ನವ-ಉದಾರವಾದಕ್ಕೇ ಮುಳುವಾಗುತ್ತಿರುವ ಅದರ ಆಳ್ವಿಕೆಯೊಳಗಿನ ಆರ್ಥಿಕ ನಿರ್ಬಂಧಗಳು

ಪ್ರೊ. ಪ್ರಭಾತ್ ಪಟ್ನಾಯಕ್

ಬಲಾಢ್ಯ ಪಶ್ಚಿಮ ದೇಶಗಳು ತಮ್ಮ ಹುಕುಂಗಳನ್ನು ಧಿಕ್ಕರಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವುದರಿಂದಾಗಿ, ನಿರ್ಬಂಧಗಳಿಂ ತಪ್ಪಿಸಿಕೊಳ್ಳುವ ಒಂದು ಉಪಾಯವಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಮತ್ತೊಮ್ಮೆ ರಂಗದ ಮೇಲೆ ಕಾಣಿಸಿಕೊಂಡಿವೆ. ಇಂತಹ ಪರ್ಯಾಯ ವ್ಯವಸ್ಥೆಗಳನ್ನು ಏರ್ಪಡಿಸಿಕೊಳ್ಳುವ ಮೂಲಕ ನಿರ್ಬಂಧಗಳಿಗೆ ಒಳಗಾದ ದೇಶಗಳು ಅವುಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ, ಹೆಚ್ಚುಹೆಚ್ಚು ದೇಶಗಳು ನಿರ್ಬಂಧಗಳಿಗೆ ಈಡಾಗುತ್ತಿದ್ದಂತೆ, ಪರ್ಯಾಯ ವ್ಯವಸ್ಥೆಗಳೂ ಹೇರಳವಾಗಿ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿರ್ಬಂಧಗಳು ಪರಿಣಾಮಕಾರಿಯಾಗಿರಬೇಕು ಎಂದಾದರೆ, ಪ್ರಸ್ತುತ ನವ ಉದಾರ ವ್ಯವಸ್ಥೆಯ ಮುಂದುವರಿಕೆ ಅಗತ್ಯವಾಗುತ್ತದೆ. ಆದರೆ, ಪರ್ಯಾಯಗಳು ಇಂತಹ ಮುಂದುವರಿಕೆಯನ್ನೇ ಅಲ್ಲಗಳೆಯುತ್ತವೆ. ಆದ್ದರಿಂದ, ಇಂದು ನಾವು ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ವೈರುಧ್ಯಗಳು ಹೊರಬಿದ್ದಿರುವುದನ್ನು ಕಾಣುತಿದ್ದೇವೆ. ಒಂದು ಕಡೆಯಲ್ಲಿ ವಿದ್ಯಮಾನವು ವಿಶ್ವದ ಅರ್ಥವ್ಯವಸ್ಥೆಯ ದೀರ್ಘಕಾಲೀನ ಬಿಕ್ಕಟ್ಟಿನ ರೂಪದಲ್ಲಿ ಕಾಣಿಸಿಕೊಂಡರೆ, ಮತ್ತೊಂದೆಡೆಯಲ್ಲಿ ರಷ್ಯಾಉಕ್ರೇನ್ ಸಂಘರ್ಷದಲ್ಲಿ ಒಂದು ವಕ್ರ ರೂಪದಲ್ಲಿ ಅಮೆರಿಕಾದ ಪ್ರಾಬಲ್ಯಕ್ಕೆ ಸವಾಲಾಗಿ ಕಾಣಿಸಿಕೊಂಡಿದೆ.

ನವ-ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವ ಮೊದಲು, ಭಾರತವು ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳೊಂದಿಗೆ “ರೂಪಾಯಿ ಪಾವತಿ ವ್ಯವಸ್ಥೆಯನ್ನು” ಹೊಂದಿತ್ತು. ಈ ವ್ಯವಸ್ಥೆಯಲ್ಲಿ, ವ್ಯಾಪಾರ-ವಹಿವಾಟುಗಳ ಇತ್ಯರ್ಥಕ್ಕಾಗಲಿ ಅಥವಾ ವಹಿವಾಟುಗಳನ್ನು ಲೆಕ್ಕಹಾಕುವ ಒಂದು ಆಧಾರವಾಗಿಯಾಗಲಿ ಪ್ರಮುಖ ಅಂತರರಾಷ್ಟ್ರೀಯ ಮೀಸಲು ಕರೆನ್ಸಿಯಾದ ಅಮೆರಿಕದ ಡಾಲರ್‌ಅನ್ನು ಬಳಸುತ್ತಿರಲಿಲ್ಲ. ಅಂದರೆ, ಚಲಾವಣೆಯ ಒಂದು ಸಾಧನವಾಗಿಯಾಗಲಿ ಅಥವಾ ವ್ಯಾಪಾರ-ವಹಿವಾಟುಗಳನ್ನು ಲೆಕ್ಕಹಾಕುವ ಒಂದು ಆಧಾರವಾಗಿಯಾಗಲಿ ಡಾಲರ್ ಕರೆನ್ಸಿಯನ್ನು ಬಳಸುತ್ತಿರಲಿಲ್ಲ. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಭಾರತದ ರೂಪಾಯಿಗಳ (ಅಥವಾ ರೂಪಾಯಿ-ರಷ್ಯನ್ ರೂಬಲ್ ವಿನಿಮಯ ದರ) ಆಧಾರದ ಮೇಲೆ ನಿಗದಿಪಡಿಸಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ, ದ್ವಿಪಕ್ಷೀಯ ವ್ಯಾಪಾರ-ವಹಿವಾಟುಗಳು ತಕ್ಷಣವೇ ಪೂರ್ಣವಾಗಿ ಇತ್ಯರ್ಥವಾಗುತ್ತಿರಲಿಲ್ಲ. ಎರಡು ದೇಶಗಳು ತಮ್ಮ ತಮ್ಮ ರಫ್ತು-ಆಮದುಗಳ ಸಂಬಂಧವಾಗಿ ಒಂದು ದೇಶವು ಮತ್ತೊಂದು ದೇಶಕ್ಕೆ ಪಾವತಿಸಬೇಕಾದ ಮೊತ್ತವನ್ನು ದೀರ್ಘಾವದಿಯ ರಫ್ತು-ಆಮದುಗಳ ಮೂಲಕವೇ ಇತ್ಯರ್ಥ ಮಾಡಿಕೊಳ್ಳುತ್ತಿದ್ದವು. ಡಾಲರ್ ಕರೆನ್ಸಿಯ ಅಲಭ್ಯತೆ ಪರಸ್ಪರ ಆಮದು-ರಫ್ತುಗಳಿಗೆ ನಿರ್ಬಂಧವಾಗಬಾರದು ಎಂದು ಖಾತ್ರಿಪಡಿಸುವುದು ಇದರ ಹಿಂದಿದ್ದ ವಿಚಾರ. ಅಂದರೆ, ಈ ಏರ್ಪಾಟಿನ ಮೂಲಕ ಸಂಭವಿಸಿದ ವ್ಯಾಪಾರ ಬೇರೆ ರೀತಿಯಲ್ಲಿ ನಡೆಯುವುದು ಸಾಧ್ಯವಿರಲಿಲ್ಲ, ಹಾಗಾಗಿ, ʻʻರೂಪಾಯಿ ಪಾವತಿʼʼ ಏರ್ಪಾಟು “ವ್ಯಾಪಾರ ಸೃಷ್ಟಿ”ಯ ಮಾರ್ಗವಾಗಿತ್ತು.

ಈ ಏರ್ಪಾಟು ಒಂದು ಅತ್ಯಂತ ವಿವೇಕಯುತ ವ್ಯವಸ್ಥೆಯಾಗಿತ್ತು. ಹೇಗೆಂದರೆ, ದೇಶ ‘ಎ’ ಮತ್ತು ದೇಶ ʼಬಿʼ ತಾವು ಹೊಂದಿದ್ದ ಸರಕುಗಳನ್ನು ಪರಸ್ಪರರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳುತ್ತಿದ್ದವು. ಆದರೆ, ಈ ವ್ಯವಸ್ಥೆಗೆ ಬದಲಾಗಿ ಜಾರಿಯಲ್ಲಿರುವ ಈಗಿನ ವ್ಯವಸ್ಥೆಯ ಪ್ರಕಾರ, ಈ ಎರಡೂ ದೇಶಗಳೂ ದೇಶ ʼಸಿʼಗೆ ಮಾಡುವ ರಫ್ತುಗಳ ಮೂಲಕ ಡಾಲರ್‌ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿಲ್ಲದ ಪರಿಸ್ಥಿತಿಯಲ್ಲಿ, ಪರಸ್ಪರರಿಗೆ ಪ್ರಯೋಜನಕಾರಿಯಾಗುವ ಈ ವಿನಿಮಯದಿಂದ ಅವು ವಂಚಿತಗೊಳ್ಳುತ್ತವೆ. ಆದ್ದರಿಂದ, ಡಾಲರ್ ಕರೆನ್ಸಿಯ ದೇಶಗಳಿಗೆ ರಫ್ತು ಮಾಡದ ಅಥವಾ ಮಾಡಲಾಗದೆ ಡಾಲರ್ ಸಂಗ್ರಹಣೆ ಮಾಡಿಕೊಳ್ಳದ ಪರಿಸ್ಥಿತಿಯಲ್ಲಿ, ಈಗ ಜಾರಿಯಲ್ಲಿರುವ ವ್ಯವಸ್ಥೆಯು ಅಸಂಬದ್ಧವಾಗಿ ಕಾಣುತ್ತದೆ.

ಇಂಥಹ ದ್ವಿಪಕ್ಷೀಯ ವ್ಯಾಪಾರ ಏರ್ಪಾಟುಗಳು ಡಾಲರ್ ಕರೆನ್ಸಿಯನ್ನು ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳ ವ್ಯಾಪ್ತಿಯಿಂದ ಹೊರಗಿಟ್ಟ ಕಾರಣದಿಂದಾಗಿ ಅವನ್ನು ನವ ಉದಾರವಾದಿ ಅರ್ಥಶಾಸ್ತ್ರಜ್ಞರು ವಿರೋಧಿಸಿದರು. ಇಂತಹ ವ್ಯವಸ್ಥೆಗಳು “ವ್ಯಾಪಾರ ಸೃಷ್ಟಿ” ಮಾಡುವುದಿಲ್ಲ, ಬದಲಾಗಿ “ವ್ಯಾಪಾರದ ದಿಕ್ಕನ್ನು ಬದಲಿಸುತ್ತವೆ”, ಇಂತಹ ಏರ್ಪಾಟುಗಳು ಇಲ್ಲದಿರುತ್ತಿದ್ದರೆ ವ್ಯಾಪಾರ ನಿರ್ಬಂಧಿತಗೊಳ್ಳುತ್ತದೆ ಎಂಬ ವಾದ ತಪ್ಪು ಎಂಬುದಾಗಿ ಅವರು ಜೋರಾಗಿ ವಾದಿಸಿದರು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಇಂತಹ ದ್ವಿಪಕ್ಷೀಯ ವ್ಯಾಪಾರ ಏರ್ಪಾಟಿನಲ್ಲಿ ಭಾಗವಹಿಸುವ ದೇಶಗಳ ಡಾಲರ್ ಗಳಿಕೆಯು ಪೂರೈಕೆಯ ಕಡೆಯಿಂದ ನಿರ್ಬಂಧಿತವಾಗಿರುತ್ತಿತ್ತೇ ಹೊರತು ಬೇಡಿಕೆಯ ಕಡೆಯಿಂದ ಅಲ್ಲ ಎಂಬುದು ನವ-ಉದಾರವಾದಿ ಅರ್ಥಶಾಸ್ತçಜ್ಞರ ವಾದವಾಗಿತ್ತು; ಅಂದರೆ ಈ ದೇಶಗಳ ಉತ್ಪನ್ನಗಳಿಗೆ ಡಾಲರ್-ಪ್ರಧಾನ ದೇಶಗಳಲ್ಲಿ ಬೇಡಿಕೆಯು ಕೊರೆಯಾಗಿತ್ತು ಎಂದಲ್ಲ. ಬದಲಿಗೆ, ಈ ದೇಶಗಳ ಬಳಿ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡ ನಂತರ ಅಂತರ‍್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಫ್ತಿಗಾಗಿ ಉಳಿದದ್ದು ಅಲ್ಪವೇ ಎಂಬುದು ನವ-ಉದಾರವಾದಿ ಅರ್ಥಶಾಸ್ತ್ರಜ್ಞರ ಭಾವನೆಯಾಗಿತ್ತು. ಸೋವಿಯತ್ ಒಕ್ಕೂಟದಲ್ಲಿ ಮತ್ತು ಪೂರ್ವ ಯುರೋಪಿಯನ್ ದೇಶಗಳಲ್ಲಿ ಸಮಾಜವಾದದ ಪತನದ ನಂತರ ಮತ್ತು ತರುವಾಯದಲ್ಲಿ ಭಾರತವು ನವ-ಉದಾರವಾದವನ್ನು ಅಪ್ಪಿಕೊಂಡ ನಂತರ ಈ ಚರ್ಚೆ-ವಿವಾದವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತು. ನವ ಉದಾರವಾದವು ಇಂತಹ ಎಲ್ಲ ದ್ವಿಪಕ್ಷೀಯ ವ್ಯವಸ್ಥೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ವಿನಿಮಯ ದರವು “ಏಕೀಕೃತ”ವಾಗಿರಬೇಕು ಎಂಬುದು ಅದರ ಆಗ್ರಹ. ನವ-ಉದಾರವಾದವು ವಿದೇಶಿ ವಿನಿಮಯ ಮಾರುಕಟ್ಟೆಯನ್ನೂ ಒಳಗೊಂಡಂತೆ ಒಂದು ಮಾರುಕಟ್ಟೆಯಲ್ಲಿ ಒಂದೇ ಬೆಲೆ ಇರಬೇಕು ಎಂಬ ನೆಲೆಯಲ್ಲಿ ಈ ಎಲ್ಲ ದ್ವಿಪಕ್ಷೀಯ ವ್ಯವಸ್ಥೆಗಳನ್ನೂ ಕೊನೆಗೊಳಿಸಿತು.

ಆದರೆ ಇತ್ತೀಚೆಗೆ, ಬಲಾಢ್ಯ ಪಶ್ಚಿಮ ದೇಶಗಳ ಹುಕುಂಗಳನ್ನು ಧಿಕ್ಕರಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವುದರಿಂದಾಗಿ, ಈ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವ ಒಂದು ಉಪಾಯವಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಮತ್ತೊಮ್ಮೆ ರಂಗದ ಮೇಲೆ ಕಾಣಿಸಿಕೊಂಡಿವೆ. ಇರಾನ್ ವಿರುದ್ಧ ಹೇರಿದ ನಿರ್ಬಂಧಗಳು, ಇರಾನ್ ಕೆಲವು ದೇಶಗಳೊಂದಿಗೆ ಮಾಡಿಕೊಂಡಿದ್ದ ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಗಳ ಪುನರುಜ್ಜೀವನಕ್ಕೆ ಕಾರಣವಾದವು. ಈಗ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಹೇರಿದ ಕಠಿಣ ನಿರ್ಬಂಧಗಳಿಂದಾಗಿ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಹಿಂದೆಂದೂ ಇಲ್ಲದಷ್ಟು ವ್ಯಾಪಕತೆ ಪಡೆಯುವ ಸಾಧ್ಯತೆಯಿದೆ. ಅಮೆರಿಕ ಮತ್ತು ಪಶ್ಚಿಮ ದೇಶಗಳು ಇಡೀ ಜಗತ್ತನ್ನೇನೂ ರೂಪಿಸಿಲ್ಲ, ಅವು ಜಗತ್ತಿನ ಒಂದು ಸಣ್ಣ ಭಾಗವಷ್ಟೇ ಎಂಬ ಪುಟಿನ್ ಅವರ ಎಚ್ಚರಿಕೆಯು, ಮೂಲೆಗೆ ತಳ್ಳಲ್ಪಟ್ಟಾಗ ರಷ್ಯಾವು ಪಶ್ಚಿಮ ದೇಶಗಳು ಹೇರಿದ ನಿರ್ಬಂಧಗಳನ್ನು ನಿಷ್ಫಲಗೊಳಿಸಲು ಹೆಚ್ಚಿನ ಸಂಖ್ಯೆಯ ದೇಶಗಳೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ ಎಂಬುದನ್ನು ಸೂಚಿಸುತ್ತದೆ.

ಇಲ್ಲಿಯವರೆಗೆ ಹೇರಿದ ಎಲ್ಲ ನಿರ್ಬಂಧಗಳ ಪೈಕಿ ಒಂದು ಅತ್ಯಂತ ಮಹತ್ವಪೂರ್ಣವಾದುದೆಂದರೆ, ಪಶ್ಚಿಮ ದೇಶಗಳ ಹಣಕಾಸು ಜಾಲದಿಂದ ಮತ್ತು ಸ್ವಿಫ್ಟ್ ಜಾಲದಿಂದ ರಷ್ಯಾದ ಬ್ಯಾಂಕುಗಳನ್ನು ಬೇರ್ಪಡಿಸುವುದಾಗಿದೆ. ಇದರ ಅರ್ಥವೇನೆಂದರೆ, ರಫ್ತಿನ ಮೂಲಕ ಸಂಪಾದಿಸುತ್ತಿದ್ದ ಮತ್ತು ಹಣಕಾಸು ರೂಪದಲ್ಲಿ ಒಳಹರಿಯುತ್ತಿದ್ದ ಡಾಲರ್‌ಗಳು ರಷ್ಯಾಗೆ ಸಿಗದಂತೆ ಮಾಡುವುದು. ಹಾಗಾಗಿ, ಅಮೆರಿಕದ ಡಾಲರ್‌ಗಳಿಂದ ವಂಚಿತವಾದ ರಷ್ಯಾ, ತನಗೆ ಅಗತ್ಯವಿರುವ ಆಮದುಗಳನ್ನು ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ, ಗತ್ಯಂತರವಿಲ್ಲದೆ, ಡಾಲರ್ ಪಾವತಿಯನ್ನು ಒಳಗೊಂಡಿರದ ಕೆಲವು ಏರ್ಪಾಟುಗಳ ಮೂಲಕ ಡಾಲರ್‌ಗಳನ್ನು ರಷ್ಯಾ ಪಡೆಯಬೇಕಾಗುತ್ತದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಅಗತ್ಯ ಉದ್ಭವಿಸುವುದು ಇಲ್ಲಿಯೇ. ಭಾರತವೂ ಸಹ ರಷ್ಯಾದೊಂದಿಗೆ ಈ ರೀತಿಯ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ವಿದ್ಯಮಾನವು ಸೋವಿಯತ್ ಒಕ್ಕೂಟದೊಂದಿಗೆ ಭಾರತದ ಹಿಂದಿನ ಒಪ್ಪಂದಗಳನ್ನು ನೆನಪಿಸುತ್ತದೆ.

ಪಶ್ಚಿಮ ದೇಶಗಳು ಹೇರಿದ ನಿರ್ಬಂಧಗಳನ್ನು ರಷ್ಯಾ ಎದುರಿಸಿ ನಿಲ್ಲುವ ಸಾಮರ್ಥ್ಯವನ್ನು ಇಂತಹ ದ್ವಿಪಕ್ಷೀಯ ವ್ಯವಸ್ಥೆಗಳು ಎಷ್ಟರ ಮಟ್ಟಿಗೆ ಹೆಚ್ಚಿಸಬಹುದು ಎಂಬುದನ್ನು ನೋಡಬೇಕಾಗಿದೆ. ಈ ವಿಷಯದ ಸುತ್ತಮುತ್ತಲಿನ ಚರ್ಚೆಯಲ್ಲಿ ನಿರ್ಬಂಧಗಳಿಗೆ ಒಳಗಾದ ವೆನೆಜುವೆಲಾ ಮತ್ತು ಇರಾನ್ ದೇಶಗಳು ತಮಗೆ ಅತ್ಯವಶ್ಯವಿದ್ದ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗದ ಕಾರಣದಿಂದಾಗಿ ಆ ದೇಶಗಳಲ್ಲಿ ಸಂಭವಿಸಿದ ಸಾವಿರಾರು ಜನರ ಸಾವು ನೋವುಗಳನ್ನು ಉಲ್ಲೇಖಿಸಲಾಗುತ್ತದೆ. ಮಾನವೀಯ ನೆಲೆಯಲ್ಲಿ ಈ ನಿರ್ಬಂಧಗಳನ್ನು ವಿರೋಧಿಸಬೇಕಾಗುತ್ತದೆ. ತಮ್ಮ ಮೇಲೆ ಆಳ್ವಿಕೆ ನಡೆಸುವ ಸರ್ಕಾರಗಳು ಕೈಗೊಂಡ ಕೆಲವು ಕ್ರಮಗಳ ಬಗ್ಗೆ ಎತ್ತುವ ಆಕ್ಷೇಪಣೆಗಳಿಂದಾಗಿ, ಮತ್ತು ಪ್ರಸ್ತುತ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಕ್ರಮಗಳಿಂದಾಗಿ, ಅಂದರೆ, ವ್ಲಾಡಿಮಿರ್ ಪುಟಿನ್ ಅವರ ಕ್ರಮಗಳಿಂದಾಗಿ, ಜನ ಸಾಮಾನ್ಯರನ್ನು ನರಳುವಂತೆ ಮಾಡುವ ಅಗತ್ಯವಿಲ್ಲ. ಆದರೆ, ಒಂದು ಕಡೆ ರಷ್ಯಾ ಮತ್ತು ಮತ್ತೊಂದೆಡೆ ಇರಾನ್ ಅಥವಾ ವೆನೆಜುವೆಲಾ ದೇಶಗಳ ಪರಿಸ್ಥಿತಿಯ ನಡುವೆ ಸಾಮ್ಯತೆಯನ್ನು ಗುರುತಿಸುವ ಕ್ರಮವು ಸಪ್ರಮಾಣವಾದದ್ದಲ್ಲ. ಪುಟಿನ್ ಸ್ವತಃ ಒತ್ತಿ ಹೇಳಿರುವಂತೆ, ರಷ್ಯಾವು ತನಗೆ ಅಗತ್ಯವಿರುವ ಹೆಚ್ಚಿನ ಸರಕುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ ಒಂದು ದೊಡ್ಡ ದೇಶ. ಅದೂ ಅಲ್ಲದೆ, ಕೆಲವು ಪಶ್ಚಿಮ ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ರಷ್ಯಾವು ತನಗೆ ಅಗತ್ಯವಿರುವ ಮತ್ತು ತಾನು ಉತ್ಪಾದಿಸಲು ಸಾಧ್ಯವಿಲ್ಲದ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು. ಪಶ್ಚಿಮದ ಮೆಟ್ರೋಪಾಲಿಟನ್ ದೇಶಗಳನ್ನು ಹೊರತುಪಡಿಸಿದರೆ, ಉಳಿದ ದೇಶಗಳು ಅದರತ್ತ ಬೆನ್ನು ತಿರುಗಿಸಲಾರದಷ್ಟು ಮಹತ್ವದ ಸ್ಥಾನವನ್ನು ವಿಶ್ವ ವೇದಿಕೆಯಲ್ಲಿ ರಷ್ಯಾ ಹೊಂದಿದೆ. ಅಂದರೆ, ರಷ್ಯಾವು ಒಂದು ಶಕ್ತಿಶಾಲಿ ಅರ್ಥವ್ಯವಸ್ಥೆಯನ್ನೂ ಮತ್ತು ಪ್ರಪಂಚದಾದ್ಯಂತ ಅನೇಕ ಸ್ನೇಹಿತರನ್ನೂ ಹೊಂದಿದೆ.

ಸಾಮ್ರಾಜ್ಯಶಾಹಿಗೆ ಸಂಬಂಧಿಸಿ ವಿಷಯವನ್ನು ಹೇಳುವುದಾದರೆ, ಈ ನಿರ್ಬಂಧಗಳ ಹೇರುವಿಕೆಯಲ್ಲಿ ಒಂದು ವೈರುಧ್ಯವಿದೆ. ಇದನ್ನು ಗಮನಿಸಬೇಕಾಗಿದೆ. ಈ ನಿರ್ಬಂಧಗಳು ಪರಿಣಾಮಕಾರಿಯಾಗುವುದು ಸಾಮ್ರಾಜ್ಯಶಾಹಿಯ ಶಕ್ತಿಯಿಂದಾಗಿಯೇ. ಉದಾಹರಣೆಗೆ, ವಿಶ್ವದ ವ್ಯಾಪಾರ-ವಹಿವಾಟುಗಳು ಪ್ರಧಾನವಾಗಿ ಅಮೆರಿಕದ ಡಾಲರ್ (ಅಥವಾ ಇತರ ಭದ್ರ ಕರೆನ್ಸಿಗಳು) ಮೂಲಕವೇ ಜರುಗುತ್ತವೆ. ಆದರೆ, ನಿರ್ಬಂಧಗಳನ್ನು ಹೇರಿದ ಪ್ರತಿ ಪ್ರಕರಣದಲ್ಲೂ, ನಿರ್ಬಂಧಗಳಿಗೆ ಒಳಗಾದ ದೇಶಗಳು ತಮಗೆ ಎದುರಾದ ಕಷ್ಟಕೋಟಲೆಯ ನಿವಾರಣೆಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತವೆ ಮತ್ತು ಆ ಮೂಲಕವಾಗಿ ಸಾಮ್ರಾಜ್ಯಶಾಹಿಯ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಸಾಮ್ರಾಜ್ಯಶಾಹಿಯ ಅಧಿಕಾರ-ಶಕ್ತಿಯನ್ನು ಅಭಿವ್ಯಕ್ತಿಸುವ ಈ ನಿರ್ಬಂಧಗಳು, ಅಂತಿಮವಾಗಿ, ಅವುಗಳನ್ನು ಹೇರಿದ ಅದೇ ಅಧಿಕಾರವನ್ನು ದುರ್ಬಲಗೊಳಿಸುವಲ್ಲಿ ಪರಿಣಮಿಸುತ್ತವೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳಂತಹ ಪರ್ಯಾಯ ವ್ಯವಸ್ಥೆಗಳನ್ನು ಏರ್ಪಡಿಸಿಕೊಳ್ಳುವ ಮೂಲಕ ನಿರ್ಬಂಧಗಳಿಗೆ ಒಳಗಾದ ದೇಶಗಳು ನಿರ್ಬಂಧಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ, ಮತ್ತು ಹೆಚ್ಚು ಹೆಚ್ಚು ದೇಶಗಳು ನಿರ್ಬಂಧಗಳಿಗೆ ಈಡಾಗುತ್ತಿದ್ದಂತೆ, ಈ ಪರ್ಯಾಯ ವ್ಯವಸ್ಥೆಗಳೂ ಹೇರಳವಾಗಿ ಹುಟ್ಟಿಕೊಳ್ಳುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರ್ಬಂಧಗಳನ್ನು ಹೇರುವ ಪ್ರಕ್ರಿಯೆಯ ಪರಿಣಾಮವೇ ಪ್ರಸ್ತುತ ಅಸ್ತಿತ್ವದಲ್ಲಿರುವ ನವ-ಉದಾರವಾದಿ ಆಳ್ವಿಕೆಗೆ ಕಾರ್ಯತಃ ಒಂದು ಪರ್ಯಾಯ ಆಳ್ವಿಕೆಯನ್ನು ತರುತ್ತದೆ ಮತ್ತು ಆ ಮೂಲಕ ನಿರ್ಬಂಧಗಳು ಪರಿಣಾಮಕಾರಿಯಾಗದಂತೆ ಮಾಡುತ್ತದೆ. ನಿರ್ಬಂಧಗಳು ಪರಿಣಾಮಕಾರಿಯಾಗಿರಬೇಕು ಎಂದಾದರೆ, ಪ್ರಸ್ತುತ ನವ ಉದಾರ ವ್ಯವಸ್ಥೆಯ ಮುಂದುವರಿಕೆ ಅಗತ್ಯವಾಗುತ್ತದೆ. ಆದರೆ, ನಿರ್ಬಂಧಗಳಿಂದ ಹೊರಬರಲು ಕಂಡುಕೊಂಡ ಪರ್ಯಾಯಗಳು ನಿರ್ಬಂಧಗಳನ್ನು ಹೇರುವ ನವ ಉದಾರವಾದಿ ಆಳ್ವಿಕೆಯ ಮುಂದುವರಿಕೆಯನ್ನು ಅಲ್ಲಗಳೆಯುತ್ತವೆ.

“ಆ ರಷ್ಯನ್ ಮನುಷ್ಯ ಕೆಟ್ಟವ” – ಬ್ರಿಟಿಷ್ ವ್ಯಂಗ್ಯಚಿತ್ರಕಾರ ಬಾಬ್ ಅವರ ವ್ಯಂಗ್ಯ

ಈ ವೈರುಧ್ಯವು ಮತ್ತೊಂದು ಆಧಾರಭೂತ ವೈರುಧ್ಯದಿಂದ ಹುಟ್ಟಿಕೊಂಡಿದೆ. ಈ ವಿದ್ಯಮಾನವನ್ನು ಹೀಗೆ ವಿವರಿಸಬಹುದು: ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ನಿರೂಪಿಸುವ ಪ್ರಸ್ತುತ ಆರ್ಥಿಕ ಏರ್ಪಾಟನ್ನು(ನವ ಉದಾರವಾದವನ್ನು) ತರ್ಕಬದ್ಧವಾದದ್ದೆಂದು ಬಿಂಬಿಸಿ, ದೇಶ ದೇಶಗಳು ಅದನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ ಮತ್ತು ಅದರ ಪರವಾಗಿ ಮಂಡಿಸಲಾದ ವಾದವು ಅದರ ಆರ್ಥಿಕ ಅಪೇಕ್ಷಣೀಯತೆಯ ಮೇಲೇ ಗಮನ ಕೇಂದ್ರೀಕರಿಸಿದೆ. ಆದರೆ, ವಾಸ್ತವವಾಗಿ, ಅದು ಸಾಮ್ರಾಜ್ಯಶಾಹಿಯ ಶಕ್ತಿಯನ್ನು ಬಲಪಡಿಸಲು ಉದ್ದೇಶಿಸಿದ ವ್ಯವಸ್ಥೆಯಾಗಿದೆ ಮತ್ತು ಅದರ ಶಕ್ತಿಯನ್ನು(ಅಂದರೆ, ನಿರ್ಬಂಧಗಳನ್ನು) ಸಾಮ್ರಾಜ್ಯಶಾಹಿಯ ಕೋಪಕ್ಕೆ ಒಳಗಾದ ದೇಶಗಳ ಮೇಲೆ ಆರ್ಥಿಕವಲ್ಲದ ಕಾರಣಗಳ ಮೇಲೆ ಬಳಸಲಾಗುತ್ತಿದೆ. ಉಕ್ರೇನ್ ನ್ಯಾಟೋದ ಸದಸ್ಯನಾಗಬೇಕೆ ಎಂಬುದು, ಅಂತಾರಾಷ್ಟ್ರೀಯ ವ್ಯವಸ್ಥೆಯೇ ವ್ಯಾಖ್ಯಾನಿಸಿರುವಂತೆ, ಅರ್ಥಶಾಸ್ತ್ರದ ವ್ಯಾಪ್ತಿಯಿಂದ ಹೊರಗುಳಿಯುವ ವಿಷಯ. ಹಾಗಾಗಿ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸದ ವಿಷಯಗಳನ್ನು ಆಧರಿಸಿ ನಿರ್ಬಂಧಗಳನ್ನು ಹೇರುವ ಮೂಲಕ ಸಾಮ್ರಾಜ್ಯಶಾಹಿಯು ಮಧ್ಯಪ್ರವೇಶಿಸಿದಾಗ, ಅದು ತನ್ನ ನಿಜ ಸ್ವರೂಪವನ್ನು ಮತ್ತು ಇಡೀ ವಿದ್ಯಮಾನವು ತಾನೇ ರಚಿಸಿದ ಒಂದು ನಾಟಕ ಎಂಬುದನ್ನು ಮತ್ತು ಅದು ತನ್ನ ಪರವಾಗಿ ಮಂಡಿಸಿದ ಆರ್ಥಿಕ ವಾದಗಳ ಟೊಳ್ಳುತನವನ್ನು ಬಹಿರಂಗಪಡಿಸುತ್ತದೆ. ಭದ್ರತೆಯ ಪ್ರಶ್ನೆಗಳ ಬಗ್ಗೆ ಅಥವಾ ವಿದೇಶಾಂಗ ನೀತಿಯ ಬಗ್ಗೆ ಅಥವಾ ನ್ಯಾಟೋ ಮತ್ತು ಇತರ ಮಹತ್ವದ್ದಾದ ವಿಷಯಗಳ ಬಗ್ಗೆ ಸಾಮ್ರಾಜ್ಯಶಾಹಿಯೊಂದಿಗೆ ಸಂಘರ್ಷಕ್ಕಿಳಿಯುವ ದೇಶಗಳು ಪ್ರಸಕ್ತ ಅಂತರರಾಷ್ಟ್ರೀಯ ವ್ಯವಸ್ಥೆಯಡಿಯಲ್ಲಿ ಆರ್ಥಿಕವಾಗಿ ಬಲಿಪಶುಗಳಾಗುತ್ತಿರುವುದನ್ನು ನಾವು ಕಾಣುತ್ತೇವೆ. ಹಾಗಾಗಿ, ಈ ಇಡೀ ವಿದ್ಯಮಾನದ ಫಲಿತಾಂಶವೆಂದರೆ, ಪ್ರಸಕ್ತ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ವಿರುದ್ಧ ದೇಶ ದೇಶಗಳು ದಂಗೆ ಏಳುವುದು ಅನಿವಾರ್ಯವಾಗುತ್ತದೆ.

ಆದ್ದರಿಂದ, ಇಂದು ನಾವು ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ವೈರುಧ್ಯಗಳು ಹೊರಬಿದ್ದಿರುವುದನ್ನು ಕಾಣುತಿದ್ದೇವೆ. ನಿರ್ದಿಷ್ಟವಾಗಿ ಇದು, ನವ-ಉದಾರವಾದವು ಮುಂದೆ ದಾರಿ ಕಾಣದಂತಹ ಪರಿಸ್ಥಿತಿಯಲ್ಲಿ ಬಂದು ನಿಂತಿದೆ ಎಂಬುದನ್ನು ಪ್ರದರ್ಶಿಸುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಉಂಟಾದ ಒಂದು ಸಂದಿಗ್ಧ ಸನ್ನಿವೇಶವೆಂದರೆ, ಒಂದು ಕಡೆಯಲ್ಲಿ ಈ ವಿದ್ಯಮಾನವು ವಿಶ್ವದ ಅರ್ಥವ್ಯವಸ್ಥೆಯ ದೀರ್ಘಕಾಲೀನ ಬಿಕ್ಕಟ್ಟಿನ ರೂಪದಲ್ಲಿ ಕಾಣಿಸಿಕೊಂಡರೆ, ಮತ್ತೊಂದೆಡೆಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಒಂದು ವಕ್ರ ರೂಪದಲ್ಲಿ ಅಮೆರಿಕಾದ ಪ್ರಾಬಲ್ಯಕ್ಕೆ ಸವಾಲಾಗಿ ಕಾಣಿಸಿಕೊಂಡಿದೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *