ಚುನಾವಣಾ ಆಯುಕ್ತರ ಹುದ್ದೆ ಮೇ ತಿಂಗಳಿಂದ ನವಂಬರ್ 18ರ ವರೆಗೆ ಖಾಲಿಯಿತ್ತು…. ಈಗ ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಮಾಡಬೇಕು ಎಂದು ಸರಕಾರಕ್ಕೆ ಅನ್ನಿಸಿದ್ದು ಏಕೆ? ….ಈ ಸೂಪರ್ ಫಾಸ್ಟ್ ವ್ಯವಸ್ಥೆ ಏಕೆ ಅಗತ್ಯವೆನಿಸಿತು?…ಅದೇ ದಿನ ನೋಟಿಫಿಕೇಷನ್, ಅದೇ ದಿನ ಅರ್ಜಿ, ಅದೇ ದಿನ ಸ್ವೀಕಾರ ಅದೇ ದಿನ ನೇಮಕ. ಸಂಬಂಧಪಟ್ಟ ಕಡತ 24 ಗಂಟೆಗಳೂ ಚಲಿಸಲಿಲ್ಲ…. ನಿಜಕ್ಕೂ ಮಿಂಚಿನ ಓಟ. ಯಾವ ರೀತಿಯ ಮೌಲ್ಯಮಾಪನ ಇತ್ತು? – ಇದು ಸಂಸತ್ತಿನಲ್ಲಿ ಪ್ರತಿಪಕ್ಷದ ಸದಸ್ಯರೊಬ್ಬರು ಸರಕಾರಕ್ಕೆ ಕೇಳಿದ ಪ್ರಶ್ನೆಯಲ್ಲ, ಸುಪ್ರಿಂ ಕೋರ್ಟಿನ ಸಂವಿಧಾನ ಪೀಠ ಕೇಂದ್ರ ಸರಕಾರದ ಅಟಾರ್ನಿ ಜನರಲ್‌ಗೆ ಕೇಳಿದ ಪ್ರಶ್ನೆ.
“ನವಂಬರ್ 18ರಂದು ನಾವು ವಿಚಾರಣೆ ನಡೆಸುತ್ತೇವೆ. ಈ ಕಡತ ಅದೇ ದಿನ ಚಲಿಸುತ್ತದೆ. ಕಾನೂನು ಮಂತ್ರಿಗಳು ಶಾರ್ಟ್ ಲಿಸ್ಟ್ ಮಾಡಿದ ನಾಲ್ಕು ಹೆಸರುಗಳನ್ನು ಕಳಿಸುತ್ತಾರೆ. ನಂತರ ಪ್ರಧಾನ ಮಂತ್ರಿಗಳು ಬರುತ್ತಾರೆ, ಅದೇ ದಿನ ಅವರ ಹೆಸರನ್ನು ಶಿಫಾರಸು ಮಾಡುತ್ತಾರೆ. ಇಂತಹ ತರಾತುರಿ ಏಕೆ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಹಾಗಾದ್ರೆ ತ್ವರಿತವಾಗಿ ನೇಮಕ ಮಾಡುವುದು ತಪ್ಪೇ ಎಂದು ದೇಶದ ಅಟಾರ್ನಿ ಜನರಲ್(ಮುಗ್ಧರಾಗಿ?) ಕೇಳಿದರಂತೆ. ಸ್ವಯಂ ನಿವೃತ್ತಿಯ ಮರುದಿನವೇ ಚುನಾವಣಾ ಆಯುಕ್ತರಾಗಿ ನೇಮಕ-ಹೀಗೇ ನಡೆಯುತ್ತದೆಯೇ ಎಂದು ನ್ಯಾಯಮೂರ್ತಿಗಳು ದೇಶದ ಅಟಾರ್ನಿ ಜನರಲ್‌ರವರನ್ನು ಪ್ರತಿಯಾಗಿ ಕೇಳಬೇಕಾಗಿ ಬಂತು! ಬಹುಶಃ ಅಮೃತ ಕಾಲದಲ್ಲಿ ಹೀಗೆಯೇ ಏನು ಎಂದು ಕೇಳಿದ್ದರೆ ಇನ್ನೂ ಸೂಕ್ತವಾಗಿರುತ್ತಿತ್ತೋ ಏನೋ!
ಕೆಲವೇ ದಿನಗಳ ಹಿಂದೆ ದೇಶದ ಮತದಾರರು ಮುಖ್ಯ ಚುನಾವಣಾ ಆಯುಕ್ತರನ್ನೂ ಹೀಗೇ ಕೇಳಬೇಕಾದ ಸಂದರ್ಭ ಬಂದಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಡಿಸೆಂಬರ್ 2022ರಲ್ಲಿ ನಡೆಯಬೇಕಾಗಿರುವ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಅಕ್ಟೋಬರ್ 14ರಂದು ಪ್ರಕಟಿಸುವುದಾಗಿ ವರದಿಯಾಗಿತ್ತು. ಆದರೆ ಅಂದು ಮುಖ್ಯ ಚುನಾವಣಾ ಆಯುಕ್ತರು ಹಿಮಾಚಲ ಪ್ರದೇಶದ ಚುನಾವಣಾ ವೇಳಾಪಟ್ಟಿಯನ್ನಷ್ಟೇ ಪ್ರಕಟಿಸಿದರು. ಗುಜರಾತಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು 20 ದಿನಗಳ ನಂತರವೇ. ಸಹಜವಾಗಿಯೇ ಗುಜರಾತಿನಲ್ಲಿ ಮತದಾನ ಪೂರ್ಣಗೊಳ್ಳದೆ ಹಿಮಾಚಲ ಪ್ರದೇಶದ ಫಲಿತಾಂಶ ಪ್ರಕಟಿಸುವಂತಿಲ್ಲ. ಮತ್ತು ಆದ್ದರಿಂದ ನವಂಬರ್ 12 ರಂದು ಮತದಾನ ಮಾಡಿದ 42ಲಕ್ಷ ಹಿಮಾಚಲ ಪ್ರದೇಶದ ಮತದಾರರು ಫಲಿತಾಂಶಕ್ಕೆ 26 ದಿನ ಕಾಯಬೇಕು. ಏಕೆಂದರೆ ಎರಡೂ ಚುನಾವಣೆಗಳ ಮತಗಣನೆ ಡಿ.8ರಂದೇ ನಡೆಯಲಿದೆ.. ಈ 20 ದಿನಗಳ ಅಂತರ ಏಕೆ ಬಂತು ಎಂಬುದೇ ಆ ಪ್ರಶ್ನೆ. ನಿಜ, ಅದು ಅಮೃತ ಕಾಲದಲ್ಲಿ ಅಪ್ರಸ್ತುತವಾದ ಪ್ರಶ್ನೆಯಾಗಿತ್ತು. ಅಲ್ಲದೆ ಆ ಇಪ್ಪತ್ತು ದಿನಗಳಲ್ಲೇ 7000 ಕೋಟಿ ರೂ. ಮೊತ್ತದ 14 ಸರಕಾರೀ ಪ್ರಾಜೆಕ್ಟ್ ಗಳ ಪ್ರಕಟಣೆಗಳು ಮತ್ತು 8 ಉದ್ಘಾಟನೆ/ಶಂಕುಸ್ಥಾಪನೆಗಳ ಉತ್ಸವದಲ್ಲಿ (ಇಂಡಿಯನ್ ಎಕ್ಸ್ ಪ್ರೆಸ್, ನವಂಬರ್4) ಇದಕ್ಕೆ ಉತ್ತರವೂ ಸಿಕ್ಕಿದೆ ಎಂಬುದು ಬೇರೆ ಮಾತು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಪ್ರಶ್ನೆ ಎದ್ದು ಬಂದಿತು. ಚುನಾವಣಾ ಆಯುಕ್ತರ ನೇಮಕ ಬಹಳ ಗಂಭೀರ ವಿಚಾರ, ಅವರ ನೇಮಕ ಪಾರದರ್ಶಕವಾಗಿರಬೇಕು, ಅವರ ಕಾರ್ಯನಿರ್ವಹಣೆಯಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸಬೇಕು ಎನ್ನುವ 2021ರ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠ ಎತ್ತಿಕೊಂಡ ಮರುದಿನವೇ ಆರು ತಿಂಗಳಿಂದ ಖಾಲಿ ಬಿದ್ದಿದ್ದ ಒಬ್ಬ ಚುನಾವಣಾ ಆಯುಕ್ತರ ಹುದ್ದೆಗೆ ಕೇಂದ್ರ ಸರಕಾರ ತರಾತುರಿಯಿಂದ ಹಿಂದಿನ ದಿನವಷ್ಟೇ, ಸ್ವಯಂ ನಿವೃತ್ತಿ ತೆಗೆದುಕೊಂಡ ಭಾರೀ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಅರುಣ್ ಗೋಯಲ್ ರನ್ನು ನೇಮಿಸಿತು. ಅವರು ತಮ್ಮ ಹುದ್ದೆಯಿಂದ ಡಿಸೆಂಬರ್ ನಲ್ಲಿ ನಿವೃತ್ತರಾಗಬೇಕಿತ್ತು ಎಂಬದೂ ಗಮನಾರ್ಹ. ಇದನ್ನು ಸಂವಿಧಾನ ಪೀಠದ ಗಮನಕ್ಕೆ ತಂದಾಗ ಅವರ ನೇಮಕ ಕುರಿತ ಕಡತವನ್ನು ತನಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ಹೇಳಿತು. ಅದನ್ನು ಪರಿಶೀಲಿಸಿದ ನಂತರ ನ್ಯಾಯಪೀಠ ಈ ನೇಮಕದ ‘ಮಿಂಚಿನ’ ವೇಗವನ್ನು, ಅಭ್ಯರ್ಥಿಯ ಮೌಲ್ಯಮಾಪನದ ಪರಿಯನ್ನು ಖಾರವಾಗಿ ಪ್ರಶ್ನಿಸಿದೆ.
ಸಂವಿಧಾನ ಚುನಾವಣಾ ಆಯುಕ್ತರುಗಳ ಅಧಿಕಾರಾವಧಿ 6 ವರ್ಷಗಳು ಎಂದು ನಿಗದಿಮಾಡಿದೆ. 1991ರಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗಿದೆ. ಆದರೆ 2004ರಿಂದೀಚೆಗೆ ಯಾವ ಆಯುಕ್ತರ ಅಧಿಕಾರಾವಧಿಯೂ ಇದರ ಹತ್ತಿರಕ್ಕೂ ಬಂದಿಲ್ಲ ಎಂದು ಗಮನಿಸಿದ ನ್ಯಾಯ ಪೀಠ ಸರಕಾರಕ್ಕೆ ಇದು ತಿಳಿದಿರದ ವಿಷಯವೇನಲ್ಲ ಎಂದೂ ಟಿಪ್ಪಣಿ ಮಾಡಿತು. ಹಿಂದಿನ ಯುಪಿಎ ಸರಕಾರ 8 ವರ್ಷಗಳಲ್ಲಿ ಆರು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿದ್ದರೆ, ಪ್ರಸಕ್ತ ಸರಕಾರ ಏಳು ವರ್ಷಗಳಲ್ಲಿ ಎಂಟು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿದೆ. ಹೀಗೆ ಕಾರ್ಯಾವಧಿಯನ್ನು ವಿಪರೀತವಾಗಿ ಮೊಟಕುಗೊಳಿಸುವುದೆಂದರೆ ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಧ್ವಂಸ ಮಾಡಿದಂತೆಯೇ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಚುನಾವಣಾ ಆಯುಕ್ರರುಗಳು ಹೌದಪ್ಪಗಳು ಆಗಬಾರದು ಎಂದೂ ಈ ಸಂವಿಧಾನ ಪೀಠದಲ್ಲಿರುವ ನ್ಯಾಯಮೂರ್ತಿಗಳೊಬ್ಬರು ನೇರವಾಗಿಯೇ ಹೇಳಿದರೆಂದೂ ವರದಿಯಾಗಿದೆ.
ಬಹುಶಃ ಇದು, ವಿಶೇಷವಾಗಿ ಅಮೃತಕಾಲದಲ್ಲಿ, ಎಲ್ಲ ಸಾಂವಿಧಾನಿಕ ಹುದ್ದೆಗಳಿಗೆ ಅನ್ವಯವಾಗ ಬೇಕಾದ ಟಿಪ್ಪಣಿ, ನ್ಯಾಯಾಂಗಕ್ಕೂ?! ನ್ಯಾಯಾಂಗ ಇತ್ತೀಚೆಗೆ ವಿಚಾರಣೆಗಳ ವೇಳೆಗೆ ಘನವಾದ ಟಿಪ್ಪಣಿಗಳನ್ನೇನೋ ಮಾಡುತ್ತದೆ, ಆದರೆ ಅದು ಸಂಬಂಧಪಟ್ಟ ತೀರ್ಪುಗಳಲ್ಲಿ ಬಿಂಬಿತವಾಗುತ್ತಿಲ್ಲ ಎಂದು ಈ ವಿಚಾರಣೆಯ ಸಂದರ್ಭದಲ್ಲಿ ಒಬ್ಬ ಹಿರಿಯ ಪತ್ರಕರ್ತರು ಟಿಪ್ಪಣಿ ಮಾಡಿದ್ದಾರೆ.