ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಬರೀ ಸುಳ್ಳುಗಳೇ ಇವೆ. ಅವರ ಇಡೀ ಭಾಷಣದಲ್ಲಿ ಸರ್ಕಾರ ಸುಳ್ಳನ್ನು ಹೇಳಿಸಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸುಳ್ಳು ಹೇಳುವುದು ಕಾಯಕವಾಗಿಬಿಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟಗಳೇ ಇತ್ತು ವಿನಃ ಮುನ್ನೋಟ ಇರಲೇ ಇಲ್ಲ. ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿದೆ, ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ? ಎಂದರು.
ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು, ಅದರಲ್ಲಿ ಎಷ್ಟು ಈಡೇರಿಸಿದ್ದೇವೆ ಎಂಬುದನ್ನು ಹೇಳಬೇಕಿತ್ತು. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿತು. ಆದರೆ ಅದರಲ್ಲಿ ಇದುವರೆಗೂ 50 ರಿಂದ 60 ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೇಳಿಸಲಾಗಿದೆ, ವಾಸ್ತವದಲ್ಲಿ ಈ ವರ್ಗದ ಜನರ ಪರವಾಗಿ ಸರ್ಕಾರ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಇದನ್ನು ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ಖಚಿತ: ಸಿದ್ದರಾಮಯ್ಯ
ನನ್ನ ರಾಜಕೀಯ ಜೀವನದ 40 ವರ್ಷಗಳಲ್ಲಿ ಇಷ್ಟೊಂದು ಕೆಟ್ಟ ಭಾಷಣ ನಾನು ಈ ಹಿಂದೆ ಎಂದೂ ಕೇಳಿಲ್ಲ. ಸುಳ್ಳನ್ನೇ ಜಾಸ್ತಿ ಹೇಳುವುದು, ಆಗಾಗ ಸತ್ಯ ಹೇಳುತ್ತಾರೆ ಅಷ್ಟೆ. ವಸ್ತುಸ್ಥಿತಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಇರಬೇಕು, ಕಳೆದ 4 ವರ್ಷಗಳ ಸಾಧನೆಗಳನ್ನು, ರಾಜ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಹೇಳಿಸಬೇಕಿತ್ತು ಎಂದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕೆಲವು ಮುಖ್ಯ ಭರವಸೆಗಳನ್ನು ನಾನು ನೆನಪು ಮಾಡಲು ಬಯಸುತ್ತೇನೆ ಎಂದಿರುವ ಸಿದ್ಧರಾಮಯ್ಯ ನಮ್ಮ ಸರ್ಕಾರದ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಇರುವ 1 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು, ಇದರ ಈಡೇರಿಕೆ ಆಗಿದೆಯಾ? ಎಂದು ಪ್ರಶ್ನಿಸಿದರು.
ಇದನ್ನು ಓದಿ: ಸ್ವಪಕ್ಷದವರಿಂದಲೇ ವಿರೋಧ; ಮಂಡ್ಯ ಜಿಲ್ಲಾ ಉಸ್ತುವಾರಿ ಕಳೆದುಕೊಂಡ ಸಚಿವ ಆರ್ ಅಶೋಕ್
20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣಭೂಮಿ ರೈತರಿಗೆ ತಲಾ 10,000 ರೂ. ಆರ್ಥಿಕ ನೆರವು ನೀಡಲಿದ್ದೇವೆ ಎಂದಿದ್ದರು, ಇದನ್ನೂ ಈಡೇರಿಸಿಲ್ಲ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರ ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು. ಭೂರಹಿತ ಕೃಷಿ ಕಾರ್ಮಿಕರಿಗೆ ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆಯಡಿ ಉಚಿತ 2 ಲಕ್ಷ ರೂ. ಅಪಘಾತ ವಿಮಾ ಸೌಲಭ್ಯ ನೀಡಲಾಗುವುದು ಎಂದಿದ್ದರು. ಆದರೆ ಇವು ಯಾವುದನ್ನು ಬಿಜೆಪಿ ಈಡೇರಿಸಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದರು.
ಬೆಳೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ ರೂ. 5,000 ಕೋಟಿ ರೈತಬಂಧು ಆವರ್ತನಿಧಿಯನ್ನು ಸ್ಥಾಪನೆ ಮಾಡಲಾಗುವುದು ಎಂದಿದ್ದರು. ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ರೈತಬಂಧು ವಿಭಾಗ ಸ್ಥಾಪನೆ ಮಾಡಲಾಗುವುದು ಎಂದಿದ್ದರು ಇವುಗಳನ್ನು ಸಹ ಈಡೇರಿಸಲಿಲ್ಲ ಎಂದರು.
ಬಿಜೆಪಿ ಘೋಷಿಸಿದ ಭರವಸೆಗಳಲ್ಲಿ ಸುಮಾರು 13 ಅಂಶಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ, ರೈತರಿಗೆ ಹಲವು ಭರವಸೆಗಳನ್ನು ನೀಡಿದ್ದರು, ಆದರೆ ಯಾವೊಂದು ಭರವಸೆಯನ್ನು ಈಡೇರಿಸಲಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟು ಆಗುವುದು ಹೇಗೆ? ಎಂದು ಪ್ರಶ್ನಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ