ಸಣ್ಣ ಹಿಡುವಳಿಗಳೆಂಬ ತಾಯ ಮಡಿಲು

 1953ರಲ್ಲಿ ಬಿಮಲ್‌ರಾಯ್ ನಿರ್ದೇಶಿಸಿದ ‘ದೋ ಬಿಗಾ ಜಮೀನ್’ನಲ್ಲಿ ಒಂದು ಮಾತು ಬರುತ್ತದೆ. ತನ್ನ ಪುಟ್ಟ ಜಮೀನು ಮಾರಲು ನಿರಾಕರಿಸುವ ಶಂಭು, ‘ಜಮೀನು ತಾಯಿಯಲ್ಲವೇ? ತಾಯಿಯನ್ನು ಯಾರಾದರೂ ಮಾರುತ್ತಾರಾ?’ ಎಂದಾಗ ಊರ ಸಿರಿವಂತ ದೊಡ್ಡದಾಗಿ ನಗುತ್ತಾ, ‘ಆ ಜಮೀನಿನಲ್ಲಿ ಮಿಲ್ ಮಾಡುತ್ತೇನೆ. ಆಗ ಅದು ತಂದೆಯಾಗುತ್ತದೆ’ಎನ್ನುತ್ತಾನೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವುದೆಲ್ಲಾ ಹೀಗೆ ಊಡುವ ತಾಯಿಯನ್ನು ಆಳುವ ತಂದೆಯಾಗಿಸುವ ಅಟ್ಟಹಾಸವೇ ಆಗಿದೆ. ಬಂಡವಾಳ ಹೂಡಿಕೆಗೆ ಕೃಷಿ, ರಕ್ಷಣೆ, ವಾಯುನೆಲೆ ಎಲ್ಲವನ್ನೂ ಜಾಗತಿಕವಾಗಿ ಮುಕ್ತ ಮಾಡುವುದಾಗಿ ಕೇಂದ್ರ ಸರ್ಕಾರವೂ ಈಚೆಗೆ ಘೋಷಿಸಿದೆ. ಅರೆ! ಇಲ್ಲೇ ಇರುವುದು ತಮಾಷೆ. ರೈತರಿಗೆ ನಷ್ಟದಾಯಕವಾದದ್ದು ಕಂಪೆನಿಗಳಿಗೆ ಹೇಗೆ ಲಾಭದಾಯಕವಾಗುತ್ತದೆ?

– ಸಬಿತಾ ಬನ್ನಾಡಿ

ಪುಟ್ಟ ಪುಟ್ಟ ಹಿಡುವಳಿಗಳೂ ಸರಳ ಸುಂದರ ಬದುಕಿಗೆ ಆಸರೆಯಾಗಬಲ್ಲದು ಎಂಬ ವಿಶ್ವಾಸವನ್ನು ಹುಟ್ಟಿಸಬೇಕಾಗಿದ್ದ ಕಾಲದಲ್ಲಿ ನಾವೀಗ ಕೃಷಿಯನ್ನು ಬೃಹತ್ ಲಾಭದಾಯಕ ಉದ್ಯಮ ಮಾಡಿಬಿಡುತ್ತೇವೆ ಎಂಬ ಹುಮ್ಮಸ್ಸಿಗೆ ಬಿದ್ದು ತಾಯ ಮಡಿಲಿನ ಬೆಚ್ಚಗಿನ ಬಂಧವನ್ನು ತುಂಡರಿಸಿಕೊಳ್ಳುವ ಹಟಕ್ಕೆ ಬಿದ್ದಿದ್ದೇವೆ.

ಒಂದೆಡೆ ಕೃಷಿ ಭೂಮಿ ಮಾರಾಟದ ನಿರ್ಬಂದ ತೆಗೆದು ಹಾಕುತ್ತಾ ಇನ್ನೊಂದೆಡೆ ಆಹಾರ ಧಾನ್ಯಗಳ ಸಂಗ್ರಹವನ್ನು ಸರ್ಕಾರಿ ಸ್ವಾಮ್ಯದಿಂದ ಕಸಿದು ಖಾಸಗಿಗೆ ವಹಿಸುತ್ತಾ, ಮತ್ತೊಂದೆಡೆ ಎಪಿಎಂಸಿಯ ಹೊರಗೆ ಮಾರಾಟ ಮಾಡುವವರಿಗೆ ತೆರಿಗೆಯಿಲ್ಲದ ಅವಕಾಶ ಮಾತ್ರವಲ್ಲ, ಇದುವರೆಗೂ ಅದು ಅನಧಿಕೃತವೆನಿಸಿದ್ದರೆ ಈಗ ಅದನ್ನು ಅಧಿಕೃತವೂಗೊಳಿಸುವೆಡೆಗೆ ದಾಪುಗಾಲಿಡುತ್ತಿರುವ ನಮ್ಮ ದೇಶ ಆ ಮೂಲಕ ‘ಅಭಿವೃದ್ಧಿ’ಸಾಧಿಸುವುದಾಗಿ ನಂಬಿಸುವ ನಿರಂತರ ಪ್ರಯತ್ನದಲ್ಲಿದೆ. ನಂಬುವವರ ಯಾದಿಯೂ ದೊಡ್ಡದಿದೆ. ಕೃಷಿ ಪದ್ಧತಿಯ ಜೊತೆಗೇ ಖಾಸಗಿ ಆಸ್ತಿಯ ಪರಿಕಲ್ಪನೆಯೂ ಹುಟ್ಟಿ ಬೆಳೆಯಿತು. ಜೊತೆಗೇ ಆಳುಗಳನ್ನು ಆಳುವ ಸಾಧನವೂ ಆಯ್ತು. ಕೃಷಿಯಲ್ಲಿ ದುಡಿಯುವವರು ಯಾರೋ, ಲಾಭವನ್ನು ಅನುಭವಿಸುವವರು ಯಾರೋ ಎಂಬ ವಿಭಜನೆ ಹುಟ್ಟಿದಂದೇ ಶೋಷಣೆಯೆಂಬ ಪದವೂ ಹುಟ್ಟಿರಬಹುದು. ಹೀಗೆ ಅಗಾಧವಾಗಿ ಬೆಳೆದ ಕೃಷಿಭೂಮಿ ಒಡೆತನದ ಪ್ರಕ್ರಿಯೆ ಜಮೀನ್ದಾರಿ ಪದ್ಧತಿ ಹುಟ್ಟಿ ಬೆಳೆಯಲು ಕಾರಣವಾಗಿ, ಆ ದಮನದಿಂದ ದಮನಿತರನ್ನು ಹೊರತರುವುದಕ್ಕಾಗಿ ನಡೆದ ಹಲವು ಹೋರಾಟ ಮತ್ತು ಪ್ರಜಾಪ್ರಭುತ್ವದ ಜಾರಿ ಸ್ವಲ್ಪ ಮಟ್ಟಿಗೆ ಹಲವು ವಲಯದ ಜನರಿಗೆ ಭೂಮಿಯ ಹಕ್ಕನ್ನು ದೊರಕಿಸಿಕೊಟ್ಟಿದ್ದನ್ನು ಕೇವಲ ನಿನ್ನೆ ಮೊನ್ನೆಯ ಇತಿಹಾಸದಲ್ಲಿ ನೋಡಿದ್ದೇವೆ. ಭೂಮಿ ಉಳ್ಳವರು ಭೂಮಿ ಇಲ್ಲದವರನ್ನು ಕೈವಶ ಮಾಡಿಕೊಂಡು ತಮ್ಮೆಲ್ಲಾ ಭೋಗ ಭಾಗ್ಯದ ಬದುಕಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದ ಈ ನಿನ್ನೆ ಮೊನ್ನೆಯ ಇತಿಹಾಸವನ್ನೇ, ದಮನಕ್ಕೆ ಒಳಗಾದ ಜಾತಿ ವರ್ಗಗಳಿಂದ ಹಿಡಿದು ಹಲವರು ಮರೆತಿರುವುದು ಈ ಕಾಲದ ವಿಪರ್ಯಾಸ.

ಇದರೊಂದಿಗೆ, ಕೃಷಿ ಎಂಬುದು ಶೈಕ್ಷಣಿಕ ಅಂಗಣದೊಳಕ್ಕೆ ಕಲಿಯುವ ‘ಶಾಸ್ತ್ರ’ವಾಗಿ ಬದಲಾದ ಮೇಲಂತೂ, ಕೃಷಿಕರ ಸ್ವಂತದ ಅನುಭವಕ್ಕೆ ದಾರಿಕೊಡದೆ ಅವರ ಮೇಲೆ ಹೇರಿಕೆಗೆ ಅಧಿಕೃತತೆಯನ್ನು ಒದಗಿಸುವ ಅಸ್ತ್ರವಾಗಿದ್ದುಇನ್ನೊಂದು ದುರಂತ. ಇದೂ ಕೂಡ ಕೃಷಿಯ ಸ್ವತಂತ್ರ ಅಸ್ತಿತ್ವವನ್ನು ನಿರ್ನಾಮ ಮಾಡಲು ಕೊಡುಗೆ ಕೊಡುತ್ತಾ ಬಂತು. ಇಲ್ಲಿನ ಸಂಶೋಧನೆಗಳೂ ಕೂಡ ಸಣ್ಣಕೃಷಿಕರಿಗೆ ಪೂರಕವಾಗಿರದೆ ದೊಡ್ಡ ಹಿಡುವಳಿಗಳಿಗೆ, ಉದ್ಯಮಗಳಿಗೆ ಅನುಕೂಲಕರವಾಗುತ್ತಾ ಹೋದವು. ಇಂದು ರಾಸಾಯನಿಕ ಗೊಬ್ಬರ, ಕೀಟನಾಶಕ, ಹೈಬ್ರಿಡ್ ತಳಿಗಳು ಇವುಗಳ ನಡುವೆ ಅಗೋಚರ ಕೊಂಡಿಗಳು ಬೆಸೆದುಕೊಂಡಿವೆ. ಇವೆಲ್ಲದರ ನಡುವೆಯೂ ಆಶಾವಾದದ ಸಂಗತಿಗಳಾಗಿ ವ್ಯಕ್ತಿಗತ ನೆಲೆಯಲ್ಲಿ ಹಲವು ಕೃಷಿಕರು ಸಾವಯವ, ನೈಸರ್ಗಿಕ ಬೇಸಾಯಗಳನ್ನು ಅಳವಡಿಸಿಕೊಂಡು ಈ ಎಲ್ಲಾ ಬೃಹತ್ ಕಟ್ಟುಕತೆಗಳ ಕೂಟವನ್ನು ಮೆಟ್ಟಿನಿಂತು ಪರ್ಯಾಯ ಮಾದರಿಗಳಾಗಬಲ್ಲ ದಾರಿಯನ್ನುತೋರುತ್ತಿರುವಾಗಲೇ ಇದೀಗ ರೈತ ಮಸೂದೆಯ ಹೆಬ್ಬಂಡೆಯೊಂದು ಎದುರಿಗೆ ನಿಂತಿದೆ.

ಇದನ್ನು ಓದಿ : ಖಾಲಿ ಹುದ್ಧೆ ವಿಚಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಳ್ಳಿ ಹಕ್ಕಿ

ಬಹುಶಃ ಈಗಲೂ ಇರುವ ದಾರಿಯೆಂದರೆ, ಆಳುವವರ ಕಣ್ಣಿಗೆ ಬೀಳದಂತೆ ಸರಳ ದಾರಿಯಲ್ಲಿ ಸರಳ ಕೃಷಿ ಮತ್ತು ಸರಳ ಬದುಕುಗಳನ್ನು ಮುನ್ನೆಲೆಗೆ ತರುವುದೇ ಆಗಿದೆ. ಸರ್ಕಾರವು ಖಾಸಗಿಯವರ ಮೂಲಕ ಒಡ್ಡುವ ಆಮಿಷಗಳನ್ನು ಮೆಟ್ಟಿ ನಿಂತು ಈ ದಾರಿಯಲ್ಲಿ ಸಾಗುವ ದೃಢತೆ ಅಷ್ಟು ಸುಲಭದ್ದಲ್ಲವಾದರೂ ಅಸಾಧ್ಯದ್ದೇನಲ್ಲ.

ಇಂದು ಕಾರ್ಪೋರೇಟ್ ಕಂಪೆನಿಗಳ ಮೂಲಕ ಹೆಚ್ಚು ಬೆಲೆಯ ಆಮಿಷವನ್ನು ಭೂಮಿಗೂ, ಬೆಳೆಗೂ ನೀಡಿ ಎಲ್ಲ ಕೊಟ್ಟು ಕೈ ಕಾಲಿಯಾದ, ಕಂಪೆನಿಗಳು ಹೇಳುವ ಬೆಲೆಗೆ ಆಹಾರ ಖರೀದಿಸಲಾರದೇ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಅದೇ ಕಂಪೆನಿಗಳಲ್ಲಿ ಕೂಲಿಯವರಾಗುವ ಅದಃಪತನಕ್ಕೆ ರೈತರು ಬೀಳದಂತಾಗಬೇಕು ಎಂಬ ಆಶಯ ಈಡೇರೀತೇ ತಿಳಿದಿಲ್ಲ. ಆದರೆ, ಚಿಕ್ಕ ಹಿಡುವಳಿಯು ರೈತರು ಗೌರವದಿಂದ ಬಾಳುವೆ ಮಾಡಲು ಸಾಕಾಗುವುದಿಲ್ಲ ಎಂಬ ಕಟ್ಟುಕತೆಗಳ ಅಪಾಯವನ್ನುಕೃಷಿತಜ್ಞೆ ವಿ.ಗಾಯತ್ರಿಯವರು ಗುರುತಿಸುತ್ತಾ, ಇದನ್ನೇ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಗತಿಪರರೂ ಹೇಳುವುದು ಆತಂಕಕಾರಿಯಾದುದು ಎನ್ನುತ್ತಾರೆ. ಹಿಡುವಳಿ ದೊಡ್ಡದಾದಷ್ಟೂಅದರ ನಿರ್ವಹಣೆ ಕಷ್ಟವಿದ್ದು, ಅದು ಚಿಕ್ಕದಾಗಿದ್ದರೆ, ಸಾವಯವ ಕೃಷಿಪದ್ಧತಿ ಅನುಸರಿಸಿದರೆ, ನೆಮ್ಮದಿಯ ಬದುಕು ಬದುಕಲು ಸಾಧ್ಯ ಅನ್ನುತ್ತಾರೆ.

ನಿಜ ಹೇಳಬೇಕೆಂದರೆ, ಸದ್ಯದ ಸಂಕಟದ ಸಂದರ್ಭದಲ್ಲಿ ನಿರುದ್ಯೋಗದ ವೇಗ ಮತ್ತು ಬಡತನವನ್ನು ತಡೆಯಲು ನಮ್ಮ ಯುವಜನರಿಗೆ ಜಮೀನಿನಲ್ಲಿ ಸಹಕಾರಿ ಪದ್ಧತಿಯಲ್ಲೋ ಅಥವಾ ಅವರ ಆಯ್ಕೆಗನುಗುಣವಾಗಿ ವ್ಯಕ್ತಿಗತವಾಗಿಯೋ ವ್ಯವಸಾಯ ಮಾಡಲು ಚಿಕ್ಕ ಹಿಡುವಳಿಯೇ ಆದರೂ ಪರವಾಗಿರಲಿಲ್ಲ, ಭೂಮಿಯನ್ನು ಕೊಡಬೇಕಾಗಿತ್ತು. ಆದರೀಗ ನಾವು ಕಿತ್ತುಕೊಳ್ಳಲು ಹೊರಟಿದ್ದೇವೆ. ಹೀಗೆ ಕಿತ್ತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಈಗಾಗಲೇ ಕೃಷಿಯನ್ನು ನಷ್ಟದ ಬಾಬತ್ತುಎಂಬಂತೆ ರೂಪಿಸಿಯೂ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಆಕರ್ಷಕ ಹಣಕ್ಕೆ ಮಾರಿಕೊಂಡು ಏನೋ ಒಂದು ನೌಕರಿ ಮಾಡುವುದೇ ಸಲೀಸಲ್ಲವೇ ಎಂಬ ಮನಸ್ಥಿತಿಯನ್ನು ಕಟ್ಟಿನಿಲ್ಲಿಸಿಯೂ ಆಗಿದೆ. ಸರ್ಕಾರ ಮತ್ತು ಕಾರ್ಪೋರೇಟ್ ಕಂಪೆನಿಗಳು ಕೈಜೋಡಿಸಿ ದಶಕಗಳ ಕಾಲ ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಕಣ್ಣಿಗೆ ಕಾಣುವಂತದ್ದಲ್ಲ. ಹಸಿರು ಕ್ರಾಂತಿಯ ನೆಪದಲ್ಲಿ ಕೃಷಿಯು ವಿಷಮಯ ಮಾತ್ರ ಆಗಲಿಲ್ಲ. ರೈತರು ಬೀಜದಿಂದ ಹಿಡಿದು, ಗೊಬ್ಬರ, ಕೀಟನಾಶಕ ಎಲ್ಲದಕ್ಕೂ ಕಂಪೆನಿಗಳನ್ನು ಅವಲಂಬಿಸುವಂತೆ ಮಾಡಿ, ಯಾಂತ್ರೀಕರಣದ ಹೆಸರಿನಲ್ಲಿ ಸಬ್ಸಿಡಿ, ಸಾಲಗಳನ್ನು ಪ್ರೋತ್ಸಾಹಿಸಿ, ಏಕಬೆಳೆಯ ಮಾಯಾಜಿಂಕೆಯ ಹಿಂದೆ ಅವರು ಓಡುವಂತೆ ಮಾಡಿ ಅವರೀಗ ಸಂಪೂರ್ಣ ಪರಪುಟ್ಟರಾಗಿದ್ದಾರೆ.

ಇದನ್ನು ಓದಿ : ಆತ್ಮ ನಿರ್ಭರ್ ಬಜೆಟ್ ಅಲ್ಲ ಆತ್ಮ ಬರ್ಬಾದ್ ಬಜೆಟ್

ಕಂಪೆನಿಗಳು ಹೊಡೆದ ಕಲ್ಲು ಈಗ ಗುರಿ ಮುಟ್ಟಿದೆ. ಕಾರ್ಪೋರೇಟ್ ಹದ್ದುಇವರ ಭವಿಷ್ಯವೆಂಬ ಕೋಳಿಮರಿಯನ್ನು ಅಪಹರಿಸಿದ್ದೇ ತಿಳಿಯಲಿಲ್ಲ. 1953ರಲ್ಲಿ ಬಿಮಲ್‌ರಾಯ್ ನಿರ್ದೇಶಿಸಿದ ‘ದೋ ಬಿಗಾ ಜಮೀನ್’ನಲ್ಲಿ ಒಂದು ಮಾತು ಬರುತ್ತದೆ. ತನ್ನ ಪುಟ್ಟ ಜಮೀನು ಮಾರಲು ನಿರಾಕರಿಸುವ ಶಂಭು, ‘ಜಮೀನು ತಾಯಿಯಲ್ಲವೇ? ತಾಯಿಯನ್ನು ಯಾರಾದರೂ ಮಾರುತ್ತಾರಾ?’ ಎಂದಾಗ ಊರ ಸಿರಿವಂತ ದೊಡ್ಡದಾಗಿ ನಗುತ್ತಾ, ‘ಆ ಜಮೀನಿನಲ್ಲಿ ಮಿಲ್ ಮಾಡುತ್ತೇನೆ. ಆಗ ಅದು ತಂದೆಯಾಗುತ್ತದೆ’ಎನ್ನುತ್ತಾನೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವುದೆಲ್ಲಾ ಹೀಗೆ ಊಡುವ ತಾಯಿಯನ್ನು ಆಳುವ ತಂದೆಯಾಗಿಸುವ ಅಟ್ಟಹಾಸವೇ ಆಗಿದೆ.

ಬಂಡವಾಳ ಹೂಡಿಕೆಗೆ ಕೃಷಿ, ರಕ್ಷಣೆ, ವಾಯುನೆಲೆ ಎಲ್ಲವನ್ನೂ ಜಾಗತಿಕವಾಗಿ ಮುಕ್ತ ಮಾಡುವುದಾಗಿ ಕೇಂದ್ರ ಸರ್ಕಾರವೂ ಈಚೆಗೆ ಘೋಷಿಸಿದೆ. ಅರೆ! ಇಲ್ಲೇ ಇರುವುದು ತಮಾಷೆ. ರೈತರಿಗೆ ನಷ್ಟದಾಯಕವಾದದ್ದು ಕಂಪೆನಿಗಳಿಗೆ ಹೇಗೆ ಲಾಭದಾಯಕವಾಗುತ್ತದೆ? ಅವರು ಇಲ್ಲಿ ಕೋಟ್ಯಂತರ ಬಂಡವಾಳ ಹೂಡಲು ಯಾಕೆ ತುದಿಗಾಲಲ್ಲಿ ನಿಂತಿದ್ದಾರೆ? ಹಾಗಿದ್ದಲ್ಲಿ ಇಲ್ಲಿ ಏನೋ ಇರಲೇ ಬೇಕಲ್ಲ. ಇದೆ. ಈ ಲೋಕದಲ್ಲಿ ಯಾರನ್ನಾದರೂ ಬುಗುರಿ ಆಡಿಸಿದಂತೆ ಆಳಬೇಕೆಂದಾದಲ್ಲಿ ಮೊದಲು ಅವರನ್ನು ನಿರ್ವಸಿತರನ್ನಾಗಿ ಮಾಡಬೇಕು. ಆಗ ಅವರು ನೀವು ಹೇಳಿದ ಕೆಲಸ ಮಾಡುತ್ತಾರೆ. ಗುಲಾಮಗಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸುತ್ತಾರೆ. ಭೂಮಿಯನ್ನು ಕಿತ್ತುಕೊಳ್ಳುವುದೆಂದರೆ ಅದರ ಹಿಂದೆ ಹಲವು ಸಂಸ್ಕೃತಿಗಳನ್ನೇ ಕಿತ್ತುಕೊಳ್ಳುವುದು, ಸ್ವಾಭಿಮಾನಗಳನ್ನೇ ಅಳಿಸಿಹಾಕುವುದು ಎಂದೂ ಅರ್ಥವಾಗುತ್ತದೆ. ನನ್ನದೂ ಎಂಬ ಅಂಗೈ ಅಗಲದ ಜಾಗ ಬೇಕು ಎಂಬ ಪ್ರತಿ ಮನುಷ್ಯನ ಹಂಬಲದ ಹಿಂದೆ ಇದೆಲ್ಲವೂ ಇರುತ್ತದೆ.

ಇದನ್ನು ಓದಿ : ಫೆ.6 ರಂದು ದೇಶಾದ್ಯಂತ ರಸ್ತೆ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ಭೂಮಿಯೊಂದಿಗೆ ಮನುಷ್ಯನಿಗೆ ಇದ್ದದ್ದು ಲಾಭ ನಷ್ಟದ ವ್ಯಾವಹಾರಿಕ ನೋಟವಲ್ಲ. ಅದು ಒಂದು ರೀತಿಯ ಭಾವನಾತ್ಮಕ ನಂಟಾಗಿತ್ತು. ಭಾವನಾತ್ಮಕ ನಂಟಿಲ್ಲದೆ ಗೃಹಸ್ಥ, ಗೃಹಿಣಿಯರಾಗಲೀ, ಕೃಷಿಕರಾಗಲೀ ಆಗಲು ಸಾಧ್ಯವಿಲ್ಲ. ಇಲ್ಲಿಇರಬೇಕಾದ ಲಾಭ ನಷ್ಟದ ಮಾನದಂಡ, ಯಶಸ್ಸಿನ ಅಳತೆಗೋಲು ಉಳಿದೆಡೆ ಇರುವಂತದ್ದಲ್ಲ. ಹಾಗಾಗಿ ಇಲ್ಲಿನ ವ್ಯಾಕರಣವೇ ಬೇರೆ ಇದೆ. ಆದರೆ, ಭೌತಿಕ ವಸ್ತುಗಳ ಸಂಚಯವೇ ಜೀವನದ ಪರಮಗುರಿ ಎಂದು ಸ್ಥಾಪಿಸಿದ ಸಾಮಾಜಿಕ ವಾತಾವರಣದಲ್ಲಿ ಎಲ್ಲರೂ ಈ ವಸ್ತುಗಳನ್ನು ಎಷ್ಟರ ಮಟ್ಟಿಗೆ ಪೇರಿಸಲು ಶಕ್ತರೋ ಅಷ್ಟರ ಮಟ್ಟಿಗೆ ಅವರು ಯಶಸ್ವಿ ಎಂಬ ರೇಸಿನಲ್ಲಿ ಭಾಗವಹಿಸಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತು. ಹಾಗಿದ್ದರೆ ಕೃಷಿಕರಾಗಿ ಬದುಕಬೇಕೆಂದರೆ ಮೊದಲು ಈ ರೇಸಿನಿಂದ ಹೊರಬರಬೇಕಾಗುತ್ತದೆ. ಆಗ ಒಂದು ಎಕರೆಯಲ್ಲೂ ಘನತೆಯಿಂದ ಬದುಕಬಹುದಾದ ದಾರಿ ಕಾಣಿಸುತ್ತದೆ. (‘ಬಂಗಾರದ ಮನುಷ್ಯರು- ಬೆಳಕಿನ ಬೇಸಾಯದ ಕಥನ’ ಎಂಬ ಚಿನ್ನಸ್ವಾಮಿ ವಡ್ಡಗೆರೆಯವರು ಬರೆದ ಪುಸ್ತಕದಲ್ಲಿಇಂತಹ ಹಲವು ನಿದರ್ಶನಗಳಿವೆ. ಪ್ರಕಟಣೆ: ಅಭಿರುಚಿ ಪ್ರಕಾಶನ, ಮೈಸೂರು) ಹೀಗೆ ಮಾಡಿ ಯಶಸ್ಸು ಕಂಡ ನೂರಾರು ರೈತರು ಈಗಾಗಲೇ ನಮ್ಮ ನಡುವೆ ಇದ್ದಾರೆ. ಅವರೆಲ್ಲಾ, ರಾಸಾಯನಿಕ ಕೃಷಿ ತ್ಯಜಿಸಿ, ನೈಸರ್ಗಿಕ ಕೃಷಿ ಮಾಡಿಕೊಂಡು ಆರೋಗ್ಯ ಮತ್ತು ಸಂತೋಷದ ಲಾಭವನ್ನೂ, ಬೊಜ್ಜಿನ ಮೈಯಿ ಮತ್ತು ಕೊಳ್ಳುಬಾಕತನದ ನಷ್ಟವನ್ನೂ ಕಂಡುಕೊಂಡಿದ್ದಾರೆ. ಅವರು ಕಲಿಸುತ್ತಿರುವ ಹೊಸ ವ್ಯಾಕರಣವನ್ನು ಕಲಿಯದೇ ನಾವು ಆ ಲೋಕವನ್ನು ಪ್ರವೇಶಿಸಲಾರೆವು. ಜಪಾನಿನ ಫುಕುವೊಕಾನಿಂದ ಹಿಡಿದು ನಮ್ಮ ನಾರಾಯಣರೆಡ್ಡಿಯವರ ತನಕ, ಮಾತ್ರವಲ್ಲ ಚಿಕ್ಕ ಪುಟ್ಟ ಜಮೀನಿನಲ್ಲಿ ಸಾಧಾರಣದಿಂದ ಹಿಡಿದು ಲಕ್ಷಾಂತರ ಲಾಭ ಮಾಡಿಕೊಂಡಿರುವ ನೂರಾರು ಯುವಜನರ ತನಕ ಈ ಯಶೋಗಾಥೆಗಳು ಇವೆ. ನಗರದಲ್ಲಿ ಲಕ್ಷಾಂತರ ಸಂಬಳ ಪಡೆದ ಮೇಲೂ ನೆಮ್ಮದಿ ದೊರೆಯದೇ ಆ ಸುಳ್ಳು ಬದುಕಿಗಿಂತ ನೆಲದ ಜೊತೆಗಿನ ನಂಟಿನ ನೆಲೆ ಅರಸಿ ಉದ್ಯೋಗತೊರೆದು ಹಳ್ಳಿಗೆ ಮರಳಿದ ಸಾವಿರಾರು ಯುವಕರು ಕನ್ನಡನಾಡಿನಲ್ಲಿದ್ದಾರೆ. ಇದು ಒಂದು ರೀತಿಯಲ್ಲಿ ಹಲವು ಹಂಗುಗಳನ್ನು ತೊರೆದದಾರಿ.

ಯಾಜಮಾನ್ಯದ ವಿರುದ್ಧ ಬುದ್ಧ, ಶರಣರು, ಸೂಫಿಗಳು, ಸಂತರು ತೋರಿದ ‘ಪ್ರತಿಜಗತ್ತಿನ’ ದಾರಿ. ಈ ಬೇರನ್ನು ಗಟ್ಟಿಯಾಗಿ ಹಿಡಿದು ಕೊಳ್ಳದೇ ಬೇರೆದಾರಿ ಇಲ್ಲ. ಮೂರು ನಾಲ್ಕು ದಶಕಗಳ ಹಿಂದೆ ಶಿಕ್ಷಣವನ್ನು ಬಿಕರಿಗಿಟ್ಟು ಸಮಾಜದಲ್ಲಿ ಕೀಳರಿಮೆಯ ಹಲವು ಶ್ರೇಣಿಗಳನ್ನು ನಿರ್ಮಿಸಿ ಆಳುತ್ತಿರುವುದನ್ನು ಕಣ್ಣಮುಂದೆ ಕಾಣುತ್ತಿದ್ದೇವೆ. ಈಗ ಕೃಷಿಭೂಮಿಯ ಮೇಲೆ ಬಂಡವಾಳ ಹೂಡುವವರನ್ನು ಕರೆದು ತಂದು ಇನ್ನಷ್ಟು ಅನಾಥರ ಶ್ರೇಣಿಗಳ ನಿರ್ಮಾಣ ಆಗುವುದನ್ನು ಕಾಣಬೇಕಾಗಿದೆ. ಗುಜರಾತಿನ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ, ಪ್ರತಿ ದಲಿತ ಕುಟುಂಬಕ್ಕೆ ಐದು ಎಕರೆಗಳ ಭೂಮಿಯನ್ನು ಸರ್ಕಾರ ನೀಡುವಂತೆ ಚಳುವಳಿ ಮಾಡಬೇಕು ಎಂದು ಕರೆಕೊಟ್ಟಿದ್ದರು. ಇದು ಬೇರನ್ನು ಗಟ್ಟಿಗೊಳಿಸಿ, ಸ್ವಾಭಿಮಾನವನ್ನು ಉದ್ದೀಪಿಸುವ ದಾರಿ. ಆದರೆ ಅದ್ಯಾಕೋ ಮುನ್ನೆಲೆಗೆ ಬರಲಿಲ್ಲ. ಕೃಷಿಯಕುರಿತ ನಕಾರಾತ್ಮಕ ನಿಲುವು ಆಳದಲ್ಲಿರುವುದೂ ಇದಕ್ಕೆ ಕಾರಣ ಇರಬಹುದು. ಲಾಭ ನಷ್ಟದ ಮಾತು ನಮ್ಮ ನರನಾಡಿಗಳಲ್ಲಿ ಹರಿಯುವಂತೆ ಮಾಡಿದವರ ಬಳಿ ನಾವೀಗ ಹೇಳಬೇಕಾಗಿದೆ- ಕೃಷಿ ಲಾಭದಾಯಕವಾಗಬೇಕಾಗಿಲ್ಲ, ಜೀವ ಪೋಷಕವಾದರೆ ಸಾಕು. ತಾಯ ಮಡಿಲು ಪ್ರತಿ ಮಗುವಿನ ಹಕ್ಕು ಮತ್ತು ಸುಖವೇ ಹೊರತು ಒಬ್ಬಿಬ್ಬರ ಸೆರೆಯಾಳಲ್ಲ.

ಈ ಎಲ್ಲಾ ಬೆಳವಣಿಗೆಗಳು ಈಗ ಅಂತಿಮ ಘಟ್ಟಕ್ಕೆ ಬಂದಂತೆ ಮೂರು ಕೃಷಿ ಕಾನೂನುಗಳನ್ನು ಜಾರಿಗೆತರಲು ಬಲವಂತದ ಪ್ರಯೋಗ ನಡೆಯುತ್ತಿದೆ. ಹೋರಾಟವನ್ನುಅಪ್ರಜಾಸತ್ತಾತ್ಮಕವಾಗಿ ಹತ್ತಿಕ್ಕಲಾಗುತ್ತಿದೆ, ದಿಕ್ಕು ತಪ್ಪಿಸುವ ಪ್ರಯತ್ನಗಳೂ ನಡೆಯುತ್ತಿದೆ. ಬೃಹತ್ ಕಾಪೋರೇಟ್‌ಗಳು ಬೃಹತ್ ಭೂಮಿ ಖರೀದಿಸಿ, ಬೃಹತ್ ಗೋದಾಮುಗಳನ್ನು ನಿರ್ಮಿಸಿ ಆಹಾರ ಸಂಗ್ರಹಣೆ ಮಾಡಿ ಬೇಕಾದಾಗ ಬೆಲೆಯೇರಿಸಿಕೊಂಡು ಬೃಹತ್ ಲಾಭ ಮಾಡಿಕೊಳ್ಳುವುದಕ್ಕಾಗಿ ಕಣ್ಣಲ್ಲಿ ರಕ್ತವೇ ಇಲ್ಲದವರಂತೆ ಕ್ರೌರ್ಯದದಾರಿ ಹಿಡಿದಾಗಲೂ ದೇಶದ ಬೃಹತ್‌ ಜನಸಂಖ್ಯೆ ಮೌನವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ಒಂದು ಕಾರಣವೆಂದರೆ, ಕೃಷಿಯಿಂದ ಬದುಕು ಅಸಾಧ್ಯವೆಂಬ ಭಾವನೆ. ಈಚೆಗೆ ಕೃಷಿ ತಜ್ಞೆ ವಿ.ಗಾಯಿತ್ರಿಯವರು ಹೇಳುತ್ತಿದ್ದರು: “ಕೃಷಿ ವಿಶ್ವವಿದ್ಯಾಲಯಗಳು ಮತ್ತು ಪ್ರಗತಿಪರವೆಂದು ಗುರುತಿಸಿಕೊಳ್ಳುವವರೂ ಕೂಡ ಹುಟ್ಟು ಹಾಕಿದ ಒಂದು ಅಪ ಕಲ್ಪನೆಯೆಂದರೆ, ಚಿಕ್ಕ ಹಿಡುವಳಿಗಳೇ ಕೃಷಿಯ ಪ್ರಗತಿಗೆ ಮಾರಕ ಎಂಬುದು. ಆದರೆ ಇದೊಂದು ಹಸೀ ಸುಳ್ಳಾಗಿದ್ದು, ಸಣ್ಣ ಹಿಡುವಳಿಗಳಲ್ಲೇ ಲಾಭ ಹೆಚ್ಚು ಮಾಡಿಕೊಳ್ಳುವ ಅವಕಾಶವಿದ್ದು, ಆ ಸಾಧ್ಯತೆಗಳನ್ನು ಜನರಿಗೆ ಹೆಚ್ಚು ಹೆಚ್ಚು ತೆರೆದು ತೋರಿಸಬೇಕಾಗಿದೆ.” ಇಂದು ಜನಸಾಮಾನ್ಯರಿಗೆ ಬೇಕಾಗಿರುವುದು ಫಿಜ್ಜಾ ಬರ್ಗರ್‌ಗಳಲ್ಲ, ಹೊಟ್ಟೆ ತುಂಬಿಸುವ ರಾಸಾಯನಿಕ ಮುಕ್ತ ಆಹಾರ. ಹಾಗೆಯೇ ಬೃಹತ್ ಹಿಡುವಳಿಯೇನಲ್ಲ, ಬದಲಿಗೆ ಚಿಕ್ಕದೇ ಆದರೂ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡುವ ಉದ್ಯೋಗ. ಅಂತಹ ಒಂದು ಸಾಧ್ಯತೆಯೆಂದರೆ, ಚಿಕ್ಕ ಹಿಡುವಳಿಗಳಲ್ಲಿ ಸ್ವಂತ ಕೃಷಿ. ಈ ಹಿನ್ನೆಲೆಯಲ್ಲಿ, ಕೃಷಿಕರಿಗೆ ಸರ್ಕಾರ ಮತ್ತು ಸಮಾಜ ಅವರ ಭವಿಷ್ಯವನ್ನುಅವರೇ ರೂಪಿಸಿಕೊಳ್ಳಲು ಬೇಕಿರುವ ಮಾನವೀಯ ಪ್ರಜಾಪ್ರಭುತ್ವವಾದಿ ಸಂವೇದನೆಯನ್ನುತುರ್ತಾಗಿ ನೀಡಬೇಕಾಗಿದೆ. ಅದರೊಳಗೆ ಇತರರ ಭವಿಷ್ಯವೂ ಅಡಗಿದೆ.

 

ರೈತರ ಪ್ರತಿಭಟನೆ ಹತ್ತಿಕ್ಕಲು ಕಾಂಕ್ರೀಟ್ ಗೊಡೆ ನಿರ್ಮಿಸುತ್ತಿರುವ ಮೋದಿ ಸರ್ಕಾರ

 

Donate Janashakthi Media

Leave a Reply

Your email address will not be published. Required fields are marked *