ಸಾಣೇಹಳ್ಳಿ(ಹೊಸದುರ್ಗ): ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನೆನ್ನೆ ಸಂಜೆ ನಡೆದ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬದ ಸ್ಮರಣಾರ್ಥ ಸಿಜಿಕೆ ನುಡಿ–ಚಿತ್ರ ಟಂಕಸಾಲೆ ಉದ್ಘಾಟನೆಗೊಂಡಿದೆ. ರಂಗಭೂಮಿ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದ ಶ್ರೀ ಶಿವಕುಮಾರ ಕಲಾ ಸಂಘ ಆಯೋಜಿಸಿರುವ ಶಿವಸಂಚಾರ ನಾಟಕೋತ್ಸವದ ಬೆಳ್ಳಿ ಹಬ್ಬ ಕಾರ್ಯಕ್ರಮವು ನವೆಂಬರ್ 2 ರಿಂದ 7ರವರೆಗೆ ನಡೆಯಲಿದೆ.
ಸಿಜಿಕೆ ನುಡಿಚಿತ್ರ ಟಂಕಸಾಲೆ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ʻʻತರಳಬಾಳು ಮಠ ನಾಡಿನ ಅಧ್ಯಾತ್ಮಿಕ, ಸಾಂಸ್ಕಂತಿಕ, ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿದೆ. ಸಾಣೇಹಳ್ಳಿಯ ಶಾಖಾಮಠವೂ ಮೂಲ ಮಠದ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ ಸಾಣೇಹಳ್ಳಿಯು ಕುಗ್ರಾಮ ಸಾಂಸ್ಕೃತಿಕ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಪಂಡಿತಾತರಾಧ್ಯ ಶ್ರೀಗಳ ಶ್ರಮ ಮತ್ತು ಬದ್ಧತೆ ಇದೆ. ಪೂಜ್ಯರು ಸಾಮಾಜಿಕ ಬದಲಾವಣೆ ತರುವಲ್ಲಿ ನಾಟಕಗಳು ಸಮರ್ಥ ಮಾಧ್ಯಮವೆಂದರಿತು ನಾಟಕ ಚಳವಳಿಯನ್ನೇ ಆರಂಭಿಸಿದ್ದಾರೆ” ಎಂದು ಹೇಳಿದರು.
“ಈ ದಿನ ನಾನು ಉದ್ಘಾಟನೆ ಮಾಡಿರುವ ಸಿಜಿಕೆ ನುಡಿಚಿತ್ರ ಟಂಕಸಾಲೆ (ಸಿಜಿಕೆ ಡಿಜಿಟಲ್ ಆಡಿಯೋ, ವಿಡಿಯೋ ರೆಕಾರ್ಡಿಂಗ್ ಸ್ಟುಡಿಯೋ) ಭಾರತದ ಗ್ರಾಮೀಣ ಪ್ರದೇಶದಲ್ಲಿಯೇ ವಿನೂತನವಾದುದು. ಈ ಕೇಂದ್ರದ ಸಹಾಯದಿಂದ ಇಲ್ಲಿ ನಡೆಯುವ ಚಟುವಟಿಕೆಗಳು ಅದರಲ್ಲೂ ಶರಣರ ಬದುಕು-ಬರಹಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಗುಣಮಟ್ಟದೊಂದಿಗೆ ವಿಶ್ವದಾದ್ಯಂತ ಅಂತರ್ಜಾಲದ ಮೂಲಕ ಪ್ರಸಾರವಾಗಲು ಅನುಕೂಲವಾಗಿರುವುದು ಪೂಜ್ಯರ ದೂರದೃಷ್ಟಿಗೆ ಹಿಡಿದ ಕನ್ನಡಿಯಂತಿದೆ” ಎಂದರು.
ʻʻಸಾಣೇಹಳ್ಳಿಯಲ್ಲಿ ಸಾಂಸ್ಕೃತಿಕ ವಿಶ್ವವಿದ್ಯಾಲಯವನ್ನು ತೆರೆಯಬೇಕೆಂದು ಹಲವರು ಒತ್ತಾಯ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದರೆ ಈಗಲೇ ಸಾಣೇಹಳ್ಳಿಯನ್ನು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿ ರೂಪಿಸಲು ಆದೇಶ ನೀಡುತ್ತಿದ್ದೆ. ಆದರೆ, ಹಾಗೆ ಮಾಡಲು ಈಗ ನನ್ನಿಂದ ಸಾಧ್ಯವಿಲ್ಲ. ಈ ಬಗ್ಗೆ ತುರ್ತಾಗಿ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿನಂತಿಸುತ್ತೇನೆʼʼ ಎಂದು ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
“ನಾಟಕೋತ್ಸವ ಕೇವಲ ನಾಟಕಗಳ ಪ್ರದರ್ಶನವಷ್ಟೇ ಅಲ್ಲ. ವಿಚಾರ ಮಾಲಿಕೆ, ವಿಚಾರ ಸಂಕಿರಣ, ಧ್ಯಾನ, ಮೌನ, ಚಿಂತನೆ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನಗಳಂತಹ ಹತ್ತಾರು ಕಾರ್ಯಕ್ರಮಗಳ ಸಮ್ಮಿಲನ. ಕಲಾವಿದರಿಗೆ ರಂಗಸುಗ್ಗಿಯಾಗಿರುವಂತೆ ಸಾಹಿತಿಗಳಿಗೆ, ಚಿಂತಕರಿಗೆ, ವೈಚಾರಿಕರಿಗೆ, ಕೃಷಿಕರಿಗೆ, ಸಾಮಾನ್ಯ ಪ್ರೇಕ್ಷಕರಿಗೆ ನಾಡಹಬ್ಬವೇ ಆಗಿದೆ. ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಕಳೆದ ಹತ್ತನ್ನೆರಡು ವರ್ಷಗಳಿಂದ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾ ಬಂದಿರುವುದು ನನ್ನ ಸೌಭಾಗ್ಯವೇ ಸರಿ,” ಎಂದು ಬಿ.ಎಸ್.ಯಡಿಯೂರಪ್ಪ ಸ್ಮರಿಸಿಕೊಂಡರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಲೋಕಕ್ಕೆ ಅನ್ನ ನೀಡುವ ಶಕ್ತಿಯಿರುವುದು ಕೃಷಿಕನಿಗೆ ಮಾತ್ರ. ಆತ ಬೇಡಿಕೆಗಳಿಗೆ ಧರಣಿಗೆ ಕೂತರೆ ಅನ್ನ ಇಲ್ಲದಂತಾಗುತ್ತದೆ. ಕೃಷಿಕನ ನೆಮ್ಮದಿಗೆ ಬೇಕಾದ ಎಲ್ಲಾ ಮೂಲಸೌಲಭ್ಯ ಸಿಕ್ಕಿದೆಯೇ ಎಂಬುದನ್ನು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ. ರೈತರನ್ನು ಕಡೆಗಣಿಸಿದರೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ. ರೈತರ ಹಿತ ಕಾಪಾಡಲು ಗಂಭೀರವಾಗಿ ಚಿಂತನೆ ಮಾಡಬೇಕಿದೆ’ ಎಂದು ಹೇಳಿದರು.
ಸಾಂಸ್ಕೃತಿಕ ಶ್ರೀಮಂತಿಕೆ ಕಟ್ಟುವುದು ಕಟ್ಟಡ ಕಟ್ಟಿಸಿದಷ್ಟು ಸುಲಭವಲ್ಲ. ಸಾಂಸ್ಕೃತಿಕ ವಿಶ್ವವಿದ್ಯಾಲಯ ಮಾಡುವ ಜತೆಗೆ ರಂಗಶಾಲೆ ಚಟುವಟಿಕೆಗೆ ಅನುದಾನವನ್ನು ಸರ್ಕಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಶಿವಸಂಚಾರ ನಾಟಕಗಳ ಉದ್ಘಾಟಿಸಿದ ಬೆಂಗಳೂರು ರಾಷ್ಟ್ರೀಯ ರಂಗಶಾಲಾ ಶಾಖೆ ನಿರ್ದೇಶಕಿ ವೀಣಾ ಶರ್ಮಾ ಭೂಸನೂರಮಠ, ‘ಸಣ್ಣ ಊರು ಸಾಣೇಹಳ್ಳಿಯನ್ನು ದೇಶದೆಲ್ಲೆಡೆ ಜನರು ನೋಡುವಂತೆ ಪಂಡಿತಾರಾಧ್ಯಶ್ರೀಗಳು ಮಾಡಿರುವುದು ಮೆಚ್ಚುಗೆಯ ಸಂಗತಿ. ಕಲೆ ಪ್ರದರ್ಶನದ ವಾತಾವರಣ ನಿರ್ಮಿಸಿರುವುದು ಜಗತ್ತಿಗೆ ಮಾದರಿ’ ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿದ ಕವಿ ಡಾ. ದೊಡ್ಡರಂಗೇಗೌಡ, ‘ಕನ್ನಡಕ್ಕೆ ಭದ್ರವಾದ ಬೇರುಗಳಿರುವುದನ್ನು ಕನ್ನಡಿಗರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಈ ಭಾಷೆಯನ್ನು ಯಾರು ನಾಶ ಮಾಡಲು ಹಾಗೂ ಕನ್ನಡಿಗರಲ್ಲಿ ಭಾಷೆ ಬಗೆಗಿನ ಕೆಚ್ಚು, ಪರಾಕ್ರಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಯನ್ನು ಪ್ರತಿಪಾದಿಸಿದ್ದು ಜಗತ್ತಿಗೆ ಮಾದರಿ. ಬಸವಾದಿ ಶಿವಶರಣರ ಸಂದೇಶವನ್ನು ಪ್ರಸ್ತುತದಲ್ಲಿ ಸಾರುತ್ತಿರುವ ಇಂತಹ ಸಾಣೇಹಳ್ಳಿ ಶ್ರೀಮಠವು ಸಾಂಸ್ಕೃತಿಕ ವಿಶ್ವವಿದ್ಯಾನಿಲಯವಾಗಿ ರೂಪಿಸಬೇಕು’ ಎಂದು ಮನವಿ ಮಾಡಿದರು.
ರಂಗಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ‘ಶಿವಸಂಚಾರ ಕಲಾವಿದರು ಹಲವು ನಾಟಕಗಳನ್ನು ಹಲವೆಡೆ ಪ್ರದರ್ಶಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಸರ್ಕಾರದ ಯಾವುದೇ ಏಜೆನ್ಸಿ ಈ ರೀತಿ ನಾಟಕಗಳನ್ನು ಪ್ರದರ್ಶಿಸಿಲ್ಲ’ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಸಾಹಿತಿ ದೊಡ್ಡರಂಗೇಗೌಡ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಕರ್ನಾಟಕ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಶಾಸಕ ಮಾಡಾಳು ವಿರೂಪಾಕ್ಷಪ್ಪ, ಸಾಹಿತಿ ಚಂದ್ರಶೇಖರ್ ತಾಳ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆರು ದಿನ ಹನ್ನೊಂದು ನಾಟಕಗಳು
ಕಾರ್ಯಕ್ರಮದ ಆರಂಭದ ಮೊದಲ ದಿನದ ಸಮಾರಂಭದಲ್ಲಿ ಶಿವಸಂಚಾರ 25ರ ಕೈಪಿಡಿ, ಹಿಂದಣ ಹೆಜ್ಜೆಯ ನೋಡಿ…, ಸಮಾಧಾನ ಕೃತಿಗಳು ಲೋಕಾರ್ಪಣೆಗೊಂಡವು. ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ನೃತ್ಯ ರೂಪಕ ಪ್ರದರ್ಶಿಸಿದರು. ಚಂದ್ರಶೇಖರ್ ತಾಳ್ಯ ರಚನೆ ಹಾಗೂ ಛಾಯಾ ಭಾರ್ಗವಿ ನಿರ್ದೇಶನದ ‘ಒಕ್ಕಲಿಗ ಮುದ್ದಣ್ಣ’ ನಾಟಕವನ್ನು ಶಿವಸಂಚಾರ ಕಲಾವಿದರು ಅಭಿನಯಿಸಿದರು.
ಪ್ರತಿ ದಿನ ಸಂಜೆ ಆರು ಗಂಡೆಗೆ ವಚನ ಗಾಯನ, ಜಾನಪದ, ಭಾವಗೀತೆಗಳನ್ನು ಆಧರಿಸಿದ ನೃತ್ಯರೂಪಕಗಳನ್ನು ಆಯೋಜಿಸಲಾಗಿದೆ. ನಂತರ ವಿಚಾರ ಮಂಡನೆ ಕಾರ್ಯಕ್ರಮ ನಡೆಯಲಿದೆ.
ನಂತರ ವಿಶೇಷ ನಾಟಕೋತ್ಸವ ಆರಂಭವಾಗಲಿದ್ದು, ಐದು ಸಾವಿರಕ್ಕೂ ಹೆಚ್ಚು ಕಲಾಸಕ್ತರು ಪಾಲ್ಗೊಳ್ಳುವುದು ವಿಶೇಷ. ಎಸ್.ಎಸ್ . ರಂಗಮಂದಿರ ಹಾಗೂ ಶಿವಕುಮಾರ ಬಯಲು ರಂಗಮಂದಿರಲ್ಲಿ ಒಟ್ಟು 11 ನಾಟಕಗಳು ಪ್ರದರ್ಶನಗೊಳ್ಳಲಿದೆ.
ಶಿವಸಂಚಾರ ರೆಪರ್ಟರಿ
ಶ್ರೀ ಶಿವಕುಮಾರ ಕಲಾಸಂಘ ಹಾಗೂ ಪಂಡಿತಾರಾಧ್ಯ ಶ್ರೀಗಳು ರಂಗಚಟುವಟಿಕೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಹಾಗೂ ರಂಗ ಚಟುವಟಿಕೆಗಳನ್ನು ಪ್ರಬಲ ಮಾಧ್ಯಮವಾಗಿಸುವ ವಿಚಾರಗಳೊಂದಿಗೆ ಶಿವಸಂಚಾರ ರೆಪರ್ಟರಿಯನ್ನು 1997ರಲ್ಲಿ ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ(ಸಿಜಿಕೆ) ಮುಂದಾಳತ್ವದಲ್ಲಿ ಸ್ಥಾಪಿಸಿದ್ದರು. ಈಗ ಅದರ ಬೆಳ್ಳಿಹಬ್ಬದ ಸಂಭ್ರಮ. ಪ್ರತಿ ವರ್ಷ ವಿಭಿನ್ನ ಕಥಾವಸ್ತುವುಳ್ಳ ಮೂರು ನಾಟಕಗಳನ್ನು ಆಯ್ಕೆ ಮಾಡಿ 20 ಕಲಾವಿದರಿಗೆ ಅಭಿಯನ ತರಬೇರಿ ನೀಡಲಾಗುತ್ತದೆ. ಶಿವಸಂಚಾರ ತಂಡ ವರ್ಷದುದ್ದಕ್ಕೂ ರಾಜ್ಯ, ಹೊರ ರಾಜ್ಯದಲ್ಲಿ ಪ್ರವಾಸ ಮಾಡಿ 150 ಪ್ರದರ್ಶನಗಳನ್ನು ನೀಡುತ್ತದೆ. ಈವರೆ ಶಿವಸಂಚಾರದ ಕಲಾವಿದರು 73 ವಿಭಿನ್ನ ನಾಟಕಗಳ 3130ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಶಿವಸಂಚಾರ ತಂಡ ತನ್ನ ಅಭಿನಯದ ಮೂಲಕ ರಾಜ್ಯದಲ್ಲಿ ನಾಟಕಗಳನ್ನು ನೋಡುವ ಒಂದು ವರ್ಗವನ್ನೇ ನಿರ್ಮಾಣ ಮಾಡಿದೆ.
ಶಿವಕುಮಾರ ಬಯಲು ರಂಗಮಂದಿರ
ಸಾಣೇಹಳ್ಳಿಯ ರಂಗಚಟುವಟಿಗಳಿಗೆ ಮುಖ್ಯಭೂಮಿಯಾಗಿರುವ ಗ್ರೀಕ್ ಮಾದರಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ 5 ಸಾವಿರ ಜನ ಕುಳಿತುಕೊಳ್ಳುವ ಸೌಲಭ್ಯವಿದೆ. ರಂಗಮಂದಿರವನ್ನು ನೋಡಲೆಂದೇ ಸಾಣೇಹಳ್ಳಿಗೆ ಸಹಸ್ರಾರು ರಂಗಾಸಕ್ತರು ಬರುತ್ತಾರೆ. ಸುಸಜ್ಜಿತ ರಂಗವೇದಿಕೆ, ನಾಟಕ ಪ್ರದರ್ಶನ ವೇಳೆಯ ನೆರಳು, ಬೆಳಕು ಮತ್ತು ಶಬ್ದದ ಸಂಯೋಜನೆ ಜನರನ್ನು ಆಕರ್ಷಿಸುತ್ತದೆ.
ವರದಿ: ವಿನೋದ ಶ್ರೀರಾಮಪುರ