ಹೊಸ ದಿಲ್ಲಿ: ಸಂಘ ಪರಿವಾರವು ಭಾರತ ದೇಶವನ್ನು ಧರ್ಮದ ಆಧಾರದ ಮೇಲೆ ತುಕ್ಡೆ – ತುಕ್ಡೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯ ಉದ್ದೇಶದ ಬಗ್ಗೆ ಬಿಜೆಪಿ ಎತ್ತಿರುವ ಆಕ್ಷೇಪವನ್ನು ಎತ್ತಿದೆ. ದೇಶವನ್ನು ವಿಭಜನೆ ಮಾಡುವ ಶಕ್ತಿಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಘ ಪರಿವಾರದ ಜನರು ಧರ್ಮ, ಭಾಷೆ ಹಾಗೂ ಜಾತಿಯ ಆಧಾರದ ಮೇಲೆ ಇಡೀ ಈ ಭಾರತ ದೇಶವನ್ನೇ ತುಂಡು ತುಂಡಾಗಿ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಭಾರತ್ ಜೋಡೋ ಯಾತ್ರೆಯು ಈ ಪ್ರತ್ಯೇಕತೆಯ ವಿರುದ್ಧವಾಗಿದೆ. ದೇಶವನ್ನು ವಿಭಜನೆ ಮಾಡುವ ಶಕ್ತಿಗಳ ವಿರುದ್ಧ ನಾವು ಹೋರಾಟ ಮಾಡಲೇ ಬೇಕಿದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಹೇಳಿದರು.
ಭಾರತ್ ಜೋಡೋ ಯಾತ್ರೆ ವಿರುದ್ಧ ಇತ್ತೀಚೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹರಿಹಾಯ್ದಿದ್ದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ತುಕ್ಡೆ – ತುಕ್ಡೆ ಗ್ಯಾಂಗ್ ಜೊತೆಗೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದರು. ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಾ ಬಂದಿದೆ ಎಂದೂ ಅನುರಾಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದರು. ಠಾಕೂರ್ ಅವರಿಗೆ ಇದೀಗ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ತಿರುಗೇಟು ನೀಡಿದ್ದಾರೆ.
ಮಣಿ ಶಂಕರ್ ಅಯ್ಯರ್ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಪಕ್ಷವೇ ರಾಜಸ್ಥಾನದಿಂದ ಕರ್ನಾಟಕದವರೆಗೆ ವಿಭಜನೆ ಹೊಂದುತ್ತಿದೆ ಎಂದು ಲೇವಡಿ ಮಾಡಿದ್ದಾರೆ.