ಪ್ರೊ.ಪ್ರಭಾತ್‍ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಗಣನೀಯ ಪ್ರಮಾಣದಲ್ಲಿ ಹೆಚ್ಚಿದ ಅಮೆರಿಕದ ತೈಲ ಕಂಪನಿಗಳ ಲಾಭವು ಹಣದುಬ್ಬರದ ತೀವ್ರ ಏರಿಕೆಯಾಗಿ ಪರಿಣಮಿಸಿರುವದರಿಂದ ಡಾಲರ್ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ವ್ಯತಿರಿಕ್ತವಾಗಿ, ಆಗಸ್ಟ್ 2021ರಿಂದ ಆಗಸ್ಟ್ 2022ರವರೆಗಿನ 12ತಿಂಗಳ ಅವಧಿಯಲ್ಲಿ, ಡಾಲರ್‌ಗೆ ಎದುರಾಗಿ ರೂಬಲ್‌ನ ಮೌಲ್ಯವು ಶೇ.22ಕ್ಕಿಂತಲೂ ಹೆಚ್ಚು ವೃದ್ಧಿಸಿದೆ.ರಷ್ಯಾದ ಮೇಲೆ ಹೇರಿದ ನಿರ್ಬಂಧಗಳು, ಕೇವಲ ಐರೋಪ್ಯ ಒಕ್ಕೂಟಕ್ಕೆ ಮಾತ್ರವಲ್ಲ, ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಸಹ,‘ಸೆಲ್ಫ್ ಗೋಲ್’ ಆಗಿ ಪರಿಣಮಿಸಿ, ನವ–ಉದಾರವಾದ ಹೇರಿರುವ ಮತ್ತು ಅದರ ಜೀವಾಳವಾದ ಬಹುಪಕ್ಷೀಯತೆಯಿಂದ ದೂರ ಸರಿದು ದ್ವಿಪಕ್ಷೀಯ ವ್ಯವಸ್ಥೆಯ ಪ್ರಸರಣವನ್ನು ತ್ವರಿತಗೊಳಿಸಿವೆ.ನಿಜ, ಇದರ ಆಧಾರದಮೇಲೆ, ಡಾಲರ್‌ನ ಅವನತಿಯು ಅಂತಿಮ ಹಂತವನ್ನು ತಲುಪಿದೆ ಎಂಬ ತೀರ್ಮಾನಕ್ಕೆ ಬರುವುದು ಪೂರ್ಣವಾಗಿ ಅಕಾಲಿಕವಾಗುತ್ತದೆ. ಆದರೂ ಅದರ ಮೂಲಕ ಬಹುಪಕ್ಷೀಯತೆಯನ್ನು ಜಗತ್ತಿನಾದ್ಯಂತ ಹೇರಿದ ನವ-ಉದಾರವಾದಿ ವ್ಯವಸ್ಥೆಯು ಕೊನೆಗೊಳ್ಳಲಿದೆ ಎಂಬುದಂತೂ ಖರೇ.
ಬ್ರೆಟನ್ ವುಡ್ಸ್ ವ್ಯವಸ್ಥೆಯ ಪ್ರಕಾರವಾಗಿ ಡಾಲರ್‌ಅನ್ನು ನಿಗದಿಪಡಿಸಿದ ಒಂದು ದರದಲ್ಲಿ ಚಿನ್ನವಾಗಿ ಪರಿವರ್ತಿಸುವುದು ಸಾಧ್ಯವಿಲ್ಲದಿದ್ದರೂ ಸಹ ಮತ್ತು ಈ ವ್ಯವಸ್ಥೆಯ ಕುಸಿತದ ನಂತರವೂ, ವಿಶ್ವದ ಹಣವಂತರು ಡಾಲರ್‌ಅನ್ನು “ಚಿನ್ನಕ್ಕೆ ಸಮಾನ” ಎಂದು ಪರಿಗಣಿಸುತ್ತಿದ್ದ ಕಾರಣದಿಂದ ಅಮೆರಿಕಾದ ಡಾಲರ್‌ನ ಆಧಿಪತ್ಯವು ಮುಂದುವರೆದಿತ್ತು.ಈ ಹಣವಂತರನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು:ಮೊದಲನೆಯ ಗುಂಪಿನಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಬರುತ್ತವೆ ಮತ್ತು ಎರಡನೆಯ ಗುಂಪಿನಲ್ಲಿ, ತಮ್ಮ ತಮ್ಮ ದೇಶಗಳ ವಿದೇಶಿ ವಿನಿಮಯ ಮೀಸಲು ಸಂಗ್ರಹವನ್ನು ಹೊಂದಿದ್ದ ಕೇಂದ್ರೀಯ ಬ್ಯಾಂಕುಗಳು ಬರುತ್ತವೆ.ಡಾಲರ್‌ಅನ್ನು ಚಿನ್ನದಷ್ಟೇ ಉತ್ತಮವೆಂದು ಏಕೆ ಪರಿಗಣಿಸಲಾಯಿತು ಎಂದರೆ, ಚಿನ್ನದ ಬೆಲೆಯು ಸಾಮಾನ್ಯವಾಗಿ ಸರಕುಗಳ ಮತ್ತು ಸೇವೆಗಳ ಬೆಲೆಗಳ ಜೊತೆಯಲ್ಲೇ ಚಲಿಸುತ್ತದೆಯಾದರೂ, ಸರಕು-ಸೇವೆಗಳ ಡಾಲರ್ ರೂಪದ ಬೆಲೆಗಳು ಅನಗತ್ಯವಾಗಿ ಏರುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಕಾರ್ಮಿಕರ ಒಂದು ಮೀಸಲು ಪಡೆಯನ್ನು ಕಟ್ಟಿಕೊಳ್ಳುವ ಮೂಲಕ ಅಮೆರಿಕದಲ್ಲಿ ಡಾಲರ್ ವೇತನ ದರಗಳನ್ನು ನಿಯಂತ್ರಣದಲ್ಲಿಡಲಾಗಿದೆ ಎಂದು ನಂಬಲಾಗಿತ್ತು. ಡಾಲರ್ ಬೆಲೆಯು ಪ್ರಮುಖವಾಗಿ ತೈಲ ಬೆಲೆ ಆಧಾರಿತವಾಗಿದ್ದರೂ, ತೈಲ ಬೆಲೆಗಳ ಅಲ್ಪಾವಧಿ ಏರಿಳಿತಗಳ ಹೊರತಾಗಿಯೂ, ತೈಲ ಉತ್ಪಾದಕರ ಮೇಲೆ “ಶಿಸ್ತು” ಹೇರುವ ಅಮೆರಿಕದ ಸಾಮರ್ಥ್ಯದಿಂದಾಗಿ ಕಾಲಾನಂತರದಲ್ಲಿ ಡಾಲರ್ ಬೆಲೆ ಸ್ಥಿರವಾಗಿ ಉಳಿಯುತ್ತದೆ ಎಂದೇ ಭಾವಿಸಲಾಗಿತ್ತು.
ಅಧಿಕ ಅಂಶಗಳು
ಕೇಂದ್ರೀಯ ಬ್ಯಾಂಕುಗಳವಿಷಯದಲ್ಲಿ, ಇನ್ನೂ ಒಂದು ಅಧಿಕ ಅಂಶವಿತ್ತು. ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳ ಸ್ವರೂಪವು ಬಹುಪಕ್ಷೀಯವಾಗಿರುವ ಸಹಜ ಕಾರಣದಿಂದಾಗಿ ಮತ್ತು ಹೆಚ್ಚಿನ ವ್ಯವಹಾರಗಳು ಡಾಲರ್ ಕರೆನ್ಸಿಯಲ್ಲೇ ನಡೆಯುತ್ತಿದುದರಿಂದಾಗಿ, ಕೇಂದ್ರೀಯ ಬ್ಯಾಂಕುಗಳು ತಮ್ಮ ಮೀಸಲು ಸಂಗ್ರವನ್ನು ಡಾಲರ್ ಕರೆನ್ಸಿಯಲ್ಲೇ ಇಟ್ಟುಕೊಳ್ಳುತ್ತವೆ. ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಗಳ ಮೂಲಕ ಕೈಗೊಳ್ಳುತ್ತಿದ್ದ ವ್ಯವಹಾರಗಳಲ್ಲಿ, ಪ್ರತಿಯೊಂದು ದೇಶವೂ ಮತ್ತೊಂದು ದೇಶದ ಕರೆನ್ಸಿಯಲ್ಲಿ ದಾವೆಗಳನ್ನು ಹೊಂದುತ್ತಿದ್ದವು, ಈ ದಾವೆಗಳು ಕಾಲಾನಂತರದಲ್ಲಿ ಪರಸ್ಪರ ಸರಿದೂಗಿಸಲ್ಪಡುತ್ತವೆ ಎಂಬ ನಂಬಿಕೆಯ ಮೇಲೆ.ಆದರೆ, ಬಹುಪಕ್ಷೀಯ ವ್ಯಾಪಾರ-ವಹಿವಾಟುಗಳ ಸಂದರ್ಭದಲ್ಲಿ, ದ್ವಿಪಕ್ಷೀಯ ವ್ಯವಹಾರಗಳ ರೀತಿಯಲ್ಲಿ ಪರಸ್ಪರ ಸರಿದೂಗಿಸಲ್ಪಡುವ ಅವಕಾಶವೇ ಇಲ್ಲದಿರುವಾಗ, ಮೀಸಲುಗಳನ್ನು ಇಟ್ಟುಕೊಳ್ಳಲು ಒಂದು ಸಾಮಾನ್ಯ ಕರೆನ್ಸಿಯ ಅಗತ್ಯವಿರುತ್ತದೆ. ಅದಕ್ಕಾಗಿ ಒಂದು ಕರೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸರಕುಗಳ ವಿಷಯದಲ್ಲಿ ಯಾವ ಕರೆನ್ಸಿಯ ಮೌಲ್ಯವು ಅನಗತ್ಯವಾಗಿ ಕುಸಿಯುವುದಿಲ್ಲವೋ ಅಂತಹ ಒಂದು ಕರೆನ್ಸಿಯನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ರಕಾರವಾಗಿ, ಡಾಲರ್‌ಅನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಆಶ್ಚರ್ಯವೇನಿಲ್ಲ.
ಈ ಪರಿಸ್ಥಿತಿ ಮೆಲ್ಲ ಮೆಲ್ಲನೇ ಬದಲಾಗತೊಡಗಿತ್ತು. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ನಿರ್ಬಂಧಗಳ ಹೇರಿಕೆಯು ಈ ಬದಲಾವಣೆಯ ವೇಗವನ್ನು ಹೆಚ್ಚಿಸಿತು. ನಿರ್ಬಂಧಗಳು ತೈಲದ ಮತ್ತು ನೈಸರ್ಗಿಕ ಅನಿಲದ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಿವೆ. ರಷ್ಯಾವು ತೈಲ ಮತ್ತು ನೈಸರ್ಗಿಕ ಅನಿಲಗಳ ಪ್ರಮುಖ ರಫ್ತುದಾರ ದೇಶ. ಆದರೆ ತೈಲ ಮತ್ತು ನೈಸರ್ಗಿಕ ಅನಿಲಗಳ ಬೆಲೆಗಳು ಏರಿಕೆಯಾಗಿರುವುದು ಈ ಸರಕುಗಳ ನೈಜ ಕೊರತೆಯಿಂದಾಗಿ ಅಲ್ಲ. ಈ ಸರಕುಗಳನ್ನು ರಷ್ಯಾದಿಂದ ಕೊಳ್ಳದಂತೆ ಅಮೆರಿಕಾ ಹೇರಿದ ನಿರ್ಬಂಧದಿಂದಾಗಿ ಮತ್ತು ಭವಿಷ್ಯದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲಗಳ ಬೆಲೆಗಳು ಏರುವ ನಿರೀಕ್ಷೆಯ ಮೇಲೆ ಹುಟ್ಟಿಕೊಂಡ ಜೂಜುಕೋರ ಚಟುವಟಿಕೆಗಳ ಮಾರ್ಗವಾಗಿ. ಗಣನೀಯ ಪ್ರಮಾಣದಲ್ಲಿ ಹೆಚ್ಚಿದ ಅಮೆರಿಕದ ತೈಲ ಕಂಪನಿಗಳ ಲಾಭವು ಹಣದುಬ್ಬರದ ತೀವ್ರ ಏರಿಕೆಯಾಗಿ ಪರಿಣಮಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ತೈಲ ಮತ್ತು ಡಾಲರ್ ಇವುಗಳ ನಡುವೆ ಅಂತರ್ಗತವಾಗಿದ್ದ ಸಂಬಂಧವು ಮುರಿದುಹೋದ ಪರಿಣಾಮವಾಗಿ ಡಾಲರ್ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಷ್ಯಾವು ತನ್ನ ತೈಲದ ಬೆಲೆಯನ್ನು ರೂಬಲ್ ಕರೆನ್ಸಿಯಲ್ಲಿ ನಿಗದಿಪಡಿಸಿರುವುದರಿಂದ, ರೂಬಲ್ “ತೈಲದಷ್ಟು ಉತ್ತಮ”ವಾಗಿರುವುದರಿಂದ ಅದು “ಚಿನ್ನದಷ್ಟೇ ಉತ್ತಮ”ವಾಗುತ್ತದೆ. ಹಾಗಾಗಿ ಅದು ಒಂದು ನೆಚ್ಚಿನ ಕರೆನ್ಸಿಯಾಗಿ ಹೊರಹೊಮ್ಮಿದೆ.
ತೈಲ-ಡಾಲರ್ – ರೂಬಲ್
ತೈಲವನ್ನು ಮತ್ತು ನೈಸರ್ಗಿಕ ಅನಿಲವನ್ನು ರೂಬಲ್ ಕರೆನ್ಸಿಯಲ್ಲಿ ಪಾವತಿಸುವವರಿಗೆ ಮಾತ್ರ ಮಾರಾಟ ಮಾಡುವುದಾಗಿ ರಷ್ಯಾ ಹಿಡಿದ ಪಟ್ಟಿನಿಂದಾಗಿ ರೂಬಲ್‌ಗಳ ಮೇಲಿನ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಹಾಗಾಗಿ, ರಷ್ಯಾದ ತೈಲವನ್ನು ಮತ್ತು ಅನಿಲವನ್ನು ಕೊಳ್ಳಲು ಡಾಲರ್ ಉಪಯೋಗಕ್ಕೆ ಬರುವುದಿಲ್ಲ ಎಂದಾದರೆ, ಸಂಭಾವ್ಯ ಖರೀದಿದಾರರು ಡಾಲರ್‌ಗಳ ಬದಲಿಗೆ ರೂಬಲ್‌ಗಳನ್ನು ಪಡೆಯಲು ಧಾವಿಸುತ್ತಾರೆ.
ಈ ಎರಡು ಅಂಶಗಳು, ಅವು ಎಷ್ಟೇ ಮುಖ್ಯವಾಗಿದ್ದರೂ ಸಹ, ಅವೇ ಎಲ್ಲವೂ ಅಲ್ಲ. ಭಾರತವೂ ಸೇರಿದಂತೆ ಹಲವಾರು ದೇಶಗಳು ರಷ್ಯಾದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಪುನರಾರಂಭಿಸಿವೆ. ಈ ಹಿಂದೆ ಸೋವಿಯತ್ ಒಕ್ಕೂಟವು ಅಸ್ತಿತ್ವದಲ್ಲಿದ್ದಾಗ ಇಂತಹ ಏರ್ಪಾಟುಗಳಿದ್ದವು ಮತ್ತು ಸೋವಿಯತ್ ಒಕ್ಕೂಟದ ಪತನದಿಂದಾಗಿಯೇ ಕೊನೆಗೊಂಡವು. ಅಂತಹ ಏರ್ಪಾಟಿನ ಅಡಿಯಲ್ಲಿ ಕೈಗೊಳ್ಳುವ ವ್ಯವಹಾರಗಳಿಗೆ ಅಮೆರಿಕಾದ ಡಾಲರ್ ಅಪ್ರಸ್ತುತವಾಗುತ್ತದೆ ಮತ್ತು ಎರಡು ಕರೆನ್ಸಿಗಳ (ಉದಾ:ರೂಪಾಯಿ-ರೂಬಲ್) ನಡುವೆ ಒಂದು ಒಪ್ಪಿತ ನಿರ್ದಿಷ್ಟ ವಿನಿಮಯ ದರವನ್ನು ನಿಗದಿಪಡಿಸಲಾಗುತ್ತದೆ. ಈ ಎರಡು ದೇಶಗಳ ನಡುವಿನ ವ್ಯಾಪಾರದಲ್ಲಿ ಒಂದು ದೇಶವು ಹೊಂದಿದ್ದ ಇನ್ನೊಂದು ದೇಶದ ಕರೆನ್ಸಿಯ ಕೊರತೆ ಸಂಭವಿಸಿದರೆ, ಅದನ್ನು ಕೊರತೆಯ ದೇಶದ ಕರೆನ್ಸಿಯಲ್ಲಿ ಇರಿಸಲಾಗುತ್ತಿತ್ತು. ಮತ್ತು, ಕರೆನ್ಸಿಯ ಹೆಚ್ಚುವರಿಗಳು “ಮೀಸಲುಗಳಿಗೆ” ಹೋಲುವುದರಿಂದ, ದ್ವಿಪಕ್ಷೀಯತೆಯ ಪ್ರಸರಣದ ಸಮಯದಲ್ಲೇ, ಈ ಮೀಸಲುಗಳನ್ನು ಇತರ ಕರೆನ್ಸಿಗಳಲ್ಲಿ (ವಿಶೇಷವಾಗಿ ರೂಬಲ್‌ಗಳಲ್ಲಿ) ಹೊಂದುವಂತಾಯಿತು.
ಈ ಎಲ್ಲಾ ಕಾರಣಗಳು, ಉಳಿದ ಅಂಶಗಳು ಇದ್ದ ಸ್ಥಿತಿಯಲ್ಲೇ ಇದ್ದಾಗ, ರೂಬಲ್‌ಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸುತ್ತವೆ. ನಿರ್ಬಂಧಗಳ ಘೋಷಣೆಯಾದ ತಕ್ಷಣವೇ ಕುಸಿದಿದ್ದ ರೂಬಲ್ ವಿನಿಮಯ ದರವು ಅನೇಕ ವರ್ಷಗಳ ಅವಧಿಯಲ್ಲಿ ಕಾಣದ ಒಂದು ಅಭೂತಪೂರ್ವ ಮಟ್ಟಕ್ಕೆ ಈಗ ಚೇತರಗೊಂಡಿರುವುದು ಆಶ್ಚರ್ಯವೇನಲ್ಲ. ಆಗಸ್ಟ್ 2021ರಲ್ಲಿ, ಒಂದು ಡಾಲರ್‌ಗೆ ಸಮನಾಗಿ ಸುಮಾರು 72ರೂಬಲ್‌ಗಳ ವಿನಿಮಯ ದರ ಇತ್ತು. ನಿರ್ಬಂಧಗಳ ಘೋಷಣೆಯ ನಂತರ, ವಿನಿಮಯ ದರವು ಡಾಲರ್ ಪರವಾಗಿತ್ತು. ಒಂದು ಡಾಲರ್‌ನ ವಿನಿಮಯ ದರವು ಸುಮಾರು 136ರೂಬಲ್‌ಗಳ ವರೆಗೆ ಏರಿತು. ತದನಂತರ, ರೂಬಲ್ ತೀವ್ರವಾಗಿ ಏರಿಕೆಯಾಗಿದೆ. ಆಗಸ್ಟ್ 11, 2022ರಂದು, ಡಾಲರ್‌ನ ವಿನಿಮಯ ದರವು ಸುಮಾರು 61ರೂಬಲ್ ಮಟ್ಟದಲ್ಲಿತ್ತು (ನಿಖರವಾಗಿ ಹೇಳಬೇಕೆಂದರೆ 60.6957). ಆಗಸ್ಟ್ 2021ರಿಂದ ಆಗಸ್ಟ್ 2022ರವರೆಗಿನ 12ತಿಂಗಳ ಅವಧಿಯಲ್ಲಿ, ಡಾಲರ್‌ಗೆ ಹೋಲಿಸಿದರೆ, ರೂಬಲ್‌ನ ಮೌಲ್ಯವು ಶೇ.22ಕ್ಕಿಂತಲೂ ಹೆಚ್ಚು ವೃದ್ಧಿಸಿದೆ.
ದ್ವಿಪಕ್ಷೀಯತೆಯತ್ತ
ಬೇರೆ ಮಾತುಗಳಲ್ಲಿ ಹೇಳುವುದಾದರೆ, ರಷ್ಯಾದ ಮೇಲೆ ಹೇರಿದ ನಿರ್ಬಂಧಗಳು, ಕೇವಲ ಐರೋಪ್ಯ ಒಕ್ಕೂಟಕ್ಕೆ ಮಾತ್ರವಲ್ಲ, ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಸಹ, ತನ್ನ ಗೋಲಿನೊಳಗೇ ತಾನೇ ಚೆಂಡು ಹೊಡೆದ ಆಟವಾಗಿ ಪರಿಣಮಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ನಿರ್ಬಂಧಗಳು ಬಹುಪಕ್ಷೀಯತೆಯಿಂದ ದೂರ ಸರಿದು ದ್ವಿಪಕ್ಷೀಯ ವ್ಯವಸ್ಥೆಯ ಪ್ರಸರಣವನ್ನು ತ್ವರಿತಗೊಳಿಸಿವೆ.
ಇದು ನವ-ಉದಾರವಾದಿ ವ್ಯವಸ್ಥೆಯು ಒಂದು ಹೀನಸ್ಥಿತಿಯನ್ನು ತಲುಪಿದೆ ಎಂಬುದನ್ನೂ ಸೂಚಿಸುತ್ತದೆ. ಬಹುಪಕ್ಷೀಯತೆಯ ಹೇರಿಕೆಯು ನವ-ಉದಾರವಾದಿ ವ್ಯವಸ್ಥೆಯ ಸಾರವಾಗಿತ್ತು. ವಾಸ್ತವವಾಗಿ, ಯುಎಸ್ ನೇತೃತ್ವದ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಮತ್ತು ಡಾಲರ್ ಕರೆನ್ಸಿಯ ಮೂಲಕ ಅದರ ಪಾರಮ್ಯವನ್ನು ಎತ್ತಿಹಿಡಿಯಬಯಸಿದ ನವ-ಉದಾರವಾದಿ ವ್ಯವಸ್ಥೆಯು ಬಹುಪಕ್ಷೀಯ ವ್ಯವಸ್ಥೆಯನ್ನು ಹೇರುವ ಮೂಲಕ ಅದನ್ನು ಸಾಧಿಸಿತು.
ರಷ್ಯಾದ ಮೇಲೆ ಹೇರಿದ ನಿರ್ಬಂಧಗಳು ತಾವೇ ಹೊಡೆದುಕೊಂಡ ಗೋಲಾಗಿ (own goal)ಪಾಶ್ಚ್ಯಾತ್ಯ ದೇಶಗಳಿಗೆ ಪರಿಣಮಿಸಿದವು. ಏಕೆಂದರೆ, ಈ ನಿರ್ಬಂಧಗಳ ಲೆಕ್ಕಾಚಾರವೇ ತಪ್ಪಾಗಿತ್ತು. ಈ ನಿರ್ಬಂಧಗಳು, ರಷ್ಯಾವನ್ನು ಮಂಡಿಯೂರುವಂತೆ ಎಷ್ಟು ಬೇಗನೇ ಮಾಡುತ್ತವೆ ಎಂದರೆಉಕ್ರೇನ್‌ನಲ್ಲಿ ಅದರ ಮಿಲಿಟರಿ ಕಾರ್ಯಾಚರಣೆಯು ಅಷ್ಟೇ ಬೇಗನೆ ಮುಗಿಯುತ್ತದೆ ಎಂದುಭಾವಿಸಲಾಗಿತ್ತು. ರಷ್ಯಾದಲ್ಲಿ ಆಡಳಿತ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಇವೆಲ್ಲವೂ ಸಂಪೂರ್ಣವಾಗಿ ಅವಾಸ್ತವಿಕವಾಗಿದ್ದವು. ನಿರ್ಬಂಧಗಳು ಸ್ವಭಾವತಃ ಬಹುಪಕ್ಷೀಯತೆಯನ್ನು ಉಲ್ಲಂಘಿಸುತ್ತವೆ. ಬಹುಪಕ್ಷೀಯತೆಯ ಉಲ್ಲಂಘನೆಯನ್ನು, ಈ ಬಹುಪಕ್ಷೀಯ ವ್ಯವಸ್ಥೆಯಿಂದ ಹೊರಹಾಕಲ್ಪಟ್ಟ ಒಂದು ದೇಶದ ನಿರ್ದಿಷ್ಟ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಿ, ತಮ್ಮ ಉದ್ದೇಶವನ್ನು ತ್ವರಿತವಾಗಿ ಸಾಧಿಸಿಕೊಳ್ಳಲಾಗುವುದು ಎಂಬುದಾಗಿ ಪಾಶ್ಚ್ಯಾತ್ಯ ದೇಶಗಳು ಊಹಿಸಿದ್ದವು. ಈ ಊಹೆಯು ತಪ್ಪಾದಾಗ, ಬಹುಪಕ್ಷೀಯತೆಯ ಉಲ್ಲಂಘನೆಯು ಒಂದು ಸಾಂಕ್ರಾಮಿಕವಾಗಿ ಪರಿಣಮಿಸುತ್ತದೆ. ಅದು ಬಹಳವಾಗಿ ವೃದ್ಧಿಸುತ್ತದೆ ಮತ್ತು ಬೇಗನೆ ಹರಡುತ್ತದೆ. ಇಡೀ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ವಾಸ್ತವವಾಗಿ ಇದು ಸಂಭವಿಸುತ್ತಿದೆ ಕೂಡ.
ಬರಲಿರುವ ವಿದ್ಯಮಾನಗಳ ಮುನ್ಸೂಚನೆ
ಈ ಮೊದಲು ಹೇಳಿದ ಅಂಶಗಳ ಆಧಾರದಮೇಲೆ, ಡಾಲರ್‌ನ ಅವನತಿಯು ಅಂತಿಮ ಹಂತವನ್ನು ತಲುಪಿದೆ ಎಂಬ ತೀರ್ಮಾನಕ್ಕೆ ಬರುವುದು ಪೂರ್ಣವಾಗಿ ಅಕಾಲಿಕವಾಗುತ್ತದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಒಳಗೊಂಡ ವಿಶ್ವದ ಹಣವಂತರಿಗೆ, ಡಾಲರ್ ಇಂದಿಗೂ ಖಂಡಿತವಾಗಿಯೂ ಅತ್ಯಂತ ಆಕರ್ಷಕ ಕರೆನ್ಸಿಯಾಗಿಯೇ ಉಳಿದಿದೆ. ವಾಸ್ತವವಾಗಿ, ಪ್ರಸ್ತುತ ಹಣದುಬ್ಬರದ ನಿಯಂತ್ರಣಕ್ಕಾಗಿ ಏರಿಸಲಾದ ಅಮೆರಿಕದ ಬಡ್ಡಿ ದರಗಳಿಂದಾಗಿ,ಬಡ್ಡಿದರಗಳು ಸೊನ್ನೆಗೆ ಹತ್ತಿರದ ಮಟ್ಟದಲ್ಲಿದ್ದಾಗ ಅಮೆರಿಕದಿಂದ ಮೂರನೇ ಜಗತ್ತಿಗೆ ಹರಿದ ಹಣಕಾಸು ಮತ್ತೆ ಅಲ್ಲಿಗೇ ಹಿಂತಿರುಗುತ್ತಿದೆ.ಈ ವಿದ್ಯಮಾನದ ಪರಿಣಾಮವಾಗಿ ಭಾರತದ ರೂಪಾಯಿಯೂ ಸೇರಿದಂತೆ ಮೂರನೇ ಜಗತ್ತಿನ ದೇಶಗಳ ಕರೆನ್ಸಿಗಳು ಡಾಲರ್ ಎದುರು ಅಪಮೌಲ್ಯಕ್ಕೊಳಗಾದವು. ಡಾಲರ್‌ಅನ್ನು ಆಕರ್ಷಣೆಗೊಳಿಸಿದ ಬಡ್ಡಿ ದರ ಏರಿಕೆಯ ಕಾರಣದಿಂದಲೇ ಹಣಕಾಸು ಹಿಂತಿರುಗುತ್ತಿಲ್ಲ. ಅಮೆರಿಕದ ಬಡ್ಡಿ ದರ ಏರಿಕೆಗೆ ಪ್ರತಿಕ್ರಿಯೆಯಾಗಿ ಮೂರನೇ ಜಗತ್ತಿನ ದೇಶಗಳೂ ಸಹ ತಮ್ಮ ಬಡ್ಡಿ ದರಗಳನ್ನು ಏರಿಸುತ್ತಿವೆ. ಆದರೂ ಹಣಕಾಸು ಹಿಂತಿರುಗುವುದನ್ನು ತಡೆಯಲಾಗಲಿಲ್ಲ. ಏಕೆಂದರೆ, ನಾವು ಪ್ರವೇಶಿಸುತ್ತಿರುವ ಈ ಅನಿಶ್ಚಿತ ಜಗತ್ತಿನಲ್ಲಿ, ಹಣಕಾಸು ತನ್ನ ತವರು ಮನೆಯಾದ ಅಮೆರಿಕದಲ್ಲೇ ಹೆಚ್ಚು ನಿರಾಳವಾಗಿರುತ್ತದೆ. ಈ ನಿರ್ದಿಷ್ಟ ಪರಿಸ್ಥಿತಿಯಲ್ಲಿ, ಡಾಲರ್ ಆಧಿಪತ್ಯದ ಮರಣ ಪತ್ರವನ್ನು ಈಗಲೇ ಬರೆಯುವುದು ಅಕಾಲಿಕವೂ ಹೌದು ಮತ್ತು ತಿಳಿಗೇಡಿತನವೂ ಹೌದು.
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಡಾಲರ್‌ನ ಪರಿಸ್ಥಿತಿಯ ಬಗ್ಗೆ ಸಮಕಾಲೀನ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಎರಡು ಸ್ಪಷ್ಟ ಪ್ರವೃತ್ತಿಗಳನ್ನು ಕಾಣಬಹುದು: ಒಂದು, ಹಣದುಬ್ಬರವನ್ನು ನಿಯಂತ್ರಿಸಲು ತನ್ನ ಬಡ್ಡಿ ದರಗಳನ್ನು ಏರಿಸುತ್ತಿರುವುದರಿಂದ ಮೂರನೇ ಜಗತ್ತಿನ ದೇಶಗಳಿಂದ ಅಮೆರಿಕಾಗೆ ಹಣಕಾಸಿನ ಪಲಾಯನ. ಎರಡನೆಯದು, ಇತರ ಕರೆನ್ಸಿಗಳನ್ನು (ಎಲ್ಲಕ್ಕಿಂತ ಹೆಚ್ಚಾಗಿ ತಕ್ಷಣದ ಸನ್ನಿವೇಶದಲ್ಲಿ ರೂಬಲನ್ನು) ಒಳಗೊಂಡಿರುವ ಮೀಸಲು ಸಂಗ್ರಹಗಳಿಂದ ಡಾಲರ್ ಕರೆನ್ಸಿಯನ್ನು ಹೊರಗಿಡುವ ಮೂಲಕ ದ್ವಿಪಕ್ಷೀಯ ವ್ಯವಸ್ಥೆಗಳ ಕ್ರಮೇಣ ಹರಡುವಿಕೆ ಮತ್ತು ತನ್ಮೂಲಕ ಡಾಲರ್‌ನ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ದುರ್ಬಲಗೊಳಿಇರುವುದು. ಡಾಲರ್ ಮೌಲ್ಯಕ್ಕೆ ಸಂಬಂಧಿಸಿದಂತೆ ಈ ಎರಡೂ ಪ್ರವೃತ್ತಿಗಳು ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತವೆ. ಮೊದಲನೆಯದಕ್ಕೆ (ಹಣಕಾಸಿನ ಪಲಾಯನ) ಹೋಲಿಸಿದರೆ ಎರಡನೆಯ ಪ್ರವೃತ್ತಿಯು(ಡಾಲರ್ ಅವನತಿ) ಹೊಂದಿರುವ ಪ್ರಾಮುಖ್ಯತೆಯು ಇನ್ನೂ ಕಡಿಮೆಯೇ. ಆದರೂ ಅದು ಬರಲಿರುವ ವಿದ್ಯಮಾನಗಳ ಮುನ್ಸೂಚನೆಯೇ. ಅದೇನೇ ಇರಲಿ, ಬಹುಪಕ್ಷೀಯತೆಯನ್ನು ಸಂಭ್ರಮಿಸಿದ ಮತ್ತು ಅದನ್ನು ಜಗತ್ತಿನಾದ್ಯಂತ ಹೇರಿದ ನವ-ಉದಾರವಾದಿ ವ್ಯವಸ್ಥೆಯು ಕೊನೆಗೊಳ್ಳಲಿದೆ ಎಂಬುದಂತೂ ಖರೇ.