ಬೆಂಗಳೂರು : ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಚಹರೆ ಪತ್ತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನೈಋತ್ಯ ರೈಲ್ವೆ ವಲಯವು ಚಹರೆ ಪತ್ತೆ ತಂತ್ರಜ್ಞಾನವನ್ನು ಅಳವಡಿಸಿರುವ ಭಾರತೀಯ ರೈಲ್ವೆ ವಿಭಾಗೀಯ ಮಟ್ಟದ ಮೊದಲ ವಲಯವಾಗಿದೆ.
ಹೀಗೆ ಎಲ್ಲಾ ವಲಯಗಳಲ್ಲಿ ಭದ್ರತೆಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಇದು ಕೃತಕ ಬುದ್ಧಿಮತ್ತೆ ಅಪ್ಲಿಕೇಷನ್ ಆಧಾರಿತ ಅಪ್ಲಿಕೇಷನ್ ಆಗಿದ್ದು, ಅದರ ಆಧಾರದ ಮೇಲೆ ಮಾದರಿಯನ್ನು ವಿಶ್ಲೇಷಿಸುವ ಮೂಲಕ ವ್ಯಕ್ತಿಯನ್ನು ಗುರುತಿಸಬಹುದಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ರೈಲು ನಿಲ್ದಾಣಕ್ಕೆ ಸೆಪ್ಟೆಂಬರ್‌ನಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಲಭ್ಯವಾಗಿದ್ದು, ಪ್ರಯಾಣಿಕರು ಯಾವುದೇ ಅಂಜಿಕೆ ಇಲ್ಲದೆ ನಿಲ್ದಾಣ ಪ್ರವೇಶಿಸಬಹುದು.
ಮೆಜೆಸ್ಟಿಕ್ ರೈಲು ನಿಲ್ದಾಣವನ್ನು ಪ್ರತಿ ದಿನ 2 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ. ರಜಾದಿನ ಬಂದರೆ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಇಷ್ಟೊಂದು ಪ್ರಯಾಣಿಕರಿಗೆ ಭದ್ರತೆ ನೀಡುವುದು ಹಾಗೂ ಅಪರಾಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಸವಾಲಾಗಿದೆ.
ಹೀಗಾಗಿ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ರೈಲ್ವೆ ಭದ್ರತಾ ಪಡೆಯು ಈ ಹೊಸ ವ್ಯವಸ್ಥೆಯನ್ನು ಸೆಪ್ಟೆಂಬರ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ.
ಏರ್‌ಪೋರ್ಟ್‌ನಲ್ಲಿಅನುಷ್ಠಾನಗೊಳಿಸಿರುವ ಭದ್ರತಾ ವ್ಯವಸ್ಥೆಯನ್ನು ಮಾದರಿಯಾಗಿರಿಸಿಕೊಂಡು ಹೊಸ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಶವಂತಪುರ ನಿಲ್ದಾಣದಲ್ಲೂ ಇನ್ನಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ದೂರ ಪ್ರಯಾಣಿಸುವ ಮೀಸಲಿಲ್ಲದ ರೈಲು ಬೋಗಿಗಳಲ್ಲಿಆಸನ ಕಾದಿರಿಸುವ ಸಮಸ್ಯೆ ತಪ್ಪಿಸಲು ಆರ್‌ಪಿಎಫ್ ಐದು ಯಂತ್ರಗಳನ್ನು ಮೆಜೆಸ್ಟಿಕ್‌ನಲ್ಲಿ ಹಾಗೂ ಎರಡು ಯಂತ್ರಗಳನ್ನು ಯಶವಂತಪುರ ನಿಲ್ದಾಣದಲ್ಲಿಅಳವಡಿಸಲಿದೆ. ಈ ಯಂತ್ರಗಳು ಪ್ರಯಾಣಿಕರ ಬಯೋಮೆಟ್ರಿಕ್ ಹಾಗೂ ಚಿತ್ರವನ್ನು ಸಂಗ್ರಹಿಸಲಿದೆ. ಇದನ್ನು ಬಳಸಿಕೊಂಡು ಆರ್‌ಪಿಎಫ್ ಸಿಬ್ಬಂದಿ ಟೋಕನ್ ವಿತರಣೆ ಮಾಡಲಿದ್ದಾರೆ. ಮೊದಲು ಬಂದವರಿಗೆ ಆದ್ಯತೆ ನೀಡಿ ಆಸನ ನಿಗದಿಪಡಿಸಿ ಟೋಕನ್ ವಿತರಿಸಲಾಗುತ್ತದೆ.
ಮೆಜೆಸ್ಟಿಕ್ ನಿಲ್ದಾಣದಲ್ಲಿ ನಾಲ್ಕು ಹಾಗೂ ಯಶವಂತಪುರ ನಿಲ್ದಾಣದಲ್ಲಿ ಎರಡು ವಾಹನ ತಪಾಸಣಾ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇವು ವಾಹನದ ಕೆಳಭಾಗವನ್ನು ತಪಾಸಣೆ ಮಾಡುತ್ತವೆ. ವಾಹನದ ಕೆಳಭಾಗದ ಚಿತ್ರಗಳು ಕಂಪ್ಯೂಟರ್ ಪರದೆಯಲ್ಲಿ ಬಿತ್ತರವಾಗುತ್ತವೆ. ಡ್ರೋನ್, ಸೆಗ್‌ವೇ ನಿಲ್ದಾಣದಲ್ಲಿ ಜನಸಮೂಹದ ಮೇಲೆ ನಿಗಾ ಇರಿಸಲು ಎರಡು ಡ್ರೋನ್‌ಗಳಿವೆ. ಇನ್ನೂ ನಾಲ್ಕು ಡ್ರೋನ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಸಿಬ್ಬಂದಿಯ ಸುಲಭವಾದ ಓಡಾಟಕ್ಕೆ 14 ಸೆಗ್‌ವೇ ಖರೀದಿಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ವೇಗವಾಗಿ ಸಾಗಲು ಇದು ಅನುಕೂಲವಾಗಲಿದೆ.
ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲು ಸಿಬ್ಬಂದಿ ಜೇಬಿನ ಬಳಿ ಅಳವಡಿಸಿಕೊಳ್ಳುವಂತಹ 185 ಕ್ಯಾಮೆರಾಗಳನ್ನು ಖರೀದಿಸಲಾಗುತ್ತಿದೆ. ಇದು ಶಂಕಿತ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇರಿಸಲು ಹಾಗೂ ವಿಡಿಯೋ ಚಿತ್ರೀಕರಣ ಮಾಡಲು ನೆರವಾಗಲಿದೆ.
ನಿಲ್ದಾಣದಲ್ಲಿ ಮುಖ ಚಹರೆ ಪತ್ತೆ ತಂತ್ರಜ್ಞಾನವನ್ನು ಹೊಂದಿರುವ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿದ್ದು, ಯಶಸ್ವಿಯಾಗಿದೆ. ಇಂತಹ ಕ್ಯಾಮೆರಾಗಳಿಂದ ಅಪರಾಧಿಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ನಿಲ್ದಾಣದೊಳಗೆ ಬರುವ ಪ್ರತಿ ಪ್ರಯಾಣಿಕರ ಮುಖ ಚಹರೆಯನ್ನು ಪತ್ತೆ ಮಾಡುವ ಈ ಕ್ಯಾಮೆರಾ, ಅಪರಾಧಿಗಳು ಕಂಡುಬಂದರೆ ಕೂಡಲೇ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಲಕ್ಷಾಂತರ ಪ್ರಯಾಣಿಕರು ಬಂದರೂ ಯಾರನ್ನೂ ಅಡ್ಡಿಪಡಿಸಿ ತಪಾಸಣೆ ನಡೆಸದೆಯೂ ಚಹರೆ ಪತ್ತೆ ಸಾಧ್ಯವಾಗುತ್ತದೆ.
ಸುದ್ದಿಮೂಲ: ಒನ್ ಇಂಡಿಯಾ ಕನ್ನಡ ಜಾಲತಾಣ