ಸಂಘಪರಿವಾರ ಮತ್ತು ಧರ್ಮ

ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ

ಹಿಂದುತ್ವದ ರಾಷ್ಟ್ರೀಯವಾದವು ಧಾರ್ಮಿಕ ರಾಷ್ಟ್ರೀಯವಾದವಾಗಿ ರೂಪ ಪಡೆಯುತ್ತದೆ. ಬ್ರಾಹ್ಮಣ ಧರ್ಮವು ಪ್ರತಿಪಾದಿಸುವ ಜಾತಿಮೂಲದ ಮೇಲು-ಕೀಳಿನ ತಾರತಮ್ಯ, ಜಾತಿ ಆಧಾರಿತ ಸಾಮಾಜಿಕ ಶ್ರಮವಿಭಜನೆ, ಪಿತೃಪ್ರಧಾನ ಆಳ್ವಿಕೆಯ ರಾಜಕೀಯ ಸಂಬಂಧಗಳು, ಬಂಡವಾಳವಾದವು ಸಮರ್ಥಿಸುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಶೋಷಣಾಯುಕ್ತ ಶ್ರಮ ಸಂಬಂಧಗಳ ಧಾರ್ಮಿಕ ರೂಪಗಳಾಗಿ ಕಾಣಿಸುತ್ತವೆ. ಧರ್ಮ, ಸಂಸ್ಕೃತಿ, ನೈತಿಕತೆ, ನ್ಯಾಯ ನಿಷ್ಕರ್ಷೆ, ಸಾಮಾಜಿಕ ವರ್ತನೆ, ರಾಜ್ಯಾಡಳಿತ ಮತ್ತು ರಾಜಕೀಯಗಳು ಬೇರ್ಪಡಿಸಲಾಗದಷ್ಟು ಒಂದರೊಳಗೆ ಮತ್ತೊಂದು ಬೆರೆತುಕೊಂಡು ‘ಹಿಂದುತ್ವದ’ ರಾಜಕೀಯವು ಯಾವ ಹಣೆಪಟ್ಟಿಗೂ ಸಿಗದ ಸಂಘಪರಿವಾರದ ‘ಸಾಂಸ್ಕೃತಿಕ’ ಆಳ್ವಿಕೆಯಾಗಿ ವಿಜೃಂಬಿಸುತ್ತಿದೆ.

ಸಂಘಪರಿವಾರದ ಸನಾತನ ಭಾರತದ ಕಾಲ್ಪನಿಕ ಚಿತ್ರದಲ್ಲಿ ಇಂದಿನ ಇಂಡಿಯಾದ ಎಲ್ಲಾ ಸ್ವತಂತ್ರ ಸಾರ್ವಭೌಮ ನೆರೆರಾಷ್ಟ್ರಗಳನ್ನು ತನ್ನೊಳಕ್ಕೆ ಸೇರಿಸಿಕೊಂಡ ‘ಜಂಬೂ ದ್ವೀಪವಾದ ಭರತ ಕ್ಷೇತ್ರ’ ಎಂಬ ರಾಜಕೀಯ ಭೂಪಟ ಕಾಣಿಸುತ್ತದೆ. ರಾಮಾಯಣ-ಮಹಾಭಾರತ ಮಹಾಕಾವ್ಯಗಳಲ್ಲಿ ವರ್ಣಿತವಾಗುವ ಆಯುಧಗಳು, ವಸ್ತ್ರಗಳು, ವಾಹನಗಳು, ಸಂಗೀತವಾದ್ಯಗಳು ಮತ್ತು ತಂತ್ರಜ್ಞಾನವನ್ನು ಸಂಘಪರಿವಾರವು ಮೊಹೆಂಜಾದಾರೋ ನಾಗರಿಕತೆಗೂ ಸಾವಿರಾರು ವರ್ಷ ಹಿಂದಕ್ಕೊಯ್ಯುತ್ತದೆ. ಆ ಕಾಲದ್ದೆಂದು ಹೇಳುವ ತಂತ್ರಜ್ಞಾನವು ಕೊಡ ಮಾಡಿದ್ದೆಂದು ಹೇಳುವ ವಸ್ತುಗಳನ್ನು ಹೊರತುಪಡಿಸಿ ಆಧುನಿಕ ಇಂಡಿಯಾದಲ್ಲಿ ಈಗ ಬಳಸುತ್ತಿರುವ ಎಲ್ಲವೂ ವಿಶ್ವದ ಬೇರೆ ಬೇರೆ ಭಾಗಗಳಿಂದ ಬಂದವುಗಳು. ಈಗ ಇಂಡಿಯಾ ಎಂದು ಕರೆಯುವ 400ಕ್ಕೂ ಹೆಚ್ಚು ದೇಶೀಯ ಪ್ರಾಂತ್ಯಗಳನ್ನು ಆಳಿದ ಆಡಳಿತಗಾರರು ಬಿಟ್ಟುಹೋದ ಮಿಶ್ರ ಸಂಸ್ಕೃತಿಯ ಫಲಗಳು. ಮುಖ್ಯವಾಗಿ, ಮೊಗಲ್ ದೊರೆಗಳು ಮತ್ತು ಬ್ರಿಟಿಷ್ ಆಡಳಿತಗಾರರ ಆಳ್ವಿಕೆಗಳ ಕಾಲದಲ್ಲಿ ಜಾರಿಗೆ ಬಂದ ಆಹಾರ ಪದ್ಧತಿ, ವಸ್ತ್ರವಿನ್ಯಾಸ, ತಂತ್ರಜ್ಞಾನ, ಕಲೆ, ಸಂಸ್ಕೃತಿ, ಸಾಹಿತ್ಯ, ಆಭರಣ, ಆಲೋಚನಾ ಕ್ರಮಗಳ ಮಿಶ್ರ ಸಂಸ್ಕೃತಿಯ ಜೀವನ ಕ್ರಮ ಇಂದಿಗೂ ಆಧುನಿಕ ಇಂಡಿಯಾದ ಜನರ ಜೀವನ ಕ್ರಮವಾಗೇ ಮುಂದುವರೆದಿವೆ. ಬಂಡವಾಳವಾದೀ ಜಗತ್ತಿನ ಭಾಗವಾಗಿ ಜಾಗತೀಕರಣದ ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಇಂಡಿಯಾವನ್ನು ಒಪ್ಪಿಸಿಕೊಂಡ ಮೇಲಂತೂ ಬಹುತೇಕವಾಗಿ ಪಾಶ್ಚಿಮಾತ್ಯ ಎನ್ನಬಹುದಾದ ಮಿಶ್ರ ಸಂಸ್ಕೃತಿಯ ನಾಗರಿಕತೆಯು ಇಂಡಿಯಾದ ‘ರಾಷ್ಟ್ರೀಯ’ ನಾಗರಿಕತೆ-ಸಂಸ್ಕೃತಿಯಾಗಿದೆ.

ಹೀಗಿದ್ದರೂ, ಮತ್ತು ಈಗ ಸ್ವತಹ ಸಂಘಪರಿವಾರವೇ ಈ ಮಿಶ್ರ ಸಂಸ್ಕೃತಿಯ- ನಾಗರಿಕತೆಯ ಬಹುದೊಡ್ಡ ಫಲಾನುಭವಿ ಮತ್ತು ಬಳಕೆದಾರನಾಗಿದ್ದೂ ಕಾಲ್ಪನಿಕವಾದ ಹಿಂದೂ ರಾಷ್ಟ್ರೀಯತೆಯ ಮಧ್ಯಯುಗದ ಭರತ ಕ್ಷೇತ್ರವನ್ನು, ಅಂದರೆ ತನ್ನ ಕಲ್ಪನೆಯ ‘ಭಾರತ’ವನ್ನು ಪ್ರತಿಷ್ಠಾಪಿಸಲು ನಾನಾ ಬಗೆಯ ತಂತ್ರಗಳನ್ನು ಬಳಸುತ್ತಿದೆ. ಇದರ ಉದ್ದೇಶಿತ ಗುರಿ ಹಿಂದೂ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಅವರ ಬೆಂಬಲವನ್ನು ಉತ್ಪಾದಿಸಿ ಹಿಂದುತ್ವ ಪ್ರಣೀತ ‘ಹಿಂದೂರಾಷ್ಟ್ರ’ವನ್ನು ಸ್ಥಾಪಿಸುವುದು. ಸಂಘಪರಿವಾರದ ಸಾಧನಗಳು ಪ್ರಧಾನವಾಗಿ ಊಳಿಗಮಾನ್ಯ ಸಂಸ್ಕೃತಿಯನ್ನು, ಪಿತೃಪ್ರಧಾನ ವ್ಯವಸ್ಥೆಯನ್ನು, ಯಜಮಾನ-ಗುಲಾಮ ಶ್ರಮ ಸಂಬಂಧಗಳನ್ನು ಕೀರ್ತಿಸುವ ದೇವರುಗಳನ್ನು ಪೂಜಿಸುವ ದೇವಸ್ಥಾನಗಳು. ಇವಕ್ಕೆ ವಿರುದ್ಧವಾಗಿ ಇಂಡಿಯಾದಲ್ಲಿರುವ ಕ್ರೈಸ್ತ ಮತ್ತು ಮುಸಲ್ಮಾನ ಜನ ಸಾಮಾನ್ಯರ ನಂಬಿಕೆಗಳನ್ನು, ಆಹಾರ ಪದ್ಧತಿಗಳನ್ನು, ಪ್ರಾರ್ಥನಾ ವಿಧಾನಗಳನ್ನು ಮತ್ತು ಇತರ ಸಾಂಸ್ಕೃತಿಕ ಆಚಾರ-ವಿಚಾರಗಳನ್ನು, ಅವರನ್ನು ದ್ವೇಷಿಸಲು ಕಾರಣಗಳನ್ನಾಗಿ ಸಂಘಪರಿವಾರವು ಬಳಸುತ್ತದೆ. ಇದು ಸಂಘ ಪರಿವಾರವು ಹುಟ್ಟಿದಂದಿನಿಂದಲೂ ನಡೆದು ಬಂದಿರುವ ಧಾರ್ಮಿಕ ವೇಷದ ವಿದ್ಯಮಾನ. ಸ್ವಾರಸ್ಯಕರ ಅಂಶವೇನೆಂದರೆ,  ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಮಂಡಿಸಿದ ಸಾವರ್ಕರ್ ಒಬ್ಬ ನಾಸ್ತಿಕ. ಅಂದರೆ, ವೇದ ಪ್ರಾಮಾಣ್ಯದಲ್ಲಿ ನಂಬಿಕೆ ಇಲ್ಲದ ಮತ್ತು ದೇವರ ಅಸ್ತಿತ್ವವನ್ನು ಒಪ್ಪದ ಚಿಂತಕ.

ತಾತ್ವಿಕವಾಗಿ, ಬೌದ್ಧರು, ಜೈನರು, ಲಿಂಗಾಯಿತರು ಮಾತ್ರವಲ್ಲದೆ ವೈಚಾರಿಕರಾದ ಚಾರ್ವಾಕರು, ವೈಜ್ಞಾನಿಕರು ಮತ್ತು ಕಮ್ಯುನಿಸ್ಟರೂ ಸಹ ವೇದ ಪ್ರಾಮಾಣ್ಯವನ್ನು ಪುರಸ್ಕರಿಸುವುದಿಲ್ಲ. ಹಿಂದೂ ನಂಬಿಕೆಯ ದೇವರ ಅಸ್ತಿತ್ವವನ್ನು ಮಾನ್ಯ ಮಾಡುವುದಿಲ್ಲ.

ಆದರೆ ಸಂಘ ಪರಿವಾರ ಪ್ರಣೀತ ಭಾರತಕ್ಕೆ ‘ಅನ್ಯ’ರಾದ ಕ್ರೈಸ್ತರು, ಮುಸ್ಲಿಮರು ಮತ್ತು ಯಹೂದಿಗಳು, ಅವರದೇ ಆದ ದೇವರನ್ನು ನಂಬುತ್ತಾರೆ. ಅವರ ಪವಿತ್ರ ಗ್ರಂಥಗಳು ವಿಧಿಸುವ ಧಾರ್ಮಿಕ ಜೀವನ ವಿಧಾನಗಳನ್ನು ಸಾಂಕೇತಿಕವಾಗಿಯಾದರೂ ಅನುಸರಿಸುತ್ತಾರೆ. ಅಷ್ಟೇ ಅಲ್ಲ ಅವರವರ ಪುರೋಹಿತರು, ಸಾಧು-ಸಂತರು ಮತ್ತು ಶಾಸ್ತ್ರಗ್ರಂಥಗಳು ವಿಧಿಸುವ ಅಥವಾ ಅನುಮೋದಿಸುವ ಪ್ರಾರ್ಥನಾ ವಿಧಾನ, ವಸ್ತ್ರಸಂಹಿತೆ, ಆಹಾರ ಪದ್ಧತಿ ಮತ್ತು ಸಾಮಾಜಿಕ ನಡಾವಳಿಗಳನ್ನು ತಮ್ಮ ತಮ್ಮ ಧಾರ್ಮಿಕ ಚೌಕಟ್ಟುಗಳೊಳಗೆ ಅಳವಡಿಸಿಕೊಳ್ಳುತ್ತಾರೆ.

ಹೀಗಿದ್ದರೂ, ಸಂಘ ಪರಿವಾರವು ನಾಸ್ತಿಕರು, ಕಮ್ಯುನಿಸ್ಟರು, ಕ್ರೈಸ್ತರು ಮತ್ತು ಮುಸ್ಲಿಮರನ್ನು ಮಾತ್ರ ತನ್ನ ಶತ್ರುಗಳೆಂದು ಪರಿಗಣಿಸುತ್ತದೆ. ಹಿಂದೂ ಧರ್ಮಕ್ಕೆ ಸೇರಿಲ್ಲವೆಂದು ಪರಿಗಣಿತವಾಗಿರುವ ಬೌದ್ಧ, ಜೈನ, ಮತ್ತು ಯಹೂದಿ ಧರ್ಮೀಯರನ್ನು ಸಂಘ ಪರಿವಾರವು ದ್ವೇಷಿಸುವುದಿಲ್ಲ. ಮಾತ್ರವಲ್ಲ, ಅವರನ್ನು ತನ್ನ ಮಿತ್ರರೆಂದೇ ನೋಡುತ್ತದೆ. ಆದಿವಾಸಿಗಳು ಮತ್ತು ಬುಡಕಟ್ಟಿನ ಜನರು ಹಿಂದೂ ಧರ್ಮದ ರೀತಿ-ನೀತಿಗಳನ್ನು ಸಾಂಪ್ರದಾಯಿಕ ಅರ್ಥದಲ್ಲಿ ಅನುಸರಿಸದಿದ್ದರೂ ಅವರೂ ಹಿಂದೂ ಧರ್ಮಕ್ಕೆ ಸೇರಿದವರೆಂದೇ ಸಂಘ ಪರಿವಾರವು ಪ್ರತಿಪಾದಿಸುತ್ತದೆ. ಅಸ್ಪೃಶ್ಯತೆ ಮತ್ತು ಜಾತಿತಾರತಮ್ಯದ ಕಾರಣಕ್ಕಾಗಿ ಬೇರೆ ಧರ್ಮಗಳನ್ನು ಸೇರಬಯಸುವ ಕೆಳಜಾತಿಯ ಜನರನ್ನು ಹಿಂದೂಧರ್ಮದಲ್ಲಿಯೇ ಉಳಿಯುವಂತೆ ನೋಡಿಕೊಳ್ಳುವುದಕ್ಕಾಗಿ ದಿನಕ್ಕೊಂದು ಹೊಸ ಹೊಸ ಸಂಘ-ಸಂಸ್ಥೆಗಳನ್ನು ಸಂಘಟಿಸುತ್ತದೆ. ಸಂಘ ಪರಿವಾರವೇ ನೂರಾರು, ಸಾವಿರಾರು ಶಾಲೆಗಳನ್ನು, ಅನಾಥಾಲಯಗಳನ್ನು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ನಡೆಸುವ ಮೂಲಕ ಎಳೆಯ ಮನಸ್ಸುಗಳಲ್ಲಿ ‘ಅನ್ಯ’ ಧರ್ಮೀಯರ ವಿರುದ್ಧ ದ್ವೇಷ ಬಿತ್ತುವ ಕೆಲಸವನ್ನು ಬಹು ಹಿಂದಿನಿಂದಲೂ ವ್ಯವಸ್ಥಿತವಾಗಿ ಮಾಡುತ್ತಿದೆ. ಇದಕ್ಕೆಲ್ಲಾ ಬೇಕಾಗುವ ಹಣ ಸರ್ಕಾರದಿಂದ ಬೇರೆ ಬೇರೆ ಅನುದಾನಗಳ ಹೆಸರಿನಲ್ಲಿ, ಕಾರ್ಪೋರೇಟ್ ದಾನಗಳ ಮೂಲಕ, ವಿದೇಶಗಳಲ್ಲಿರುವ ಸಂಘ ಪರಿವಾರ ಪರವಾದ ಸಂಘಟನೆಗಳ ಮೂಲಕ ಅಗಾಧವಾಗಿ ಹರಿದು ಬರುತ್ತದೆ. ಸಂಘ ಪರಿವಾರದ ಕಾಲಾಳುಗಳು ಮತ್ತು ಫಲಾನುಭವಿಗಳು ಸರ್ಕಾರದ ಆಡಳಿತ ಯಂತ್ರಗಳಲ್ಲಿ ಮಾತ್ರವಲ್ಲ, ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ, ಸಾರ್ವಜನಿಕ ಸಂಘ-ಸಂಸ್ಥೆಗಳಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ತೂರಿಕೊಂಡಿದ್ದಾರೆ.

ಜನಸಾಮಾನ್ಯರು ಪೂಜಿಸುವ ದೇವರು-ದೇವತೆಗಳನ್ನು, ರಾಷ್ಟ್ರಮಾತೆ ಮತ್ತು ರಾಷ್ಟ್ರಪಿತೃಗಳೊಂದಿಗೆ ಸಮೀಕರಿಸಿ ದೈವಭಕ್ತಿಯನ್ನು ದೇಶಭಕ್ತಿಯಾಗಿ ಪರಿವರ್ತಿಸುವ ಕೀರ್ತನೆಗಳನ್ನು ಭಕ್ತಿಯ ಹೆಸರಿನಲ್ಲಿ ಪ್ರಸಾರ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಪ್ರಬಲವಾಗಿರುವ ಸಂಘ ಪರಿವಾರದ ರಾಜಕೀಯ ಮುಖವಾದ ಭಾಜಪ ರಾಜಕೀಯ ಅಧಿಕಾರ ಪಡೆದದ್ದೇ ಹೀಗೆ – ಬೇರೆ ಬೇರೆ ವೃತ್ತಿಗಳನ್ನು, ಹವ್ಯಾಸಗಳನ್ನು ಮತ್ತು ಮುಖ್ಯವಾಗಿ ಧರ್ಮಗಳನ್ನು ಅನುಸರಿಸುವ ಜನರ ಬೆಂಬಲ, ಸಹಕಾರ-ಸಹಯೋಗ ಮತ್ತು ನೇರ ಪಾಲ್ಗೊಳ್ಳುವಿಕೆಯಿಂದಾಗಿ. ಇದರಿಂದ ಸ್ಪಷ್ಟವಾಗುವ ಅಂಶವೇನೆಂದರೆ, ಸಂಘ ಪರಿವಾರದ ರಾಜಕೀಯಲ್ಲಿ ಅದರ ಕ್ರೈಸ್ತ ಮತ್ತು ಮುಸಲ್ಮಾನರ ದ್ವೇಷಕ್ಕೆ ಕಾರಣ ಮೇಲು ನೋಟಕ್ಕೆ ಕಾಣುವಂತೆ ಆ ‘ಅನ್ಯ’ ಧರ್ಮೀಯರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳಲ್ಲ. ಹಾಗೆಯೇ ‘ಹಿಂದೂ ಧರ್ಮ’ದ ಸ್ವಘೋಷಿತ ರಕ್ಷಕನೆಂಬಂತೆ ತೋರಿಸಿಕೊಳ್ಳುವ ಸಂಘ ಪರಿವಾರದ ನೇತಾರರು ಮತ್ತು ಕಾಲಾಳುಗಳ ವೈಯಕ್ತಿಕ ಧಾರ್ಮಿಕ ಶ್ರದ್ಧೆ- ನಂಬಿಕೆಗಳೂ ಅಲ್ಲ.

ಹಾಗಿದ್ದರೆ, ಮತ್ತೇನು?

ಉತ್ತರ ಈಗಾಗಲೇ ಸ್ಪಷ್ಟವಾಗಿದೆ. ವ್ಯಕ್ತಿಗತವಾಗಿ ನಾಸ್ತಿಕನಾದ ಸಾವರ್ಕರ್ ಪ್ರತಿಪಾದಿಸುವ ಹಿಂದುತ್ವವು ಒಂದು ಶುದ್ಧ ರಾಜಕೀಯ ಪರಿಕಲ್ಪನೆಯೇ ಹೊರತು ಧಾರ್ಮಿಕ ದೃಷ್ಟಿ ಕೋನವಲ್ಲ. ಅದನ್ನು ತನ್ನ ಅಜೆಂಡಾ ಆಗಿ ಅಳವಡಿಸಿಕೊಂಡಿರುವ ಸಂಘಪರಿವಾರವು ಹಿಂದೂ ಜಾತಿ – ಪಂಗಡಗಳ ಜನಬಲವನ್ನು ತನ್ನದೇ ಆದ ಗುರಿಯನ್ನು ಮುಟ್ಟಲು ಕ್ರೋಢೀಕರಿಸಿಕೊಳ್ಳುತ್ತದೆ. ಹಿಂದೂ ದೇವರುಗಳು, ದೇವಸ್ಥಾನಗಳು, ಜನಸಾಮಾನ್ಯರ ಧಾರ್ಮಿಕ ಶ್ರದ್ಧೆ ಮತ್ತು ಚರಿತ್ರೆಯ ಬಗೆಗಿರುವ ಜನರ ಅಜ್ಞಾನ-ಅರೆ ಜ್ಞಾನಗಳನ್ನು ಸಮಯಾನುಸಾರ ಬಳಸಿಕೊಳ್ಳುತ್ತದೆ. ‘ಅನ್ಯಧರ್ಮೀಯ’ರನ್ನು ದ್ವೇಷಿಸುವಂತೆ ಜನರನ್ನು ಉತ್ತೇಜಿಸುವ ಮೂಲಕ ಅವರ ಮಧ್ಯೆ ಸ್ವಾಭಾವಿಕವಾಗಿ ಇರುವ ಸಾಮಾಜಿಕ ಬಂಧುತ್ವವನ್ನು ಹಾಳು ಮಾಡುತ್ತದೆ. ಫ್ಯಾಸೀವಾದವು ಜಾಗತಿಕವಾಗಿ ಬಳಸಿ ಗಟ್ಟಿಗೊಳಿಸಿರುವ ಅನುಭವದ ಲಾಭಗಳನ್ನು, ಪ್ರಸ್ತುತ ಕಾಲದ ತಂತ್ರಜ್ಞಾನದೊಂದಿಗೆ ಕಸಿಮಾಡಿ ದೇಶೀಯವಾಗಿ ಬಳಸುವ ಮೂಲಕ ಪಡೆದುಕೊಳ್ಳುತ್ತದೆ.

19ನೇ ಶತಮಾನದ ಜರ್ಮನ್ ಭಾವನಾವಾದೀ ಚಿಂತನೆಗಳಿಗೂ, ಸಂಘ ಪರಿವಾರವು ಕೀರ್ತಿಸಿ ಪ್ರತಿಪಾದಿಸುವ ಹಿಂದೂ ಸನಾತನವಾದೀ ಚಿಂತನೆಗಳಿಗೂ ತುಂಬಾ ಸಾಮ್ಯವಿದೆ. ಹೀಗಾಗಿ ಅಲ್ಲಿನ ರಾಜಕೀಯದಲ್ಲಿ ಹಿಟ್ಲರ್ ಬಳಸಿದ ಆರ್ಯರ ಜನಾಂಗ ಶ್ರೇಷ್ಠತೆಗೆ ಸಂವಾದಿಯಾಗಿ, ಇಂಡಿಯಾದ ಬ್ರಾಹ್ಮಣ ಧರ್ಮವು ಸರ್ವ ಶ್ರೇಷ್ಠ, ಸಾರ್ವಕಾಲಿಕ ಮೌಲ್ಯವುಳ್ಳ ಹಿಂದೂ ಧರ್ಮವೆನಿಸುತ್ತದೆ. ಇದರಿಂದ, ಬ್ರಾಹ್ಮಣ ಧರ್ಮದ ನೆರಳಿನಡಿಯಲ್ಲಿ ಬರುವ ಎಲ್ಲವೂ ‘ಹಿಂದೂ’ ಜನರಿಗೆ ಸಂಬಂಧಿಸಿದವುಗಳೆಂದು ಹೇಳಿದಂತಾಗುತ್ತದೆ. ಇಲ್ಲಿ ವಾಸಿಸುವ ಜನರೆಲ್ಲರೂ ‘ಹಿಂದೂಸ್ತಾನ’ದ ಪ್ರಜೆಗಳು ಎಂದಾಗುತ್ತದೆ. ಹಾಗಿಲ್ಲದಾದಾಗ, ಚಾರಿತ್ರಿಕವಾಗಿ ಇಂಡಿಯಾದ ಜನಸಮುದಾಯದ ಅವಿಭಾಜ್ಯ ಅಂಗಗಳಾಗಿದ್ದೂ, ಬ್ರಾಹ್ಮಣ ಧರ್ಮದ ನೆರಳಿನಡಿಯಲ್ಲಿ ಬರದ ಕ್ರೈಸ್ತ ಮತ್ತು ಇಸ್ಲಾಂ ಧರ್ಮೀಯರು ‘ಪರಕೀಯ’ ಜನರಾಗುತ್ತಾರೆ. ಅವರು ಈ ನೆಲದಲ್ಲಿ ಬದುಕಬೇಕೆಂದರೆ, ‘ಮತ್ತೆ’ ‘ಹಿಂದೂ’ ಆಗಬೇಕು. ‘ಮತ್ತೆ’ ಯಾಕೆಂದರೆ, ಸಂಘ ಪರಿವಾರದ ತರ್ಕದ ಅನುಸಾರ ‘ಇಂಡಿಯಾದ ಕ್ರೈಸ್ತರು ಮತ್ತು ಮುಸಲ್ಮಾನರು ಒಂದು ಕಾಲದಲ್ಲಿ ಬಲಾತ್ಕಾರದಿಂದ ಅಥವಾ ಆಮಿಷಕ್ಕೊಳಗಾಗಿ ಮತಾಂತರಗೊಂಡ ಹಿಂದೂಗಳೇ’.  ಅಥವಾ ಅವರು ಹಿಂದೂಸ್ತಾನದಲ್ಲೇ ಇರಬಾರದು. ಪಾಕೀಸ್ತಾನಕ್ಕೋ, ಯಾವುದೋ ಇಸ್ಲಾಂ ರಾಷ್ಟ್ರಕ್ಕೋ ವಲಸೆ ಹೋಗಬೇಕು. ಹಾಗೆ ಮಾಡುವಂತೆ ನಿಸ್ಸಹಾಯಕರಾದ ಜನರ ಮೇಲೆ ಒತ್ತಡ ಹಾಕುವುದಕ್ಕಾಗಿ ನಾನಾ ರೂಪದ ಗುಂಪು ದೌರ್ಜನ್ಯದ ಅಮಾನುಷ ತಂತ್ರಗಳನ್ನು ನಿರಂತರವಾಗಿ ಬಳಸಲಾಗುತ್ತಿದೆ. ಆಳುವ ವರ್ಗದ ಭಾಗವೇ ಆಗಿರುವ ಪೊಲೀಸರು, ನ್ಯಾಯಾಲಯಗಳು ಮತ್ತು ಅಧಿಕಾರಿಗಳು ಮತ್ತು ಸುದ್ದಿ ಮಾಧ್ಯಮಗಳು ಕಾನೂನಿನಡಿಯಲ್ಲೇ ಪ್ರಭುತ್ವದೊಂದಿಗೆ ಕೈ ಜೋಡಿಸುತ್ತಾರೆ. ಇದು ಸಂಘ ಪರಿವಾರದ ಹಿಂದುತ್ವ ರಾಜಕೀಯದ ನೇರ ಪರಿಣಾಮ.

ಹೀಗೆ, ಹಿಂದುತ್ವದ ರಾಷ್ಟ್ರೀಯವಾದವು ಧಾರ್ಮಿಕ ರಾಷ್ಟ್ರೀಯವಾದವಾಗಿ ರೂಪ ಪಡೆಯುತ್ತದೆ. ಬ್ರಾಹ್ಮಣ ಧರ್ಮವು ಪ್ರತಿಪಾದಿಸುವ ಜಾತಿಮೂಲದ ಮೇಲು-ಕೀಳಿನ ತಾರತಮ್ಯ, ಜಾತಿ ಆಧಾರಿತ ಸಾಮಾಜಿಕ ಶ್ರಮವಿಭಜನೆ, ಪಿತೃ ಪ್ರಧಾನ ಆಳ್ವಿಕೆಯ ರಾಜಕೀಯ ಸಂಬಂಧಗಳು, ಬಂಡವಾಳವಾದವು ಸಮರ್ಥಿಸುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಶೋಷಣಾಯುಕ್ತ ಶ್ರಮ ಸಂಬಂಧಗಳ ಧಾರ್ಮಿಕ ರೂಪಗಳಾಗಿ ಕಾಣಿಸುತ್ತವೆ. ಧರ್ಮ, ಸಂಸ್ಕೃತಿ, ನೈತಿಕತೆ, ನ್ಯಾಯ ನಿಷ್ಕರ್ಷೆ, ಸಾಮಾಜಿಕ ವರ್ತನೆ, ರಾಜ್ಯಾಡಳಿತ, ಮತ್ತು ರಾಜಕೀಯಗಳು ಬೇರ್ಪಡಿಸಲಾಗದಷ್ಟು ಒಂದರೊಳಗೆ ಮತ್ತೊಂದು ಬೆರೆತುಕೊಂಡು ‘ಹಿಂದುತ್ವದ’ ರಾಜಕೀಯವು ಯಾವ ಹಣೆಪಟ್ಟಿಗೂ ಸಿಗದ ಸಂಘ ಪರಿವಾರದ ‘ಸಾಂಸ್ಕೃತಿಕ’ ಆಳ್ವಿಕೆಯಾಗಿ ವಿಜೃಂಬಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *