ಷಣಿಕ ಪರಿಸರದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಪರಿಣಾಮಕಾರಿ ಪರಿಸರದಲ್ಲಿ, ನುರಿತ ಶಿಕ್ಷಕರ ಪಾಠದಿಂದ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಯುತ್ತದೆ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಇತರೆ ಮೂಲಭೂತ ಸೌಕರ್ಯಗಳು ಅಂದರೆ, ಶೌಚಾಲಯ, ಕುಡಿಯುವ ನೀರು, ಉತ್ತಮವಾದ ಕಟ್ಟಡ, ಸಮರ್ಪಕವಾದ ಬಿಸಿಯೂಟ – ಇವುಗಳಿಂದ ದೈಹಿಕ ಆರೋಗ್ಯ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಸರ್ಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ.

ಹೀಗಾಗಿ, ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಅಂಶಗಳು ಮುಂಬರುವ ವರ್ಷಗಳಲ್ಲಿಯೂ ಅಧಿಕಗೊಳ್ಳದಂತೆ ಶೈಕ್ಷಣಿಕ ವಾತಾವರಣವನ್ನು ಉತ್ತಮಪಡಿಸಬೇಕೆಂದು ಎಐಡಿಎಸ್‌ಒ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *