ಎಚ್. ಆರ್. ನವೀನ್ ಕುಮಾರ್
ಜಾಗತಿಕವಾಗಿ 843 ಮಿಲಿಯನ್ ಟನ್‌ನಷ್ಟು ಹಾಲು ಉತ್ಪಾದನೆ ಆಗುತ್ತಿದೆ. ಇದರಲ್ಲಿ ಭಾರತದ ಪಾಲು ಶೇಕಡಾ 23ರಷ್ಟು ಇದ್ದು ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಆಮೇರಿಕಾ, ಚೀನಾ, ಪಾಕಿಸ್ತಾನ ಮತ್ತು ಬ್ರೆಜಿಲ್ ದೇಶಗಳು ಇವೆ.
ನಮ್ಮ ದೇಶದಲ್ಲಿ ವಾರ್ಷಿಕ ಸುಮಾರು 209.96 ಮಿಲಿಯನ್ ಟನ್ ಹಾಲು ಉತ್ಪಾದನೆ ಆಗುತ್ತಿದ್ದು 2014-15ರಲ್ಲಿ ಇದ್ದ ವಾರ್ಷಿಕ ಉತ್ಪಾದನೆ 146.31 ಮಿಲಿಯನ್ ಟನ್‌ಗೆ ಹೋಲಿಸಿದರೆ ವಾರ್ಷಿಕ ಶೇಕಡಾ 6.2 ಬೆಳವಣಿಗೆ ದರವನ್ನು ದಾಖಲಿಸಿದೆ. ಉತ್ತರ ಪ್ರದೇಶ (14.9% 31.4 ಮಿ.ಟನ್), ರಾಜಾಸ್ತಾನ (14.6% 30.7 ಮಿ.ಟನ್ ) ಮಧ್ಯಪ್ರದೇಶ (8.6% 18 ಮಿ.ಟನ್) ಗುಜರಾತ್ (7.6% 15 .9 ಮಿ.ಟನ್) ಹಾಗೂ ಅಂಧ್ರ ಪ್ರದೇಶ (7% 14.7 ಮಿ.ಟನ್) ಹಾಲು ಉತ್ಪಾದನೆಯ ಕ್ರಮವಾಗಿ ಪ್ರಮುಖ ಐದು ರಾಜ್ಯಗಳಾಗಿವೆ. ವಾರ್ಷಿಕ ಉತ್ಪಾದನೆ 8 ಮಿ.ಟನ್ ಇರುವ ಕರ್ನಾಟಕವು 11ನೇ ಸ್ಥಾನದಲ್ಲಿದೆ.
ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದ್ದರೂ ಭಾರತದ ಹಾಲಿನ ತಲಾ ಲಭ್ಯತೆ ಪ್ರತಿ ದಿನಕ್ಕೆ ಕೇವಲ 400 ಗ್ರಾಂ ಮಾತ್ರವೇ ಇದೆ. ಹರ‍್ಯಾಣ ರಾಜ್ಯ ಗರಿಷ್ಠ ತಲಾ ಲಭ್ಯತೆ ಹೊಂದಿದ್ದರೆ (1087 ಗ್ರಾಂ) ಆಂಧ್ರ ಪ್ರದೇಶ( 623 ಗ್ರಾಂ.) ಮತ್ತು ಗುಜರಾತ್ (565 ಗ್ರಾಂ.) ನಂತರದ ಸ್ಥಾನದಲ್ಲಿವೆ. ಕರ್ನಾಟಕದ ತಲಾ ಲಭ್ಯತೆ 344 ಗ್ರಾಂ ಇದ್ದು ದೇಶದ ಸರಾಸರಿಗಿಂತ ಕಡಿಮೆ ಇದೆ.
ಬಹುತೇಕ ಮನೆ ಬಳಕೆಗೆ ಮಾತ್ರ ಸೀಮಿತವಾಗಿದ್ದ ಹಾಲು ಉತ್ಪಾದನೆಯನ್ನು ಕುಟುಂಬದ ಸ್ಥಿರ ನಗದು ಆದಾಯದ ಮೂಲವಾಗಿಸಿ ರೈತರ ಬದುಕಿಗೆ ಕನಿಷ್ಟ ಆದಾಯ ಖಾತರಿ ಒದಗಿಸುವಲ್ಲಿ ಸಹಕಾರಿ ರಂಗ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಮೂಲಕ ಸಹಕಾರಿ ಕ್ಷೇತ್ರಕ್ಕೆ ಬಹಳ ಉತ್ತೇಜನ ಸಿಕ್ಕ ಕಾರಣದಿಂದ ದೇಶದ ಹಾಲು ಉತ್ಪಾದನೆ ದ್ವಿಗುಣಗೊಳ್ಳಲು ಸಾಧ್ಯವಾಯಿತು. ಗುಜರಾತ್ ಮತ್ತು ಕರ್ನಾಟಕ ಸಹಕಾರಿ ರಂಗದ ಖರೀದಿ ವ್ಯವಸ್ಥೆಯನ್ನು ಬಲವಾಗಿ ರೂಪಿಸಿಕೊಂಡಿವೆ. ಈ ಕಾರಣದಿಂದ ದೇಶದಲ್ಲೇ ಅತ್ಯಂತ ಬಲಿಷ್ಠ ಬ್ರಾಂಡ್ ಆಗಿ ಗುಜರಾತ್ ರಾಜ್ಯದ ಅಮೂಲ್ ರೂಪುಗೊಂಡಿದ್ದರೆ, ದಕ್ಷಿಣ ಭಾರತದಲ್ಲೇ ಈ ಕ್ಷೇತ್ರದ ಅತಿದೊಡ್ಡ ಸಂಸ್ಥೆಯಾಗಿ ಕೆಎಂಎಫ್ ತಲೆ ಎತ್ತಿದೆ.
ರಾಜ್ಯದ 25.8 ಲಕ್ಷ ರೈತರು ಹಾಗೂ ಕೃಷಿಕೂಲಿಕಾರ ಕುಟುಂಬಗಳು, ಸುಮಾರು 14900 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಪ್ರತಿ ದಿನ 84-85 ಲಕ್ಷ ಲೀಟರ್ ಹಾಲನ್ನು ಸರಬರಾಜಾಗುತ್ತಿದೆ. ಬಹುತೇಕ ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಈ ಹೈನುಗಾರಿಕೆಯು ಕೃಷಿ ಬಿಕ್ಕಟ್ಟಿನ ಪರಿಣಾಮದಿಂದ ದಿನ ನಿತ್ಯದ ಖರ್ಚು ನಿಭಾಯಿಸಲು ಏದುಸಿರು ಬಿಡುತ್ತಿದ್ದ ರೈತಾಪಿ ಕುಟುಂಬಕ್ಕೆ ನಗದು ರೂಪದ ಆದಾಯವನ್ನು ಖಾತರಿಗೊಳಿಸಿದೆ.
ಆದರೆ ದಿನೇ ದಿನೇ ಹೆಚ್ಚುತ್ತಿರುವ ಪಶು ಆಹಾರ ದರ, ಪಶುಗಳ ದರ ಇತ್ಯಾದಿಗಳ ಕಾರಣಕ್ಕೆ ಲೀಟರ್ ಹಾಲಿನ ಉತ್ಪಾದನಾ ವೆಚ್ಚವು 35 ರೂ. ಕ್ಕಿಂತ ಹೆಚ್ಚಾಗಿದೆ. ರಾಜ್ಯದ ಜಿಲ್ಲಾ ಒಕ್ಕೂಟಗಳು, ರಾಜ್ಯ ಸರ್ಕಾರ ನೀಡುತ್ತಿರುವ ಪ್ರೊತ್ಸಾಹ ಧನ ಸೇರಿಸಿ ಸರಾಸರಿ 28-30 ರೂ ರೈತರಿಗೆ ಪಾವತಿಯಾಗುತ್ತಿದೆ. ಅಂದರೆ ಪ್ರತಿ ಲೀಟರ್ ಹಾಲಿನ ಮೇಲೆ ಸುಮಾರು 5 ರಿಂದ 7 ರೂ ಅಸಲಿನಲ್ಲೇ ನಷ್ಟವಾಗುತ್ತಿದೆ.
ಈ ರೀತಿ ನಷ್ಟಕ್ಕೆ ಒಳಗಾಗುತ್ತಿರುವ ಕಾರಣ ಕೆಲವೆಡೆ ಹೈನುಗಾರಿಕೆ ಕಸಬನ್ನೇ ತೊರೆಯುತ್ತಿರುವ ವರದಿಗಳು ಕೇಳಿ ಬರುತ್ತಿವೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿ-ಧೋರಣೆಗಳನ್ನು ರೂಪಿಸಿದ್ದರಿಂದಾಗಿ ಈ ಪ್ರಮಾಣಕ್ಕೆ ಹೈನುಗಾರಿಕೆ ಕ್ಷೇತ್ರ ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದೆ. ಆದರೆ ಈಗ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ವಿಷಯದಲ್ಲೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾ ಹಾಲು ಒಕ್ಕೂಟಗಳು, ಎಸ್.ಎನ್.ಎಫ್ ಅನ್ನು ದರ ನಿಗದಿಗೆ ಮಾನದಂಡವಾಗಿ ಬಳಸುತ್ತಿವೆ. ಆದರೆ ಬಹಳಷ್ಟು ಎಂ.ಪಿ.ಸಿ.ಎಸ್.ಗಳಲ್ಲಿ ಈ ಸಂಬಂಧ ಯಾವುದೇ ಉಪಕರಣಗಳಿಲ್ಲದೇ ಗುಣಮಟ್ಟದ ಹಾಲು ಪೂರೈಸುವ ರೈತರಿಗೆ ಉತ್ತಮ ದರವನ್ನು ಹಾಗೂ ಪ್ರೊತ್ಸಾಹ ಧನವನ್ನು ವಂಚಿಸಲಾಗುತ್ತಿದೆ. ಜಿಲ್ಲಾ ಹಾಲು ಒಕ್ಕೂಟಗಳು ಎಸ್ ಎನ್ ಎಫ್ 8.5 ಕ್ಕಿಂತ ಕಡಿಮೆ ಬಂದ ಸಂದರ್ಭದಲ್ಲಿ ಅಂದರೆ 0.1 ಕಡಿಮೆ ಬಂದರೆ 2-00 ರೂ, 0.2 ಕಡಿಮೆ ಬಂದರೆ 3-00 ರೂ. ಹೀಗೆ ದಂಡ ವಿಧಿಸುತ್ತಿವೆ. ಎಸ್.ಎನ್.ಎಫ್ 8.5 ಬಂದರೆ ಮಾತ್ರ ಪ್ರತಿ ಲೀಟರ್ ಗೆ 2-00 ನಿರ್ವಹಣಾ ವೆಚ್ಚ ಮತ್ತು ಸರ್ಕಾರದ ಪ್ರೊತ್ಸಾಹ ಧನ ದೊರಕುತ್ತದೆ.
ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲು ರೈತರು ಪಾವತಿಸಬೇಕಿದ್ದ ವಂತಿಗೆ ಹಣವನ್ನು ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರು ಅಕಾಲಿಕ ಮರಣಕ್ಕೆ ತುತ್ತಾದರೆ ವಿಮೆ ಸೌಲಭ್ಯ ಪಡೆಯಲು ಗರಿಷ್ಠ ವಯಸ್ಸು 50 ವರ್ಷ ನಿಗದಿಪಡಿಸಿ, ಸಾಕಷ್ಟು ರೈತರಿಗೆ ಈ ಸೌಲಭ್ಯ ಸಿಗದಂತೆ ಮಾಡಲಾಗಿದೆ. ಪ್ರತಿ ವರ್ಷ ಹಾಕಬೇಕಾದ ಕಾಲು ಬಾಯಿ ರೋಗ ತಡೆ ಲಸಿಕೆಯು ಸಕಾಲಕ್ಕೆ ದೊರಕದೇ ಸಾಕಷ್ಟು ರಾಸುಗಳು ಮರಣ ಹೊಂದಿ ರೈತರನ್ನು ಅಪಾರ ಸಂಕಷ್ಟಕ್ಕೆ ತಳ್ಳಲಾಗಿದೆ. ಈ ಮಧ್ಯೆ ಅನುಪಯುಕ್ತ ರಾಸುಗಳನ್ನು ಮಾರದಂತೆ ನಿರ್ಬಂಧಿಸುವ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಹಸು ಕೊಳ್ಳುವುದು, ಸಾಗಾಣೆ ಮಾಡುವುದು ಮತ್ತು ಗಂಡು ಕರು, ವಯಸ್ಸಾದ ರಾಸುಗಳನ್ನು ಮಾರುವುದಕ್ಕೆ ಭಾರೀ ದೊಡ್ಡ ಧಕ್ಕೆ-ನಿರ್ಬಂಧ ಉಂಟಾಗಿದೆ. ಈಗಾಗಲೇ ಆರ್ಥಿಕ ಸಂಕಟದಿಂದ ನರಳುತ್ತಿರುವ ರೈತನಿಗೆ ಈ ಕಾಯ್ದೆಯಿಂದ ಮತ್ತಷ್ಟು ಆರ್ಥಿಕ ಹೊರೆ ಹೊತ್ತುಕೊಳ್ಳುವಂತಾಗಿದೆ ಮಾತ್ರವಲ್ಲ ಪ್ರತಿ ಹಂತದಲ್ಲೂ ಕಿರುಕುಳ ನೀಡಲಾಗುತ್ತಿದೆ. ಕೆಲವು ಕಡೆ ರೈತರ ಕೊಲೆ ನಡೆಸಲಾಗಿದೆ, ಕೆಲವು ಕಡೆ ರೈತರನ್ನು ಬಂಧಿಸಲಾಗಿದೆ, ಇನ್ನೂ ಕೆಲವು ಕಡೆ ಜಾನುವಾರು ಸಾಗಾಣಿಕೆ ವಾಹನವನ್ನು ಜಪ್ತಿ ಮಾಡಿ ಕಷ್ಟಪಟ್ಟು ಖರೀದಿಸಿದ್ದ ರಾಸುಗಳನ್ನು ಗೋಶಾಲೆಗೆ ಸಾಗಿಸಲಾಗಿದೆ. ಈ ಕಾಯ್ದೆಯಿಂದ ಹೈನುಗಾರಿಕೆಯ ಆರ್ಥಿಕ ಚಕ್ರವೆ ತುಂಡರಿಸಲ್ಪಟ್ಟಿದೆ.
ಒಂದು ಕಡೆ ಪಶು ಸಾಕಾಣಿಕೆ, ಪಶು ಆಹಾರ, ಇತ್ಯಾದಿಗಳು ದುಬಾರಿಯಾಗಿ ಹೈನುಗಾರಿಕೆ ನಷ್ಟದ ಕಸುಬಾಗಿರುವಾಗ, ಇನ್ನೊಂದು ಕಡೆ ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದಾಗಿ ಅನುಪಯುಕ್ತ ರಾಸುಗಳ ವಿಲೇವಾರಿಗೆ ಕೈಯಿಂದ ಹಣ ಖರ್ಚು ಮಾಡಬೇಕಾದ ದುಸ್ಥಿತಿ ರೈತರಿಗೆ ಬಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಪಶುಸಂಗೋಪನೆ ಸಾಕಪ್ಪಾ ಸಾಕು ಎಂದು ರೈತರು ನಿಟ್ಟುಸಿರು ಬಿಡುತ್ತಿರುವಾಗ ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಶದೊಳಗೆ ಬಂದು ಬೀಳಲು ಆಮದು ಸುಂಕ ಕಡಿತ ಮಾಡುವುದು, ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವುದು, ಹೆಚ್ಚುವರಿ ಹಾಲು ಉತ್ಪಾದನೆ ಇರುವ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ಮುಂತಾದ ಕ್ರಮಗಳನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ರೈತರು ಭಾರೀ ವಿರೋಧ ವ್ಯಕ್ತಪಡಿಸಿದರೂ ಇತ್ತೀಚೆಗೆ ಆಸ್ಟ್ರೇಲಿಯಾ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ದೇಶಿಯ ಖಾಸಗಿ ಕಂಪನಿಗಳ ಹಾವಳಿಯು ವಿಪರೀತವಾಗಿದೆ. ಗುಣಮಟ್ಟ ಮತ್ತಿತರೆ ಅಂಶಗಳಲ್ಲಿ ಗಂಭೀರವಾದ ಸಮಸ್ಯೆಗಳಿದ್ದರೂ, ಅಕ್ರಮಣಾಕಾರಿ ಮಾರುಕಟ್ಟೆಯ ತಂತ್ರಗಳಿಂದ ಸಹಕಾರಿ ಕ್ಷೇತ್ರದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯು ಕುಸಿಯುವಂತೆ ಮಾಡುತ್ತಿವೆ.
ದೊಡ್ಡ ಪ್ರಮಾಣದಲ್ಲಿ ಸಹಾಯ ಧನ ಪಡೆದು ಹೈನುಗಾರಿಕೆಯಲ್ಲಿ ತೊಡಗಿರುವ ಆರ್‌ಸಿಇಪಿ ದೇಶಗಳ ಜೊತೆ ನಮ್ಮ ರೈತರು ಪೈಪೋಟಿ ಮಾಡಲು ಸಾಧ್ಯವಿಲ್ಲದೇ ನಮ್ಮ ಹೈನುಗಾರಿಕೆಯು ನೆಲ ಕಚ್ಚಲಿದೆ. ಈ ಪ್ರಕ್ರಿಯೆಯ ಭಾಗವಾಗಿಯೇ ರಾಜ್ಯದಲ್ಲೂ ಸದೃಢವಾಗಿರುವ ಸಹಕಾರಿ ಕ್ಷೇತ್ರದ ಗ್ರಾಮ ಮಟ್ಟದ ಪ್ರಾಥಮಿಕ ಸಹಕಾರಿ ಸಂಘಗಳು, ಜಿಲ್ಲಾ ಒಕ್ಕೂಟಗಳು ಹಾಗೂ ರಾಜ್ಯದ ಕೆ.ಎಂ.ಎಫ್ ಅನ್ನು ಹಂತ ಹಂತವಾಗಿ ಬಲಹೀನಗೊಳಿಸುವ ಕೆಲಸಕ್ಕೆ ಕೈ ಹಾಕಿದೆ.
ಜಗತ್ತಿನ ಹೈನುಗಾರಿಕೆ ಉತ್ಪಾದನೆ ಇರುವ ದೇಶಗಳಲ್ಲಿ ಆಮೇರಿಕಾ, ಜರ್ಮನಿ, ಫ್ರಾನ್ಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಐರ‍್ಲೆಂಡ್ ದೇಶಗಳು ಹೆಚ್ಚುವರಿ ಹಾಲು ಉತ್ಪಾದಿಸುತ್ತಿರುವ ದೇಶಗಳಾಗಿವೆ. ಈ ಹೆಚ್ಚುವರಿ ಉತ್ಪಾದನೆ ಇರುವ ದೇಶಗಳು ತಮ್ಮ ಹೆಚ್ಚುವರಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ದೊಡ್ಡ ದೇಶವಾಗಿರುವ ಭಾರತವನ್ನು ಮಾರುಕಟ್ಟೆ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿವೆ.
‘ರೈತರು’ ಎಂದರೆ ‘ಕೃಷಿ’, ‘ಕೃಷಿ’ ಎಂದರೆ ‘ರೈತರು’ ಎನ್ನುವ ಶತಮಾನಗಳ ತಿಳುವಳಿಕೆಗೆ ಸಂಪೂರ್ಣ ವಿರುದ್ದವಾಗಿ ದೇಶದ ಶೇ. 53ಕ್ಕಿಂತ ಹೆಚ್ಚು ಜನಸಂಖ್ಯೆಯ ಜೀವನಾಧಾರವಾಗಿರುವ ರೈತಾಪಿ ಕೃಷಿಯನ್ನು ಸರ್ವನಾಶ ಮಾಡಿ ‘ಕಂಪನಿ ಕೃಷಿ’ ‘ಕಾರ್ಪೊರೇಟ್ ಕೃಷಿ’ಯನ್ನು ಜಾರಿಗೆ ತರಬೇಕೆಂದು ಸದ್ಯದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುದಿಗಾಲಿನ ಮೇಲೆ ನಿಂತಿವೆ. ‘ದೆಹಲಿಯ ಗಡಿಗಳು’ ಮತ್ತು ದೇಶದಾದ್ಯಂತ ನಡೆದ ಚಾರಿತ್ರಿಕ ರೈತ ಹೋರಾಟಗಳಿಂದ ಸರ್ಕಾರಗಳು ಬುದ್ದಿ ಕಲಿತಿಲ್ಲ. ಈಗಲೂ ಅದೇ ನೀತಿಗಳನ್ನು ಮುಂದುವರಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿಯೇ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ಭಾರತ ದೇಶದ ಹೈನುಗಾರಿಕೆಯನ್ನು ‘ಕಾರ್ಪೊರೇಟ್ ಕಂಪನಿ’ಗಳಿಗೆ ಒಪ್ಪಿಸಲು ಪೂರಕವಾದ ನೀತಿಗಳನ್ನು ಜಾರಿ ಮಾಡುತ್ತಿವೆ. ಇದು ದೇಶದ ಮತ್ತು ನಿರ್ದಿಷ್ಟವಾಗಿ ರಾಜ್ಯದ 30 ಲಕ್ಷ ರೈತರು, ಕೃಷಿ ಕೂಲಿಕಾರರು, ನೌಕರರು, ನಾಗರೀಕರ ಬದುಕಿನ ಪ್ರಶ್ನೆಯಾಗಿದೆ. ಈ ನೀತಿಗಳನ್ನು ದೃಢವಾಗಿ ಹಿಮ್ಮೆಟ್ಟಿಸಬೇಕು ಹಾಗು ‘ರೈತಾಪಿ ಕೃಷಿ’, ‘ರೈತಾಪಿ ಹೈನುಗಾರಿಕೆ’ಯನ್ನು ಉಳಿಸಿ, ಬೆಳೆಸಬೇಕಿದೆ.
(ಲೇಖನವು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆದ
ರಾಜ್ಯ ಮಟ್ಟದ ಹಾಲು ಉತ್ಪಾದಕರ ಸಮಾವೇಶದಲ್ಲಿ ಮಂಡಿಸಿದ
ವರದಿಯ ಆಧಾರದಲ್ಲಿದೆ.)