ಬೆಂಗಳೂರು: ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಅಧಿನಿಯಮವನ್ನು ಹಿಂಪಡೆಯುವುದಿಲ್ಲ. ನಷ್ಟದಲ್ಲಿರುವ ಎಪಿಎಂಸಿಗಳು ವಿಲೀನಕ್ಕೆ ಪ್ರಸ್ತಾವನೆ ಬಂದರೆ ಪರಿಶೀಲಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ಸದಸ್ಯ ಹರೀಶ್‍ಕುಮಾರ್ ಎಪಿಎಂಸಿಗಳಲ್ಲಿ ಒಂದು ರೂ. 40 ಪೈಸೆ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಆಗ ಪುತ್ತೂರು ಎಂಪಿಸಿಗೆ 7 ಕೋಟಿ ಆದಾಯ ಬರುತ್ತಿತ್ತು. ಶುಲ್ಕವನ್ನು 60 ಪೈಸೆಗೆ ಇಳಿಸಿದ ಮೇಲೆ ನಾಲ್ಕೈದು ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹವಾಗಿದೆ. ರೈತ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ನಿಯಮ ಜಾರಿಯಲ್ಲಿರುವುದರಿಂದ ಈ ವರ್ಷ ಎರಡು ಕೋಟಿಯಷ್ಟು ಆದಾಯ ಸಂಗ್ರಹವಾಗುವ ನಿರೀಕ್ಷೆಯಿಲ್ಲ. ಎಪಿಎಂಸಿ ನಷ್ಟದಲ್ಲಿದೆ, ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲಾಗಿದೆ. ಈ ಮೊದಲು ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕಾಗಿತ್ತು. ಹೊರಗಡೆ ಮಾರಾಟ ಮಾಡಿದರೆ 5-10 ಸಾವಿರ ದಂಡ ವಿಧಿಸಲಾಗುತ್ತಿತ್ತು. ಅದನ್ನು ರದ್ದು ಮಾಡಿದ್ದೇವೆ.
ಇದರಿಂದ ರೈತರಿಗೆ ಅನುಕೂಲವಾಗಲಿದೆ. ವರ್ಷಕ್ಕೆ ಎಲ್ಲ ಎಪಿಎಂಸಿಗಳಿಂದ 625 ಕೋಟಿ ರೂ.ನಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಸೆಸ್ ಕಡಿಮೆಯಾದ ಮೇಲೆ 170 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆಯಿದೆ. ಯಾವ ಎಪಿಎಂಸಿಗಳು ನಷ್ಟದಲ್ಲಿಲ್ಲ. ಆದಾಯ ಪ್ರಮಾಣ ಕಡಿಮೆಯಾಗಿದೆ. ಯಾರಾದರೂ ಯಾವುದಾದರು ಎಪಿಎಂಸಿಯಲ್ಲಿ ವೇತನ ಕೊಡಲು ಆಗದ ಕಷ್ಟದ ಪರಿಸ್ಥಿತಿ ಇದ್ದರೆ, ಸರ್ಕಾರವೇ ಹಣಕಾಸಿನ ನೆರವು ನೀಡಲಿದೆ.
ಎಪಿಎಂಸಿಗಳನ್ನು ವಿಲೀನ ಮಾಡುವ ಪ್ರಸ್ತಾವ ಬಂದರೆ ಪರಿಶೀಲಿಸುವುದಾಗಿ ಹೇಳಿದರು. ಆದರೆ ವಿಲೀನ ಪ್ರಕ್ರಿಯೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದೆ. ಅದೇ ರೀತಿ ರಾಜ್ಯದಲ್ಲೂ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಹಕಾರ ಇಲಾಖೆಯ ಅವ್ಯವಹಾರ ನಿಯಂತ್ರಿಸಲು ಹೊಸ ಮಾರ್ಗಸೂಚಿ
ಸಹಕಾರ ಇಲಾಖೆಯಲ್ಲಿ ಖಾಸಗಿ ಲೆಕ್ಕ ಪರಿಶೋಧಕರಿಂದಾಗಿ ಕೆಲ ಅವ್ಯವಹಾರಗಳಾಗುತ್ತಿದ್ದು, ಅದಕ್ಕೆ ನಿಯಂತ್ರಣ ತರಲು ಮುಂದಿನ ಅಧಿವೇಶನದ ವೇಳೆಗೆ ಹೊಸ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಅಧಿಕಾರಿಗಳ ಕೊರತೆ ಇದೆ. ಅದಕ್ಕಾಗಿ 402 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರ್ದಿಷ್ಟ ಲೆಕ್ಕ ಪರಿಶೋಧನೆಗೆ ಸೀಮಿತಗೊಳಿಸುವುದು ಸೇರಿದಂತೆ ಹಲವಾರು ಮಾರ್ಗಸೂಚಿಗಳ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ 39,570 ಸಹಕಾರ ಸಂಘಗಳು, 3,64,233 ಸಂಘ ಸಂಸ್ಥೆಗಳು, 6,059 ಕ್ಲಬ್‍ಗಳು, 5,160 ಸೌಹಾರ್ದ ಸಂಘಗಳು, 5045 ಲೇವಾದೇವಿದಾರರು, 8,635 ಹಣಕಾಸು ಸಂಸ್ಥೆಗಳು, 7,851 ಗಿರವಿದಾರರು, 980 ಚೀಟಿ ಸಂಸ್ಥೆಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.