ಸನಾತನ ಧರ್ಮ ವಿವಾದ: ಉದಯನಿಧಿ ಸ್ಟಾಲಿನ್ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂ ನಿರಾಕರಣೆ

ನವದೆಹಲಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ ಕುರಿತ ಹೇಳಿಕೆಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. “ಇಂತಹ ಅರ್ಜಿಗಳಿಗೆ ಆದ್ಯತೆ ಕೊಡಲು ಪ್ರಾರಂಭಿಸಿದರೆ, ಅವುಗಳು ಪ್ರವಾಹವಾಗಿ ಬರುತ್ತಲೆ ಇರುತ್ತವೆ. ವೈಯಕ್ತಿಕ ಪ್ರಕರಣಗಳನ್ನು ನಾವು ತೆಗೆದುಕೊಳ್ಳುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ ಹೇಳಿದೆ.

ದೇಶದಲ್ಲಿ ದ್ವೇಷದ ಭಾಷಣಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಪೀಠವೂ ನಿರಾಕರಿಸಿದೆ.

ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆಶಿ ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಅನುಮತಿ

“ವೈಯಕ್ತಿಕ ಪ್ರಕರಣಗಳ ವಿಚಾರಣೆ ಪ್ರಾರಂಭಿಸಿದರೆ, ಮುಖ್ಯ ವಿಷಯವನ್ನು ನಾವು ನಿಭಾಯಿಸಲು ಸಾಧ್ಯವಾಗುವುದಿಲ್ಲ. ದೇಶಾದ್ಯಂತ ವೈಯಕ್ತಿಕ ಪ್ರಕರಣಗಳನ್ನು ಆಲಿಸುವುದು ಅಸಾಧ್ಯ” ಎಂದು ಸುಪ್ರೀಂಕೋರ್ಟ್ ಹೇಳಿದೆ. “ನಾವು ವೈಯಕ್ತಿಕ ವಿಚಾರಗಳನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಯಾವುದೇ ಉಲ್ಲಂಘನೆಯಾಗಿದ್ದರೆ, ನೀವು ಆಯಾ ಹೈಕೋರ್ಟ್‌ಗೆ ಹೋಗಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್‌ನಲ್ಲಿ ಉದಯನಿಧಿ ಮತ್ತು ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಮನವಿಯ ಮೇಲೆ ನೋಟಿಸ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ರೂ.ಮೀಸಲು| ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಈ ವರ್ಷದ ಏಪ್ರಿಲ್‌ನಲ್ಲಿ, ಸಂವಿಧಾನವು ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ರೂಪಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿತ್ತು. ದ್ವೇಷ ಭಾಷಣದ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ದೂರು ದಾಖಲಾಗುವವರೆಗೂ ಕಾಯದೆ ಅಪರಾಧಿಗಳ ವಿರುದ್ಧ ಧರ್ಮವನ್ನು ಲೆಕ್ಕಿಸದೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿತ್ತು.

ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರ ವೇದಿಕೆ ಆಯೋಜಿಸಿದ್ದ ಸನಾತನಂ (ಸನಾತನ ಧರ್ಮ) ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ್ದು, “ಸನಾತನವು ಇದು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ” ಎಂದು ಹೇಳಿದ್ದರು.

ಅವರ ಈ ಹೇಳಿಕೆಗಳು ವ್ಯಾಪಕ ಟೀಕೆಗೆ ಒಳಗಾಗಿತ್ತು, ಬಿಜೆಪಿ ನಾಯಕರು ಇದನ್ನು ಹಿಂದೂಗಳ ‘ನರಮೇಧ’ದ ಕರೆ ಎಂದು ವ್ಯಾಖ್ಯಾನಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಅವರು, ತಮ್ಮ ಹೇಳಿಕೆಗೆ ತಾನು ಬದ್ಧ ಎಂದು ಹೇಳಿದ್ದರು.

ವಿಡಿಯೊ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *