ಸಂತೋಷ್ ಪಾಟೀಲ್ ಆತ್ಮಹತ್ಯೆ: ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿ-ಬಂಧಿಸಿ, ಸಂಪುಟದಿಂದ ವಜಾ ಮಾಡಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ, ‘ಗುತ್ತಿಗೆದಾರ ಸಂತೋಷ್ ಬಿಜೆಪಿ ಕಾರ್ಯಕರ್ತರಾಗಿದ್ದರು. ನಿರ್ವಹಿಸಿದ್ದ ಕಾಮಗಾರಿಗೆ ಬಿಲ್ ಮಂಜೂರು ಮಾಡಲು ಈಶ್ವರಪ್ಪ ಕಮಿಷನ್​ ಕೇಳಿದ್ದರು ಎಂಬ ಅರೋಪ ಕೇಳಿ ಬಂದಿತ್ತು. ಇದೀಗ ಅವರು ನನ್ನ ಸಾವಿಗೆ ಸಚಿವ ಈಶ್ವರಪ್ಪ ನೇರ ಕಾರಣವೆಂದು ಆರೋಪ ಮಾಡಿ ವಾಟ್ಸಾಪ್​ ಸಂದೇಶ ರವಾನಿಸಿದ್ದಾರೆ. ಕೂಲಂಕಶ ತನಿಖೆ ನಡೆಯಬೇಕುʼ ಎಂದು ಒತ್ತಾಯಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ವಿಷಯ ಹೊರಬರುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರುಗಳು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಇದನ್ನು ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾದ ಬಿಜೆಪಿ ಕಾರ್ಯಕರ್ತ ಅಲಿಯಾಸ್‌ ಗುತ್ತಿಗೆದಾರ ಸಂತೋಷ ಪಾಟೀಲ್‌

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ನೇರ ಕಾರಣ, ಹೀಗಾಗಿ ಅವರ ವಿರುದ್ಧ ಕೊಲೆ ಮೊಕದ್ದಮೆ ಪ್ರಕರಣವನ್ನು ದಾಖಲಿಸಿ ಬಂಧಿಸಬೇಕೆಂದು ಕಾಂಗ್ರೆಸ್‌ ಪಕ್ಷವು ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ಇಂದು ಸಂಜೆಯ ಒಳಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ನಾವು ನಿರ್ಧರಿಸುತ್ತೇವೆ. ಈಶ್ವರಪ್ಪ ವಿರುದ್ಧ ಬಸವರಾಜ ಬೊಮ್ಮಾಯಿ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಸುಮ್ಮನೆ ಇರುವುದಿಲ್ಲ. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಡಿಜಿಪಿ ಬದುಕಿದ್ದರೆ ಕಾನೂನು ಕ್ರಮಕೈಗೊಳ್ಳಲಿ: ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಂತೋಷ್ ಆತ್ಮಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಏನೂ ಮಾಡುವುದಿಲ್ಲ ಎಂಬುದು ಗೊತ್ತಿದೆ. ಆದರೆ ರಾಜ್ಯದಲ್ಲಿ ಡಿಜಿಪಿ ಇನ್ನೂ ಬದುಕಿದ್ದರೆ, ಕಾನೂನು ಎಂಬುದು ಇದ್ದರೆ ಮೊದಲು ಈ ಪ್ರಕರಣದ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಂತೋಷ್ ಹೇಳಿದ ಎಲ್ಲ ವಿಷಯಗಳನ್ನೂ ಸತ್ಯ ಎಂದು ಒಪ್ಪಲು ಆಗುವುದಿಲ್ಲ. ಆದರೆ ಈ ಬಗ್ಗೆ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಬರಬೇಕು. ಇದರ ಬಗ್ಗೆ ಎಫ್​ಐಆರ್​ ದಾಖಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಬೇರೊಂದು ಪ್ರಕರಣದಲ್ಲಿ ಇತ್ತೀಚೆಗೆ ಪೊಲೀಸ್ ಆಯುಕ್ತರು ಒಂದು ರೀತಿಯ ಹೇಳಿಕೆ ಕೊಟ್ಟರೆ, ಸರ್ಕಾರ ಮತ್ತೊಂದು ರೀತಿಯ ಹೇಳಿಕೆ ಕೊಟ್ಟಿತ್ತು. ತನಿಖೆ ಮಾಡುವ ಹಕ್ಕನ್ನು ಅಧಿಕಾರಿಯಿಂದ ಕಸಿದುಕೊಳ್ಳಬಾರದು. ಸರ್ಕಾರ ತನಿಖೆ ಮಾಡುವ ಅಧಿಕಾರಿಗೆ ರಕ್ಷಣೆ ಕೊಡದೆ ಮಂತ್ರಿಗಳ ಮೇಲೆ ಕ್ರಮ ಆಗದ ಹಾಗೆ ರಕ್ಷಣೆ ಕೊಟ್ಟಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *